ಭಾರತದಲ್ಲಿ ಪತ್ರಕರ್ತರ ಮೇಲಿನ ಬೆದರಿಕೆ, ದಬ್ಬಾಳಿಕೆಗಳನ್ನು ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಅಮೆರಿಕದ ಮಾಧ್ಯಮ ವೀಕ್ಷಣಾ ಸಂಸ್ಥೆ (ಸಿಪಿಜೆ) ಒತ್ತಾಯಿಸಿದೆ.
ಮೋದಿಯವರ ಅಧಿಕೃತ ಅಮೆರಿಕ ಭೇಟಿಯ ಮೊದಲು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸಿಪಿಜೆ, “ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಆದರೂ ಇದು ಮಾಧ್ಯಮಗಳಿಗೆ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದಾಗಿದೆ” ಎಂದು ಮಾಧ್ಯಮ ವೀಕ್ಷಣಾ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಬುಧವಾರ (ಜೂನ್ 21) ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಸಿಪಿಜೆ ಮತ್ತು ಅದರ ಪಾಲುದಾರ ಸಂಸ್ಥೆಗಳು ಪ್ರಕಟಿಸಿದ ಪೂರ್ಣ ಪುಟದ ಜಾಹೀರಾತಿನಲ್ಲಿ, ಭಾರತದಲ್ಲಿ ಪತ್ರಕರ್ತರು ದೈಹಿಕ ಹಿಂಸೆ, ಕಿರುಕುಳ, ಸುಳ್ಳು ಮೊಕದ್ದಮೆಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ದ್ವೇಷದ ಪ್ರಚಾರಗಳನ್ನು ಹೇಗೆ ಎದುರಿಸುತ್ತಿದ್ದಾರೆ ಎಂಬುದನ್ನು ವಿವರಿಸಲಾಗಿದೆ.
ಭಾರತದಲ್ಲಿ ಮಾಧ್ಯಮಗಳನ್ನು ದಮನಗೊಳಿಸಲಾಗುತ್ತಿದೆ. ವ್ಯವಸ್ಥೆಯ ವಿರುದ್ಧ ತಮ್ಮ ವೃತ್ತಿ ನಿರ್ವಹಿಸಿದ ಕಾರಣ ದ್ವೇಷವನ್ನು ಸಾಧಿಸಲಾಗುತ್ತಿದೆ. ಅಲ್ಲದೆ ಪ್ರತೀಕಾರವಾಗಿ ನಿರಂಕುಶವಾಗಿ ಬಂಧಿಸಲ್ಪಟ್ಟಿರುವ ಆರು ಪತ್ರಕರ್ತರನ್ನು ಬಿಡುಗಡೆ ಮಾಡಲು ಮೋದಿಯವರನ್ನು ಒತ್ತಾಯಿಸಲು ಸಿಪಿಜೆ ಅಧ್ಯಕ್ಷ ಬೈಡನ್ ಅವರಿಗೆ ತಿಳಿಸಲಾಗಿದೆ.
“2014 ರಿಂದ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಭಾರತದ ಮಾಧ್ಯಮಗಳ ಮೇಲೆ ದಬ್ಬಾಳಿಕೆ ಹೆಚ್ಚಾಗುತ್ತಿದೆ. ದೈಹಿಕ ಹಿಂಸೆ, ಕಿರುಕುಳ, ಸುಳ್ಳು ಮೊಕದ್ದಮೆಗಳು ಮತ್ತು ಆನ್‌ಲೈನ್ ದ್ವೇಷದ ಪ್ರಚಾರಗಳು ಸೇರಿದಂತೆ ಭಾರತದಲ್ಲಿ ಪತ್ರಕರ್ತರು ಹೆಚ್ಚು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಮುಕ್ತ ಮತ್ತು ಸ್ವತಂತ್ರ ಮಾಧ್ಯಮವನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಪತ್ರಕರ್ತರು ಸ್ವತಂತ್ರವಾಗಿ ಹಾಗೂ ನಿರ್ಭೀತಿಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ಅಮೆರಿಕ ಅಧ್ಯಕ್ಷರು ಇದನ್ನು ಚರ್ಚೆಯ ಪ್ರಮುಖ ಅಂಶವನ್ನಾಗಿ ತೆಗೆದುಕೊಳ್ಳುತ್ತಾರೆಂದು ನಾವು ನಿರೀಕ್ಷಿಸುತ್ತೇವೆ” ಎಂದು ಸಿಪಿಜೆ ಅಧ್ಯಕ್ಷ ಜೋಡಿಯೆ ಗಿನ್ಸ್ಬರ್ಗ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಾಳಿನ ವಿಪಕ್ಷಗಳ ಒಗ್ಗಟ್ಟಿನ ಸಭೆಯಲ್ಲಿ ಭಾಗವಹಿಸದಿರಲು ಮಾಯಾವತಿ ನಿರ್ಧಾರ
ಅಕ್ರಮವಾಗಿ ಬಂಧಿಸಿರುವ ಆಸಿಫ್ ಸುಲ್ತಾನ್, ಗೌತಮ್ ನವ್ಲಾಖಾ, ಸಜಾದ್ ಗುಲ್, ಫಹಾದ್ ಷಾ, ರೂಪೇಶ್ ಕುಮಾರ್ ಸಿಂಗ್ ಮತ್ತು ಇರ್ಫಾನ್ ಮೆಹ್ರಾಜ್ ಎಂಬ ಆರು ಪತ್ರಕರ್ತರ ಛಾಯಾಚಿತ್ರಗಳನ್ನು ಜಾಹೀರಾತು ಪ್ರಮುಖವಾಗಿ ತೋರಿಸಲಾಗಿದೆ.
ಈ ವಾರದ ಆರಂಭದಲ್ಲಿ, ಅಮೆರಿಕದ ಸೆನೆಟರ್‌ಗಳು ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸದಸ್ಯರು ಸೇರಿದಂತೆ 75 ಡೆಮೋಕ್ರಾಟ್‌ಗಳ ಗುಂಪು ಅಧ್ಯಕ್ಷ ಬೈಡನ್‌ಗೆ ಪತ್ರ ಬರೆದು, ಪ್ರಧಾನಿಯೊಂದಿಗಿನ ಅವರ ಚರ್ಚೆಯ ಸಮಯದಲ್ಲಿ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ, ಇಂಟರ್ನೆಟ್ ಪ್ರವೇಶ ಮತ್ತು ಧಾರ್ಮಿಕ ಅಸಹಿಷ್ಣುತೆಗೆ ಸಂಬಂಧಿಸಿದ ಕಳವಳಗಳನ್ನು ತಿಳಿಸುವಂತೆ ಒತ್ತಾಯಿಸಿತ್ತು.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21 ರಿಂದ 24 ರವರೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದು, ಈ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭೇಟಿ ಸೇರಿದಂತೆ ಹಲವು ವಾಣಿಜ್ಯ ಒಪ್ಪಂದಗಳಲ್ಲಿ ಭಾಗಿಯಾಗಲಿದ್ದಾರೆ.