ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನ ತಿದ್ದುಪಡಿ ಮಾಡುವ ಮತ್ತು ಮಾಧ್ಯಮಗಳನ್ನು ನಾಯಿಗೆ ಹೋಲಿಸಿದ ಹೇಳಿಕೆ ಈಗ ವಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, “ಧೈರ್ಯವಿದ್ರೆ ಅನಂತ್ ಕುಮಾರ್ ಹೆಗಡೆಯನ್ನು ಪಕ್ಷದಿಂದ ಉಚ್ಛಾಟಿಸಿ” ಎಂದು ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸವಾಲೆಸೆದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ “ಪ್ರಧಾನಿ ಮೋದಿಗೆ ತಾಕತ್ತಿದ್ದರೆ ಬಾಯಿಗೆ ಬಂದಂತೆ ಮಾತನಾಡಿರುವ ಸಂಸದ ಅನಂತ್ ಕುಮಾರ್ ಹೆಗಡೆಯನ್ನು ನೀವು ಪಕ್ಷದಿಂದ ಉಚ್ಛಾಟಿಸಿ” ಎಂದು ಹೇಳಿರುವ ಖರ್ಗೆ, “ಬಿಜೆಪಿ ಸರ್ಕಾರವು ಸಂವಿಧಾನದಲ್ಲಿ ಏನೇ ಬದಲಾವಣೆ ಮಾಡಲು ಮುಂದಾದರೂ ಕೂಡಾ ದೇಶದಲ್ಲಿ ತೀವ್ರ ಪ್ರತಿಭಟನೆ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ಮೋದಿ 400 ಪಾರ್ (400ಕ್ಕೂ ಅಧಿಕ ಕ್ಷೇತ್ರದಲ್ಲಿ ಗೆಲುವು) ಎಂದು ಹೇಳುವುದು ಯಾಕೆಂದು ಈಗ ಅರ್ಥವಾಗುತ್ತಿದೆ. ಪ್ರಧಾನಿ ಮೋದಿ ಎಂದಿಗೂ ಸಂವಿಧಾನ ಬದಲಾಯಿಸುವ ಬಗ್ಗೆ ನೇರವಾಗಿ ಮಾತನಾಡಲ್ಲ, ಆದರೆ ಬೇರೆಯವರಲ್ಲಿ ಈ ವಿಷಯ ಹೇಳಿಸುತ್ತಾರೆ” ಎಂದು ಖರ್ಗೆ ತಿಳಿಸಿದರು.
ಇನ್ನು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಮಾತನಾಡಿ, “ಸಂವಿಧಾನವನ್ನು ಬದಲಾಯಿಸುವ ಯಾವುದೇ ಪ್ರಯತ್ನವನ್ನು ಬಿಜೆಪಿ ಮಾಡಿದರೂ ದೇಶದಾದ್ಯಂತ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದು, ಇದನ್ನು “ಸಾಮಾಜಿಕ ನ್ಯಾಯ ಮತ್ತು ಶೋಷಣೆ ನಡುವಿನ ಕದನ” ಎಂದರು.
ಬಿಜೆಪಿ-ಆರ್‌ಎಸ್‌ಎಸ್ ಅನ್ನು “ಮನುವಾದಿ” ಎಂದು ಕರೆದಿರುವ ಖರ್ಗೆ, “ಆಡಳಿತ ಪಕ್ಷ ಎಂದಿಗೂ ಅಂಬೇಡ್ಕರ್‌ರ ಸಂವಿಧಾನವನ್ನು ಒಪ್ಪಿಲ್ಲ. ಈ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯ, ಎಸ್‌ಸಿ/ಎಸ್‌ಟಿ ಮೀಸಲಾತಿ, ಸಮಾನತೆಯ ಹಕ್ಕು ಮತ್ತು ಜಾತ್ಯಾತೀತತೆಯ ವಿಧೇಯಕಗಳನ್ನು ತಿದ್ದುಪಡಿ ಮಾಡಿದೆ” ಎಂದು ಆರೋಪಿಸಿದರು.
ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನ ಗೆದ್ದರೆ ಸಂವಿಧಾನ ತಿದ್ದುಪಡಿ ಮಾಡಬಹುದು ಎಂದು ಉತ್ತರಕನ್ನಡ ಸಂಸದ ಅನಂತ್ಕುಮಾರ್ ಹೆಗಡೆ ಹೇಳಿಕೆ ನೀಡಿದ್ದು, ಬಿಜೆಪಿ ಮಾತ್ರ “ಇದು ಅನಂತ್ ಕುಮಾರ್ ವೈಯಕ್ತಿಕ ಅಭಿಪ್ರಾಯ ಪಕ್ಷದ ನಿಲುವಲ್ಲ” ಎಂದಿದೆ. ಇಷ್ಟಕ್ಕೆ ನಿಲ್ಲದ ಸಂಸದ ಅನಂತ್ ಮಾಧ್ಯಮಗಳನ್ನು ನಾಯಿಗೆ ಹೋಲಿಸಿದ್ದಾರೆ.