ಬಿಜೆಪಿ ಶಾಸಕನ ಬೆಂಬಲಿಗನೊಬ್ಬ ಆದಿವಾಸಿ ಬುಡಕಟ್ಟು ಯುವಕನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಅಮಾನುಷ ಘಟನೆ ಮಧ್ಯಪ್ರದೇಶ ಸಿಧಿ ಜಿಲ್ಲೆಯಲ್ಲಿ ನಡೆದಿದೆ.
ಮಧ್ಯಪ್ರದೇಶ ರಾಜ್ಯದಲ್ಲಿ ನಡೆದಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಅಮಾನವೀಯ ಘಟನೆಯಾಗಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಆರೋಪಿ ವಿರುದ್ಧ ಕ್ರಮ ಜರುಗಿಸುವಂತೆ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಒತ್ತಾಯಿಸಿವೆ.
ಆರೋಪಿಯನ್ನು ಬಿಜೆಪಿ ಶಾಸಕ ಕೇದಾರ್ ನಾಥ್ ಶುಕ್ಲಾ ಅವರ ಬೆಂಬಲಿಗ ಪ್ರವೇಶ್ ಶುಕ್ಲಾ ಎಂದು ಗುರುತಿಸಲಾಗಿದೆ.
ಎಐಸಿಸಿಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಆ ವೀಡಿಯೊವನ್ನು ಹಂಚಿಕೊಂಡಿದ್ದು, “ಈ ಅಮಾನವೀಯ ವಿಡಿಯೋ ಬಿಜೆಪಿ ಶಾಸಕ ಕೇದಾರ್ ಶುಕ್ಲಾ ಅವರ ಪ್ರತಿನಿಧಿ ಪ್ರವೇಶ್ ಶುಕ್ಲಾ ಅವರದ್ದು. ಈ ವಿಡಿಯೋ ನೋಡಿದ ನಂತರ ಆಕ್ರೋಶವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರೇ, ನಿಮಗೆ ಸ್ವಲ್ಪವಾದರೂ ನಾಚಿಕೆ ಮತ್ತು ಮಾನವೀಯತೆ ಉಳಿದಿದ್ದರೆ, ಬಡವರ ಮೇಲೆ ಬಳಸುವ ಬುಲ್ಡೋಜರ್ ಅನ್ನು ಈ ಬಿಜೆಪಿ ವ್ಯಕ್ತಿಯ ಮೇಲೆ ಪ್ರಯೋಗಿಸಿ”ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೋದಿ ಉಪನಾಮ ಪ್ರಕರಣ: ರಾಹುಲ್ ಗಾಂಧಿ ವಿರುದ್ಧ ಬಲವಂತದ ಕ್ರಮ ಬೇಡ ಎಂದ ಜಾರ್ಖಂಡ್ ಹೈಕೋರ್ಟ್
ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್ ಕೂಡ ಘಟನೆಯನ್ನು ಟ್ವಿಟರ್‌ನಲ್ಲಿ ಖಂಡಿಸಿದ್ದು, “ಆದಿವಾಸಿಗಳ ಹಿತಾಸಕ್ತಿಗಳ ಬಗ್ಗೆ ಸುಳ್ಳು ಮಾತನಾಡುವ ಬಿಜೆಪಿ ನಾಯಕರು ಬುಡಕಟ್ಟು ಜನಾಂಗದ ಬಡವರ ಮೇಲೆ ಈ ರೀತಿ ನಡೆದುಕೊಳ್ಳುತ್ತಿರುವುದು ಖಂಡನೀಯ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಟ್ಯಾಗ್ ಮಾಡಿರುವ ಅವರು “ಇದು ನಿಮ್ಮ ಬುಡಕಟ್ಟು ಪ್ರೀತಿಯೇ? ಇದನ್ನು ಜಂಗಲ್ ರಾಜ್ ಎನ್ನದೇ ಮತ್ತೆ ಏನೆಂದು ಕರೆಯಬೇಕು? ಈ ದುಷ್ಕೃತ್ಯ ಎಸಗಿದ ಬಿಜೆಪಿ ನಾಯಕನನ್ನು ಏಕೆ ಬಂಧಿಸಲಿಲ್ಲ?” ಎಂದು ಪ್ರಶ್ನಿಸಿದ್ದಾರೆ.
ಆರೋಪಿ ಪ್ರವೇಶ್ ಶುಕ್ಲಾ ಹಿರಿಯ ಬಿಜೆಪಿ ನಾಯಕರೊಂದಿಗೆ ತೆಗೆಸಿಕೊಂಡಿರುವ ಫೋಟೊಗಳು ಎಲ್ಲೆಡೆ ವೈರಲ್ ಆಗಿವೆ.
ಯಾವ ಕಾರಣಕ್ಕಾಗಿ ಈ ಅಮಾನುಷ ಕೃತ್ಯ ಎಸಗಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೂಡಲೇ ಆರೋಪಿಯನ್ನು ಬಂಧಸಬೇಕೆಂದು ನೆಟ್ಟಿಗರು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಒತ್ತಾಯಿಸಿದ್ದಾರೆ.