- ಸಿಎಂ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ. ಪರಿಹಾರ
- ಮೃತರ ಕುಟುಂಬಗಳಿಗೆ ಪರಿಹಾರ ಚೆಕ್ ವಿತರಿಸಿದ ಸಚಿವರು
ಚಿತ್ರದುರ್ಗ ನಗರದ 17ನೇ ವಾರ್ಡ್ ವ್ಯಾಪ್ತಿಯ ಕವಾಡಿಗರಹಟ್ಟಿಯ ಎಸ್‌ಸಿ ಕಾಲೋನಿಯಲ್ಲಿ ಕಲುಷಿತ ನೀರು ಸೇವನೆ ಪ್ರಕರಣ ಆ ಇಡೀ ಪ್ರದೇಶವನ್ನೇ ತಲ್ಲಣಗೊಳಿಸಿದೆ. ಅಸ್ವಸ್ಥರಾದವರು ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬರುವವರೆಗೂ ಏನನ್ನೂ ಹೇಳಲಾಗದ ಸ್ಥಿತಿ ನಿರ್ಮಾಣವಾಗಿದೆ.
ಶುಕ್ರವಾರ ಒಂದೇ ದಿನ ಮೂವರು ಮೃತಪಟ್ಟಿದ್ದನ್ನು ಕಂಡು ಸ್ಥಳೀಯರು ದಿಕ್ಕೇ ತೋಚದಂತಾಗಿದ್ದಾರೆ. ಈವರೆಗೂ ಐದು ಸಾವುಗಳಾಗಿದ್ದು, ಸಾವಿನ ಸರಣಿಯಿಂದ ಕವಾಡಿಗರಹಟ್ಟಿ ಸ್ಮಶಾನ ಮೌನಕ್ಕೆ ಜಾರಿದೆ.
ಈಗಾಗಲೇ ಕವಾಡಿಗರ ಹಟ್ಟಿ ಎಸ್.ಸಿ. ಕಾಲೋನಿಯಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟ ಮೂವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಕವಾಡಿಗರಹಟ್ಟಿಗೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಅಲ್ಲದೇ ಮೃತರ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಣೆ ಮಾಡಿದರು.
ಅಸ್ವಸ್ಥರ ಸಂಖ್ಯೆ 177ಕ್ಕೆ ಏರಿಕೆ
19 ಜನರಲ್ಲಿ ವಾಂತಿ- ಭೇದಿ ಕಾಣಿಸಿಕೊಂಡಿದ್ದು, ಅಸ್ವಸ್ಥರ ಸಂಖ್ಯೆ 177ಕ್ಕೆ ಏರಿಕೆಯಾಗಿದೆ. ಮೊದಲ ಮೂರು ಸಾವು ಸಂಭವಿಸಿದಾಗ ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದ ಹಟ್ಟಿಯಲ್ಲಿ ಈಗ ಸದ್ದೇ ಇಲ್ಲದಂತಾಗಿದೆ.
ಚಿತ್ರದುರ್ಗದ ಹೊರವಲಯದ ಕವಾಡಿಗರಹಟ್ಟಿ 3,675 ಜನರು ಇದ್ದಾರೆ. ಇದರಲ್ಲಿ 1,128 ಜನರು ಇರುವ ಮೂರು ಬೀದಿಗಳಿಗೆ ಮಾತ್ರ ಕಲುಷಿತ ನೀರು ಪೂರೈಕೆಯಾಗಿದೆ. ಪರಿಶಿಷ್ಟ ಜಾತಿಯ ಜನರೇ ಹೆಚ್ಚಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.