ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯದ ಸಂಜಯ ವೃತ್ತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ತಡೆದು ಬಿಜೆಪಿಗರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಂಸದೆ ಸಮಲತಾ, “ಇದು ರೈತರ ಪರವಾದ ಪ್ರತಿಭಟನೆ” ಎಂದು ಹೇಳಿದ್ದಾರೆ.
“ಮಂಡ್ಯ ಸೇರಿದಂತೆ ರಾಜ್ಯದ ಕಾವೇರಿ ನೀರಾವರಿ ಪ್ರದೇಶದ ರೈತರು ನೀರಿನ ಕೊರತೆ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಆರ್ಎಸ್ನಿಂದ ತಮಿಳುನಾಡಿಗೆ ನೀರು ಹರಿಸುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕೆಆರ್ಎಸ್ ಜಲಾಶಯದಲ್ಲಿ ಹೂಳು ತೆಗೆದರೆ ಅಣೆಕಟ್ಟೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗುತ್ತದೆ. ಆದರೆ, ಹೂಳು ತೆಗೆಯಲು ತಮಿಳುನಾಡು ಸರ್ಕಾರ ಆಕ್ಷೇಪ ಎತ್ತುತ್ತಿದೆ. ಈಗಾಗಲೇ ಅಣೆಕಟ್ಟಿನಿಂದ ತಮಿಳುನಾಡಿಗೆ ಸುಮಾರು 8 ಅಡಿ ನೀರು ಹರಿಸಲಾಗಿದೆ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ” ಎಂದು ಆರೋಪಿಸಿದರು.
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಮಂಡ್ಯದ ಇಂಡುವಾಳುವಿನಲ್ಲಿ ಎಕ್ಸ್ಪ್ರೆಸ್ವೇ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ಅಶ್ವತ್ಥ ನಾರಾಯಣ ಶನಿವಾರ ಹೇಳಿದ್ದರು. ಆದರೆ, ಪ್ರತಿಭಟನೆಯ ಸ್ಥಳ ಬದಲಿಸಿದ ಬಿಜೆಪಿಗರು ಮಂಡ್ಯ ನಗರದಲ್ಲಿ ಹಾದುಹೋಗಿರುವ ಹೆದ್ದಾರಿಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದ್ದಾರೆ.