ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ಬಳಿಕ ಮೊದಲ ಬಾರಿಗೆ ಪತ್ನಿ ಸುನೀತಾ ಕೇಜ್ರಿವಾಲ್ ಇಂದು ವಿಡಿಯೋ ಸಂದೇಶವನ್ನು ನೀಡಿದ್ದು, ಜೈಲಿನಿಂದಲೇ ಕೇಜ್ರಿವಾಲ್ ಬಹಿರಂಗ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ಪತಿ ಕೇಜ್ರಿವಾಲ್ ಅವರು ಜೈಲಿನಿಂದ ಕಳುಹಿಸಿದ್ದ ಸಂದೇಶವನ್ನು ಓದಿದ ಅವರು, ಈ ಸಂದೇಶದಲ್ಲಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
ಕೇಜ್ರಿವಾಲ್ ಅವರು ತಮ್ಮ ಪತ್ರದಲ್ಲಿ, “ಯಾವ ಕಂಬಿಯೂ ನನ್ನನ್ನು ಜೈಲಿನಲ್ಲಿಡಲು ಸಾಧ್ಯವಿಲ್ಲ. ನಾನು ಶೀಘ್ರದಲ್ಲೇ ಹೊರಗೆ ಬಂದು ನನ್ನ ಭರವಸೆಗಳನ್ನೆಲ್ಲ ಈಡೇರಿಸುತ್ತೇನೆ. ಜೊತೆಗೆ ಬಿಜೆಪಿಯವರನ್ನು ದ್ವೇಷಿಸಬೇಡಿ. ಅವರೆಲ್ಲರೂ ನಮ್ಮ ಸಹೋದರ-ಸಹೋದರಿಯರು ಎಂದು ಮನವಿ ಮಾಡಿಕೊಂಡಿದ್ದಾರೆ” ಎಂದು ಪತ್ನಿ ಸುನೀತಾ ತಿಳಿಸಿದ್ದಾರೆ.
“ಕೋಟ್ಯಂತರ ಜನರ ಪ್ರಾರ್ಥನೆ ಕೇಜ್ರಿವಾಲ್ ಜೊತೆಗಿದೆ. ದೆಹಲಿಯ ಜನರು ದೇವಸ್ಥಾನಕ್ಕೆ ಹೋಗಿ ಕೇಜ್ರಿವಾಲ್‌ಗಾಗಿ ಪ್ರಾರ್ಥಿಸಬೇಕು. ಕೇಜ್ರಿವಾಲ್ ಅವರು ನೀಡಿದ ಪ್ರತಿ ಭರವಸೆಯನ್ನು ಉಳಿಸಿಕೊಂಡಿದ್ದಾರೆ” ಎಂದು ಸಂದೇಶದಲ್ಲಿ ಸುನೀತಾ ಕೇಜ್ರಿವಾಲ್ ಓದಿದ್ದಾರೆ.
देशवासियों के लिए जेल से अरविंद केजरीवाल का संदेश। https://t.co/Q9K6JjSjke
— Arvind Kejriwal (@ArvindKejriwal) March 23, 2024
“ನಾನು ಜೈಲಿಗೆ ಹೋಗಿರುವುದರಿಂದ ಸಮಾಜ ಕಲ್ಯಾಣ ಮತ್ತು ಸಾರ್ವಜನಿಕ ಕಲ್ಯಾಣದ ಕೆಲಸಗಳು ನಿಲ್ಲಬಾರದು ಎಂದು ಆಮ್ ಆದ್ಮಿ ಪಕ್ಷದ ಎಲ್ಲಾ ಕಾರ್ಯಕರ್ತರಲ್ಲಿ ನಾನು ಮನವಿ ಮಾಡುತ್ತೇನೆ. ಬಿಜೆಪಿಯವರನ್ನು ದ್ವೇಷಿಸಬೇಡಿ. ಅವರು ನಮ್ಮ ಸಹೋದರ-ಸಹೋದರಿಯರು. ನಾನು ಶೀಘ್ರದಲ್ಲಿ ಮರಳುತ್ತೇನೆ” ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
“ಭಾರತದ ಒಳಗೆ ಮತ್ತು ಹೊರಗೆ ಅನೇಕ ಶಕ್ತಿಗಳು ದೇಶವನ್ನು ದುರ್ಬಲಗೊಳಿಸುತ್ತಿವೆ. ನಾವು ಜಾಗರೂಕರಾಗಿರಬೇಕು. ಈ ಶಕ್ತಿಗಳನ್ನು ಗುರುತಿಸಬೇಕು ಮತ್ತು ಅವುಗಳನ್ನು ಸೋಲಿಸಬೇಕು. ಕೇಜ್ರಿವಾಲ್ ಕಂಬಿ ಹಿಂದೆ ಬಿದ್ದಿದ್ದಾರೆ ಎಂದು ದೆಹಲಿಯ ಮಹಿಳೆಯರು ಯೋಚಿಸುತ್ತಿರಬಹುದು. 1,000 ಸಿಗುತ್ತದೋ ಇಲ್ಲವೋ ಯಾರಿಗೆ ಗೊತ್ತು ಅಂತಾ ಹೇಳುತ್ತಿರಬಹುದು. ಆದರೆ ಅವರಿಗೆ ನಾನು ಈ ಮೂಲಕ ಹೇಳುತ್ತಿರುವುದೇನೆಂದರೆ ಅವರ ಸಹೋದರ, ಮಗನನ್ನು ನಂಬುವಂತೆ ನಾನು ಅವರಿಗೆ ಮನವಿ ಮಾಡುತ್ತೇನೆ. ಯಾವ ಕಂಬಿಯೂ ನನ್ನನ್ನು ಜೈಲಿನಲ್ಲಿಡಲು ಸಾಧ್ಯವಿಲ್ಲ. ನಾನು ಶೀಘ್ರದಲ್ಲೇ ಹೊರಗೆ ಬಂದು ನನ್ನ ಭರವಸೆಗಳನ್ನೆಲ್ಲ ಈಡೇರಿಸುತ್ತೇನೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.
“ಜೈಲಿನ ಒಳಗಿರಲಿ ಅಥವಾ ಹೊರಗಿರಲಿ, ನನ್ನ ಜೀವನದ ಪ್ರತಿ ಕ್ಷಣವೂ ದೇಶ ಸೇವೆಗೆ ಮುಡಿಪಾಗಿದೆ. ನನ್ನ ಪ್ರತಿಯೊಂದು ರಕ್ತದ ಹನಿಯೂ ದೇಶಕ್ಕಾಗಿ ಸಮರ್ಪಿತವಾಗಿದೆ. ಭಾರತವನ್ನು ವಿಶ್ವದ ಬಲಿಷ್ಠ ಮತ್ತು ಶ್ರೇಷ್ಠ ದೇಶವಾಗಿ ರೂಪಿಸಬೇಕಿದೆ. ದೇಶವನ್ನು ದುರ್ಬಲಗೊಳಿಸಲು ಆಂತರಿಕ ಮತ್ತು ಬಾಹ್ಯ ಶಕ್ತಿಗಳು ಪ್ರಯತ್ನಿಸುತ್ತಿದ್ದು, ಇವುಗಳ ವಿರುದ್ಧ ಹೋರಾಡಬೇಕಾಗಿದೆ” ಎಂದು ಕೇಜ್ರಿವಾಲ್ ತಮ್ಮ ಸಂದೇಶದಲ್ಲಿ ಕೇಜ್ರಿವಾಲ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಅಬಕಾರಿ ನೀತಿ ಹಗರಣ | ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾ.28ರವರೆಗೆ ED ಕಸ್ಟಡಿಗೆ
ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿ ದೆಹಲಿ ಮುಖ್ಯಮಂತ್ರಿಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ತಮ್ಮ ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಅರವಿಂದ್ ಕೇಜ್ರಿವಾಲ್ ಹಿಂಪಡೆದಿದ್ದರು. ಅದಾದ ಬಳಿಕ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ 6 ದಿನಗಳ ಕಾಲ ಇ.ಡಿ ವಶಕ್ಕೆ ವಹಿಸಿ ಆದೇಶ ಹೊರಡಿಸಿದೆ. ಕೇಜ್ರಿವಾಲ್ ಅವರನ್ನು ಮಾರ್ಚ್ 28ರಂದು ಮಧ್ಯಾಹ್ನ 2 ಗಂಟೆಗೆ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯ ತಿಳಿಸಿದೆ.
