“ಇಡೀ ಸಮಸ್ತ ಕರ್ನಾಟಕದ ಜನತೆಯ ಕಿವಿ ಮೇಲೆ ಹೂವಿಟ್ಟು ಅಧಿಕಾರಕ್ಕೆ ಬಂದ ಮಜಾವಾದಿ ಸಿದ್ದರಾಮಯ್ಯ ಅವರ ಸರ್ಕಾರ, ಇದೀಗ ಕನ್ನಡಿಗರ ತೆರಿಗೆ ಹಣದಲ್ಲಿ ಮೋಜು, ಮಸ್ತಿ ಮಾಡುತ್ತಾ ರೆಸಾರ್ಟ್‌ವರೆಗೂ ತಲುಪಿದೆ” ಎಂದು ಬಿಜೆಪಿ ಟೀಕಿಸಿದೆ.
ರಾಜ್ಯಸಭಾ ಚುನಾವನೆ ಹಿನ್ನೆಲೆಯಲ್ಲಿ ಶಾಸಕರ ಸಮೇತ ರೆಸಾರ್ಟ್‌ನಲ್ಲಿ ತಂಗಿರುವ ಬಗ್ಗೆ ಎಕ್ಸ್ ತಾಣದಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, “ಕರುನಾಡಿಗೆ ಬರ ಬಂದು ಬಡವರು ತಮ್ಮ ಕುಟುಂಬ ಸಮೇತ ಮಕ್ಕಳನ್ನು ಶಾಲೆ ಬಿಡಿಸಿ ಗುಳೆ ಹೋಗಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಮಾತ್ರ ಎಂಜಾಯ್ ಮಾಡಲು ರೆಸಾರ್ಟ್‌ಗೆ ಹೋಗಿದೆ” ಎಂದು ಕುಟುಕಿದೆ.
“ಎಟಿಎಂ ಸರ್ಕಾರ ಅಧಿಕಾರಕ್ಕೆ ಬಂದಿರುವುದು ರಾಜ್ಯದ ಅಭಿವೃದ್ಧಿ ಮಾಡುವುದಕ್ಕಾಗಲಿ, ಜನರನ್ನು ಉದ್ಧಾರ ಮಾಡುವುದಕ್ಕಾಗಲಿ ಅಲ್ಲ. ಕನ್ನಡಿಗರ ಹಣದಲ್ಲಿ ವಿದೇಶ ಪ್ರವಾಸ, ತೆಲಂಗಾಣ ಚುನಾವಣೆ ಪ್ರವಾಸ, ಹೈಕಮಾಂಡ್ ಭೇಟಿ ಆಗಲು ದೆಹಲಿ ಪ್ರವಾಸ, ರೆಸಾರ್ಟ್ ಪ್ರವಾಸಗಳನ್ನು ಕೈಗೊಂಡು ಕನ್ನಡಿಗರನ್ನು ದಿವಾಳಿ ಮಾಡುತ್ತಿದೆ” ಎಂದು ವಾಗ್ದಾಳಿ ನಡೆಸಿದೆ.
“ಕನ್ನಡಿಗರ ತೆರಿಗೆ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿ ಶೋಕಿ ಮಾಡುವುದೊಂದೇ ಮಜಾವಾದಿ ಸರ್ಕಾರದ ಅಜೆಂಡಾ!” ಎಂದು ಹರಿಹಾಯ್ದಿದೆ.
