ರೈತರ ಆಕ್ರೋಶಕ್ಕೆ ಗುರಿಯಾಗಿರುವ ಕೆಆರ್‌ಎಸ್ ಸಮೀಪದ ಬೇಬಿ ಬೆಟ್ಟದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಟ್ರಯಲ್ ಬ್ಲಾಸ್ಟ್‌ಗೆ ಸಂಬಂಧಿಸಿ ರೈತ ನಾಯಕರೊಂದಿಗೆ ಸಂವಾದ ನಡೆಸಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ, ‘ಟ್ರಯಲ್ ಬ್ಲಾಸ್ಟ್‌ಗೆ ತಾತ್ಕಾಲಿಕ ತಡೆ’ ನೀಡುವುದಾಗಿ ಭರವಸೆ ನೀಡಿದ್ದಾರೆ.
ಇಂದು(ಶನಿವಾರ) ಮಂಡ್ಯ ಜಿಲ್ಲಾ ಪಂಚಾಯತ್‌ನ ಕಾವೇರಿ ಸಭಾಂಗಣದಲ್ಲಿ ಸಂವಾದ ನಡೆಸಿದ ಅವರು, “ಹೈಕೋರ್ಟಿನಲ್ಲಿ ಮುಂದಿನ ಆದೇಶ ಬರುವವರೆಗೂ ಟ್ರಯಲ್ ಬ್ಲಾಸ್ಟ್ ಸ್ಥಗಿತಗೊಳಿಸುತ್ತೇವೆ. ಹೈಕೋರ್ಟಿನ ತೀರ್ಮಾನಕ್ಕೆ ಬದ್ದರಾಗಿರುತ್ತೇವೆ” ಎಂದು ಹೇಳಿದರು.
“ಯಾವುದೇ ಟ್ರಯಲ್ ಬ್ಲಾಸ್ಟ್ ಬೇಡ. ಕೆಆರ್‌ಎಸ್ ಉಳಿವಿಗಾಗಿ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಸುಗ್ರೀವಾಜ್ಞೆಯನ್ನು ತನ್ನಿ” ಎಂದು ರೈತ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದರು.
ರೈತರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಕೊನೆಯಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, “ಜುಲೈ 15ಕ್ಕೆ ಹೈಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ. ಮುಖ್ಯಮಂತ್ರಿಗಳು, ಸರಕಾರಿ ವಕೀಲರು, ಅಧಿಕಾರಿಗಳೊಂದಿಗೆ ನಿಮ್ಮೆಲ್ಲರ ಅಭಿಪ್ರಾಯಗಳನ್ನು ತಿಳಿಸುತ್ತೇನೆ. ಕೆಆರ್‌ಎಸ್ ಉಳಿವಿಗಾಗಿ ವಾದ ಮಂಡಿಸಲಾಗುವುದು. ನ್ಯಾಯಾಲಯದ ತೀರ್ಮಾನಕ್ಕೆ ಬದ್ದರಾಗಿರುತ್ತೇವೆ” ಎಂದು ತಿಳಿಸಿದರು.
ಮಂಡ್ಯ ಜಿಲ್ಲಾಡಳಿತವು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಲಕ ಪರೀಕ್ಷಾರ್ಥ ಬ್ಲಾಸ್ಟ್ (ಟ್ರಯಲ್ ಬ್ಲಾಸ್ಟ್) ನಡೆಸುವ ಸಲುವಾಗಿ ಜುಲೈ 3, 4, ಮತ್ತು 5ರಂದು ಕುಳಿ ಕೊರೆಯುವ ಕಾರ್ಯ ನಡೆಸಿದೆ. ಜೊತೆಗೆ ಜು. 6 ಮತ್ತು 7ರಂದು ಪರೀಕ್ಷಾರ್ಥ ಸಿಡಿತ ನಡೆಸಲು ಸಿದ್ಧತೆ ನಡೆಸಿತ್ತು.
ಇದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ರೈತರು ಧರಣಿ ನಡೆಸಿದ್ದರು. ಈ ವೇಳೆ ರೈತರನ್ನು ಭೇಟಿ ಮಾಡಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು, ಜು.6 (ಶನಿವಾರ) ರಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮುಂದಾಳತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಗೆ ರೈತರನ್ನು ಆಹ್ವಾನಿಸಿದ್ದರು. ಆ ಬಳಿಕ ಧರಣಿ ಕೈಬಿಟ್ಟು, ಸಭೆಯಲ್ಲಿ ರೈತರು ಭಾಗವಹಿಸಿದ್ದರು.
ಈ ಸಭೆಯಲ್ಲಿ ಶಾಸಕರಾದ ಬಾಬು ಬಂಡಿಸಿದ್ದೇಗೌಡ, ರವಿ ಗಣಿಗ, ಜಿಲ್ಲಾಧಿಕಾರಿ ಕುಮಾರ್, ರೈತ ಮುಖಂಡರಾದ ಎ ಎಸ್ ಕೆಂಪೂಗೌಡ, ಲಿಂಗಪ್ಪಾಜಿ, ಸುನಂದಮ್ಮ, ಮಹಿಳಾ ಮುನ್ನಡೆಯ ಪೂರ್ಣಿಮಾ, ಪ್ರಸನ್ನಗೌಡ, ಕೆ ಆರ್ ರವೀಂದ್ರ, ಗೆಜ್ಜಲಗೆರೆ ಶಂಕರಯ್ಯ ಇನ್ನೂ ಮುಂತಾದ ಮುಖಂಡರು ಭಾಗವಹಿಸಿದ್ದರು.
