ಕಾಲ ಕಾಲಕ್ಕೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಮಹದಾಯಿಯನ್ನು ತಮ್ಮ ರಾಜಕೀಯ ಆಟಕ್ಕೆ ಬಳಸಿಕೊಂಡಿದ್ದೇ ಹೆಚ್ಚು. ಕಳೆದ ಅವಧಿಯಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಾಗೂ ಗೋವಾದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಮಹದಾಯಿ ಯೋಜನೆಯನ್ನು ಜಾರಿಗೆ ತರುವಲ್ಲಿ ಬಿಜೆಪಿ ವಿಫಲವಾಗಿದೆ. ಇದರ ಅರ್ಥ ಮಹದಾಯಿಯನ್ನು ಜಾರಿಗೆ ತಂದರೆ ರಾಜಕೀಯ ಅಸ್ತ್ರವೊಂದು ಮರೆಯಾಗುತ್ತದೆ ಎಂಬುದೇ ಆಗಿದೆ!
ಉತ್ತರ ಕರ್ನಾಟಕ ಭಾಗದ ಬಹುದೊಡ್ಡ ಬೇಡಿಕೆಯಾದ ಕಳಸಾ-ಬಂಡೂರಿ, ಮಹದಾಯಿ ಯೋಜನೆ ಜಾರಿಯ ಐದು ದಶಕದ ಹೋರಾಟಕ್ಕೆ ಇನ್ನೇನು ಮುಕ್ತಿ ಸಿಕ್ಕಿತು ಎನ್ನುವಾಗಲೇ ಗೋವಾ ಸರ್ಕಾರ ಖ್ಯಾತೆ ತೆಗೆದಿದೆ. ಜೊತೆಗೆ ಕೇಂದ್ರ ವನ್ಯಜೀವಿ ಮಂಡಳಿ ಕೂಡ ಯೋಜನೆ ಜಾರಿಗೆ ಅನುಮತಿ ನೀಡದೇ ವಿಳಂಬ ಧೋರಣೆ ಅನುಸರಿಸುತ್ತಿದೆ.
ಮಲಪ್ರಭಾ ನದಿಪಾತ್ರದಲ್ಲಿರುವ ಮತ್ತು ಹುಬ್ಬಳ್ಳಿ-ಧಾರವಾಡ ಹಾಗೂ ಸುತ್ತಮುತ್ತಲಿನ ಪಟ್ಟಣ, ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿರುವ ಮಹದಾಯಿ ಯೋಜನೆಗೆ ‘ಮಹದಾಯಿ ನದಿ ನೀರು ವಿವಾದ ನ್ಯಾಯಮಂಡಳಿ’ 2018ರ ಆಗಸ್ಟ್ 14ರಂದು ನೀರು ಹಂಚಿಕೆ ಮಾಡಿ ತೀರ್ಪು ನೀಡಿದೆ.
ಮಹದಾಯಿ ಯೋಜನೆಗೆ ಜಾರಿಗೆ ಕೇವಲ ಒಂದು ಮೆಟ್ಟಿಲು ಮಾತ್ರ ಬಾಕಿ ಇದ್ದು, ರಾಜಕೀಯ ಸುಳಿಯೊಳಗೆ ಕಳಸಾ-ಬಂಡೂರಿ ಸಿಕ್ಕು ನಲಗುತ್ತಿದೆ. ಐದು ದಶಕದ ರೈತ ಹೋರಾಟಗಾರ ಕನಸು ನನಸಾಗದೆ ಹಾಗೇ ಉಳಿದಿದೆ. ಕರ್ನಾಟಕಕ್ಕೆ ‘ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ’ ಎನ್ನುವ ಸ್ಥಿತಿ ಮಹದಾಯಿ ಯೋಜನೆಯದ್ದಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಹದಾಯಿ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ 2022ರ ಡಿಸೆಂಬರ್ 29ರಂದು ಒಪ್ಪಿಗೆ ನೀಡಿತು. ಜೊತೆಗೆ ಮಹದಾಯಿ ಯೋಜನಾ ಪ್ರದೇಶದ 10.68 ಹೆಕ್ಟೇರ್ ಪ್ರದೇಶವು ಹುಲಿ ಕಾರಿಡಾರ್ ವ್ಯಾಪ್ತಿಯಲ್ಲಿ ಬರುತ್ತಿರುವುದರಿಂದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಪಡೆಯಬೇಕು ಎಂದು ಕೇಂದ್ರ ಅರಣ್ಯ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಸೂಚಿಸಿತು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಅದರ ಬೆನ್ನಲ್ಲೇ ಪ್ರಾಧಿಕಾರ ಸ್ಥಾಪಿಸಿ ತಜ್ಞರ ಸಮಿತಿ ರಚಿಸಲಾಯಿತು. ಸಮಿತಿಯು ಯೋಜನಾ ಸ್ಥಳಕ್ಕೆ ಭೇಟಿ ವರದಿ ಸಲ್ಲಿಸಿತ್ತು. ಆದರೆ, ಈ ವರದಿಯನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪ್ರಾಧಿಕಾರ ಈವರೆಗೆ ನೀಡಿಲ್ಲ. ಉದ್ದೇಶ ಪೂರ್ವಕವಾಗಿಯೇ ರಾಜ್ಯದ ಪ್ರಸ್ತಾವನೆಗೆ ಅನುಮೋದನೆ ನೀಡದೆ ರಾಜ್ಯ ಸರ್ಕಾರವನ್ನು ಕೇಂದ್ರ ವನ್ಯಜೀವಿ ಮಂಡಳಿ ಸತಾಯಿಸುತ್ತಿದೆ ಎಂಬುದು ರಾಜ್ಯ ಸರ್ಕಾರದ ಆರೋಪ.
ಇನ್ನು ಗೋವಾ ಸರ್ಕಾರದ ಒಪ್ಪಿಗೆ ಇಲ್ಲದೆ ಕರ್ನಾಟಕ ಸರ್ಕಾರವು ಮಹದಾಯಿ ಯೋಜನೆಯನ್ನು ಕೈಗೆತ್ತಿಕೊಳ್ಳಬಾರದು ಎಂದು ಅಲ್ಲಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಆದೇಶ ಹೊರಡಿಸಲು ಗೋವಾ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿರುವ ರಾಜ್ಯ ಸರ್ಕಾರವು, ಗೋವಾ ಆದೇಶವನ್ನು ವಜಾ ಮಾಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಕೂಡ ಸಲ್ಲಿಸಿದೆ. ಅತ್ತ ಮಹದಾಯಿ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿರುವುದನ್ನು ಪ್ರಶ್ನಿಸಿ ಗೋವಾ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಇದೆಲ್ಲವೂ ವಿಚಾರಣೆ ಹಂತದಲ್ಲಿದೆ.
ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 80ನೇ ಸಭೆ ನವದೆಹಲಿಯಲ್ಲಿ ಬುಧವಾರ (ಅ.9) ನಡೆಯಿತು. ಮಹದಾಯಿಯ ಕಳಸಾ ನಾಲಾ ತಿರುವು ಯೋಜನೆಗೆ ವನ್ಯಜೀವಿ ಅನುಮೋದನೆ ನೀಡುವ ಪ್ರಸ್ತಾವನೆ ಕಾರ್ಯಸೂಚಿಯ ಪಟ್ಟಿಯಲ್ಲಿತ್ತು. ರಾಜ್ಯದ ವಾದವನ್ನು ಆಲಿಸಿದ ಸ್ಥಾಯಿ ಸಮಿತಿಯು, ‘ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿ. ಸಮಿತಿಯು ಪರಿಶೀಲನೆ ನಡೆಸಿ ಶೀಘ್ರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಮತ್ತೆ ಹೇಳಿದ್ದನ್ನೇ ಪುನರುಚ್ಚರಿಸಿದೆ.
ರಾಜ್ಯದ ಪರವಾಗಿ ಸಭೆಯಲ್ಲಿ ಪಾಲ್ಗೊಂಡ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಅವರು, “ಉತ್ತರ ಕರ್ನಾಟಕದ ಲಕ್ಷಾಂತರ ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ಯೋಜನೆಗೆ ಒಪ್ಪಿಗೆ ನೀಡಬಹುದು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿ) ತಜ್ಞರ ತಂಡ ಶಿಫಾರಸು ಮಾಡಿ ಒಂಬತ್ತು ತಿಂಗಳುಗಳು ಕಳೆದಿವೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ವನ್ಯಜೀವಿ ಅನುಮೋದನೆ ನೀಡಬೇಕು” ಎಂದು ಕೋರಿದ್ದಾರೆ.
ಮುಂದುವರಿದು, ಮಹದಾಯಿ ಕುಡಿಯುವ ನೀರಿನ ಯೋಜನೆಗೆ ಗೋವಾ ಸರ್ಕಾರ ಅನಗತ್ಯ ತಗಾದೆ ಎತ್ತುತ್ತಿದೆ ಎಂದು ಬಲವಾಗಿ ಆಕ್ಷೇಪ ವ್ಯಕ್ತಪಡಿಸಿರುವ ಅವರು, “ಈ ಯೋಜನೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿಲ್ಲ. ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸದೆ ಯೋಜನೆಗೆ ಕೂಡಲೇ ಅನುಮೋದನೆ ನೀಡಬೇಕು” ಎಂದು ಎನ್.ಮಂಜುನಾಥ ಪ್ರಸಾದ್ ಸಭೆಯಲ್ಲಿ ಆಗ್ರಹಿಸಿದ್ದಾರೆ.

ಮಹದಾಯಿ ಯೋಜನೆ ಜಾರಿಯಾಗಲೇಬೇಕು ಎಂದು ನರಗುಂದದಲ್ಲಿ ರಾಜ್ಯ ರೈತ ಸೇನೆ ಮತ್ತು ವಿವಿಧ ಸಂಘಟನೆಗಳ ಮುಖಂಡರು ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಸರದಿ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ. ಮಹದಾಯಿ ಹೋರಾಟ ನೇತೃತ್ವ ವಹಿಸಿರುವ ರಾಜ್ಯ ರೈತ ಸೇನೆಯ ರಾಜ್ಯಾಧ್ಯಕ್ಷ ಶಂಕರ್ ಅಂಬಲಿ ಅವರು ಈ ದಿನ.ಕಾಮ್ ಜೊತೆ ಮಾತನಾಡಿ, “ಮಹದಾಯಿ ಯೋಜನೆ ವಿಳಂಬ ಪೂರ್ತಿ ರಾಜಕೀಯ ಪ್ರೇರಿತವಾಗಿದೆ. 2018ರಲ್ಲೇ ಎಲ್ಲ ತೀರ್ಪು ಬಂದು ನೀರು ಕೂಡ ಹಂಚಿಕೆಯಾಗಿದೆ. ಆದರೆ ಕೇಂದ್ರ ಸರ್ಕಾರ ಮತ್ತು ಗೋವಾ ಸರ್ಕಾರ ರಾಜಕಾರಣ ಮಾಡುತ್ತ ಮಹದಾಯಿ ಗುಮ್ಮವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದರು.
“ಹುಲಿ ಕಾರಿಡಾರ್ ವಿಚಾರವಾಗಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಪಡೆಯಿರಿ ಎಂದು ಕೇಂದ್ರವೇ ರಾಜ್ಯ ಸರ್ಕಾರಕ್ಕೆ ಹೇಳಿದೆ. ಆ ಪ್ರಕಾರ ರಾಜ್ಯ ಸರ್ಕಾರ ಪ್ರಸ್ತಾವನೆ ಕೂಡ ಸಲ್ಲಿಸಿದೆ. ಆದರೆ ಗೋವಾ ಸರ್ಕಾರ ಖ್ಯಾತೆ ತೆಗೆದಿದೆ. ಗೋವಾದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಕ್ಷಣದಲ್ಲಿ ಮಹದಾಯಿ ಯೋಜನೆ ಜಾರಿಗೆ ಹಸಿರು ನಿಶಾನೆ ತೋರಬಹುದು. ಆದರೆ ಆ ಕೆಲಸ ಮಾಡುವ ಬದಲು ತಮ್ಮ ತಮ್ಮ ರಾಜಕಾರಣಕ್ಕೆ ಮಹದಾಯಿಯನ್ನು ಬಳಸಿಕೊಳ್ಳುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಮಾತನಾಡಿ, “2018ರಲ್ಲೇ ಈ ಬಗ್ಗೆ ತೀರ್ಪು ಬಂದಿದೆ. ಕಳೆದ ಬಾರಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಇತ್ತು. ಆಗಲೂ ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇತ್ತು. ಯೋಜನೆ ಜಾರಿಗೆ ಯಾವ ಕ್ರಮವನ್ನೂ ಕೈಗೊಳ್ಳದೇ ಚುನಾವಣೆ ಬಂದಾಗ ಯೋಜನೆಯ ಪರಿಷ್ಕೃತ ವಿಸ್ತ್ರತ ಯೋಜನಾ ವರದಿಗೆ ಒಪ್ಪಿಗೆ ನೀಡಿದಂತೆ ಮಾಡಿ ರಾಜಕೀಯ ಲಾಭ ಪಡೆಯಿತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಈ ಸರ್ಕಾರಕ್ಕೆ ಕ್ರೇಡಿಟ್ ಹೋಗುತ್ತದೆ ಎಂದು ಕೇಂದ್ರ ಉದ್ದೇಶಪೂರ್ವಕವಾಗಿ ಮಹದಾಯಿ ಯೋಜನೆ ಜಾರಿಗೆ ವಿಳಂಬ ಮಾಡುತ್ತಿದೆ” ಎಂದು ದೂರಿದರು.
“ನಮ್ಮ ಭಾಗದ ಸಚಿವರಿಗೆ, ಶಾಸಕರಿಗೆ ಮಹದಾಯಿ ಆಟದ ಅಂಗಳವಾಗಿದೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹದಾಯಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಯಾವುದೇ ನಾಯಕರಿಗೂ ಮಹದಾಯಿ ಜಾರಿ ಬಗ್ಗೆ ಕಿಂಚತ್ತೂ ಕಾಳಜಿ ಕಾಣುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಗೋವಾದ ಯೋಜನೆಗೆ ಒಪ್ಪಿಗೆ ನೀಡಿ, ನಮ್ಮ ಯೋಜನೆಯ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳದೇ ನ್ಯಾಯಾಂಗ ನಿಂದನೆಯ ನೆಪವೊಡ್ಡಿ ಮುಂದೂಡಿದೆ. ನಮ್ಮ ನ್ಯಾಯೋಚಿತ ಕುಡಿಯುವ ನೀರಿನ ಯೋಜನೆಗೆ ಗೋವಾ ತಡೆ ಒಡ್ಡಿದೆ. ಗೋವಾದ ವಿದ್ಯುತ್ ಪ್ರಸರಣ ಮಾರ್ಗದ ಯೋಜನೆ ಬಗ್ಗೆ ಕರ್ನಾಟಕ ಸರ್ಕಾರ ಹಿಂದೆ ಒಪ್ಪಿಗೆ ನೀಡಿದ್ದನ್ನು ಬೇರೆ ದಾರಿ ಇಲ್ಲದೇ ಪುನರ್‌ಪರಿಶೀಲಿಸಬೇಕಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ನಾವು ಬೆಂಬಲ ಸೂಚಿಸಿ, ಗೋವಾ ನಮಗೆ ಸಹಕರಿಸಲಿಲ್ಲ ಎಂದರೆ, ಗೋವಾದ ಯೋಜನೆಗಳಿಗೂ ನಾವು ಸಹಕರಿಸುವುದು ಬೇಡ” ಎಂದು ತಿಳಿಸಿದರು.

ಮಹದಾಯಿ ಹೋರಾಟಗಾರ ಸಿದ್ದಣ್ಣ ತೇಜಿ ಮಾತನಾಡಿ, “40 ವರ್ಷಗಳಿಂದ ಮಹದಾಯಿ ರಾಜಕಾರಣಕ್ಕೆ ಬಲಿಯಾಗುತ್ತಲೇ ಬಂದಿದೆ. ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನಪ್ರತಿನಿಧಿಗಳು ಚುನಾವಣೆ ಬಂದಾಗ ಮಹದಾಯಿ ನೆನಪಿಸಿಕೊಳ್ಳುತ್ತಾರೆ. ಇವರ ರಾಜಕಾರಣಕ್ಕೆ ನಮ್ಮ ಭಾಗದ ರೈತರಿಗೆ 40 ವರ್ಷಗಳಿಂದ ಅನ್ಯಾಯವಾಗುತ್ತಿದೆ. ರಾಜಕಾರಣವನ್ನು ಬದಿಗಿರಿಸಿ, ಕುಡಿಯಲು ನೀರು ಕೊಡುವ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಗೋವಾ ಸರ್ಕಾರ ಜೊತೆ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಬೇಕು” ಎಂದು ಒತ್ತಾಯಿಸಿದರು.
ಏನಿದು ಮಹದಾಯಿ ವಿವಾದ
ಮಹದಾಯಿ ನದಿಯನ್ನು ಗೋವಾದಲ್ಲಿ ಮಾಂಡೋವಿ ನಂದಿ ಎಂದು ಕರೆಯುತ್ತಾರೆ. ನಮ್ಮಲ್ಲಿ ಕಾವೇರಿ ಹೇಗೆ ಜೀವನದಿಯೋ ಗೋವಾದಲ್ಲಿ ಮಾಂಡೋವಿ ಜೀವನದಿಯಾಗಿದೆ. ಆದರೆ, ಈ ನದಿ ಹುಟ್ಟುವುದು ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ. ಬೆಳಗಾವಿಯಲ್ಲಿ ಹುಟ್ಟುವ ನದಿ ಗೋವಾ ಮೂಲಕ ಹರಿದು ಸಮುದ್ರ ಸೇರುತ್ತದೆ. ಕರ್ನಾಟಕದ ಮೂಲಕ ಹರಿದು ಹೋಗುವ ನೀರನ್ನು ಬಳಸಿಕೊಂಡು, ನೀರನ್ನು ಮಲಪ್ರಭಾ ಡ್ಯಾಂನಲ್ಲಿ ಸಂಗ್ರಹಿಸಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಮಹಾದಾಯಿ ಅಥವಾ ಕಳಸಾ-ಬಂಡೂರಿ ಆಗಿದೆ. ಮಹದಾಯಿ ನದಿ ನೀರನ್ನು ಕಳಸಾ-ಬಂಡೂರಿ ಎಂಬ ಎರಡು ನಾಲೆಗಳ ಮೂಲಕ ಜಲಾಶಯಕ್ಕೆ ಹರಿಸಲು ಯೋಜನೆ ರೂಪಿಸಲಾಗಿದೆ. ಆದ್ದರಿಂದ, ಕಳಸಾ-ಬಂಡೂರಿ ಎಂಬ ಹೆಸರು ಇದಕ್ಕೆ ಬಂದಿದೆ.
1978ರಲ್ಲಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವ ಚಿಂತನೆ ಆರಂಭವಾಯಿತು. 1980ರಲ್ಲಿ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರು ಎಸ್ ಆರ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಲಾಗಿತ್ತು. ವರದಿ ನೀಡಿದ ಸಮಿತಿ ಯೋಜನೆಯನ್ನು ಜಾರಿಗೊಳಿಸಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಕರ್ನಾಟಕ ಸರ್ಕಾರ 1988ರಲ್ಲಿ ಯೋಜನೆಗೆ ಒಪ್ಪಿಗೆ ನೀಡಿತ್ತು. ಆದರೆ, ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು.
ಮಹದಾಯಿ ಯೋಜನೆಯ ವರದಿ ನೀಡಿದ್ದ ಸಮಿತಿಯಲ್ಲಿದ್ದ ಎಸ್ ಆರ್ ಬೊಮ್ಮಾಯಿ ಅವರು 1989ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಗೋವಾ ಸಿಎಂ ಪ್ರತಾಪ್ ಸಿಂಗ್ ರಾಣಾ ಜೊತೆ ಮಾತುಕತೆ ನಡೆಸಿದರು. ಆಗ ಯೋಜನೆಗೆ ಗೋವಾ ಸರ್ಕಾರ ಒಪ್ಪಿಗೆ ನೀಡಿತು. 2000ದಲ್ಲಿ ಕಳಸಾ-ಬಂಡೂರಿ ನಾಲೆ ಯೋಜನೆಗೆ ಅರಣ್ಯ ಇಲಾಖೆ ಕೂಡ ಅನುಮತಿ ನೀಡಿತ್ತು. 2002ರ ಏ.30ರಂದು ಕಳಸಾ ಬಂಡೂರಿ ಕಾಲುವೆ ಮೂಲಕ ನೀರನ್ನು ಹರಿಸಲು ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವಾಲಯವೂ ಒಪ್ಪಿಗೆ ನೀಡಿತು.
ಕೇಂದ್ರವು ಯೋಜನೆಗೆ ಸಮ್ಮತಿ ನೀಡಿದ ನಂತರ 2002ರಲ್ಲಿ ಎಸ್.ಎಂ ಕೃಷ್ಣ ಸರ್ಕಾರವು ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿತು. ಈ ಸಮಯದಲ್ಲಿ ಗೋವಾ ಸರ್ಕಾರ ಮರಳಿ ತಗಾದೆ ತೆಗೆದು ಸಿಎಂ ಮನೋಹರ್ ಪರಿಕ್ಕರ್ ನೇತೃತ್ವದಲ್ಲಿ ಕೇಂದ್ರವನ್ನು ಸಂಪರ್ಕಿಸಿ, ನದಿಯಲ್ಲಿರುವ ನೀರಿನ ಸೌಲಭ್ಯವನ್ನು ಪರಿಶೀಲಿಸಲು ಹಾಗೂ ಮೂರು ಜಲಾನಯನ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ನೀರು ಹಂಚಿಕೆ ಮಾಡುವಂತೆ ಒತ್ತಾಯಿಸಿತು.
ಗೋವಾದಲ್ಲಿ ನಡೆದ ಪ್ರತಿಭಟನೆಗಳಿಂದಾಗಿ ಮತ್ತು ಪರಿಸರ ಹಾನಿಯ ಬಗೆಗಿನ ಮುತುವರ್ಜಿಯಿಂದ ಅಂದಿನ ಎನ್‌ಡಿಎ ಸರ್ಕಾರವು ಯೋಜನೆಯನ್ನು ಸ್ಥಗಿತಗೊಳಿಸಿತು. 2006ರಲ್ಲಿ ಕರ್ನಾಟಕದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರವು ಯೋಜನೆಯ ಕೆಲಸವನ್ನು ಪ್ರಾರಂಭಿಸಲು ನಿರ್ಧರಿಸಿದಾಗ ವಿವಾದವು ಇನ್ನಷ್ಟು ಕಾವು ಪಡೆಯಿತು. ಈ ಸಮಯದಲ್ಲಿ ಗೋವಾ ಸರ್ಕಾರವು ನೀರು ಹಂಚಿಕೆ ವಿವಾದವನ್ನು ಪರಿಹರಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಕೊನೆಗೆ ಅಂತಿಮವಾಗಿ ನವೆಂಬರ್ 2010ರಲ್ಲಿ ಯುಪಿಎ ಸರ್ಕಾರವು ನ್ಯಾಯಮಂಡಳಿಯನ್ನು ಸ್ಥಾಪಿಸಿತು.
2018ರಲ್ಲಿ ನ್ಯಾಯಮಂಡಳಿಯು ಮಹದಾಯಿ ನದಿ ಜಲಾನಯನ ಪ್ರದೇಶದಿಂದ ಕರ್ನಾಟಕಕ್ಕೆ 13.42 ಟಿಎಂಸಿ, ಮಹಾರಾಷ್ಟ್ರಕ್ಕೆ 1.33 ಟಿಎಂಸಿ ಮತ್ತು ಗೋವಾಕ್ಕೆ 24 ಟಿಎಂಸಿ ನೀರನ್ನು ನೀಡಿತು. ಕರ್ನಾಟದಕದ ಪಾಲಿಗೆ ದೊರೆತ ನೀರು 5.5 ಟಿಎಂಸಿ ಕುಡಿಯುವ ನೀರಿನ ಪೂರೈಕೆ ಹಾಗೂ 8.02 ಟಿಎಂಸಿ ನೀರು ಜಲವಿದ್ಯುತ್ ಉತ್ಪಾದನೆಗೆ ಎಂದು ಹಂಚಿಕೆ ಮಾಡಿತು. ಮಹದಾಯಿ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ 2022ರ ಡಿಸೆಂಬರ್ 29ರಂದು ಒಪ್ಪಿಗೆ ನೀಡಿದ ಬೆನ್ನಲ್ಲೇ ಗೋವಾ ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.
ಹೀಗೆ ಹಾವು ಏಣಿಯ ಆಟದ ತರ ಮಹದಾಯಿ ಯೋಜನೆಯಾಗಿದೆ. ಕಾಲ ಕಾಲಕ್ಕೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಮಹದಾಯಿಯನ್ನು ರಾಜಕೀಯ ಆಟಕ್ಕೆ ಬಳಸಿಕೊಂಡಿದ್ದೇ ಹೆಚ್ಚು. ಕಳೆದ ಅವಧಿಯಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಾಗೂ ಗೋವಾದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಮಹದಾಯಿ ಯೋಜನೆಯನ್ನು ಜಾರಿಗೆ ತರುವಲ್ಲಿ ಬಿಜೆಪಿ ವಿಫಲವಾಗಿದೆ. ಇದರ ಅರ್ಥ ಮಹದಾಯಿಯನ್ನು ಜಾರಿಗೆ ತಂದರೆ ರಾಜಕೀಯ ಅಸ್ತ್ರವೊಂದು ಮರೆಯಾಗುತ್ತದೆ ಎಂಬುದೇ ಆಗಿದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಸಹಕರಿಸಿದರೆ ಸಂಪೂರ್ಣ ಕ್ರೇಡಿಟ್ ಕಾಂಗ್ರೆಸ್ ಪಾಲಾಗುತ್ತದೆ ಎಂಬುದು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ಹೊಟ್ಟೆಕಿಚ್ಚು. ಗೋವಾವನ್ನು ದಾಳವಾಗಿಟ್ಟುಕೊಂಡಿರುವ ಕೇಂದ್ರ ಸರ್ಕಾರ ಮಹದಾಯಿ ವಿಚಾರದಲ್ಲಿ ಹುನ್ನಾರ ನಡೆಸಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.
ಪಶ್ಚಿಮ ಘಟ್ಟಗಳು ವಿವಿಧ ಯೋಜನೆಗಳ ಭಾರದಿಂದ ಕುಸಿಯುತ್ತಿರುವಾಗ ಇನ್ನೊಂದು ಯೋಜನೆಗಾಗಿ ಮರಗಳನ್ನು ಕಡಿದು, ಗುಡ್ಡಗಳನ್ನು ನೆಲಸಮ ಮಾಡಿ ಕಾಲುವೆಗಳನ್ನು ನಿರ್ಕಾಮಿಸಿ, ಅಲ್ರಿಲಿನ ಜೀವ ಪರಿಸರವನ್ನು ಚೆಲ್ಲಾಪಿಲ್ಲಿ ಮಾಡಿ ಈ ಯೋಜನೆಯನ್ನು ಮುಂದಕ್ಕೊಯ್ಯುವುದು ಸರಿಯೇ?
ಒಂದು ಕಡೆ ಕುಡಿಯುವ ನೀರು ಅನ್ತೀರಿ, ಮತ್ತೆ ರೈತರಿಗೆ ಅನ್ಯಾಯವಾಗುತ್ತಿದೆ ಅನ್ತೀರಿ. ಇವೆರಡರಲ್ಲಿ ಯಾತಕ್ಕಾಗಿ ನಿಜವಾಗಿ ನಮಗೆ ನೀರು ಬೇಕಿರುವುದು? ಸ್ಪಷ್ಟ ಮಾಡಿ. ನೀರು ಪಡೆದು ಮತ್ತೆ ಕಬ್ಬು ಬೆಳೆಯುವುದಕ್ಕೇ ಮುಂದಾಗುವುದಾದರೆ ಅದೂ ಕೂಡ ಮರು ಯೋಚನೆ ಮಾಡಬೇಕಾದ್ದಲ್ಲವೇ?