ಮರಾಠಿ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 1ರಿಂದ 5ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಹಿಂದಿಯನ್ನು ಮೂರನೇ ಭಾಷೆಯಾಗಿ ಕಡ್ಡಾಯಗೊಳಿಸಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಮರಾಠಿ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಗುಜರಾತ್ ಮತ್ತು ಅಸ್ಸಾಂನಲ್ಲಿ ಹಿಂದಿ ಕಡ್ಡಾಯವೇಕಿಲ್ಲ ಎಂದು ಬಿಜೆಪಿಯನ್ನು ಪ್ರಶ್ನಿಸಲಾಗುತ್ತಿದೆ.
ರಾಷ್ಟ್ರೀಯ ಶಿಕ್ಷಣ ನೀತಿ(NEP) 2020ಕ್ಕೆ ಅನುಗುಣವಾಗಿ ‘ಶಾಲಾ ಶಿಕ್ಷಣಕ್ಕಾಗಿ ರಾಜ್ಯ ಪಠ್ಯಕ್ರಮ ಚೌಕಟ್ಟು 2024’ ಅನುಷ್ಠಾನದ ಭಾಗವಾಗಿ ಮಹಾರಾಷ್ಟ್ರ ಶಾಲಾ ಶಿಕ್ಷಣ ಇಲಾಖೆ ಮಂಗಳವಾರ ಈ ಆದೇಶವನ್ನು ಹೊರಡಿಸಿದೆ. ಈ ಹಿಂದೆ ಎನ್‌ಇಪಿಯ ತ್ರಿಭಾಷಾ ನೀತಿಯಡಿಯಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಲಾಗಿತ್ತು.
ಇದನ್ನು ಓದಿದ್ದೀರಾ? ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಹಿಂದಿ ಹೇರಿಕೆ ಮಾಡುತ್ತಿದೆ ಕೇಂದ್ರ ಸರ್ಕಾರ? three-language formula | BJP
ಆರಂಭದಲ್ಲಿ ಹಿಂದಿ ಹೇರಿಕೆಯನ್ನು ತಡೆದ ಬಳಿಕ ಈಗ ಸರ್ಕಾರ ಹಿಂಬಾಗಿಲಿನ ದಾರಿಯನ್ನು ಹಿಡಿದಿದೆ. ಹೇಗಾದರೂ ನೀತಿಯನ್ನು ಮತ್ತೆ ಪರಿಚಯಿಸುತ್ತಿದೆ ಎಂದು ಮರಾಠಿ ಭಾಷಾ ವಕೀಲರು ಆರೋಪಿಸಿದ್ದಾರೆ. ಸದ್ಯ ಬುಧವಾರ ಮಹಾ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಮರಾಠಿ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 1ರಿಂದ 5ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಹಿಂದಿಯನ್ನು ಮೂರನೇ ಭಾಷೆಯಾಗಿ ಕಡ್ಡಾಯವಾಗಿ ಕಲಿಯಬೇಕು.
ಹಾಗೆಯೇ, “ಹಿಂದಿ ಬದಲಾಗಿ ಬೇರೆ ಭಾಷೆಯನ್ನು ಕಲಿಯಲು ಬಯಸುವುದಾದರೆ ಶಾಲೆಯಲ್ಲಿ ಪ್ರತಿ ತರಗತಿಯಿಂದ 20 ವಿದ್ಯಾರ್ಥಿಗಳ ಸಹಮತ ದೊರೆಯಬೇಕು. ಹಾಗಿದ್ದರೆ ಆ ನಿರ್ದಿಷ್ಟ ಭಾಷೆಗೆ ಒಬ್ಬ ಶಿಕ್ಷಕರನ್ನು ನೇಮಿಸಲಾಗುತ್ತದೆ ಅಥವಾ ಆ ಭಾಷೆಯನ್ನು ಆನ್‌ಲೈನ್‌ನಲ್ಲಿ ಕಲಿಸಲಾಗುತ್ತದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿಂದೆ 1ನೇ ತರಗತಿಯಿಂದ ಹಿಂದಿಯನ್ನು ಪರಿಚಯಿಸುವ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಈ ಬಗ್ಗೆ ಏಪ್ರಿಲ್ 22ರಂದು ಸ್ಪಷ್ಟನೆ ನೀಡಿದ್ದ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವ ದಾದಾ ಭೂಸೆ ಪ್ರಾಥಮಿಕ ತರಗತಿಗಳಿಗೆ ಹಿಂದಿ ಕಡ್ಡಾಯವಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಈಗ ಕಡ್ಡಾಯಗೊಳಿಸಲಾಗಿದೆ.
ಗುಜರಾತ್‌ನಲ್ಲಿ ಹಿಂದಿ ಕಡ್ಡಾಯವೇಕಿಲ್ಲ?
ಗುಜರಾತ್ ಮತ್ತು ಅಸ್ಸಾಂನಲ್ಲಿ ಮೂರನೇ ಭಾಷೆಯಾಗಿ ಹಿಂದಿ ಕಡ್ಡಾಯವಲ್ಲ. ಅದು ಯಾಕೆ ಎಂಬ ಪ್ರಶ್ನೆಯನ್ನು ಮರಾಠಿ ಸಂಘಟನೆಗಳು, ಮರಾಠಿಗರು ಎತ್ತಿದ್ದಾರೆ. ಮಹಾರಾಷ್ಟ್ರ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣ ಮಂಡಳಿಯ ಮಾಜಿ ಅಧ್ಯಕ್ಷ ವಸಂತ್ ಕಲ್ಪಾಂಡೆ ಇದೇ ಪ್ರಶ್ನೆಯನ್ನು ಎತ್ತಿದ್ದಾರೆ. “ಒಂದು ತರಗತಿಯಲ್ಲಿ ಹಿಂದಿಯೇತರ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ 20 ವಿದ್ಯಾರ್ಥಿಗಳು ಕಂಡುಬರುವುದು ಅಸಂಭವ” ಎಂದು ಹೇಳಿದ್ದಾರೆ.
“ಹಿಂದಿ ಬಿಟ್ಟು ಬೇರೆ ಭಾಷೆಗೆ ಆನ್‌ಲೈನ್ ಶಿಕ್ಷಣ ಲಭ್ಯವಾಗುವಂತೆ ಮಾಡುವ ನಿಬಂಧನೆಯು ಹಿಂದಿ ಹೊರತುಪಡಿಸಿ ಬೇರೆ ಯಾವುದೇ ಭಾಷೆಯನ್ನು ಆಯ್ಕೆ ಮಾಡುವುದರ ಬಗ್ಗೆ ನಿರುತ್ಸಾಹ ಮೂಡಿಸುವ ಪ್ರಯತ್ನ. ಮರಾಠಿ ಮತ್ತು ಹಿಂದಿ ಒಂದೇ ರೀತಿಯ ಲಿಪಿಗಳನ್ನು ಹೊಂದಿದ್ದರೂ, ಅಂತಹ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳು ಲಿಪಿಗಳ ನಡುವಿನ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಯುವುದು ತುಂಬಾ ಕಷ್ಟ” ಎಂದು ಅಭಿಪ್ರಾಯಿಸಿದ್ದಾರೆ.
