2024ರ ಲೋಕಸಭಾ ಚುನಾವಣಾ ಫಲಿತಾಂಶಗಳು ಅತ್ಯಂತ ಸ್ಪಷ್ಟವಾದ ತೀರ್ಪು ನೀಡಿವೆ. ಮಹಾರಾಷ್ಟ್ರದ 48 ಸ್ಥಾನಗಳ ಪೈಕಿ 30 ಸ್ಥಾನಗಳನ್ನು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಗೆದ್ದಿದೆ. ವಿಜೇತರಾಗಿ ಹೊರಹೊಮ್ಮಿದೆ. ಇದಕ್ಕೆ ವ್ಯತಿರಿಕ್ತವಾಗಿ, ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಕೇವಲ 17 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಇದು, 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಬಿಜೆಪಿಗೆ ಹೀನಾಯ ಸೋಲು.
ಆದಾಗ್ಯೂ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಂವಿಎ ಮತ್ತು ಮಹಾಯುತಿ ಮೈತ್ರಿಕೂಟಗಳ ನಡುವಿನ ಮತ ಹಂಚಿಕೆಯಲ್ಲಿ ಹೆಚ್ಚಿನ ಅಂತರವಿಲ್ಲ. ಎಂವಿಎ ಮತ ಪಾಲು 43.71% ಇದ್ದರೆ, ಮಹಾಯುತಿ 43.55% ಮತಗಳನ್ನು ಗಳಿಸಿದೆ. ಮಹಾಯುತಿ ಗಳಿಸಿದ 24,812,627 ಮತಗಳಿಗೆ ಹೋಲಿಸಿದರೆ ಎಂವಿಎ ಒಟ್ಟು 25,015,819 ಮತಗಳನ್ನು ಗಳಿಸಿದೆ. ಆದರೆ, ಅಂತಿಮವಾಗಿ ಮುಖ್ಯವಾದುದು ಎಷ್ಟು ಸ್ಥಾನಗಳನ್ನು ಗೆದ್ದಿದ್ದಾರೆ ಎಂಬುದು. ಅದನ್ನು ಗಮನಿಸಿದರೆ, ಮಹಾರಾಷ್ಟ್ರದಲ್ಲಿ ಮಹಾಯುತಿ ಗಳಿಕೆಯು ಅತ್ಯಂತ ಕಳಪೆಯಾಗಿದೆ.
ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆ ಬೆನ್ನಲ್ಲೇ ವಿಧಾನಸಭಾ ಚುನಾವಣೆ ಎದುರಾಗಿದೆ. ಈ ಐದು ತಿಂಗಳ ಸಮಯದಲ್ಲಿ ಮಹಾಯುತಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡು, ಜನರನ್ನು ಸೆಳೆಯಲು ಯತ್ನಿಸಿದೆ. ಅದರ ಭಾಗವಾಗಿ, ಹಲವು ಜನಪರ ಯೋಜನೆಗಳನ್ನು ಘೋಷಿಸುವ ಕಸರತ್ತು ನಡೆಸಿದೆ. ಲೋಕಸಭಾ ಚುನಾವಣೆ ಬಳಿಕ ಮಹಾಯುತಿ ಸರ್ಕಾರ ಘೋಷಿಸಿದ ಮೊದಲ ಯೋಜನೆ ‘ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್’ ಯೋಜನೆ. ಇದರ ಅಡಿಯಲ್ಲಿ 21 ರಿಂದ 65 ವರ್ಷ ವಯಸ್ಸಿನ ಮಹಿಳೆಯರಿಗೆ 1,500 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಯೋಜನೆಗೆ 2.34 ಕೋಟಿ ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಯೋಜನೆಯು ಬಿಜೆಪಿ ಮೈತ್ರಿಕೂಟದ ಚುನಾವಣಾ ತಂತ್ರವಾಗಿದ್ದರೂ, ಆ ಹಿನ್ನೆಲೆಯಲ್ಲಿ ಹೆಚ್ಚು ಪ್ರಶ್ನಾರ್ಹವಾಗಿದ್ದರೂ, ಅದರ ವಿರುದ್ಧ ಹೆಚ್ಚು ವಿರೋಧಗಳು ವ್ಯಕ್ತವಾಗಲಿಲ್ಲ. ಇದು ಸ್ಪಷ್ಟವಾಗಿ ಮಹಿಳೆಯರ ಕೈಗೆ ನಗದು ಹಸ್ತಾಂತರ ಮಾಡಿದರೂ, ಜನಸಾಮಾನ್ಯರಿಗೆ ನೇರವಾಗಿ ಪ್ರಯೋಜನವನ್ನು ನೀಡುವ ಯೋಜನೆಯನ್ನು ವಿಪಕ್ಷಗಳು ಹೆಚ್ಚು ಪ್ರಶ್ನಿಸಲು ಸಾಧ್ಯವಾಗಲಿಲ್ಲ. ಎನ್‌ಸಿಪಿ ಹಿರಿಯ ನಾಯಕ ಶರದ್ ಪವಾರ್ ಸೇರಿದಂತೆ ಕೆಲವು ವಿರೋಧ ಪಕ್ಷದ ನಾಯಕರು ಈ ಯೋಜನೆಯನ್ನು ‘ಕಣ್ಣೊರೆಸುವ ತಂತ್ರ’ ಎಂದು ಕರೆದರು. ಆದರೆ, ಈ ವಿಚಾರವಾಗಿ ಸರ್ಕಾರದ ವಿರುದ್ಧ ಹೆಚ್ಚು ಆಕ್ರಮಣಕಾರಿಯಾಗಿ ಮಾತನಾಡಲಿಲ್ಲ.

ಈ ಯೋಜನೆಯು ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರಿಗೆ ತನ್ನ ಇಮೇಜ್ಅನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ನೆರವಾಗಿದೆ. ಈ ಬಾರಿ ಜನಾದೇಶ ಪಡೆದು ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಉತ್ಸುಕರಾಗಿರುವ ಶಿಂದೆ ಅವರು ಯೋಜನೆಯ ಸಂಪೂರ್ಣ ಕ್ರೆಡಿಟ್ ಪಡೆದುಕೊಳ್ಳುತ್ತಿದ್ದಾರೆ. ಅವರ ಶಿವಸೇನೆ ಬಣವು ಶಿಂದೆ ಅವರನ್ನು ರಾಜ್ಯದ ಅದಮ್ಯ ವ್ಯಕ್ತಿಯೆಂದು ಬಿಂಬಿಸಲು ಹವಣಿಸುತ್ತಿದೆ. ತಂತ್ರ ಎಣೆಯುತ್ತಿದೆ.
‘ಮುಖ್ಯಮಂತ್ರಿ ಯುವ ಕಾರ್ಯಪ್ರಶಿಕ್ಷಣ ಯೋಜನೆ’ ಎಂಬ ಹೆಸರಿನ ಮತ್ತೊಂದು ಯೋಜನೆಯನ್ನು ಅದೇ ಸಮಯದಲ್ಲಿ ಘೋಷಿಸಲಾಯಿತು. ಯೋಜನೆಯಡಿ ವಿವಿಧ ಕೈಗಾರಿಕೆಗಳಲ್ಲಿ ಆರು ತಿಂಗಳ ಅವಧಿಯ ಇಂಟರ್ನ್‌ಶಿಪ್ ಪಡೆಯಲು ಯುವಕರಿಗೆ ಮಾಸಿಕ 6,000-10,000 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ.
ಇನ್ನು, ಪತ್ರಿಕೆಗಳಲ್ಲಿ ಬರುವ ಪ್ರತಿಯೊಂದು ಜಾಹೀರಾತಿನಲ್ಲೂ ಪ್ರಧಾನ ಮಂತ್ರಿ ಮೋದಿಯ ಜೊತೆಗೆ ಶಿಂದೆಯವರ ಚಿತ್ರವು ಮುಂಚೂಣಿಯಲ್ಲಿದೆ. ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ (ಬಿಜೆಪಿ) ಮತ್ತು ಅಜಿತ್ ಪವಾರ್ (ಎನ್‌ಸಿಪಿ ಅಜಿತ್ ಬಣ) ಚಿತ್ರಗಳನ್ನು ನಾಮ್ ಕೆ ವಾಸ್ತೆಗೆ ಸೇರಿಸಲಾಗಿದೆ.
ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಫಡ್ನವೀಸ್ ಅವರನ್ನು ಇತ್ತೀಚಿನ ವರ್ಷಗಳಲ್ಲಿ ಮೂಲೆಗೆ ದೂಡಲಾಗುತ್ತಿದೆ. ಈಗ ಅವರು ಸ್ವಂತ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತವಾಗಿಲ್ಲ. ಮುಂದಿನ ದಿನಗಳಲ್ಲೂ ಅವರು ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಯಾವುದೇ ಸಾಧ್ಯತೆಗಳಿಲ್ಲ.
ಮಹಾರಾಷ್ಟ್ರದ ರಾಜಕೀಯದ ಬಗ್ಗೆ ಅಧ್ಯಯನ ನಡೆಸುತ್ತಿರುವ ಮುಂಬೈ ವಿಶ್ವವಿದ್ಯಾನಿಲಯದ ಸಂಶೋಧಕ ಸಂಜಯ್ ಪಾಟೀಲ್, ”ಮಹಾರಾಷ್ಟ್ರದಲ್ಲಿ ರಾಜಕೀಯದ ಮುಖವಾಗಿ ಶಿಂದೆ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿದ್ದಾರೆ. ಅವರ ತಂತ್ರವು ಬಿಜೆಪಿ ಒಳಗೆ ಅಸಮಾಧಾನವಿದ್ದರೂ, ತೋರಿಸಿಕೊಳ್ಳದಂತೆ ಮಾಡಿದೆ. ಶಿಂದೆ ಅವರು ರಾಜ್ಯ ಬಿಜೆಪಿ ನಾಯಕರನ್ನು ಬದಿಗೊತ್ತಿ, ಎಲ್ಲ ಯೋಜನೆಯ ಜಾಹೀರಾತುಗಳಲ್ಲಿ ಪ್ರಧಾನಿ ಮೋದಿಗೆ ಪೂರ್ವಪ್ರಾತಿನಿಧ್ಯ ನೀಡಿದ್ದಾರೆ. ಇದು ಬಿಜೆಪಿಗರ ಬಾಯಿ ಮುಚ್ಚಿಸಿದೆ” ಎಂದಿದ್ದಾರೆ.
”ಆದಾಗ್ಯೂ, ರಾಜ್ಯ ಬಿಜೆಪಿ ಮತ್ತು ಅಜಿತ್ ಬಣದ ಬೆಂಬಲವಿಲ್ಲದೆ ಶಿಂದೆ ಅಧಿಕಾರಕ್ಕೆ ಬರುತ್ತಿರಲಿಲ್ಲ. ಮಾತ್ರವಲ್ಲ, ಈ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಾಮರ್ಥ್ಯವನ್ನೂ ಶಿಂದೆ ಹೊಂದಲು ಸಾಧ್ಯವಾಗುತ್ತಿರಲಿಲ್ಲ. ಅಜಿತ್ ಪವಾರ್ ಅವರು ಯೋಜನೆಗಳ ಕ್ರೆಡಿಟ್ ಪಡೆಯಲು ಹಲವು ಸಂದರ್ಭಗಳಲ್ಲಿ ಪ್ರಯತ್ನಿಸಿದ್ದಾರೆ. ಆದರೆ, ಅದು ವಿಫಲವಾಗಿದೆ” ಎಂದು ಪಾಟೀಲ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಸಮಯದಲ್ಲಿ, ಮೇ ತಿಂಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ನಾಸಿಕ್ ಜಿಲ್ಲೆಯಲ್ಲಿ ಮೊದಲ ಚುನಾವಣಾ ಪ್ರಚಾರ ಆರಂಭಿಸುವುದಕ್ಕೂ ಮೊದಲು, ಈರುಳ್ಳಿ ಬೆಳೆವ ಅಲ್ಲಿನ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಮೋದಿ ಅವರ ಸಾರ್ವಜನಿಕ ಪ್ರಚಾರಕ್ಕೆ ಅಡ್ಡಿಯಾಗಬಾರದೆಂಬ ಕಾರಣಕ್ಕೆ, 400ಕ್ಕೂ ಹೆಚ್ಚು ರೈತರನ್ನು ಒಂದು ದಿನದ ಮಟ್ಟಿಗೆ ಪೊಲೀಸರು ಬಂಧಿಸಿದ್ದರು. ಮೋದಿ ಇದ್ದ ಸಮಯದಲ್ಲಿ ಪ್ರತಿಭಟನೆ ಎದುರಾಗದಂತೆ ಶಿಂದೆ ಸರ್ಕಾರ ನೋಡಿಕೊಂಡಿತು. ರೈತರ ಧನಿಯನ್ನು ಹತ್ತಿಕ್ಕಿತು.
ಗಮನಾರ್ಹವಾಗಿ, 2023ರ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರ ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಿತ್ತು. ಆ ಬಳಿಕ, ನಿಷೇಧವನ್ನು ಹಿಂಪಡೆದರೂ, ಈರುಳ್ಳಿ ರಫ್ತಿನ ಮೇಲೆ 40% ಸುಂಕವನ್ನು ಹೇರಿತು. ಆದರೆ, ಈಗ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಎದುರಾಗುತ್ತಿದ್ದಂತೆ, ಮೋದಿ ಸರ್ಕಾರವು ಪ್ರತಿ ಮೆಟ್ರಿಕ್ ಟನ್ ಈರುಳ್ಳಿಗೆ 550 ಡಾಲರ್ ಕನಿಷ್ಠ ರಫ್ತು ಬೆಲೆ ಆದೇಶವನ್ನು ರದ್ದುಗೊಳಿಸಿದೆ. ಮಾತ್ರವಲ್ಲ, ಹೇರಲಾಗಿದ್ದ 40% ರಫ್ತು ಸುಂಕವನ್ನು 20%ಗೆ ಇಳಿಸಿದೆ.
ಈ ವರದಿ ಓದಿದ್ದೀರಾ?: ಜಾತೀವಾರು ಸಮೀಕ್ಷೆಗೆ ಮೇಲ್ಜಾತಿಯಲ್ಲಿನ ಉಳ್ಳವರೇ ಯಾಕೆ ಅಡ್ಡಿ?!
ರಾಜ್ಯದಲ್ಲಿ ಮೋದಿ ಅಥವಾ ಬಿಜೆಪಿ ಎದುರಿಸಿದ ಬಹಿರಂಗ ಪ್ರತಿಭಟನೆ ಇದೊಂದೇ ಅಲ್ಲ. ರಾಜ್ಯಾದ್ಯಂತ ರೈತರು ನಿರಂತರವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅದು, ಲೋಕಸಭಾ ಚುನಾವಣಾ ಫಲಿತಾಂಶಗಳಲ್ಲಿ ಪ್ರತಿಫಲಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ರೈತರನ್ನು ಸಮಾಧಾನಿಸುವ ಅಥವಾ ಮೌನಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಜೂನ್ ಅಂತ್ಯದಲ್ಲಿ ನಡೆದ ರಾಜ್ಯ ಬಜೆಟ್ ಅಧಿವೇಶನದಲ್ಲಿ 44 ಲಕ್ಷ ರೈತರ ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡಲು ನಿರ್ಧರಿಸಿತು. ಜೊತೆಗೆ, ಕೆಲವು ಯೋಜನೆಗಳನ್ನು ಘೋಷಿಸಿತು.
ಆದಾಗ್ಯೂ, ಯೋಜನೆಗಳನ್ನು ಘೋಷಿಸಿದ ಮಾತ್ರಕ್ಕೆ ಅದರ ಫಲಿತಾಂಶ ಶೀಘ್ರದಲ್ಲಿಯೇ ವ್ಯಕ್ತವಾಗುವುದಿಲ್ಲ. ಪ್ರಯೋಜನ ಮತ್ತು ಫಲಿತಾಂಶ ಬಹಿರಂಗವಾಗಿ ಕಾಣಿಸಲು ಸಮಯ ಬೇಕಾಗುತ್ತದೆ. ರೈತರು ಬಹಳ ದಿನಗಳಿಂದ ಸಂಕಷ್ಟದಲ್ಲಿದ್ದಾರೆ. ಕಳೆದ ವರ್ಷ ಬರಗಾಲ ಅನುಭವಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ಬಂದ ಯೋಜನೆಗಳು ರೈತರ ಮನಸ್ಸನ್ನು ಬದಲಾಯಿಸುವುದಿಲ್ಲ ಎನ್ನುತ್ತಾರೆ ಸಂಜಯ್ ಪಾಟೀಲ್.
ಆಗಸ್ಟ್ ತಿಂಗಳಿನಲ್ಲಿ, ರಾಜ್ಯ ಸರ್ಕಾರವು ಹತ್ತಿ ಮತ್ತು ಸೋಯಾಬೀನ್ ಬೆಳೆಯುವ ರೈತರಿಗೆ 2023ರಲ್ಲಿ ಅವರು ಅನುಭವಿಸಿದ ಬೆಳೆ ನಷ್ಟಕ್ಕೆ ಪರಿಹಾರವಾಗಿ 4,194 ಕೋಟಿ ರೂಪಾಯಿಗಳನ್ನು ‘ಆರ್ಥಿಕ ನೆರವು’ ಎಂದು ಘೋಷಿಸಿತು. ಅಂದರೆ, ಬೆಳೆ ನಷ್ಟವಾಗಿ ಒಂದು ವರ್ಷದ ನಂತರ ಸರ್ಕಾರ ಪರಿಹಾರ ನೀಡಲು ಮುಂದಾಯಿತು. ಅದೂ, ಲೋಕಸಭಾ ಚುನಾವಣೆಯಲ್ಲಿ ಮಹಾಯುತಿ ಮಣ್ಣು ಮುಕ್ಕಿದ ನಂತರ.
ಹಣಕಾಸು ಖಾತೆಯನ್ನು ಹೊಂದಿರುವ ಅಜಿತ್ ಪವಾರ್ ಅವರು ರಾಜ್ಯ ಬಜೆಟ್‌ನಲ್ಲಿ, ಹಿಂದುಳಿದ ವರ್ಗಗಳು ಮತ್ತು ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರಿಗೆ 100% ಶುಲ್ಕ ವಿನಾಯಿತಿ (50% ಶುಲ್ಕ ವಿನಾಯಿತಿ ಅಸ್ತಿತ್ವದಲ್ಲಿತ್ತು) ಘೋಷಿಸಿದರು. ಈ ನಿರ್ಧಾರದಿಂದ ರಾಜ್ಯಕ್ಕೆ ಈಗ 906.5 ಕೋಟಿ ಹೆಚ್ಚುವರಿ ಹೊರೆಯಾಗಲಿದೆ.
ಆದರೂ, ಚುನಾವಣಾ ಸಮಯದಲ್ಲಿ ಘೋಷಿಸಿರುವ ಈ ಯೋಜನೆಗಳನ್ನು ಜನ ವಿರೋಧಿ ಎಂದು ಕರೆಯಲು ಸಾಧ್ಯವಿಲ್ಲ. ಆದರೆ, ಚುನಾವಣಾ ತಂತ್ರವೆಂಬುದು ಸ್ಪಷ್ಟ. ಆದರೆ, ಜನಪರ ಮತ್ತು ಚುನಾವಣಾ ತಂತ್ರಗಳ ನಡುವಿನ ಎಳೆಯನ್ನು ಬಿಡಿಸಿ, ಮಹಾಯುತಿಯ ವಿರುದ್ಧ ಪ್ರಚಾರ ಮಾಡಲು ವಿಪಕ್ಷಗಳು ಹೆಣಗಾಡುತ್ತಿವೆ. ಈ ಯೋಜನೆಗಳ ಕುರಿತಾಗಿ ಹೇಗೆ ಮಾತನಾಡಬೇಕೆಂಬ ಗೊಂದಲ ಮತ್ತು ಇಕ್ಕಟ್ಟಿಗೆ ಸಿಲುಕಿವೆ. ಯೋಜನೆಗಳ ಹೊರತಾಗಿಯೂ ಮಹಾಯುತಿ ಸರ್ಕಾರದ 2 ವರ್ಷಗಳ ಜನವಿರೋಧಿ ಆಡಳಿತವನ್ನು ಜನರ ಮುಂದೆ ವಿಪಕ್ಷಗಳು ಬಿಚ್ಚಿಡಬೇಕು. ಚುನಾವಣಾ ಸಮಯದಲ್ಲಿ ಘೋಷಣೆಯಾದ ಯೋಜನೆಗಳಿಗೆ ಮತದಾರರು ಮರುಳಾಗದಂತೆ ನೋಡಿಕೊಳ್ಳಬೇಕು. ಲೋಕಸಭಾ ಚುನಾವಣೆಯಲ್ಲಿ ನೀಡಿದ ಪ್ರದರ್ಶನವನ್ನೇ ಎಂವಿಎ ಮತ್ತೆ ಪ್ರದರ್ಶಿಸಬೇಕು. ಆಗ ಮಾತ್ರ, ಬಿಜೆಪಿ ರಚಿಸಿದ ಹಿಂಬಾಗಿಲಿನ ಸರ್ಕಾರದ ವಿರುದ್ಧ ಜನಾದೇಶ ಹೊರಬೀಳಲು ಸಾಧ್ಯ.