ತನ್ನ ನಂಬಿಕೆಗಳಿಂದ ಒಂದು ಇಂಚು ಅತ್ತಿತ್ತ ಕದಲುವುದಿಲ್ಲ ಎಂದಿದ್ದ ದಿಟ್ಟ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲಾಗಿದೆ. ಇದು ಅವರನ್ನು ರಾಜಕೀಯವಾಗಿ ಮುಗಿಸಲು ನಡೆಸಿರುವ ಷಡ್ಯಂತ್ರ ಎಂದೇ ಕೆಲವರು ಹೇಳುತ್ತಿದ್ದಾರೆ. ಮಹುವಾ ತಪ್ಪು ಮಾಡಿದ್ದರೂ ಮಾಡಿರಬಹುದು ಎಂಬುದು ಮತ್ತೆ ಕೆಲವರ ನಂಬಿಕೆ. ಅವರ ಲೋಕಸಭೆ ಪ್ರವೇಶ, ಸಂಸದರಾಗಿದ್ದ ಅವಧಿ, ಹೊರಬಿದ್ದ ರೀತಿ ಎಲ್ಲವೂ ಅವರ ಫೈರ್ ಬ್ರಾಂಡ್ ಸ್ವಭಾವಕ್ಕೆ ತಕ್ಕುದಾಗಿಯೇ ಇವೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಹಾಗೂ ದುಬಾರಿ ಉಡುಗೊರೆ ಪಡೆದ ಆರೋಪದ ಮೇಲೆ ಲೋಕಸಭೆಯಿಂದ ಉಚ್ಚಾಟಿಸಲಾಗಿದೆ. ಸಂಸದೆಯಾಗಿ ಮೊದಲ ಅವಧಿಯಲ್ಲೇ ತಮ್ಮ ಪ್ರಶ್ನೆಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಹಲವು ಬಾರಿ ಪೇಚಿಗೆ ಸಿಲುಕಿಸುವ ಮೂಲಕ ದೇಶದಾದ್ಯಂತ ಗಮನ ಸೆಳೆದಿದ್ದ ಮಹುವಾ ವಿವಾದಾಸ್ಪದ ರೀತಿಯಲ್ಲಿ ಲೋಕಸಭೆಯಿಂದ ಹೊರಬಿದ್ದಿದ್ದಾರೆ.
ಮೋದಿ ಸರ್ಕಾರದ ಕಟು ಟೀಕಾಕಾರರಾಗಿದ್ದ ಕಾರಣಕ್ಕೆ ಫೈರ್ ಬ್ರಾಂಡ್ ನಾಯಕಿಯನ್ನು ಬಲಿ ಕೊಡಲಾಗಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರೆ, ಮಹುವಾ ತಪ್ಪು ಮಾಡಿದ್ದರೂ ಮಾಡಿರಬಹುದು ಎಂದು ಮತ್ತೆ ಕೆಲವರ ನಂಬಿಕೆ. ಅವರ ಲೋಕಸಭೆ ಪ್ರವೇಶ, ಸಂಸದರ ಅವಧಿ, ಹೊರಬಿದ್ದ ರೀತಿ ಎಲ್ಲವೂ ಅವರ ಫೈರ್ ಬ್ರಾಂಡ್ ಸ್ವಭಾವಕ್ಕೆ ತಕ್ಕುದಾಗಿಯೇ ಇವೆ.
ಮಹುವಾ ಪಳಗಿದ ರಾಜಕಾರಣಿಯೇನಲ್ಲ; ರಾಜಕಾರಣದ ಹಿನ್ನೆಲೆಯ ಕುಟುಂಬದಿಂದ ಬಂದವರೂ ಅಲ್ಲ. ಅಸ್ಸಾಂನ ಟೀ ಪ್ಲಾಂಟರ್‌ವೊಬ್ಬರ ಮಗಳಾಗಿ ಹುಟ್ಟಿದವರು ಮಹುವಾ. ಸ್ಕಾಲರ್‌ಶಿಪ್ ಪಡೆದು ಇಂಗ್ಲೆಂಡ್‌ನ ಮೆಸಾಚುಸೆಟ್ಸ್‌ನಲ್ಲಿ ಗಣಿತ ಮತ್ತು ಅರ್ಥಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡಿದವರು. ನ್ಯೂಯಾರ್ಕ್‌ನ ಪ್ರಸಿದ್ಧ ಬ್ಯಾಂಕೊಂದರಲ್ಲಿ ಕೈತುಂಬ ಸಂಬಳ ತರುತ್ತಿದ್ದ ಕೆಲಸ ಬಿಟ್ಟು ಹಲವು ಕನಸು ಹೊತ್ತು ಭಾರತಕ್ಕೆ ಬಂದ ಅವರು ರಾಹುಲ್ ಗಾಂಧಿ ಕಣ್ಣಿಗೆ ಬಿದ್ದು ಕಾಂಗ್ರೆಸ್ ಸೇರಿದರು. ನಂತರ 2010ರ ಹೊತ್ತಿಗೆ ಟಿಎಂಸಿ ಪಡಸಾಲೆಯಲ್ಲಿ ಹೋಗಿ ಕೂತರು. ಮೊದಲು, 2016ರಲ್ಲಿ, ಬಾಂಗ್ಲಾ ದೇಶದ ಗಡಿಗೆ ಹೊಂದಿಕೊಂಡ ಕರೀಂಪುರದ ಶಾಸಕಿಯಾದ ಅವರು ನಂತರ 2019ರಲ್ಲಿ ಕೃಷ್ಣಾನಗರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.
ಲೋಕಸಭೆಯಲ್ಲಿ ಮಹುವಾ ತಮ್ಮ ಮೊದಲ ಭಾಷಣದ ಮೂಲಕವೇ ದೇಶದ ಗಮನ ಸೆಳೆದಿದ್ದರು. ಅಂದು ದೇಶದಲ್ಲಿ ಅಸಹನೆ, ಫ್ಯಾಸಿಸಂ ಬೆಳೆಯುತ್ತಿದೆ ಎಂದು ಫ್ಯಾಸಿಸಂನ ಆರಂಭದ ಲಕ್ಷಣಗಳ ಬಗ್ಗೆ ಮಾತನಾಡಿದ್ದ ಮಹುವಾ, ಅಂದಿನಿಂದಲೇ ವಿಪಕ್ಷಗಳ ನೆಚ್ಚಿನ ಸಂಸದೆ ಎನ್ನಿಸಿದ್ದರು. ಮೋದಿ ಸರ್ಕಾರದ ಉಗ್ರ ವಿಮರ್ಶಕಿ ಎಂದೇ ಪ್ರಸಿದ್ಧಿ ಪಡೆದಿದ್ದರು.
ಸಿಎಎ ಮತ್ತು ದೇಶದ್ರೋಹ ಕಾನೂನು ವಿಚಾರವಾಗಿ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದರು. 2022ರ ಮಧ್ಯದಲ್ಲಿ ಕೆನಡಾದ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಸಾಕ್ಷ್ಯಚಿತ್ರ ‘ಕಾಳಿ’ ವಿವಾದದ ಸಂದರ್ಭದಲ್ಲಿ ಕಾಳಿ ದೇವತೆಯ ಬಗ್ಗೆ ಅವರು ಆಡಿದ್ದರೆನ್ನಲಾದ ಮಾತಿನ ಬಗ್ಗೆ ವಿವಾದ ಸ್ಫೋಟಗೊಂಡಿತ್ತು. ಕಾಳಿ ದೇವಿಯನ್ನು ಮಾಂಸಾಹಾರ ಮತ್ತು ಮದ್ಯವನ್ನು ಸ್ವೀಕರಿಸುವ ದೇವತೆಯಾಗಿ ಕಲ್ಪಿಸಿಕೊಳ್ಳುವ ಹಕ್ಕನ್ನು ಅವರು ಪ್ರತಿಪಾದಿಸಿದ್ದು, ರಾಷ್ಟ್ರವ್ಯಾಪಿ ರಾಜಕೀಯ ಬಿರುಗಾಳಿ ಎಬ್ಬಿಸಿತ್ತು. ಹಲವು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಅವರ ವಿರುದ್ಧ ದೂರು ದಾಖಲಿಸಿದ್ದವು. ದೇಶದ ಹಲವೆಡೆ ಅವರ ವಿರುದ್ಧ ಎಫ್‌ಐಆರ್‌ಗಳನ್ನು ಹಾಕಲಾಗಿತ್ತು. ಆದರೆ, ಅದ್ಯಾವುದರಿಂದಲೂ ಮಹುವಾ ಕೊಂಚವೂ ವಿಚಲಿತರಾಗಿರಲಿಲ್ಲ.
Maa Kali is the manifestation of time and death herself. She isn't forgiving.
Mahua Moitra deserved this when she insulated the God Mother herself.#mahua #CashForQueryScam pic.twitter.com/GnemlAmn8Y— Jnanadarshan – ଜ୍ଞାନଦର୍ଶନ – ज्ञानदर्शन (@jnanadarshan) December 9, 2023
ಅವರ ಫೈರ್ ಬ್ರಾಂಡ್ ಸ್ವಭಾವದಿಂದ ಸ್ವಪಕ್ಷದವರೂ ಸೇರಿದಂತೆ ಬಹುತೇಕ ಸಂಸದರು ಅವರಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಅದರ ಬಗ್ಗೆ ಅವರಿಗೆ ಬೇಸರವೇನಿಲ್ಲ; ‘ಗಂಡಸೊಬ್ಬ ನನ್ನ ರೀತಿ ಇದ್ದರೆ ಅದನ್ನು ನಾಯಕತ್ವದ ಲಕ್ಷಣಗಳು ಎನ್ನುವಿರಿ. ಅದೇ ಹೆಣ್ಣಿನಲ್ಲಿ ಅಂಥ ನಡವಳಿಕೆ ಕಂಡಾಗ ಆಕೆಯನ್ನು ನಾಯಿಯಂತೆ ಕಾಣುವಿರಿ’ ಎಂದು ಅವರು ಅದರ ಬಗ್ಗೆ ವಿಶ್ಲೇಷಿಸುತ್ತಾರೆ.
ಹೀಗೆ ಹಲವು ವಿವಾದಗಳಿಂದ ಸುದ್ದಿಯಾಗಿದ್ದ ಮಹುವಾ, ಬಿಜೆಪಿ ಸಂಸದ, ಅದಾನಿ ಆಪ್ತ ಎಂದೇ ಹೆಸರಾಗಿರುವ ನಿಶಿಕಾಂತ್ ದುಬೆ ವಿರುದ್ಧವೂ ಹಲವು ಆರೋಪ ಮಾಡಿದ್ದರು. ದುಬೆ ತನ್ನ ಸಹಸಂಸದನ ಮೇಲೆ ನಿಂದನಾತ್ಮಕ ಪದಗಳನ್ನು ಬಳಸಿ ಲೋಕಸಭೆಯಲ್ಲಿ ವಿವಾದಕ್ಕೆ ಕಾರಣವಾಗಿದ್ದರು. ಅವರ ಎಂಬಿಎ ಮತ್ತು ಪಿಎಚ್‌ಡಿ ಪದವಿ ಪ್ರಮಾಣ ಪತ್ರಗಳು ನಕಲಿ ಎಂದು ಮಹುವಾ ಆರೋಪಿಸಿದ್ದರು. ಮಹುವಾ ಲೋಕಸಭೆಯಿಂದ ಹೊರಬೀಳಲು ಕಾರಣ ಇದೇ ನಿಶಿಕಾಂತ್ ದುಬೆ.
ಮೊದಲು, ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೆಹಾದ್ರಾಯ್, ಮಹುವಾ ವಿರುದ್ಧ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಹೊರಿಸಿ ಸಿಬಿಐಗೆ ದೂರು ನೀಡಿ, ಅದರ ಪ್ರತಿಯನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೂ ಕಳಿಸಿದ್ದರು. ಅದರ ಹಿಂದೆಯೇ ಮಹುವಾ ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಹಣ ಹಾಗೂ ಉಡುಗೊರೆಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿ ನಿಶಿಕಾಂತ್ ದುಬೆ ಕೂಡ ಲೋಕಸಭೆಯ ಸ್ಪೀಕರ್‌ಗೆ ದೂರು ನೀಡಿದರು. ಪ್ರಕರಣವು ಲೋಕಸಭೆಯ ನೈತಿಕ ಸಮಿತಿಯ ಮುಂದೆ ಹೋಯಿತು. ಈ ಬಗ್ಗೆ ಉದ್ಯಮಿ ಹೀರಾನಂದಾನಿ ಅಫಿಡವಿಟ್ ಸಲ್ಲಿಸಿದರು.
‘ಪತ್ರಕರ್ತೆ ಸುಚೇತಾ ದಲಾಲ್ ಸೇರಿ ಹಲವುರ ಮೊಯಿತ್ರಾ ಜೊತೆ ಸಂಪರ್ಕದಲ್ಲಿದ್ದು, ಮೋದಿ-ಅದಾನಿ ವಿರುದ್ಧ ಖಚಿತವಲ್ಲದ ಮಾಹಿತಿ ಒದಗಿಸುತ್ತಿದ್ದರು. ಉದ್ಯಮಿ ಗೌತಮ್ ಅದಾನಿ ಅವರನ್ನು ಗುರಿಯಾಗಿಸಿ ಮಹುವಾ ಪ್ರಧಾನಿ ಮೋದಿ ಅವರಿಗೆ ಇರಿಸುಮುರಿಸು ಉಂಟುಮಾಡಲು ಯತ್ನಿಸಿದ್ದರು. ಪದೇ ಪದೆ ತಮ್ಮಿಂದ ಹಲವು ಲಾಭಗಳನ್ನು ನಿರೀಕ್ಷಿಸುತ್ತಿದ್ದರು. ತಾನು ಅವೆಲ್ಲವನ್ನೂ ಈಡೇರಿಸುತ್ತಿದ್ದೆ. ಮಹುವಾಗೆ ದುಬಾರಿ ಉಡುಗೊರೆ, ದೆಹಲಿಯ ಸರ್ಕಾರಿ ಬಂಗಲೆ ನವೀಕರಣ, ಭಾರತ ಸೇರಿ ವಿವಿಧ ದೇಶಗಳಲ್ಲಿ ಓಡಾಟದ ವೆಚ್ಚ ಭರಿಸಿದ್ದೆ’ ಎಂದು ಉದ್ಯಮಿ ಹೀರಾನಂದಾನಿ ನೈತಿಕ ಸಮಿತಿಯ ಮುಂದೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದರು.
ಇವುಗಳ ಜೊತೆಗೆ ತಮ್ಮ ಲೋಕಸಭೆಯ ಲಾಗಿನ್ ವಿವರಗಳನ್ನು ಬೇರೊಬ್ಬರಿಗೆ ನೀಡಿದ ಆರೋಪವೂ ಮಹುವಾ ವಿರುದ್ಧ ಕೇಳಿಬಂತು. ಅವರ ಸಂಸತ್‌ನ ಖಾತೆಗೆ ದುಬೈನಿಂದ 47 ಬಾರಿ ಲಾಗಿನ್ ಮಾಡಲಾಗಿತ್ತು ಎನ್ನುವ ಗಂಭೀರ ಆರೋಪವೂ ವ್ಯಕ್ತವಾಯಿತು. ಲೋಕಸಭೆಯ ಲಾಗಿನ್ ವಿವರಗಳನ್ನು ಹಂಚಿಕೊಂಡು ಉಡುಗೊರೆ ಪಡೆದಿರುವುದು ಅಕ್ರಮಕ್ಕೆ ಸಮ ಎಂದು ನೈತಿಕ ಸಮಿತಿಯ ವರದಿ ಅಭಿಪ್ರಾಯ ಪಟ್ಟಿತು. ಈ ಹಿನ್ನೆಲೆಯಲ್ಲಿ ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಬೇಕು ಎಂದು ನೈತಿಕ ಸಮಿತಿ ಶಿಫಾರಸು ಮಾಡಿತು.
ಈ ವರದಿ ಬಗ್ಗೆ ಮಾತನಾಡಲು ಮಹುವಾಗೆ ಅವಕಾಶ ನೀಡಬೇಕು ಎಂದು ವಿಪಕ್ಷಗಳು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಒತ್ತಾಯಿಸಿದವು. ಆದರೆ, ಸ್ಪೀಕರ್ ಅದಕ್ಕೆ ಒಪ್ಪಲಿಲ್ಲ. ಹಿಂದೆ 2005ರಲ್ಲಿ ಯುಪಿಎ ಸರ್ಕಾರವಿದ್ದಾಗ 6 ಬಿಜೆಪಿ ಸಂಸದರೂ ಸೇರಿದಂತೆ 10 ಮಂದಿ ಸಂಸದರನ್ನು ಇದೇ ರೀತಿ ಉಚ್ಚಾಟಿಸಿದಾಗ ಅವರಿಗೆ ಮಾತನಾಡಲು ಅವಕಾಶ ಕೊಡಲಿಲ್ಲ. ಅದೇ ನಿಯಮ ಈಗಲೂ ಅನ್ವಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮಹುವಾ ಇದರಿಂದ ವಿಚಲಿತರಾಗಿಲ್ಲ. ‘ನನಗೀಗ 49 ವರ್ಷ. ಮುಂದಿನ 30 ವರ್ಷಗಳ ಕಾಲ ಸಂಸತ್ತಿನ ಒಳಗೆ ಹೊರಗೆ ನಿಮ್ಮ ವಿರುದ್ಧ ಹೋರಾಡುತ್ತೇನೆ. ನೈತಿಕ ಸಮಿತಿಗೆ ನನ್ನನ್ನು ಹೊರಹಾಕುವ ಅಧಿಕಾರವಿಲ್ಲ. ಅದಾನಿ ಸಾಹೇಬರು ಬಿಜೆಪಿಗೆ ಎಷ್ಟೊಂದು ಮುಖ್ಯ ಎನ್ನುವುದು ಇದರಿಂದ ಸಾಬೀತಾಗಿದೆ. ಇದು ನಿಮ್ಮ ಅಂತ್ಯದ ಆರಂಭ’ ಎಂದಿರುವ ಮಹುವಾ, ‘ಉದ್ಯಮಿಯಿಂದ ಉಡುಗೊರೆ ಸ್ವೀಕರಿಸಿದ್ದೇನೆ ಎಂಬುದಕ್ಕೆ ಆಧಾರಗಳ ಕೊರತೆಯಿದೆ, ಇದರ ವಿರುದ್ಧ ಹೋರಾಡುತ್ತೇನೆ’ ಎಂದು ಹೇಳಿದ್ದಾರೆ. ಮಹುವಾ, ಮೊದಲು ನಿಶಿಕಾಂತ್ ದುಬೆ ವಿರುದ್ಧ ಇರುವ ದೂರುಗಳ ವಿಚಾರಣೆ ನಡೆಸಿಲ್ಲವೇಕೆ ಎಂದೂ ಸ್ಪೀಕರ್ ಅನ್ನು ಪ್ರಶ್ನಿಸಿದ್ದಾರೆ.
ಮಹುವಾಗೆ ಈಗ ಸದ್ಯ ಇರುವ ಆಯ್ಕೆ ಎಂದರೆ, ಸಂಸತ್ತಿನ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದು. ಬಂಗಾಳದಲ್ಲಿ ಬಿಜೆಪಿ ವಿರುದ್ಧ ಚುನಾವಣಾ ಹೋರಾಟಕ್ಕೆ ಇದನ್ನೆ ಅಸ್ತ್ರವನ್ನಾಗಿ ಟಿಎಂಸಿ ಬಳಸಿಕೊಳ್ಳಬಹುದು.
Seriously advise BJP to not cross line & comment on Opposition’s personal clothes & belongings.
Remember if we start doing the same with watches, pens, shoes, rings & clothes BJP MPs wear, you’ll rue the day you stated this game.
— Mahua Moitra (@MahuaMoitra) September 10, 2022
ಮಹುವಾ ಅವರನ್ನು ರಾಜಕೀಯವಾಗಿ ಮುಗಿಸಲು ನಡೆಸುತ್ತಿರುವ ಷಡ್ಯಂತ್ರ ಎಂದೇ ಕೆಲವರು ಹೇಳುತ್ತಿದ್ದಾರೆ. ವಿಚಿತ್ರವೆಂದರೆ, ಈ ಪ್ರಕರಣಕ್ಕೆ ಸಂಬಂಧವಿಲ್ಲದಂತೆ, ಮಹುವಾ ಸಿಗರೇಟು ಸೇದುತ್ತಾರೆ, ಮದ್ಯ ಸೇವಿಸುತ್ತಾರೆ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಬಿಜೆಪಿಯವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಅದು ಸುಳ್ಳು ಎಂದು ಮಹುವಾ ಸ್ಪಷ್ಟೀಕರಣವನ್ನೂ ನೀಡಿದ್ದಾರೆ. ಒಂದು ವೇಳೆ ಅವರು ಸಿಗರೇಟು ಸೇದಿದರೆ, ಮದ್ಯ ಸೇವಿಸಿದರೆ, ಅದು ಆಕೆಯ ವೈಯಕ್ತಿಕ ವಿಚಾರವಾಗುತ್ತದೆಯೇ ಹೊರತು ಅಪರಾಧವಾಗುವುದಿಲ್ಲ.
ಈ ಸುದ್ದಿ ಓದಿದ್ದೀರಾ: ತೆಲಂಗಾಣ | ಅಂದು ಗನ್ ಹಿಡಿದಿದ್ದ ನಕ್ಸಲೈಟ್, ಇಂದು ಕ್ಯಾಬಿನೆಟ್ ಮಿನಿಸ್ಟರ್; ಸೀತಕ್ಕನ ರೋಚಕ ಪಯಣ
ತನ್ನ ನಂಬಿಕೆಗಳಿಂದ ಒಂದು ಇಂಚು ಅತ್ತಿತ್ತ ಕದಲುವುದಿಲ್ಲ ಎಂದಿದ್ದ ಮಹುವಾ ಮೊಯಿತ್ರಾ ಲೋಕಸಭೆಗೆ ಹೆಜ್ಜೆಯಿಡದಂತೆ ಮಾಡಲಾಗಿದೆ. ಗಟ್ಟಿಗಿತ್ತಿ ಮಹುವಾಗೆ ಈಗ ಹಿನ್ನಡೆಯಾಗಿದೆ. ಅವರು ಇದನ್ನು ಹೇಗೆ ಎದುರಿಸುತ್ತಾರೆ ಎನ್ನುವ ಕುತೂಹಲ ರಾಜಕೀಯ ವಲಯದಲ್ಲಿದೆ.