ದೇಶ ಕಂಡ ಪರಮ ಪ್ರಾಮಾಣಿಕ ಪ್ರಧಾನಿ ಮನಮೋಹನ್ ಸಿಂಗ್

Date:

Advertisements
ಮನಮೋಹನ ಸಿಂಗ್ ಎಂದೂ ಅಧಿಕಾರ ಚಲಾಯಿಸಲಿಲ್ಲ, ಹಣ ಮಾಡಲಿಲ್ಲ, ಪ್ರತಿಷ್ಠೆ-ಪರಾಕ್ರಮ ತೋರಲಿಲ್ಲ. ಆಗಿದ್ದೆಲ್ಲ ನನ್ನಿಂದ, ನಾನು ಅನ್ನಲಿಲ್ಲ. ಇಂತಹ ಒಬ್ಬ ಸಜ್ಜನ ಭಾರತದ ರಾಜಕಾರಣದಲ್ಲಿದ್ದರು ಎನ್ನುವುದೇ ವಿಸ್ಮಯಕರ ಸಂಗತಿ. ಭಾರತ ಎಂದಿಗೂ ಮರೆಯಲಾರದ, ಎಂದೆಂದಿಗೂ ಮರೆಯಬಾರದ ವ್ಯಕ್ತಿ ಮನಮೋಹನ ಸಿಂಗ್. 

ರಾಜಕಾರಣಿಗಳು ಎಂದಾಕ್ಷಣ ಪರಮಭ್ರಷ್ಟರು, ಕೊಳಕರು, ಸುಳ್ಳರು, ವಂಚಕರು ಎಂಬುದು ಸಾರ್ವಜನಿಕ ವಲಯದಿಂದ ಪದೇ ಪದೆ ಕೇಳಿಬರುವ ಮಾತಾಗಿದೆ. ಆದರೆ ಆ ಮಾತಿಗೆ ಅಪವಾದವೆಂಬಂತೆ ಬದುಕಿದವರು ಭಾರತದ ರಾಜಕಾರಣದಲ್ಲಿ ಬಹಳ ಮಂದಿ ಇದ್ದಾರೆ. ಅದರಲ್ಲೂ ದೇಶದ ಅತ್ಯುನ್ನತ ಪದವಿಯಾದ ಪ್ರಧಾನಮಂತ್ರಿ ಸ್ಥಾನಕ್ಕೇರಿದವರು, ಪರಮ ಪ್ರಾಮಾಣಿಕ ಎನಿಸಿಕೊಂಡವರು ಲಾಲ್ ಬಹದ್ದೂರ್ ಶಾಸ್ತ್ರಿ. ಅವರ ನಂತರ ಡಾ. ಮನಮೋಹನ್ ಸಿಂಗ್ ಮಾತ್ರ.

2004ರಿಂದ 2014ರವರೆಗೆ, ಹತ್ತು ವರ್ಷಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದು, ನಿರ್ಗಮಿಸುವ ಸಂದರ್ಭದಲ್ಲಿ ಅವರಾಡಿದ, ‘ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳು ನನ್ನನ್ನು ದುರ್ಬಲ ಪ್ರಧಾನಿ ಎಂದು ಕರೆಯುತ್ತಿವೆ, ಅದನ್ನು ನಾನು ನಂಬುವುದಿಲ್ಲ. ಇವರಿಗಿಂತ ಇತಿಹಾಸ ನನ್ನ ಬಗ್ಗೆ ಕರುಣೆಯಿಂದಿದೆ ಎಂದು ಪ್ರಾಮಾಣಿಕವಾಗಿ ನಂಬುತ್ತೇನೆ’ ಎಂಬ ಎದೆಯಾಳದ ಮಾತುಗಳು, ಹತ್ತು ವರ್ಷಗಳ ನಂತರವೂ ಜೀವಂತಿಕೆಯಿಂದ ಕೂಡಿವೆ. ಸತ್ಯವನ್ನೇ ಸಾರುತ್ತಿವೆ.

ಇದೇ ಸಂದರ್ಭದಲ್ಲಿ ಮತ್ತೊಂದು ಮಾರ್ಮಿಕವಾದ ಮಾತು, ‘ನರೇಂದ್ರ ಮೋದಿ ಪ್ರಧಾನಿಯಾಗುವುದು ದುರಂತ’ ಎಂದಿದ್ದರು. ಅಂದು ಅವರು ನುಡಿದ ಭವಿಷ್ಯ ಇಂದು, ಹತ್ತು ವರ್ಷಗಳ ನಂತರ ನಿಜವಾಗಿದೆ. ಇವತ್ತು ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಏರುತ್ತಲೇ ಇದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣವೇ ಇಲ್ಲದಂತಾಗಿದೆ. ರೂಪಾಯಿ ಮೌಲ್ಯ ಕಳೆದುಕೊಂಡಿದೆ. ಜಿಎಸ್ ಟಿ ತೆರಿಗೆಯಿಂದ ಮಧ್ಯಮವರ್ಗದ ಬದುಕಂತೂ ಅಸಹನೀಯವಾಗಿದೆ. ಕೆಲವೇ ಕೆಲವರು ಶ್ರೀಮಂತರಾಗುತ್ತಿದ್ದಾರೆ, ಬಡವರ ಸಂಖ್ಯೆ ಬೆಳೆಯುತ್ತಲೇ ಇದೆ.

Advertisements

90ರ ದಶಕದಲ್ಲಿ ದೇಶದ ಆರ್ಥಿಕಸ್ಥಿತಿ ಹದಗೆಟ್ಟಿತ್ತು. ಅಂತಹ ಸಂದರ್ಭದಲ್ಲಿ ಹಣಕಾಸು ಸಚಿವರಾದ ಮನಮೋಹನ್ ಸಿಂಗ್, ಅದನ್ನು ಸವಾಲಾಗಿ ಸ್ವೀಕರಿಸಿದರು. ಹೆಚ್ಚು ಮಾತನಾಡದ, ಮಾಡಿದ್ದನ್ನು ಹೇಳಿಕೊಳ್ಳದ ಮನಮೋಹನ ಸಿಂಗ್‌ರದು ರಾಜಕಾರಣಕ್ಕೆ ಒಗ್ಗದ ವ್ಯಕ್ತಿತ್ವ. ಪ್ರಧಾನಮಂತ್ರಿ ಪಿ ವಿ ನರಸಿಂಹ ರಾವ್ ಒತ್ತಡಕ್ಕೆ ಮಣಿದು ರಾಜಕಾರಣಿಯಾದ ಸಿಂಗ್, ಅವರ ಸಚಿವ ಸಂಪುಟದಲ್ಲಿ ಹಣಕಾಸು ಸಚಿವರಾದರು. ದೇಶದ ಸ್ಥಿತಿಗತಿಯನ್ನು ಅನುಭವದಿಂದ ಅರಿತಿದ್ದರು. ಗ್ರಾಮದಿಂದ ಗ್ಲೋಬಲ್ ವರೆಗಿನ ಅರ್ಥಶಾಸ್ತ್ರವನ್ನು ಅಧ್ಯಯನದಿಂದ ಅರಗಿಸಿಕೊಂಡಿದ್ದರು.

ಇದನ್ನು ಓದಿದ್ದೀರಾ?: ಪ್ರಾಥಮಿಕ ಶಿಕ್ಷಣವನ್ನು ಉರ್ದುವಿನಲ್ಲಿ ಪಡೆದಿದ್ದ ಮನಮೋಹನ್‌ ಸಿಂಗ್‌

ಹಣಕಾಸು ಸಚಿವರಾದಾಗ, 1991ರಲ್ಲಿ ಮಂಡಿಸಿದ ಐತಿಹಾಸಿಕ ಕೇಂದ್ರ ಬಜೆಟ್ ಕರಾಳ ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ಪಾರು ಮಾಡಿತು. ಆ ಬಜೆಟ್ ಅನ್ನು ಅವರು ‘ಮಾನವೀಯ ಮುಖವುಳ್ಳ ಬಜೆಟ್’ ಎಂದು ಕರೆದಿದ್ದರು. ತಮ್ಮ ವಿದ್ವತ್ತನ್ನೇ ನಿಕಷಕ್ಕೆ ಒಡ್ಡಿ ತಯಾರಿಸಿದ್ದ ಆ ಬಜೆಟ್, ಭಾರತದ ಆರ್ಥಿಕ ವ್ಯವಸ್ಥೆಯನ್ನು ಹೊಸಹಳಿಗೆ ತಂದಿತ್ತು.

ಅವರ ಆರ್ಥಿಕ ಉದಾರೀಕರಣ, ನವೀಕರಣ, ಮತ್ತು ಖಾಸಗೀಕರಣ ನೀತಿಗಳು ಅಂದು ಹಲವರ ಟೀಕೆಗೆ ಒಳಗಾದವು. ಆದರೆ ಕಾಲ ಸರಿದಂತೆ ಅವರು ಭಾರತದ ಆರ್ಥಿಕತೆಯನ್ನು ಜಾಗತಿಕ ವಾಣಿಜ್ಯಕ್ಕೆ ತೆರೆದಿಡಲು ಸಹಾಯ ಮಾಡಿದ್ದು, ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ಕಾಪಾಡಿದ್ದು, ವಿದೇಶಿ ಬಂಡವಾಳ ಹೂಡಿಕೆಗೆ ಮುನ್ನುಡಿ ಬರೆದದ್ದು- ದೇಶದ ಆರ್ಥಿಕ ರಚನೆಯಲ್ಲೊಂದು ಕ್ರಾಂತಿಗೆ ಕಾರಣವಾಗಿತ್ತು. ಅದು ದೇಶದ ಜನರ ಅನುಭವಕ್ಕೆ ಬಂದಿತ್ತು.

ಈಗ, ಮೂವತ್ತು ವರ್ಷಗಳ ನಂತರ, ಹಿಂತಿರುಗಿ ನೋಡಿದರೆ, ಭಾರತವು 27 ಕೋಟಿ ಬಡವರನ್ನು ಬಡತನದಿಂದ ಮೇಲೆತ್ತಲು ಸಾಧ್ಯವಾಗಿದೆ ಹಾಗೂ ಭಾರತದ ಆರ್ಥಿಕ ವ್ಯವಸ್ಥೆಯ ಸುಧಾರಣೆಯ ಶಿಲ್ಪಿಯಾಗಿ ಸಿಂಗ್ ಕಾಣುತ್ತಿದ್ದಾರೆ.

ಭಾರತೀಯ ಸಂಸತ್ತಿನಲ್ಲಿ ಮೂವತ್ಮೂರು ವರ್ಷಗಳ ನಿರಂತರ ಸೇವೆ ಸಲ್ಲಿಸಿದ ನಂತರ ಏಪ್ರಿಲ್ 3ರಂದು ರಾಜ್ಯಸಭೆಯಿಂದ ನಿವೃತ್ತರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ನಿಜಾರ್ಥದಲ್ಲಿ ಮೇಲ್ಮನೆಯಲ್ಲಿರಲೇಬೇಕಾದ ಮೇರುವ್ಯಕ್ತಿತ್ವ. ಅವರ ಓದು, ವಿದ್ವತ್ತು, ಬುದ್ಧಿವಂತಿಕೆ, ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ದಕ್ಷತೆ- ಸದ್ಯದ ರಾಜಕಾರಣದಲ್ಲಿ ದುರ್ಬೀನು ಹಾಕಿ ಹುಡುಕಿದರೂ ಸಿಗುವುದಿಲ್ಲ.

ಮನಮೋಹನರ ಹತ್ತು ವರ್ಷಗಳ ಆಡಳಿತದಲ್ಲಿ ಅವರು ಮಾತನಾಡಿದ್ದು ಅಲ್ಪ, ಕೊಟ್ಟ ಕಾಣ್ಕೆ ಅಪಾರ. ಅವರು ಆಗಾಗ್ಗೆ ಆಡಿದ ಮುತ್ತಿನಂತಹ ಐದು ಮಾತುಗಳು, ಸಾರ್ವಕಾಲಿಕ ಸತ್ಯ ಸಾರುವ ಹೇಳಿಕೆಗಳಾಗಿ ದಾಖಲಾಗಿವೆ.

1991ರಲ್ಲಿ ‘ಭಾರತ ಈಗ ಜಾಗೃತವಾಗಿದೆ’ ಎಂದರು. ಅಂದರೆ ಭಾರತಕ್ಕೆ ಕಾಲ ಕೂಡಿ ಬಂದಿದೆ, ಯಾರಿಂದಲೂ ತಡೆಯಲು ಸಾಧ್ಯವಿಲ್ಲ, ನಾವು ಮೇಲುಗೈ ಸಾಧಿಸುತ್ತೇವೆ, ಜಯಿಸುತ್ತೇವೆ ಎಂದಿದ್ದರು. 

1999ರಲ್ಲಿ ‘ರಾಜಕಾರಣಿಗಳು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ’ ಎಂದರು. ಅಂದರೆ, ನಮಗೆ ಹೊಸ ರೀತಿಯ ರಾಜಕೀಯ ಬೇಕು, ವಿಷಯಗಳನ್ನು ನೇರವಾಗಿ ಹೇಳುವ ನಿಷ್ಕಪಟ ರಾಜಕೀಯ ಬೇಕು. ಎಲ್ಲರನ್ನು ಎಲ್ಲಾ ಕಾಲಕ್ಕೂ ಮೂರ್ಖರನ್ನಾಗಿ ಮಾಡುವುದು ಸಾಧ್ಯವಿಲ್ಲ ಎಂದಿದ್ದರು.

2014ರಲ್ಲಿ, ‘ಇತಿಹಾಸ ನನ್ನನ್ನು ಕರುಣೆಯಿಂದ ಕಾಣುತ್ತದೆ’ ಎಂದರು. ಅಂದರೆ ಹತ್ತು ವರ್ಷಗಳ ಅವರ ಆಡಳಿತ ಭ್ರಷ್ಟಾಚಾರ ಮತ್ತು ಹಣದುಬ್ಬರಗಳ ಟೀಕೆಗೆ ಗುರಿಯಾದಾಗ; ದುರ್ಬಲ ಪ್ರಧಾನಿ ಎಂದು ತೆಗಳಿಕೆಗೆ ಈಡಾದಾಗ; ನಾನು ಕೆಲಸ ಮಾಡಿದ್ದೇನೆ, ಇತಿಹಾಸ ಸ್ಮರಿಸುತ್ತದೆ ಎಂದಿದ್ದರು.

2014ರಲ್ಲಿ ‘ನರೇಂದ್ರ ಮೋದಿ ಪ್ರಧಾನಿಯಾಗುವುದು ದುರಂತ’ ಎಂದರು. ಅದನ್ನು ನಾವೀಗ ನೋಡುತ್ತಿದ್ದೇವೆ.

2016ರಲ್ಲಿ ‘ನೋಟು ಅಮಾನ್ಯೀಕರಣ ಎನ್ನುವುದು ಸಾಮಾನ್ಯ ಜನರ ಕಾನೂನುಬದ್ಧ ಲೂಟಿ’ ಎಂದರು. ಇದು ಕೂಡ ನಮ್ಮ ಅನುಭವಕ್ಕೆ ಬಂದಿದೆ, ಸತ್ಯವಾಗಿದೆ. ಅನುಭವಿಸುತ್ತಿದ್ದೇವೆ.

ಹಿಂದೊಮ್ಮೆ, ಹಿರಿಯ ಪತ್ರಕರ್ತ ಕರಣ್ ಥಾಪರ್ ಕೊಟ್ಟ ಸಂದರ್ಶನದಲ್ಲಿ, ಅಬ್ರಹಾಂ ಲಿಂಕನ್ ಅವರ ಒಂದು ಮಾತನ್ನು ನೆನಪು ಮಾಡಿಕೊಂಡಿದ್ದರು. ಅದೇನೆಂದರೆ, ‘ನೀವು ಕೆಲವರನ್ನು ಎಲ್ಲಾ ಕಾಲಕ್ಕೂ ಮೂರ್ಖರನ್ನಾಗಿ ಮಾಡಬಹುದು, ಎಲ್ಲಾ ಜನರನ್ನು ಸ್ವಲ್ಪ ಸಮಯದವರೆಗೆ ಮೂರ್ಖರನ್ನಾಗಿ ಮಾಡಬಹುದು, ಆದರೆ ಎಲ್ಲಾ ಜನರನ್ನು ಎಲ್ಲಾ ಕಾಲಕ್ಕೂ ಮೂರ್ಖರನ್ನಾಗಿಸುವುದಿಲ್ಲ’ ಎಂದಿದ್ದರು.

ಅದನ್ನು ನಾವು, ಮೂರನೇ ಬಾರಿಗೆ ಚಾರ್ ಸವ್ ಪಾರ್ ಎಂದು ಅಹಂಕಾರದಿಂದ ಮೆರೆಯುತ್ತಿದ್ದ ಮೋದಿಗೆ, ದೇಶದ ಜನ ಮುಟ್ಟಿ ನೋಡಿಕೊಳ್ಳುವಂತೆ ಕೊಟ್ಟ ಸಂಖ್ಯಾಬಲದಲ್ಲಿ ಕಾಣುತ್ತಿದ್ದೇವೆ.

ಮನಮೋಹನ್ ಸಿಂಗ್ 1

ಮನಮೋಹನ್ ಸಿಂಗ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರವೂ, ವಯಸ್ಸಾಗಿ ಆರೋಗ್ಯ ಸರಿ ಇಲ್ಲದ ಸಮಯದಲ್ಲಿಯೂ ಅವರು ಗಾಲಿಕುರ್ಚಿಯಲ್ಲಿ ರಾಜ್ಯಸಭೆಗೆ ನಿಯಮಿತವಾಗಿ ಹಾಜರಾಗುತ್ತಿದ್ದರು. ಅವರು ಎಂದಿಗೂ ಧ್ವನಿ ಎತ್ತಲಿಲ್ಲ ಅಥವಾ ಸದನದ ಬಾವಿಗೆ ಓಡಲಿಲ್ಲ, ಸಭ್ಯತೆ ಮತ್ತು ಸುಸಂಸ್ಕೃತ ನಡವಳಿಕೆಯ ನಿಯಮಗಳನ್ನು ಉಲ್ಲಂಘಿಸಲಿಲ್ಲ. ಸಂಸತ್ತಿನ ನಡವಳಿಕೆಯ ಗುಣಮಟ್ಟ ಹದಗೆಟ್ಟು, ಸದನಗಳು ಮಾತನಾಡಲು, ಚರ್ಚಿಸಲು ಮತ್ತು ಕಾನೂನು ರೂಪಿಸಲು ಜನಪ್ರತಿನಿಧಿಗಳಿಗೆ ವೇದಿಕೆಯಾಗದೆ ರಣಾಂಗಣವಾಗಿ ಮಾರ್ಪಟ್ಟ ಇಂದಿನ ಸಂದರ್ಭದಲ್ಲಿ ಮೌನವಾಗಿದ್ದುಕೊಂಡೇ- ಅವರ ಮತ್ತು ಇವರ ವ್ಯತ್ಯಾಸವನ್ನು ದೇಶದ ಜನತೆಯ ಎದೆಗೆ ದಾಟಿಸಿದ್ದರು.  

ಅಪಾರ ವಿದ್ವತ್ತುಳ್ಳ ಮನಮೋಹನ ಸಿಂಗ್ ಎಂದೂ ಅಧಿಕಾರ ಚಲಾಯಿಸಲಿಲ್ಲ, ಹಣ ಮಾಡಲಿಲ್ಲ, ಪ್ರತಿಷ್ಠೆ-ಪರಾಕ್ರಮ ತೋರಲಿಲ್ಲ. ಆಗಿದ್ದೆಲ್ಲ ನನ್ನಿಂದ, ನಾನು ಅನ್ನಲಿಲ್ಲ. ಇಂತಹ ಒಬ್ಬ ಸಜ್ಜನ ಭಾರತದ ರಾಜಕಾರಣದಲ್ಲಿದ್ದರು ಎನ್ನುವುದೇ ವಿಸ್ಮಯಕರ ಸಂಗತಿ. ಭಾರತ ಎಂದಿಗೂ ಮರೆಯಲಾರದ, ಎಂದೆಂದಿಗೂ ಮರೆಯಬಾರದ ವ್ಯಕ್ತಿ ಮನಮೋಹನ ಸಿಂಗ್.  

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X