ಅಪ್ಪು ಹೆಸರು ಎಳೆದು ತಂದ ಬಿಜೆಪಿಗರಿಗೆ ತಿರುಗೇಟು ನೀಡಿದ ಶಿವಣ್ಣ

0
148
ಅಪ್ಪು
  • ಅಪ್ಪು ಹೆಸರಲ್ಲಿ ಆಸ್ಪತ್ರೆ ಕಟ್ಟಿಸಿದ್ದೇವೆ ಎಂದ ಪ್ರತಾಪ್‌ ಸಿಂಹ
  • ಮಾಡಿದ ಸಮಾಜ ಸೇವೆಯನ್ನು ಹೇಳಿಕೊಂಡು ತಿರುಗಬಾರದೆಂದ ಶಿವಣ್ಣ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಪ್ರಚಾರ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಮತ್ತು ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರಿಗೆ ಶಿವರಾಜ್‌ ಕುಮಾರ್‌ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಅಪ್ಪು ಹೆಸರಿನಲ್ಲಿ ಆಸ್ಪತ್ರೆ ಕಟ್ಟಿಸಿದ್ದೇವೆ ಎಂದು ಬಿಜೆಪಿಗರ ರಾಜಕೀಯ ಪ್ರೇರಿತ ಹೇಳಿಕೆ ನೀಡಿ ಟ್ವೀಟ್‌ ಮಾಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಶಿವಣ್ಣ, “ಅಪ್ಪು ಹೆಸರಿನಲ್ಲಿ ಅಭಿಮಾನಿಗಳು ಹಲವು ಸಮಾಜ ಸೇವೆಗಳನ್ನು ಮಾಡಿದ್ದಾರೆ. ಅದ್ಯಾವುದು ಮುನ್ನೆಲೆಗೆ ಬರುವುದಿಲ್ಲ. ರಾಯಚೂರು ಮೂಲದ ಸಾಧಿಕ್‌ ಖಾನ್‌ ಎಂಬುವವರು ಅಪ್ಪು ಬದುಕಿದ್ದಾಗಿನಿಂದ ಈವರೆಗೆ ಆತನ ಹೆಸರಿನಲ್ಲಿ ಚಿಕ್ಕದಾಗಿ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ. ಅವರ ಸೇವೆ ಚಿಕ್ಕದಿರಬಹುದು. ನಾಳೆ ಅದೇ ದೊಡ್ಡದಾಗಿ ಬೆಳೆಯುತ್ತದೆ. ಹೀಗೆ ಅಪ್ಪು ಹೆಸರಲ್ಲಿ ಸಮಾಜ ಸೇವೆ ಮಾಡಿದವರು ಯಾರೂ ಕೂಡ ಹೇಳಿಕೊಂಡು ತಿರುಗಾಡುವುದಿಲ್ಲ. ನಮಗೆ ಚಿಕ್ಕದೊಂದು ಸಂದೇಶ ಕಳುಹಿಸಿ ಸುಮ್ಮನಾಗುತ್ತಾರೆ. ಅವರು (ಬಿಜೆಪಿಗರು) ಕೂಡ ಅಪ್ಪುಗೆ ಗೌರವ ಸಲ್ಲಿಸಿದ್ದಾರೆ. ನಾವೇನು ಇಲ್ಲ ಎಂದು ಹೇಳುತ್ತಿಲ್ಲ. ಆ ವಿಚಾರವಾಗಿ ನಾವೇನು ಹೇಳಿಲ್ಲ. ನಾವೇನು ಮಾತನಾಡುತ್ತಿದ್ದೇವೆ ಎಂಬ ಬಗ್ಗೆ ಮೊದಲು ಯೋಚನೆ ಮಾಡಬೇಕು. ಎಲ್ಲರೂ ಅವರ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಾರೆ. ನನಗೆ ಮಾತನಾಡುವುದಕ್ಕೆ ಆಗುವುದಿಲ್ಲ ಅಂತಲ್ಲ. ನಾನು ಕೂಡ ಮಾತನಾಡಬಲ್ಲೆ” ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಅಪ್ಪು ಹೆಸರನ್ನು ರಾಜಕಾರಣಕ್ಕೆ ಬಳಸಬೇಡಿ : ಪ್ರತಾಪ್‌ ಸಿಂಹಗೆ ನೆಟ್ಟಿಗರ ತರಾಟೆ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಸೋಮಣ್ಣ ಸ್ಪರ್ಧಿಸಿದ್ದಾರೆ ಎಂಬುದು ನನಗೆ ನಿಜಕ್ಕೂ ಗೊತ್ತಿರಲಿಲ್ಲ. ನಾನು ಯಾರ ಪ್ರಚಾರಕ್ಕೆ ಹೋದರೂ ಪ್ರತಿಸ್ಪರ್ಧಿ ಯಾರೂ ಎಂಬುದನ್ನು ತಿಳಿಯುವ ಗೋಜಿಗೆ ಹೋಗುವುದೇ ಇಲ್ಲ. ಪ್ರಚಾರ ಮಾಡುತ್ತೇನಷ್ಟೇ. ಇದೇನು ಯುದ್ಧವಲ್ಲ, ಒಂದು ಸ್ಪರ್ಧೆಯಷ್ಟೇ. ಸುದೀಪ್‌ ಕೂಡ ಪ್ರಚಾರ ಮಾಡುತ್ತಿದ್ದಾರೆ. ಹಾಗಂತ ನಾಳೆಯ ದಿನ ನಾನು ಸುದೀಪ್‌ ಮಾತನಾಡದೆ ಇರುತ್ತೇವಾ? ಖಂಡಿತ ಮಾತನಾಡುತ್ತೇವೆ. ನಾನು ಸುದೀಪ್ ಇಬ್ಬರೂ ಸಹೋದರರ ಹಾಗಿದ್ದೇವೆ. ಗೀತಾ ಅವರ ಬಗ್ಗೆಯೂ ಸುದೀಪ್‌ ಬಹಳ ಗೌರವ ಇಟ್ಟುಕೊಂಡಿದ್ದಾರೆ. ನಮ್ಮಿಬ್ಬರ ನಿಲುವುಗಳು ಬೇರೆ. ಆದರೆ, ಪರಸ್ಪರರನ್ನು ಗೌರವಿಸುತ್ತೇವೆ” ಎನ್ನುವ ಮೂಲಕ ಅಪ್ಪು ಹೆಸರಲ್ಲಿ ರಾಜಕಾರಣ ಮಾಡಲು ಯತ್ನಿಸಿದವರಿಗೆ ತಕ್ಕ ಉತ್ತರ ನೀಡಿದ್ದಾರೆ.

ಶಿವಣ್ಣ, ಸಿದ್ದರಾಮಯ್ಯ ಪರ ರೋಡ್‌ ಶೋದಲ್ಲಿ ಭಾಗಿಯಾಗಿರುವ ಸಂದರ್ಭದ ಫೋಟೋ ಮತ್ತು ಬೆಂಗಳೂರಿನಲ್ಲಿ ಪುನೀತ್‌ ರಾಜ್‌ಕುಮಾರ್‌ ಹೆಸರಿನಲ್ಲಿ ಕಟ್ಟಿಸಿದ ಸರ್ಕಾರಿ ಆಸ್ಪತ್ರೆಯ ಉದ್ಘಾಟನೆ ಸಂದರ್ಭದಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ಅವರು ಸಿದ್ದರಾಮಯ್ಯನವರ ಎದುರಾಳಿ, ಸೋಮಣ್ಣನವರನ್ನು ಹೋಗಳಿದ ಹಳೆಯ ವಿಡಿಯೋ ಎರಡನ್ನೂ ಹಂಚಿಕೊಂಡು, “ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ. ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ. ಅವರವ ಭಾವ ಭಕುತಿಗೆ” ಎಂದು ಪ್ರತಾಪ್‌ ಸಿಂಹ ಟ್ವೀಟ್‌ ಮಾಡಿದ್ದರು. ಸಂಸದರ ಈ ಟ್ವೀಟ್‌ಗೆ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು.

LEAVE A REPLY

Please enter your comment!
Please enter your name here