ಮಹಾ ಚುನಾವಣೆ | ಮುಸ್ಲಿಮರನ್ನು ಮಟ್ಟ ಹಾಕಲು ಬಾಬಾ ಸಿದ್ದೀಕಿ ಹತ್ಯೆ ನಡೆಯಿತೇ?

Date:

Advertisements
ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿಯನ್ನು ಒಡೆದು ಚೂರು ಮಾಡಿದ ಬಿಜೆಪಿ, ಈಗ ಮಹಾಯುತಿ ಮೈತ್ರಿಕೂಟದ ಬೆಂಬಲಿಗರ ಬಲವನ್ನೂ ಕುಂದಿಸಿದೆ. ಅಲ್ಲಿಗೆ ಬಿಜೆಪಿಗೆ ಎದುರಾಳಿಯಾಗಿ ಅಘಾಡಿಯೂ ಇಲ್ಲ, ಮಹಾಯುತಿಯಿಂದ ಸೀಟು ಬೇಕೆಂಬ ಬೇಡಿಕೆಯೂ ಬರುತ್ತಿಲ್ಲ. ಬಿಜೆಪಿಯ ಈ ವಿಚ್ಛಿದ್ರಕಾರಿ ರಾಜಕಾರಣ ಎಷ್ಟು ಜನರಿಗೆ ಅರ್ಥವಾಗುತ್ತದೆ?

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ನಡೆದಿರುವ ಮಾಜಿ ಸಚಿವ ಬಾಬಾ ಸಿದ್ದೀಕಿ ಅವರ ಹತ್ಯೆ, ಮುಸ್ಲಿಮರನ್ನು ಮಟ್ಟ ಹಾಕಲು ಬಿಜೆಪಿ ಮಾಡಿಸಿರಬಹುದೇ ಎಂಬ ಅನುಮಾನ ಹುಟ್ಟಿಸಿದೆ. ಇದೀಗ ಮಹಾರಾಷ್ಟ್ರದಲ್ಲಿ ಚರ್ಚೆಯ ವಸ್ತುವಾಗಿದೆ.

ಮುಂಬೈ ನಗರದಲ್ಲಿ, ಜನರೆದುರೇ ನಡೆದ ಶೂಟ್‌ಔಟ್‌ನಲ್ಲಿ ಪ್ರಾಣ ಕಳೆದುಕೊಂಡಿದ್ದು ಒಬ್ಬ ಮಾಜಿ ಶಾಸಕನಾದರೂ, ಆ ಹತ್ಯೆ ರಾಜಕೀಯ ನಾಯಕರಲ್ಲಿ ನಡುಕ ಹುಟ್ಟಿಸಿದೆ. ಹತ್ತಾರು ವಲಯಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಹಲವು ರೀತಿಯ ಸಂದೇಶಗಳನ್ನು ರವಾನಿಸುತ್ತಿದೆ.

ಮೊದಲಿಗೆ ಮರ್ಮಾಘಾತವಾಗಿರುವುದು, ಬಾಬಾ ಸಿದ್ದೀಕಿ ಎಂಬ ಬಲಗೈ ಬಂಟನನ್ನು ಕಳೆದುಕೊಂಡ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್‍‌ಗೆ. ಬಾಬಾ ಸಿದ್ದೀಕಿ ಕೇವಲ ರಾಜಕಾರಣಿಯಾಗಿರಲಿಲ್ಲ. ಮುಸ್ಲಿಂ ಸಮುದಾಯ, ಭೂಗತಲೋಕ, ಸಿನೆಮಾ ಜಗತ್ತು, ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಏಕಕಾಲದಲ್ಲಿ ನಿರ್ವಹಿಸುವ, ನಿಭಾಯಿಸುವ ಚಾಲಾಕಿ ವ್ಯಕ್ತಿಯಾಗಿದ್ದರು. ಅವರಿಗೆ ಸಮಾಜಸೇವೆ ಮತ್ತು ರಾಜಕಾರಣ ಅನುಕೂಲಕರ ವೇದಿಕೆಯಾಗಿ ಒದಗಿಬಂದಿತ್ತು. ಹೀಗಾಗಿ ಅಜಿತ್ ಪವಾರ್ ಹತ್ತು ಹಲವು ವಿಷಯಗಳಿಗಾಗಿ ಬಾಬಾರನ್ನು ಆಶ್ರಯಿಸಿದ್ದರು, ಅವಲಂಬಿಸಿದ್ದರು.  

Advertisements

ಬಾಬಾರನ್ನು ಕೊಲೆ ಮಾಡುವ ಮೂಲಕ ಅಜಿತ್ ಪವಾರ್ ಶಕ್ತಿ ಕುಂದಿಸುವ ಷಡ್ಯಂತ್ರವಿದೆ ಎನ್ನುವುದು ಈಗ ಬಯಲಾಗುತ್ತಿದೆ. ಇದು ಬಿಜೆಪಿಯ ಮಾಸ್ಟರ್ ಪ್ಲಾನ್‌ಗಳಲ್ಲಿ ಮೊದನೆಯದು ಎಂದು ಹೇಳಲಾಗುತ್ತಿದೆ. ಒಬ್ಬ ಮುಸ್ಲಿಂ ನಾಯಕನನ್ನು ಕೊಲ್ಲುವ ಮೂಲಕ ಮುಸ್ಲಿಂ ಸಮುದಾಯಕ್ಕೆ, ಸಿನೆಮಾ ಜಗತ್ತಿಗೆ, ಭೂಗತಲೋಕಕ್ಕೆ ಏಕಕಾಲದಲ್ಲಿ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಶಿವಸೇನ-ಎನ್‌ಸಿಪಿ-ಕಾಂಗ್ರೆಸ್ ಪಕ್ಷಗಳ ಮಹಾಮೈತ್ರಿ ಮಹಾವಿಕಾಸ್ ಅಘಾಡಿ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ಏಕನಾಥ್ ಶಿಂದೆ ಮತ್ತು ಅಜಿತ್ ಪವಾರ್- ಭ್ರಷ್ಟರು ಎನ್ನುವುದು ಎಲ್ಲರಿಗೂ ಗೊತ್ತಿದ್ದ ಬಹಿರಂಗ ಸತ್ಯವಾಗಿತ್ತು. ಅವರ ಮೇಲೆ ಭ್ರಷ್ಟಾಚಾರದ ಹಲವು ಕೇಸುಗಳಿದ್ದವು. ಅದನ್ನು ವ್ಯವಸ್ಥಿತವಾಗಿ ಬಳಸಿಕೊಂಡ ಬಿಜೆಪಿ, ಅವರ ಮೇಲೆ ಐಟಿ-ಸಿಬಿಐ-ಇಡಿಗಳ ದಾಳಿ ಮಾಡಿಸಲು ನೀಲನಕ್ಷೆ ತಯಾರಿಸಿತು. ಅದು ಅವರ ಗಮನಕ್ಕೆ ಬರುವಂತೆ ನೋಡಿಕೊಳ್ಳಲಾಯಿತು. ಭಯ ಬಿದ್ದ ಏಕನಾಥ್ ಶಿಂದೆ ಮತ್ತು ಅಜಿತ್ ಪವಾರ್, ಬಿಜೆಪಿಯೊಂದಿಗೆ ಕೈಜೋಡಿಸಿದರು. ಜೊತೆಗೊಂದಿಷ್ಟು ಶಾಸಕರನ್ನೂ ಕರೆದುಕೊಂಡು ಬಂದು ಮೂಲ ಪಕ್ಷಗಳಾದ ಶಿವಸೇನ-ಎನ್‌ಸಿಪಿಗಳನ್ನು ಒಡೆದು ಚೂರು ಮಾಡಿದರು.

ಇದನ್ನು ಓದಿದ್ದೀರಾ?: ಚುನಾವಣೆ ಬಂದಾಗ ‘ಗೋಮಾತೆ’ ಸ್ಮರಣೆ: ದೇಸಿ ಹಸು ರಾಜ್ಯ ಮಾತೆಯಾದರೆ, ಇತರೆ ತಳಿಗಳು ಆಹಾರವೇ?  

ಅಲ್ಲಿಗೆ ಬಿಜೆಪಿಯ ರಾಜಕೀಯ ತಂತ್ರ ಫಲಿಸಿತ್ತು. ಮಹಾರಾಷ್ಟ್ರದಲ್ಲಿ ಬಲಶಾಲಿಗಳಾಗಿದ್ದ ಶಿವಸೇನ ಮತ್ತು ಎನ್‌ಸಿಪಿ ಎಂಬ ಎರಡು ಪ್ರಾದೇಶಿಕ ಪಕ್ಷಗಳನ್ನು ಒಡೆದು ಹೋಳು ಮಾಡಿದ್ದರು. ಅವುಗಳ ಕೈಯಲ್ಲಿ ಅಧಿಕಾರವಿಲ್ಲದಂತೆ ಮಾಡಿ, ಶಕ್ತಿ ಕುಂದಿಸಿದ್ದರು. ಮತ್ತೊಂದು ಶಿವಸೇನೆ, ಮತ್ತೊಂದು ಎನ್‌ಸಿಪಿಯೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡು, ಮಹಾಯುತಿ ಎಂಬ ಹೆಸರಿಟ್ಟುಕೊಂಡು ಸರ್ಕಾರ ರಚನೆ ಮಾಡಿದ್ದರು.

ಬಿಜೆಪಿಗೆ ಮುಖ್ಯವಾಗಿ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆಗಳ ಕೀಲು ಮುರಿಯಬೇಕಾಗಿತ್ತು. ಅದಕ್ಕಾಗಿ ಅವರು ಅಜಿತ್ ಪವಾರ್ ಮತ್ತು ಶಿಂದೆಗೆ ಗಾಳ ಹಾಕಿದ್ದರು. ಅಧಿಕಾರದ ಆಸೆಗೆ ಬಿದ್ದ ಶಿಂದೆ-ಅಜಿತ್, ಸದ್ಯಕ್ಕೆ ಸೇಫ್ ಆದವೆಂದು ಭ್ರಮಿಸಿದರು. ಭವಿಷ್ಯದ ಬಗ್ಗೆ ಕುರುಡರಾದರು.

ಈಗ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಎದುರಾಗಿದೆ. ಮಹಾಯುತಿ ಸರ್ಕಾರದಲ್ಲಿ ಹಿನ್ನೆಲೆಯಲ್ಲಿದ್ದ ಬಿಜೆಪಿ ಈಗ ಮುನ್ನೆಲೆಗೆ ಬಂದಿದೆ. ಅಭ್ಯರ್ಥಿಗಳ ಆಯ್ಕೆ, ಸೀಟು ಹಂಚಿಕೆ, ಚುನಾವಣಾ ತಂತ್ರಗಾರಿಕೆಯ ನೀತಿ ನಿರ್ಧಾರಗಳಲ್ಲಿ ಮುಂಚೂಣಿಯಲ್ಲಿದೆ. ಎಲ್ಲರಿಗಿಂತ ಮುಂಚಿತವಾಗಿ 99 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಶಿಂದೆ ಮತ್ತು ಅಜಿತ್‌ರನ್ನು ಬಿಜೆಪಿ ನಿರ್ಲಕ್ಷಿಸಿದೆ. ಹಾಗೆ ನಿರ್ಲಕ್ಷಿಸಲು ಕಾರಣವೇನೆಂದರೆ, ಶಿಂದೆ ಮತ್ತು ಅಜಿತ್ ಎಂತಹ ನಾಯಕರು ಎಂಬುದು ಬಿಜೆಪಿಗೆ ಅರ್ಥವಾಗಿದೆ. ಅವರ ಕೆಟ್ಟ-ಭ್ರಷ್ಟ ಆಡಳಿತದಿಂದ ಮಹಾರಾಷ್ಟ್ರದ ಜನತೆಯ ದೃಷ್ಟಿಯಲ್ಲಿ ಅವರು ಖಳನಾಯಕರಾಗುವಂತೆ ನೋಡಿಕೊಳ್ಳಲಾಗಿದೆ. ಚುನಾವಣೆಯಲ್ಲಿ ಸ್ವಂತ ಶಕ್ತಿಯಿಂದ ಗೆಲ್ಲಲು ಬೇಕಾದ ಅರ್ಹತೆ, ಯೋಗ್ಯತೆಗಳನ್ನೆಲ್ಲ ಕಳೆದು, ಕಳೆಗುಂದುವಂತೆ ಮಾಡಲಾಗಿದೆ.

ಬಿಜೆಪಿಗೆ ಬೇಕಾಗಿದ್ದು ಇಷ್ಟೇ. ಏಕನಾಥ್ ಶಿಂದೆ ಮುಖ್ಯಮಂತ್ರಿಯಾಗಿದ್ದರೂ, ಶಾಸಕರ ಬೆಂಬಲವಿಲ್ಲದೆ ಬಳಲುವಂತೆ ಮಾಡಿದ್ದಾರೆ. ಅಜಿತ್ ಪವಾರ್‍‌ನ ಬಲಗೈ ಬಂಟನನ್ನು ಇಲ್ಲವಾಗಿಸುವ ಮೂಲಕ ಭಯ ಹುಟ್ಟಿಸಿದ್ದಾರೆ. ಮುಂದಡಿಯಿಡಲು ಹತ್ತಾರು ಬಾರಿ ಯೋಚಿಸುವಂತೆ ಮಾಡಿದ್ದಾರೆ.

ಇದಕ್ಕೆ ಹಿನ್ನೆಲೆಯಾಗಿ, ಅ.2ರಂದು ಅಜಿತ್ ಪವಾರ್ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಮುಂಬೈನಲ್ಲಿ ಭೇಟಿ ಮಾಡಿದ್ದು ಈಗ ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗೆ ಬರುತ್ತಿದೆ. ಆ ಸಭೆಯಲ್ಲಿ ಅಜಿತ್ ಪವಾರ್, ಕೆಲವು ಬಿಜೆಪಿ ನಾಯಕರ ಮುಸ್ಲಿಂ ವಿರೋಧಿ ಭಾವನೆ, ಮೈತ್ರಿಕೂಟಕ್ಕೆ ಹೇಗೆ ತೊಂದರೆಯಾಗುತ್ತಿದೆ ಎಂಬುದರ ಬಗ್ಗೆ ಪ್ರಸ್ತಾಪಿಸಿದ್ದರಂತೆ. ಮುಂದುವರೆದು ಎನ್‌ಸಿಪಿ ನಾಯಕ ಅಜಿತ್ ಪವಾರ್ ಪಕ್ಕ ಕುಳಿತರೆ ವಾಂತಿ ಬರುತ್ತೆ ಎಂದು ಸಚಿವ ತಾನಾಜಿ ಸಾವಂತ್ ಹೇಳಿದ್ದರ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದರಂತೆ. ಮಹಾಯುತಿ ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದರಂತೆ.

ಫಡ್ನವಿಸ್ ಅಜಿತ್ ಪವಾರ್ ಅಮಿತ್ ಶಾ 1

ಈ ಸಭೆ ನಡೆದು ಸರಿಯಾಗಿ ಹತ್ತು ದಿನಗಳಿಗೆ ಬಾಬಾ ಸಿದ್ದೀಕಿ ಹತ್ಯೆಯಾಗಿದೆ. ಆ ಹತ್ಯೆಯನ್ನು ಗೋದಿ ಮೀಡಿಯಾಗಳ ಮೂಲಕ ಲಾರೆನ್ಸ್ ಬಿಷ್ಣೋಯ್ ತಲೆಗೆ ಕಟ್ಟಲಾಗಿದೆ. ಅದಕ್ಕೆ ನಟ ಸಲ್ಮಾನ್ ಖಾನ್ ಮತ್ತು ಕೃಷ್ಣಮೃಗದ ಬೇಟೆಯ ಕತೆಯನ್ನು ತಳಕು ಹಾಕಲಾಗಿದೆ. ಅದರೊಂದಿಗೆ ಭೂಗತ ಲೋಕದ ದಾವೂದ್ ಇಬ್ರಾಹಿಂನನ್ನೂ ಎಳೆದು ತರಲಾಗಿದೆ. ಒಟ್ಟಾರೆ ಈ ಹತ್ಯೆ ಮುಸ್ಲಿಮರನ್ನು ಹತ್ತಿಕ್ಕುವ ಮೊದಲ ಅಸ್ತ್ರದಂತೆ ಕಾಣುತ್ತಿದೆ. ಈ ಚುನಾವಣೆಯಲ್ಲಿ ಮುಸ್ಲಿಮರು ಧ್ವನಿ ಎತ್ತದಂತೆ ಮಾಡುವ ಹುನ್ನಾರವೂ ಇದರಲ್ಲಡಗಿದೆ.

ಈಗ ಅಜಿತ್ ಪವಾರ್ ನಡ ಮುರಿದ ನಾಯಕರಾಗಿದ್ದಾರೆ. ಇನ್ನು ಇರುವುದು ಏಕನಾಥ್ ಶಿಂದೆ ಎಂಬ ಮೊದ್ಮಣಿಯದು.

ಆಡಳಿತಾರೂಢ ಮಹಾ ವಿಕಾಸ ಅಘಾಡಿಯನ್ನು ಒಡೆದು ಚೂರು ಮಾಡಿದ ಬಿಜೆಪಿ, ಈಗ ಮಹಾಯುತಿ ಮೈತ್ರಿಕೂಟದ ಬೆಂಬಲಿಗರ ಬಲವನ್ನೂ ಕುಂದಿಸಿದೆ. ಅಲ್ಲಿಗೆ ಬಿಜೆಪಿಗೆ ಎದುರಾಳಿಯಾಗಿ ಅಘಾಡಿಯೂ ಇಲ್ಲ, ಮಹಾಯುತಿಯಿಂದ ಸೀಟು ಬೇಕೆಂಬ ಬೇಡಿಕೆಯೂ ಬರುತ್ತಿಲ್ಲ.

ಬಿಜೆಪಿಯ ಈ ವಿಚ್ಛಿದ್ರಕಾರಿ ರಾಜಕಾರಣ ಎಷ್ಟು ಜನರಿಗೆ ಅರ್ಥವಾಗುತ್ತದೆ?

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X