ಮಹಾರಾಷ್ಟ್ರ ಚುನಾವಣೆ | ಶಿವಸೇನೆ vs ಶಿವಸೇನೆ: ಮಹಾಯುತಿ, ಮಹಾ ಅಘಾಡಿಗೆ ಪ್ರತಿಷ್ಠೆಯ ಕಣ

Date:

Advertisements

ಕುತೂಹಲದ ಕಣವಾಗಿರುವ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ನವೆಂಬರ್‌ 20ರಂದು ಒಂದೇ ಹಂತದಲ್ಲಿ ನಡೆಯಲಿದೆ. ಈ ಚುನಾವಣೆ ಶಿವಸೇನೆ ವರ್ಸಸ್ ಶಿವಸೇನೆ, ಎನ್‌ಸಿಪಿ ವರ್ಸಸ್ ಎನ್‌ಸಿಪಿ. ಸದ್ಯ ಕಳೆದ ಐದು ವರ್ಷಗಳ ಅವಧಿಯಲ್ಲಿ ಹಲವು ರಾಜಕೀಯ ಬದಲಾವಣೆಗೆ ಸಾಕ್ಷಿಯಾಗಿರುವ ಮಹಾರಾಷ್ಟ್ರದ ಚುನಾವಣೆಯತ್ತ ಇಡೀ ದೇಶದ ಚಿತ್ತ ನೆಟ್ಟಿದೆ. ಮಹಾರಾಷ್ಟ್ರ ಜೊತೆಗೆ, ಜಾರ್ಖಂಡ್‌ನಲ್ಲೂ ಚುನಾವಣೆ ನಡೆಯಲಿದ್ದು, ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶ ನವೆಂಬರ್ 20ರಂದು ಪ್ರಕಟವಾಗಲಿದೆ.

ಲೋಕಸಭಾ ಚುನಾವಣೆ ಮತ್ತು ಹರಿಯಾಣ, ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯ ಬಳಿಕ ನಡೆಯುತ್ತಿರುವ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆಗಳು ಎಲ್ಲ ರಾಜಕೀಯ ಪಕ್ಷಗಳು ಹಾಗೂ ದೇಶದ ಭವಿಷ್ಯ ನಿರ್ಣಯದ ವಿಚಾರದಲ್ಲಿ ನಿರ್ಣಾಯಕ ಚುನಾವಣೆಗಳಾಗಿವೆ. ಅದರಲ್ಲಿಯೂ ಐದು ವರ್ಷದಲ್ಲಿ ಮೂರು ಸರ್ಕಾರ ಕಂಡ, ಎರಡು ಪ್ರಾದೇಶಿಕ ಪಕ್ಷಗಳು ವಿಭಜನೆಯಾಗಿ ಇಬ್ಬಾಗವಾದ ಮಹಾರಾಷ್ಟ್ರ ಚುನಾವಣೆಯು ಇಡೀ ದೇಶದ ಗಮನವನ್ನು ಸೆಳೆಯುತ್ತಿದೆ.

2019ರ ಚುನಾವಣೆಯ ಬಳಿಕ ರಾಜಕೀಯ ನಾಟಕ

Advertisements

2019ರಲ್ಲಿ ಚುನಾವಣೆ ನಡೆದ ಬಳಿಕ ಮಹಾರಾಷ್ಟ್ರ ರಾಜಕೀಯದಲ್ಲಿ ಹಲವು ಬದಲಾವಣೆಗಳಾಗಿವೆ. 2019ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 288 ಕ್ಷೇತ್ರಗಳ ಪೈಕಿ ಬಿಜೆಪಿ 105 ಮತ್ತು ಶಿವಸೇನೆ 56 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನೊಂದೆಡೆ ಎನ್‌ಸಿಪಿ 54, ಕಾಂಗ್ರೆಸ್ 44, ಎಐಎಂಐಎಂ 2 ಮತ್ತು ಎಂಎನ್‌ಎಸ್ 1 ಸ್ಥಾನಗಳನ್ನು ಪಡೆದುಕೊಂಡಿದೆ.

ಇದನ್ನು ಓದಿದ್ದೀರಾ? ಮಹಾರಾಷ್ಟ್ರದಲ್ಲಿ ಬಿಜೆಪಿ ತಂತ್ರಕ್ಕೆ ಆಹುತಿಯಾಗುತ್ತಾ ಮಹಾಯುತಿ

ಶಿವಸೇನೆ-ಬಿಜೆಪಿ ಒಗ್ಗೂಡಿ ಸರ್ಕಾರ ರಚಿಸಿತು. ಆದರೆ, ಉದ್ಧವ್ ಠಾಕ್ರೆ ಅವರಿಗೆ ಮುಖ್ಯಮಂತ್ರಿ ಸ್ಥಾನದ ಭರವಸೆ ನೀಡಿ ಕೊನೆ ಕ್ಷಣದಲ್ಲಿ ಬಿಜೆಪಿ ಉಲ್ಟಾಹೊಡೆದ ಕಾರಣಕ್ಕೆ ಬಿಜೆಪಿ ಮತ್ತು ಶಿವಸೇನೆಯ ನಡುವಿನ ದಶಕಗಳಷ್ಟು ಹಳೆಯ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿತು. ಬಿಜೆಪಿಯ ಸಖ್ಯ ತೊರೆದ ಶಿವಸೇನೆ 2019ರ ನವೆಂಬರ್‌ನಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ರಚಿಸಿತು. ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದರು.

ಆದರೆ, ಮಹಾರಾಷ್ಟ್ರದಲ್ಲಿ ರಾಜಕೀಯ ನಾಟಕವು ಇಷ್ಟಕ್ಕೆ ಕೊನೆಯಾಗಲಿಲ್ಲ. 2022ರಲ್ಲಿ ಶಿವಸೇನೆ ನಾಯಕ ಏಕನಾಥ್ ಶಿಂದೆ ಬಂಡಾಯವೆದ್ದು ಕೆಲವು ಶಾಸಕರೊಂದಿಗೆ ಮಹಾ ಅಘಾಡಿ ತೊರೆದರು. ಶಿವಸೇನೆಯನ್ನು ಇಬ್ಬಾಗಿಸಿದರು. ಅಲ್ಲದೆ, ಎನ್‌ಸಿಪಿಯ ಅಜಿತ್ ಪವಾರ್ ಕೂಡ ತಮ್ಮ ಚಿಕ್ಕಪ್ಪ ಶರದ್ ಪವಾರ್ ವಿರುದ್ಧವೇ ಕೆಲವು ಶಾಸಕರೊಂದಿಗೆ ಬಂಡಾಯ ಎದ್ದರು. ಎನ್‌ಸಿಪಿಯನ್ನು ಎರಡು ಭಾಗ ಮಾಡಿದರು. ಎನ್‌ಸಿಪಿ ಅಜಿತ್ ಬಣ, ಶಿವಸೇನೆ ಶಿಂಧೆ ಬಣಗಳು ಬಿಜೆಪಿ ಜೊತೆ ಸೇರಿದವು. ಶಿಂಧೆ ಮತ್ತು ಅಜಿತ್ ತಮ್ಮ ಪಕ್ಷಗಳನ್ನು ಒಡೆಯಲು ಬಿಜೆಪಿಯೇ ಕಾರಣ, ಭ್ರಷ್ಟಾಚಾರದ ಆರೋಪಗಳನ್ನು ದಾಳವಾಗಿಟ್ಟುಕೊಂಡು ಶಿಂಧೆ ಮತ್ತು ಅಜಿತ್ ಅವರನ್ನು ಬಿಜೆಪಿ ಬ್ಲ್ಯಾಕ್‌ಮೇಲ್ ಮಾಡಿತು. ಇಡಿ, ಸಿಬಿಐಗಳನ್ನು ಅವರ ಮೇಲೆ ಛೂಬಿಡುವ ಬೆದರಿಕೆಯೊಡ್ಡಿ ತಮ್ಮೊಂದಿಗೆ ಸೇರಿಸಿಕೊಂಡಿತು ಎಂಬ ಗಂಭೀರ ಆರೋಪಗಳಿವೆ.

ಇತ್ತ, ಅಜಿತ್ ಮತ್ತು ಶಿಂಧೆ ಬಣಗಳು ಮಹಾ ವಿಕಾಸ್ ಅಘಾಡಿಯನ್ನು ತೊರೆದ ಕಾರಣ, ವಿಧಾನಸಭೆಯಲ್ಲಿ ಬಹುಮತ ಉಳಿಸಿಕೊಳ್ಳಲಾಗದೆ ಮಹಾ ವಿಕಾಸ್ ಅಘಾಡಿ ಸರ್ಕಾರ ಉರುಳಿತು. ಉದ್ದವ್ ಠಾಕ್ರೆ ರಾಜೀನಾಮೆ ನೀಡಿದರು. ಅಜಿತ್ ಬಣ, ಶಿಂಧೆ ಬಣಗಳನ್ನು ಸೇರಿಸಿಕೊಂಡು ಬಿಜೆಪಿ ಮಹಾಯುತಿ ಸರ್ಕಾರ ರಚಿಸಿತು. ಶಿಂಧೆ ಮುಖ್ಯಮಂತ್ರಿಯಾದರೆ, ಅಜಿತ್ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಉಪಮುಖ್ಯಮಂತ್ರಿಗಳಾದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಾರಾಷ್ಟ್ರ, ಝಾರ್ಖಂಡ್ ಚುನಾವಣೆ- ಬಿಜೆಪಿ ಪಾಲಿಗೆ ವರವೇ ಅಥವಾ ಶಾಪವೇ?

ಶಿವಸೇನೆ vs ಶಿವಸೇನೆ, ಎನ್‌ಸಿಪಿ vs ಎನ್‌ಸಿಪಿ

ಕಳೆದ ಐದು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆ ಮತ್ತು ಈಗ ನಡೆಯಲಿರುವ ಚುನಾವಣೆ ಸಾಕಷ್ಟು ಭಿನ್ನವಾಗಿದೆ. 2019ರಲ್ಲಿ ಬಿಜೆಪಿ v/s ಕಾಂಗ್ರೆಸ್, ಶಿವಸೇನೆ v/s ಎನ್‌ಸಿಪಿ ಸ್ಪರ್ಧೆಯಾಗಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಬದಲಾಗಿದೆ. ಒಂದೆಡೆ, ಬಿಜೆಪಿ v/s ಕಾಂಗ್ರೆಸ್‌ ನಡುವೆ ಸ್ಪರ್ಧೆ ನಡೆಯುತ್ತಿದ್ದರೆ, ಶಿವಸೇನೆ vs ಶಿವಸೇನೆ, ಎನ್‌ಸಿಪಿ vs ಎನ್‌ಸಿಪಿ ಹಣಾಹಣಿ ನಡೆಯುತ್ತಿದೆ.

ತನ್ನ ಸೋದರಳಿಯ ಪಕ್ಷ ಒಡೆದು ಪ್ರತ್ಯೇಕಗೊಂಡ ಬಳಿಕ ಎನ್‌ಸಿಪಿಯನ್ನು ಗಟ್ಟಿಗೊಳಿಸಿ ಲೋಕಸಭೆ ಚುನಾವಣೆ ಲಾಭವನ್ನು ಪಡೆಯುವಲ್ಲಿ ಯಶಸ್ವಿಯಾದ ಶರದ್ ಪವಾರ್ ಅವರ ಪಕ್ಷವು ಎನ್‌ಸಿಪಿಯ ಅಜಿತ್ ಪವಾರ್ ಬಣವನ್ನು ಎದುರಿಸಲಿದೆ. ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ನಿಜವಾದ ಪರಂಪರೆ ನಾವು ಎಂದು ಹೇಳಿಕೊಳ್ಳುವ ಶಿವಸೇನೆಯ ಎರಡು ಬಣಗಳ ನಡುವೆಯೂ ಸ್ಪರ್ಧೆ ನಡೆಯಲಿದೆ.

uddhav shinde

ಪೂರ್ವ ಸಿದ್ದತಾ ಪರೀಕ್ಷೆಯಾದ ಲೋಕಸಭೆ ಚುನಾವಣೆ

ಲೋಕಸಭೆ ಚುನಾವಣೆಯು ಶಿಂಧೆ ನೇತೃತ್ವದ ಶಿವಸೇನೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಅಜಿತ್ ಪವಾರ್‌ನ ಎನ್‌ಸಿಪಿ, ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ ವಿಧಾನಸಭೆ ಚುನಾವಣೆಯ ಒಂದು ಪೂರ್ವ ಸಿದ್ದತಾ ಪರೀಕ್ಷೆಯಂತಿತ್ತು. ಈ ಪರೀಕ್ಷೆಯಲ್ಲಿ ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ಒಕ್ಕೂಟ ಪಾಸ್‌ ಆಗಿದೆ.

ಇದನ್ನು ಓದಿದ್ದೀರಾ? ಮಹಾರಾಷ್ಟ್ರ-ಜಾರ್ಖಂಡ್‌ ವಿಧಾನಸಭಾ ಚುನಾವಣೆ: ನವೆಂಬರ್ 13 ಮತ್ತು 20ಕ್ಕೆ ಮತದಾನ, 23ಕ್ಕೆ ಫಲಿತಾಂಶ

ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ 48 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ನೇತೃತ್ವದ ಮಹಾ ವಿಕಾಸ್ ಅಘಾಡಿ 30 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 13, ಶಿವಸೇನೆ (ಠಾಕ್ರೆ ಬಣ) 9, ಎನ್‌ಸಿಪಿ (ಶರದ್ ಬಣ) 8 ಕ್ಷೇತ್ರಗಳಲ್ಲಿ ಗೆದ್ದಿದೆ. ಎನ್‌ಡಿಎ ಮೈತ್ರಿಕೂಟದ ಆಡಳಿತಾರೂಢ ಮಹಾಯುತಿ 17 ಕ್ಷೇತ್ರಗಳನ್ನು ಮಾತ್ರ ಪಡೆದುಕೊಳ್ಳುವಲ್ಲಿ ಸಫಲವಾಗಿದೆ. ಬಿಜೆಪಿ 9, ಶಿವಸೇನೆ (ಶಿಂದೆ ಬಣ) 7 ಮತ್ತು ಎನ್‌ಸಿಪಿ (ಅಜಿತ್ ಬಣ) 1 ಕ್ಷೇತ್ರದಲ್ಲಿ ಜಯ ಗಳಿಸಿದೆ. ಸ್ಪರ್ಧಿಸಿದ ನಾಲ್ಕು ಕ್ಷೇತ್ರದ ಪೈಕಿ ಒಂದರಲ್ಲಿ ಮಾತ್ರ ಅಜಿತ್ ಅವರ ಎನ್‌ಸಿಪಿ ಗೆಲುವು ಪಡೆದಿದೆ. ಲೋಕಸಭಾ ಚುನಾವಣೆಯ ಫಲಿತಾಂಶವೇ ವಿಧಾನಸಭೆ ಚುನಾವಣೆಗೆ ಕೈಗನ್ನಡಿ ಎಂದು ಎಲ್ಲ ಪಕ್ಷಗಳು ಭಾವಿಸಿವೆ.

ಆದರೆ, ಇತ್ತೀಚೆಗೆ ನಡೆದ ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಅನಿರೀಕ್ಷಿತವಾಗಿ ಗೆಲುವು ಸಾಧಿಸಿದ ಬಳಿಕ ಮಹಾರಾಷ್ಟ್ರದಲ್ಲಿಯೂ ಮತ್ತೆ ತನ್ನ ಸರ್ಕಾರ ರಚಿಸುವ ಭರವಸೆ ಬಿಜೆಪಿ ನಾಯಕರಲ್ಲಿ ಚಿಗುರಿದೆ. ಈ ನಡುವೆ ಲೋಕಸಭೆ ಚುನಾವಣೆಯಲ್ಲಿ ಅದ್ಬುತ ಪ್ರದರ್ಶನ ತೋರಿದ ಇಂಡಿಯಾ ಒಕ್ಕೂಟವು ಈಗ ಮಹಾರಾಷ್ಟ್ರದಲ್ಲಿ ಗದ್ದುಗೆ ಪಡೆಯುವ ತಯಾರಿಯಲ್ಲಿದೆ. ಮಹಾಯುತಿ, ಮಹಾ ಅಘಾಡಿಗೆ ಪ್ರತಿಷ್ಠೆಯ ಕಣವಾಗಿರುವ ಈ ಚುನಾವಣೆಯು ಕೂಡಾ ನಾಟಕದ ರಂಗವಾಗುವುದು ಖಚಿತ. ನಾವೆಲ್ಲರೂ ಪ್ರೇಕ್ಷರಾಗಬೇಕಷ್ಟೆ.

Mayuri
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X