- ಮಣಿಪುರ ಹಿಂಸಾಚಾರ ನಡುವೆ ಸಿಲುಕಿದ್ದ 9 ಸಾವಿರ ಜನರ ತೆರವು
- ಮೇಟಿ ಸಮುದಾಯ, ಬುಡಕಟ್ಟು ಸಮುದಾಯ ನಡುವೆ ಘರ್ಷಣೆ
ಮಣಿಪುರ ಹಿಂಸಾಚಾರ ರಾಜ್ಯದಲ್ಲಿ ಅವ್ಯವಸ್ಥೆಗೆ ಕಾರಣವಾಗಿದೆ. ಅನೇಕ ಜಿಲ್ಲೆಗಳಲ್ಲಿ ನಡೆದ ಹಿಂಸಾಚಾರ ಈಗ ನಿಯಂತ್ರಣದಲ್ಲಿದೆ ಎಂದು ಭಾರತೀಯ ಸೇನೆ ಶುಕ್ರವಾರ (ಮೇ 5) ಹೇಳಿದೆ.
ರಾಜ್ಯದಲ್ಲಿ ವ್ಯಾಪಕ ಹಿಂಸಾಚಾರದಿಂದಾಗಿ ಅಶಾಂತಿಯ ವಾತಾವರಣವಿದೆ. ಈ ಹಿನ್ನೆಲೆಯಲ್ಲಿ ಈಶಾನ್ಯ ಗಡಿ ರೈಲ್ವೆಯು ರಾಜ್ಯದ ಎಲ್ಲ ರೈಲ್ವೆ ಕಾರ್ಯಾಚರಣೆಗಳನ್ನು ಮುಂದಿನ 48 ಗಂಟೆ ಕಾಲ ಸ್ಥಗಿತಗೊಳಿಸಿದೆ.
“ರಾಜ್ಯದಲ್ಲಿ ಬಹುಸಂಖ್ಯಾತ ಮೇಟಿ ಸಮುದಾಯ ಮತ್ತು ಬುಡಕಟ್ಟು ಸಮುದಾಯದ ನಡುವಿನ ಘರ್ಷಣೆಯಲ್ಲಿ ಸಿಲುಕಿದ್ದ 9 ಸಾವಿರ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ” ಎಂದು ಪೊಲೀಸರು ಹೇಳಿದ್ದಾರೆ.
ಮಣಿಪುರ ಹಿಂಸಾಚಾರ ಬಗ್ಗೆ ಕ್ರಿಶ್ಚಿಯನ್ ಸಂಘಟನೆಗಳು ತೀವ್ರ ಕಳವಳ ವ್ಯಕ್ತಪಡಿಸಿದೆ. ಪ್ರದೇಶದಲ್ಲಿ ಶಾಂತಿ ನೆಲೆಸಲು ಸಹಕರಿಸುವಂತೆ ಏಕತಾ ಕ್ರಿಶ್ಚಿಯನ್ ವೇದಿಕೆ ಎಲ್ಲ ಪಕ್ಷಗಳಲ್ಲಿ ಮನವಿ ಮಾಡಿದೆ.
ಮಣಿಪುರದ ಅಖಿಲ ಬುಡಕಟ್ಟು ವಿದ್ಯಾರ್ಥಿಗಳ ಸಂಘದ ಬುಡಕಟ್ಟು ಏಕತಾ ಮೆರವಣಿ ವೇಳೆ ಹಿಂಸಾಚಾರ ಭುಗಿಲೆದ್ದ ನಂತರ ಸೇನೆ ಕ್ರಮ ಕೈಗೊಂಡಿದೆ. “ಮಣಿಪುರ ಹಿಂಸಾಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಜನರು ಸಹಕರಿಸಬೇಕು” ಎಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ವಿಡಿಯೋ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
“ಮಣಿಪುರದಲ್ಲಿ ಭಾರತೀಯ ವಾಯುಪಡೆಯ ಎರಡು ವಿಮಾನಗಳು ಹಾರಾಟ ನಡೆಸಿ ಪರಿಸ್ಥಿತಿ ಮೇಲೆ ನಿಗಾ ವಹಿಸಿವೆ. ವಾಯುಪಡೆ ಸಂಘರ್ಷ ಪೀಡಿತ ಪ್ರದೇಶಗಳಿಂದ ಜನರನ್ನು ತೆರವುಗೊಳಿಸುತ್ತಿದೆ. ಈ ಸಂಬಂಧ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ” ಎಂದು ರಕ್ಷಣಾ ಸಚಿವಾಲಯ ಶುಕ್ರವಾರ ಬಿಡುಗಡೆಗೊಳಿಸಿದ ಹೇಳಿಕೆಯೊಂದು ತಿಳಿಸಿದೆ.
ಮಣಿಪುರ ಹಿಂಸಾಚಾರ ಪರಿಸ್ಥಿತಿ ಮನಗಂಡು ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರ ಕೈಬಿಟ್ಟು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಣಿಪುರದ ಭದ್ರತಾ ಸ್ಥಿತಿ ಪರಿಶೀಲಿಸುತ್ತಿದ್ದಾರೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಗುರುವಾರ ಹಿಂಸಾಚಾರದ ಸ್ಥಿತಿ ಉಲ್ಬಣಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಗೃಹ ಸಚಿವಾಲಯ, ಪರಿಸ್ಥಿತಿ ನಿಯಂತ್ರಣಕ್ಕಾಗಿ ಅಶಾಂತಿ ಕಂಡಲ್ಲಿ ಗುಂಡಿಕ್ಕಲು ಜಿಲ್ಲಾಧಿಕಾರಿಗಳಿಗೆ ಆದೇಶಿಸಿತ್ತು. ಮಣಿಪುರದ ಹಿಂಸಾಚಾರ ಬುಧವಾರ (ಮೇ 3) ಬೆಟ್ಟ ಪ್ರದೇಶಗಳಿಂದ ಇಂಫಾಲ ಸೇರಿ ಇತರ ನಗರಗಳಿಗೆ ಹರಡಿತ್ತು. ಪ್ರದೇಶದಲ್ಲಿ ಭಾಗಶಃ ನಿರ್ಬಂಧದ ಸ್ಥಿತಿ ಉಂಟಾಗಿದೆ.
ಗುರುವಾರ ಉದ್ರಿಕ್ತರು ಬುಡಕಟ್ಟು ಸಮುದಾಯಕ್ಕೆ ಸೇರಿದ ಮನೆ, ವಾಹನಗಳಿಗೆ ಬೆಂಕಿ ಹಾಕಿದರು. ಎರಡು ಚರ್ಚ್‌ಗಳಿಗೂ ಬೆಂಕಿ ಇಡಲಾಗಿದೆ. ಈ ವೇಳೆ ಬೆಟ್ಟ ಪ್ರದೇಶದ ಜಿಲ್ಲೆಗಳಾದ ಚುರಾಚಂದ್‌ಪುರ ಮತ್ತು ಕಾಂಗ್‌ಪೋಗ್ಲಿಯಲ್ಲಿಯ ಮೇಟಿ ಸಮುದಾಯ ನಿವಾಸಿಗಳ ಮೇಲೂ ದಾಳಿ ನಡೆದಿವೆ.
ಮಣಿಪುರದ ಹಿಂಸಾಚಾರ ನಿಯಂತ್ರಣಕ್ಕೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಜೊತೆ ಅರುಣಾಚಲ ಪ್ರದೇಶ, ಮಿಜೋರಾಂ ಮತ್ತು ತ್ರಿಪುರಾ ಸರ್ಕಾರಗಳೂ ಕೈಜೋಡಿಸಿವೆ.
ಈ ಸುದ್ದಿ ಓದಿದ್ದೀರಾ? ಪ್ರತಿಭಟನಾ ನಿರತ ಕುಸ್ತಿಪಟುಗಳ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಏಪ್ರಿಲ್ 19ರಂದು ರಾಜ್ಯದಲ್ಲಿ ಬಹುಸಂಖ್ಯಾತ ಮೇಟಿ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗಕ್ಕೆ ಸೇರಿಸಬೇಕು ಎಂಬ ಬೇಡಿಕೆಯ ವಿರುದ್ಧ ವಿದ್ಯಾರ್ಥಿ ಸಂಘಟನೆ ಪ್ರತಿಭಟನಾ ಮೆರವಣಿಗೆ ಆಯೋಜಿಸಿತ್ತು.
ಮೆರವಣಿಗೆ ವೇಳೆ ಬುಡಕಟ್ಟು ಸಮುದಾಯ ಮತ್ತು ಮೇಟಿ ಸಮುದಾಯದವರ ನಡುವೆ ಘರ್ಷಣೆ ನಡೆದಿದೆ. ಇದು ಹಿಂಸಾಚಾರದ ಸ್ವರೂಪ ಪಡೆದಿದೆ.