ಮಧ್ಯಪ್ರದೇಶ ಸಿಧಿ ಜಿಲ್ಲೆಯಲ್ಲಿ ಮೂತ್ರ ವಿಸರ್ಜನೆಯ ಕಿರುಕುಳಕ್ಕೆ ತುತ್ತಾದ ಬುಡಕಟ್ಟು ಕಾರ್ಮಿಕನ ಪಾದವನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತೊಳೆದ ಘಟನೆ ಈಗ ವಿವಾದಕ್ಕೆ ಈಡಾಗಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪಾದ ತೊಳೆದ ವ್ಯಕ್ತಿ ಮೂತ್ರ ವಿಸರ್ಜಿಸಿಕೊಂಡ ನಿಜವಾದ ವ್ಯಕ್ತಿಯಲ್ಲ, ಬೇರೆ ವ್ಯಕ್ತಿಯ ಪಾದವನ್ನು ಸಿಎಂ ತೊಳೆದಿದ್ದಾರೆ ಎಂದು ನೆಟ್ಟಿಗರು ಹಾಗೂ ಪ್ರತಿಪಕ್ಷಗಳ ಮುಖಂಡರು ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಧ್ಯಪ್ರದೇಶ ಕಾಂಗ್ರೆಸ್, “ನಿಮ್ಮ ನೇರ ಪ್ರಸಾರದ ಮೂತ್ರ ವಿಸರ್ಜನೆ ಪ್ರಕರಣದ ಸತ್ಯ ಬಯಲಾಗಿದೆ. ಬೇರೆಯವರ ಕಾಲು ತೊಳೆಯುವ ನಾಟಕ ಮಾಡಿದ ಮುಖ್ಯಮಂತ್ರಿಗಳು. ನಿಜವಾದ ಬಲಿಪಶು ನಾಪತ್ತೆ? ಮುಖ್ಯಮಂತ್ರಿಗಳೆ ಎಂತಹ ದೊಡ್ಡ ಪಿತೂರಿ? ಮಧ್ಯಪ್ರದೇಶ ನಿಮ್ಮನ್ನು ಕ್ಷಮಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ದೃಶ್ಯಗಳಲ್ಲಿರುವಂತೆ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪಾದ ತೊಳೆದ ವ್ಯಕ್ತಿಯ ಹೆಸರು ‘ಸುದಾಮ’. ಈತ ಮೂತ್ರ ವಿಸರ್ಜಿಸಿಕೊಂಡ ವ್ಯಕ್ತಿಯಲ್ಲ. ಇಬ್ಬರು ಬೇರೆ ಬೇರೆಯಾಗಿರುವುದರಿಂದ ಮುಖ್ಯಮಂತ್ರಿಗಳು ಕಾಲು ತೊಳೆದ ವ್ಯಕ್ತಿ ನಿಜವಾಗಿ ವಿಡಿಯೋದಲ್ಲಿರುವ ವ್ಯಕ್ತಿಯಲ್ಲ. ಬಲಿಪಶು ವ್ಯಕ್ತಿಯ ವಯಸ್ಸು 16 ಅಥವಾ 17 ವರ್ಷಕ್ಕಿಂತ ಹೆಚ್ಚಿಲ್ಲ. ಆದರೆ, ಪಾದ ತೊಳೆಸಿಕೊಂಡ ವ್ಯಕ್ತಿ ಸುಮಾರು 35 ರಿಂದ 38 ವರ್ಷ ವಯಸ್ಸಿನವನಾಗಿದ್ದಾನೆ.
“ಈ ಘಟನೆ 2020 ರಲ್ಲಿ ನಡೆದಿದೆ. ನಾನು ಕುಡಿದ ಅಮಲಿನಲ್ಲಿದ್ದು, ಏನನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಯಾರೆಂದು ನಾನು ನೋಡಲಿಲ್ಲ. ಪೊಲೀಸರು ನನ್ನನ್ನು ವಿಚಾರಣೆ ನಡೆಸಿದಾಗ ಕಿರುಕುಳಕ್ಕೊಳಗಾದ ವ್ಯಕ್ತಿ ನಾನಲ್ಲ ಎಂದು ಪದೇ ಪದೇ ಸುಳ್ಳು ಹೇಳಿದೆ. ಆದರೆ ಆರೋಪಿ ಪ್ರವೇಶ್ ಶುಕ್ಲಾ ಅವರೇ ಅಪರಾಧ ಒಪ್ಪಿಕೊಂಡಾಗ ನಾನು ನಂಬಿದ್ದೆ” ಎಂದು ಮೂತ್ರ ವಿಸರ್ಜನೆಯ ಕಿರುಕುಳಕ್ಕೆ ತುತ್ತಾದ ಬುಡಕಟ್ಟು ಕಾರ್ಮಿಕ ದಶಮತ್ ರಾವತ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೆಹಲಿ ಸುಗ್ರೀವಾಜ್ಞೆ ವಿವಾದ; ಕೇಂದ್ರಕ್ಕೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್
ಆದರೆ ಪ್ರತಿಪಕ್ಷಗಳ ಆರೋಪವನ್ನು ನಿರಾಕರಿಸಿರುವ ಸಿಧಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರವೀಂದ್ರ ಕುಮಾರ್ ವರ್ಮಾ, ಮುಖ್ಯಮಂತ್ರಿಗಳು ಪಾದ ತೊಳೆದ ವ್ಯಕ್ತಿ ಹಾಗೂ ಮೂತ್ರ ವಿಸರ್ಜನೆಗೆ ತುತ್ತಾದ ವ್ಯಕ್ತಿ ಇಬ್ಬರು ಒಂದೇ ಎಂದು ತಿಳಿಸಿದ್ದಾರೆ.
ಪ್ರವೇಶ್ ಶುಕ್ಲ ಎಂಬ ಬಿಜೆಪಿ ಶಾಸಕರ ಬೆಂಬಲಿಗನೊಬ್ಬ ದಶಮತ್ ರಾವತ್ ಮೇಲೆ ಕುಡಿದ ಮತ್ತಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಜುಲೈ 5 ರಂದು ಬೆಳಕಿಗೆ ಬಂದಿತ್ತು.
ಈ ಅಮಾನುಷ ಘಟನೆ ನಡೆದ ನಂತರ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ರಾಜಕೀಯ ನಾಯಕರು ಖಂಡಿಸಿದ್ದರು. ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ಆರೋಪಿ ಪ್ರವೇಶ್ ಶುಕ್ಲನ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ, ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿ ಬಂಧಿಸಲಾಗಿತ್ತು. ಅಲ್ಲದೆ ಅತಿಕ್ರಮವಾಗಿ ನಿರ್ಮಿಸಿಕೊಂಡಿದ್ದ ಆರೋಪಿಯ ಮನೆಯನ್ನು ಸಹ ಕೆಡವಲಾಗಿತ್ತು.