ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳು ಮತ್ತು ದಲಿತ ನಾಯಕ ಗೋವಿಂದ ಕಾರಜೋಳ ಅವರ ಮೇಲೆ ಚಿತ್ರದುರ್ಗದಲ್ಲಿ ಹಲ್ಲೆಗೆ ಪ್ರಯತ್ನ ಮಾಡಿದ್ದನ್ನು ತೀವ್ರವಾಗಿ ಖಂಡಿಸುವೆ. ಕಾರಜೋಳರವರ ಮೇಲೆ ಹಲ್ಲೆ ನಡೆಸಲು ದುಷ್ಪ್ರೇರಣೆ ಮಾಡಿ, ಒಳಸಂಚನ್ನು ಮಾಡಿರುವುದರಲ್ಲಿ ಡಾ.ಎಚ್.ಸಿ.ಮಹದೇವಪ್ಪ ಮತ್ತು ಪ್ರಿಯಾಂಕ್ ಖರ್ಗೆ ಅವರ ಕೈವಾಡವಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ಮಾಜಿ ಶಾಸಕ ಪಿ.ರಾಜೀವ್ ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ದಲಿತರಿಗೆ ಮೀಸಲಿಟ್ಟ ಹಣವನ್ನು ಈ ಸರಕಾರ ದುರ್ಬಳಕೆ ಮಾಡಿದೆ. ಇದು ದಲಿತ ಸಮುದಾಯಗಳಿಗೆ ಅರ್ಥ ಆದರೆ ರಾಜ್ಯದಲ್ಲಿ ದೊಡ್ಡ ಕ್ರಾಂತಿ ಆಗುವ ಭಯ ಸರಕಾರ, ಕಾಂಗ್ರೆಸ್ಸನ್ನು ಕಾಡುತ್ತಿದೆ” ಎಂದರು.
“ದಲಿತರಿಗೆ ಈ ವಿಚಾರ ಗೊತ್ತಾಗಬಾರದು; ಯಾರೂ ಇದನ್ನು ತಿಳಿಸಬಾರದೆಂಬ ದುರುದ್ದೇಶದೊಂದಿಗೆ ಕಾಂಗ್ರೆಸ್ ಪಕ್ಷವು ಕಾರಜೋಳರ ಮೇಲೆ ಹಲ್ಲೆಗೆ ಪ್ರೇರಣೆ ಕೊಟ್ಟಿದೆ. ತೆರೆಮರೆಯ ಕೆಲಸ ಮಾಡಿದೆ. ಗೃಹಜ್ಯೋತಿ ಯೋಜನೆಯಡಿ ಎಸ್‍ಇಪಿಟಿಎಸ್‍ಪಿಯಡಿ 2,400 ಕೋಟಿ ಇಟ್ಟಿದ್ದಾರೆ. ಅದೇರೀತಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಯಡಿ 2,800 ಕೋಟಿ ಇಟ್ಟಿದ್ದಾರೆ. ಈ 2,800 ಕೋಟಿ ಹಣದಲ್ಲಿ ಶೇ 90 ದಲಿತರಿಗೆ ಪ್ರಯೋಜನ ಸಿಗುತ್ತದೆ. ಹಾಗಿದ್ದರೆ 2400 ಕೋಟಿಯನ್ನು ಮತ್ತೆ ಇಟ್ಟಿದ್ಯಾಕೆ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜಕೀಯ ಸಂಸ್ಕೃತಿಯನ್ನು ಅಧೋಗತಿಗೆ ತಳ್ಳುತ್ತಿರುವ ಬಿಜೆಪಿ ಅಂತಃಕಲಹ
“ಇದೆಲ್ಲವೂ ದಲಿತ ಸಮುದಾಯ, ದಲಿತ ಮುಖಂಡರಿಗೆ ತಿಳಿದರೆ ಈ ಸರಕಾರವು ಸುಮಾರು 10 ಸಾವಿರ ಕೋಟಿ ಹಣವನ್ನು ದಲಿತ ಸಮುದಾಯಕ್ಕಾಗಿ ಮತ್ತೆ ಕೊಡಬೇಕಾಗುತ್ತದೆ. ಅದೇ ಭಯ ಸಿದ್ದರಾಮಯ್ಯರನ್ನೂ ಕಾಡುತ್ತಿದೆ. ದಲಿತರು ಜಾಗೃತ ಆಗಬಾರದು. ಈ ಸಂಬಂಧ ತಿಳಿವಳಿಕೆ ಕೊಡುವ ಕೆಲಸವನ್ನು ಮಾಡಬಾರದೆಂಬ ಉದ್ದೇಶದಿಂದ ಭಯ ಹುಟ್ಟಿಸಲು ಮಾಜಿ ಉಪ ಮುಖ್ಯಮಂತ್ರಿಗಳು ಮತ್ತು ದಲಿತ ಸಮುದಾಯದ ದೊಡ್ಡ ನಾಯಕ ಗೋವಿಂದ ಕಾರಜೋಳ ಅವರ ಮೇಲೆ ಹಲ್ಲೆ ಮಾಡಿ, ಆ ಮೂಲಕ ದಲಿತ ಜಾಗೃತ ಮನಸ್ಸುಗಳಿಗೆ ಸಂದೇಶ ಕೊಡಲು ಹೊರಟಿದ್ದರು” ಎಂದು ವಿಶ್ಲೇಷಿಸಿದರು.
“ಸದನದಲ್ಲಿ ಮಹದೇವಪ್ಪ ಅವರು ದಲಿತರ ದಾರಿತಪ್ಪಿಸುವ ಉತ್ತರ ಕೊಟ್ಟಿದ್ದಾರೆ. 11 ಸಾವಿರ ಕೋಟಿ ಹಣವನ್ನು ದಲಿತರಿಗಾಗಿ ಬಳಸುವಂತಾಗಲು ತೀವ್ರತರದ ಹೋರಾಟ ಮಾಡುತ್ತೇವೆ. ದಲಿತ ಮುಖಂಡರು, ದಲಿತ ಸಂಘಟನೆಗಳು, ದಲಿತ ಶಾಸಕರಿಗೆ ಮಾಹಿತಿ, ಅಂಕಿ ಸಂಖ್ಯೆ ಕೊಟ್ಟು ಸರಕಾರ ಮಾಡಿದ ಅನ್ಯಾಯದ ವಿವರ ನೀಡಿ ಆಂದೋಲನ ರೂಪಿಸಲಿದ್ದೇವೆ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.