ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಸುಪ್ರೀಂಕೋರ್ಟ್ ನೀಡಿದ್ದ 21 ದಿನಗಳ ಮಧ್ಯಂತರ ಜಾಮೀನು ಅಂತ್ಯಗೊಂಡ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೂನ್ 1ರಂದು ತಿಹಾರ್ ಜೈಲಿಗೆ ಮರಳಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಜಾಮೀನಿನ ಮೇಲೆ ಕೇಜ್ರಿವಾಲ್ ಮೇ 10ರಂದು ಜೈಲಿನಿಂದ ಬಿಡುಗಡೆಯಾಗಿದ್ದರು. ಕೊನೆಯ ಹಂತದ ಮತದಾನದ ದಿನ ಅಂದರೆ, ಜೂನ್ 1ರಂದು ಅವರ ಜಾಮೀನು ಅವಧಿ ಮುಗಿದಿದೆ.
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮೇ 10 ರಂದು ಮಧ್ಯಂತರ ಜಾಮೀನು ನೀಡಿ, ಜೂನ್ 2ರಂದು ಶರಣಾಗುವಂತೆ ಸೂಚಿಸಿತ್ತು.
“ನಾನು ಮತ್ತೆ ಜೈಲಿಗೆ ಹೋಗುತ್ತಿರುವುದು ಭ್ರಷ್ಟಾಚಾರದಲ್ಲಿ ತೊಡಗಿದ್ದಕ್ಕಾಗಿ ಅಲ್ಲ. ಆದರೆ, ನಾನು ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಿದ ಕಾರಣ ಹೋಗಿದ್ದೇನೆ. ಈ ಬಾರಿ ಜೈಲಿಗೆ ಹೋಗಿ ಯಾವಾಗ ವಾಪಸ್ ಬರುತ್ತೇನೋ ಗೊತ್ತಿಲ್ಲ. ಅವರು ನನ್ನೊಂದಿಗೆ ಏನು ಮಾಡುತ್ತಾರೆಂದು ನನಗೆ ತಿಳಿದಿಲ್ಲ. ಆದರೆ ನಾನು ಹೆದರುವುದಿಲ್ಲ. ಅವರು ಏನು ಬೇಕಾದರೂ ಮಾಡಬಹುದು. ನನ್ನ ಪ್ರತಿ ಹನಿ ರಕ್ತವೂ ದೇಶಕ್ಕಾಗಿ” ಎಂದು ಜೈಲಿಗೆ ತೆರಳುವ ಮೊದಲು ಕೇಜ್ರಿವಾಲ್ ಹೇಳಿದರು.
“ಚುನಾವಣಾ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ನನಗೆ 21 ದಿನಗಳ ಜಾಮೀನು ನೀಡಿತ್ತು. ಅದಕ್ಕಾಗಿ ನಾನು ಕೋರ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇಂದು ಮತ್ತೆ ತಿಹಾರ್ ಜೈಲಿಗೆ ಹೋಗುತ್ತಿದ್ದೇನೆ. ಈ 21 ದಿನಗಳಲ್ಲಿ ನಾನು ಒಂದು ನಿಮಿಷವೂ ವ್ಯರ್ಥ ಮಾಡಲಿಲ್ಲ. ನಾನು ಕೇವಲ ಎಎಪಿ ಪರ ಪ್ರಚಾರ ಮಾಡಿಲ್ಲ. ನಾನಾ ಪಕ್ಷಗಳ ಪರ ಪ್ರಚಾರ ಮಾಡಿದ್ದೇನೆ. ನಮಗೆ ದೇಶ ಮುಖ್ಯ. ಪ್ರಕರಣದಲ್ಲಿ ನನ್ನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ” ಎಂದು ತಿಳಿಸಿದರು.
ರಾಜ್ ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ಕೇಜ್ರಿವಾಲ್ ನಮನ ಸಲ್ಲಿಸಿದರು. ಕನ್ನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ದೇವಸ್ಥಾನಕ್ಕೂ ಭೇಟಿ ನೀಡಿದರು.
ಯಾವುದೇ ಪುರಾವೆ ಇಲ್ಲದೇ ಯಾರನ್ನು ಬೇಕಾದರೂ ಜೈಲಿಗೆ ಹಾಕಬಹುದು ಎಂದು ಬಿಜೆಪಿಯವರು ಕಾನೂನು ತಿದ್ದುಪಡಿ ಮಾಡಿದ್ದರಿಂದ ನಮ್ಮ ನಾಯಕರು ಜೈಲು ಪಾಲಾಗಿದ್ದಾರೆ. ನಮಗೆ ಜೈಲಿಗೆ ಹೋಗಲು ಭಯವಿಲ್ಲ. ಸುಪ್ರೀಂ ಕೋರ್ಟ್‌ನಿಂದ ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ನಮಗಿದೆ.ನ್ಯಾಯಾಲಯ ಮತ್ತು ಸಂವಿಧಾನವನ್ನು ಗೌರವಿಸಿ, ಜಾಮೀನು ಅವಧಿ ಮುಗಿದ ನಂತರ ಅರವಿಂದ್ ಕೇಜ್ರಿವಾಲ್ ಅವರು ಶರಣಾಗಿದ್ದಾರೆ ಎಂದು ದೆಹಲಿ ಸಚಿವೆ ಅತಿಶಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭವಾನಿ ರೇವಣ್ಣ ಬಂಧನಕ್ಕೆ ಪೊಲೀಸರ ಹುಡುಕಾಟ : ಗೃಹ ಸಚಿವ ಪರಮೇಶ್ವರ್
ಕೇಜ್ರೀವಾಲ್ ಅವರ ಮಧ್ಯಂತರ ಜಾಮೀನಿನ ಆದೇಶವನ್ನು ಕಾಯ್ದಿರಿಸಲಾಗಿದೆ. ಕೇಜ್ರಿವಾಲ್ ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ದೆಹಲಿ ನ್ಯಾಯಾಲಯದಲ್ಲಿ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಶನಿವಾರ ಮಧ್ಯಂತರ ಜಾಮೀನು ವಾದ ನಡೆದಿದ್ದು, ನ್ಯಾಯಾಲಯವು ಜೂನ್ 5ಕ್ಕೆ ಆದೇಶವನ್ನು ಕಾಯ್ದಿರಿಸಿದೆ.
ಇನ್ನು ಜಾರಿ ನಿರ್ದೇಶನಾಲಯವು(ಇ.ಡಿ) ಆರೋಗ್ಯದ ಆಧಾರದ ಮೇಲೆ ಜಾಮೀನು ಅರ್ಜಿಯನ್ನು ವಿರೋಧಿಸಿದೆ. ಕೇಜ್ರಿವಾಲ್ ಅವರು ಪರೀಕ್ಷೆಯ ಸ್ವರೂಪವನ್ನು ಹತ್ತಿಕ್ಕಿದ್ದಾರೆ ಎಂದು ಆರೋಪಿಸಿದೆ.
ಅರವಿಂದ್ ಕೇಜ್ರಿವಾಲ್ ನಾನಾ ರಾಜ್ಯಗಳಲ್ಲಿ ಪ್ರಚಾರ ನಡೆಸಿದ್ದಾರೆ ಎಂದು ಇಡಿ ವಾದಿಸಿದೆ. ಆದಾಗ್ಯೂ, ಶರಣಾಗತಿಯ ಸಮಯದಲ್ಲಿ ಅವರು ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಕೋರಿದ್ದಾರೆ. ಕೇಜ್ರಿವಾಲ್ ಪರೀಕ್ಷೆಗಳನ್ನು ವಿಳಂಬಗೊಳಿಸುವ ಮೂಲಕ ನ್ಯಾಯಾಲಯವನ್ನು ವಂಚಿಸಲು ಬಯಸುತ್ತಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.