ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ ಅಳೆದು ತೂಗಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನಿನ್ನೆ ಬಿಡುಗಡೆ ಮಾಡಿದೆ. ಅದರಂತೆ 33 ಹಾಲಿ ಸಂಸದರನ್ನು ಕೈಬಿಡಲಾಗಿದೆ.
ಈ ಪೈಕಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಕೂಡ ಒಬ್ಬರು. ಇವರ ಬದಲು ದೆಹಲಿ ಟಿಕೆಟ್ ಅನ್ನು ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ ಅವರಿಗೆ ನೀಡಲಾಗಿದೆ. ಇತ್ತ, ಟಿಕೆಟ್ ಕೈತಪ್ಪುತ್ತಿದ್ದಂತೆ ಮಂಗಳೂರಿನಲ್ಲಿ ಮೀನಾಕ್ಷಿ ಲೇಖಿ ಅವರು ಭಾಗಿಯಾಗಬೇಕಿದ್ದ ಕಾರ್ಯಕ್ರಮವನ್ನು ಬಿಜೆಪಿ ಮುಂದೂಡಿದೆ.
ನಾಳೆ (ಮಾರ್ಚ್ 4) ಮಂಗಳೂರಿನ ಸಂಘನಿಕೇತನದಲ್ಲಿ ಮಂಗಳೂರಿನ ಬೂತ್ ಮಟ್ಟದ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶಕ್ಕೆ ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಇಲಾಖೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರನ್ನು ಆಹ್ವಾನಿಸಲಾಗಿತ್ತು. ಅವರು ಭಾಗಿಯಾಗುವುದು ಖಚಿತವಾಗಿತ್ತು. ಆದರೆ, ಇವರಿಗೆ ಟಿಕೆಟ್ ಕೈತಪ್ಪುತ್ತಿದ್ದಂತೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಈ ಬಗ್ಗೆ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಿನ್ನೆ 195 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ನವದೆಹಲಿಯ ಸಂಸದೆ ಮೀನಾಕ್ಷಿ ಲೇಖಿಗೆ ಟಿಕೆಟ್ ಮಿಸ್ ಆಗಿದ್ದು, ಮಾಜಿ ಕೇಂದ್ರ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರಿಗೆ ಕ್ಷೇತ್ರದಲ್ಲಿ ಮಣೆ ಹಾಕಲಾಗಿದೆ.
ರಾಜ್‌ದೀಪ್ ರಾಯ್, ಹೋರೆನ್ ಸಿಂಗ್ ಬೇ, ಪಲ್ಲಬ್ ಲೋಚನ್ ದಾಸ್, ರಾಮೇಶ್ವರ್ ತೇಲಿ, ಗುಹರಾಮ್ ಅಜ್ಗಲ್ಲಿ, ಸುನಿಲ್ ಕುಮಾರ್ ಸೋನಿ, ಚುನ್ನಿ ಲಾಲ್ ಸಾಹು, ಮೋಹನ್ ಮಾಂಡವಿ, ಮಾಜಿ ಕೇಂದ್ರ ಸಚಿವ ಹರ್ಷವರ್ಧನ್, ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ, ಮೀನಾಕ್ಷಿ ಲೇಖಿ, ರಮೇಶ್ ಬಿಧುರಿ ಸೇರಿದಂತೆ ಒಟ್ಟು 33 ಹಾಲಿ ಸಂಸದರಿಗೆ 2024ರ ಲೋಕಸಭಾ ಚುನಾವಣೆಯ ಬಿಜೆಪಿ ಟಿಕೆಟ್ ಕೈತಪ್ಪಿದೆ. ಟಿಕೆಟ್ ಮಿಸ್ ಆದ ಬೆನ್ನಲ್ಲೇ ಹರ್ಷವರ್ಧನ್ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭೆಗೆ ಟಿಕೆಟ್ ನೀಡಿದ ಬಿಜೆಪಿ: ವಿವಾದದ ಬೆನ್ನಲ್ಲೇ ‘ಸ್ಪರ್ಧಿಸಲ್ಲ’ ಎಂದ ಭೋಜ್‌ಪುರಿ ನಟ, ಗಾಯಕ!
ಈ ನಡುವೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಭೋಜ್‌ಪುರಿ ನಟ, ಗಾಯಕ ಪವನ್ ಸಿಂಗ್ ಅವರು ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು. ತಮ್ಮ ಹಾಡುಗಳಲ್ಲಿ ಮಹಿಳೆಯರನ್ನು ಅವಹೇಳನಕಾರಿಯಾಗಿ ತೋರಿಸಿದ್ದಾನೆ ಎಂದು ಟಿಎಂಸಿ ಆರೋಪ ಮಾಡಿದ ಬೆನ್ನಲ್ಲೇ, ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದಾರೆ.
