ಮಿಜೋರಾಂ ಚುನಾವಣೆಯನ್ನು ಈ ಬಾರಿ ಎಂಎನ್‌ಎಫ್ ಮತ್ತು ಝೆಡ್‌ಪಿಎಂ ನಡುವಿನ ಸ್ಪರ್ಧೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್‌ನ ಲಾಲ್‌ಥಾನ್‌ಹಾವ್ಲಾ ಮತ್ತು ಎಂಎನ್‌ಎಫ್‌ನ ಝೋರಾಂಥಾಂಗ ಅವರಿಗಿಂತ ಝೆಡ್‌ಪಿಎಂ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ಡುಹೋಮಾ ಹೊಸ ಮುಖವಾಗಿ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ, ನಿರಾಶ್ರಿತರಿಗೆ ರಕ್ಷಣೆ ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ.
ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಮಿಜೋರಾಂನ ಮುಖ್ಯಮಂತ್ರಿ ಝೋರಾಂಥಾಂಗ ನೀಡಿರುವ ಹೇಳಿಕೆಯೊಂದು ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ತಿಂಗಳ ಕೊನೆಯಲ್ಲಿ ರಾಜ್ಯದ ಮಮಿತ್ ಪಟ್ಟಣಕ್ಕೆ ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದಾರೆ. ಅವರ ಜೊತೆ ವೇದಿಕೆ ಹಂಚಿಕೊಳ್ಳಲು ತಾನು ಬಯಸುವುದಿಲ್ಲ ಎಂದು ಮುಖ್ಯಮಂತ್ರಿ ಝೋರಾಂಥಾಂಗ ಘೋಷಿಸಿದ್ದಾರೆ.
ಝೋರಾಂಥಾಂಗ ಅವರ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ಬಿಜೆಪಿ ನೇತೃತ್ವದ ನಾರ್ತ್ ಈಸ್ಟ್ ಡೆಮಾಕ್ರಟಿಕ್ ಅಲಯೆನ್ಸ್ ಭಾಗ. ಹಾಗಿದ್ದರೂ ಅವರು ‘ದೇಶದ ಅತ್ಯಂತ ಜನಪ್ರಿಯ ಪ್ರಧಾನ ಮಂತ್ರಿ’ಯ ಜೊತೆ ವೇದಿಕೆ ಹಂಚಿಕೊಳ್ಳಲು ಹಿಂದೇಟು ಹಾಕಿರುವುದಕ್ಕೆ ಬಲವಾದ ಕಾರಣಗಳಿವೆ.
ಮಿಜೋರಾಂ ಶೇ.87ರಷ್ಟು ಕ್ರೈಸ್ತರೇ ಇರುವ ರಾಜ್ಯ. ಮಣಿಪುರದಲ್ಲಿ ಮೀತೀಗಳು ಅನೇಕ ಚರ್ಚ್‌ಗಳನ್ನು ಸುಟ್ಟಿದ್ದಾರೆ. ಮಣಿಪುರದ ಬಿಜೆಪಿ ಸರ್ಕಾರ ಪರೋಕ್ಷವಾಗಿ ಮೀತೀಗಳಿಗೆ ಬೆಂಬಲ ನೀಡಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಅದನ್ನು ತಡೆಯಲು ಯತ್ನಿಸಿಲ್ಲ ಎನ್ನುವುದು ಝೋರಾಂಥಾಂಗ ಅವರ ಅಸಮಾಧಾನವಾಗಿದೆ. ಹೀಗಾಗಿ ಬಿಜೆಪಿ ಜೊತೆ ಗುರುತಿಸಿಕೊಳ್ಳಲು ತಾವು ಇಚ್ಛಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ತಮ್ಮ ಪಕ್ಷ ಕಾಂಗ್ರೆಸ್ ಅನ್ನು ವಿರೋಧಿಸುತ್ತದೆ ಎಂದು ಮಾತ್ರವೇ ತಾವು ಕೇಂದ್ರದಲ್ಲಿ ಎನ್‌ಡಿಎ ಭಾಗವಾಗಿದ್ದೇವೆ ಎನ್ನುವುದು ಅವರ ವಾದ.
ಈ ಸುದ್ದಿ ಓದಿದ್ದೀರಾ: ತೆಲಂಗಾಣ ಚುನಾವಣೆ: ಕೆಸಿಆರ್ ಕುರ್ಚಿ ಕಸಿಯಲು ಕಾಂಗ್ರೆಸ್ ಕಸರತ್ತು; ಬಿಜೆಪಿಗೆ ಒಳಜಗಳವೇ ಕುತ್ತು!
ಮಿಜೋರಾಂ ಮಾತ್ರ ಬಿಜೆಪಿಗೆ ಸ್ವಂತವಾಗಿ ಸರ್ಕಾರ ರಚಿಸಲು ಅಥವಾ ಅಧಿಕಾರದಲ್ಲಿರುವ ಸರ್ಕಾರದ ಭಾಗವಾಗಲು ಸಾಧ್ಯವಾಗದ ಏಕೈಕ ರಾಜ್ಯವಾಗಿದೆ. ಎಂಎನ್‌ಎಫ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮತ್ತು ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಇಡಿಎ) ಮಿತ್ರಪಕ್ಷವಾಗಿದ್ದರೂ, ಬಿಜೆಪಿಯ ಹಿಂದುತ್ವ ಪರ ನಿಲುವನ್ನು ಪರಿಗಣಿಸಿ ಝೋರಾಂಥಾಂಗ ಅದರಿಂದ ಅಂತರ ಕಾಯ್ದುಕೊಂಡಿದ್ದಾರೆ. ವಿಶೇಷವಾಗಿ ಈ ಚುನಾವಣಾ ಋತುವಿನಲ್ಲಿ ಎಂಎನ್‌ಎಫ್ ಬಿಜೆಪಿಯಿಂದ ದೂರವೇ ಉಳಿದಿದೆ.
ಮಾಧ್ಯಮಗಳು ಹಾಗೂ ದೇಶದ ಜನರ ಗಮನ ಅಷ್ಟಾಗಿ ಸೆಳೆಯದ ಪುಟ್ಟ ರಾಜ್ಯ ಮಿಜೋರಾಂ. ನವೆಂಬರ್ 7ರಂದು ಅಲ್ಲಿನ ವಿಧಾನಸಭಾ ಚುನಾವಣೆ ನಡೆಯಲಿದೆ. 2008ರಿಂದ 2018ರವರೆಗೆ ಮಿಜೋರಾಂನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. 2018ರಲ್ಲಿ ಎಂಎನ್‌ಎಫ್ ಕಾಂಗ್ರೆಸ್ ಅನ್ನು ಮಣಿಸಿ ಅಧಿಕಾರಕ್ಕೆ ಮರಳಿತ್ತು. ಐದು ಬಾರಿ ಮುಖ್ಯಮಂತ್ರಿ ಆಗಿದ್ದ ಕಾಂಗ್ರೆಸ್‌ನ ಲಾಲ್‌ಥಾನ್‌ಹಾವ್ಲಾ ಅವರು ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಪರಾಭವಗೊಂಡಿದ್ದರು. ಇದರಿಂದ ಈಶಾನ್ಯ ಭಾರತದ ಏಳೂ ರಾಜ್ಯಗಳು ಕಾಂಗ್ರೆಸ್ ಮುಕ್ತವಾಗಿದ್ದವು; ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾಗಳಲ್ಲಿ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಅಧಿಕಾರಕ್ಕೇರಿದ್ದವು.
ಈ ಸುದ್ದಿ ಓದಿದ್ದೀರಾ: ಮಧ್ಯಪ್ರದೇಶ ಚುನಾವಣೆ | ‘ಮಾಮಾ’ ಕೈಬಿಟ್ಟ ಬಿಜೆಪಿ; ಕಾಂಗ್ರೆಸ್‌ಗೆ ಒಬಿಸಿ, ಮಹಿಳೆಯರೇ ಶಕ್ತಿ
40 ಸದಸ್ಯರ ಮಿಜೋರಾಂ ವಿಧಾನಸಭೆಯಲ್ಲಿ 2018ರಲ್ಲಿ ಎಂಎನ್‌ಎಫ್ 26 ಸ್ಥಾನಗಳನ್ನು ಗಳಿಸಿತ್ತು. ಕಾಂಗ್ರೆಸ್ ಐದು ಮತ್ತು ಬಿಜೆಪಿ ಒಂದು ಸ್ಥಾನ ಗಳಿಸಿದ್ದವು. ಝೋರಂ ಪೀಪಲ್ಸ್ ಮೂವ್‌ಮೆಂಟ್ (ಝೆಡ್‌ಪಿಎಂ) ತನ್ನ ಮಿತ್ರಪಕ್ಷಗಳೊಂದಿಗೆ ಎಂಟು ಸ್ಥಾನಗಳನ್ನು ಗೆದ್ದಿತ್ತು. ನಂತರ ನಡೆದ ಉಪಚುನಾವಣೆಗಳಲ್ಲಿ ಎರಡು ಸ್ಥಾನಗಳನ್ನು ಗೆದ್ದಿದ್ದ ಆಡಳಿತಾರೂಢ ಎಂಎನ್ಎಫ್ ತನ್ನ ಬಲವನ್ನು 28ಕ್ಕೇರಿಸಿಕೊಂಡಿತ್ತು.
ಕಾಂಗ್ರೆಸ್‌ನ ಲಾಲ್‌ಥಾನ್‌ಹಾವ್ಲಾ ಐದು ಅವಧಿಗಳಲ್ಲಿ 21 ವರ್ಷ ಮುಖ್ಯಮಂತ್ರಿ ಆಗಿದ್ದರು. ಎಂಎನ್‌ಎಫ್‌ನ ಲಾಲ್ದೆಂಗ ಎರಡು ವರ್ಷ ಮುಖ್ಯಮಂತ್ರಿ ಆಗಿದ್ದರು. ಎಂಎನ್‌ಎಫ್ 1998ರಲ್ಲಿ ಮತ್ತೆ ಅಧಿಕಾರಕ್ಕೆ ಬರುವುದರೊಂದಿಗೆ ಝೋರಾಂಥಾಂಗ ಮತ್ತೆ ಗದ್ದುಗೆ ಏರಿದ್ದರು. ಹೀಗೆ 1988ರಿಂದ ರಾಜ್ಯದ ಮುಖ್ಯಮಂತ್ರಿ ಗಾದಿಗೆ ಎರಡು ಪಕ್ಷಗಳಿಂದ ಕೇವಲ ಇಬ್ಬರ ನಡುವೆ ಮಾತ್ರವೇ ಸ್ಪರ್ಧೆ ನಡೆಯುತ್ತಿದೆ. ಕಾಂಗ್ರೆಸ್ ಗೆದ್ದರೆ ಲಾಲ್‌ಥಾನ್‌ಹಾವ್ಲಾ ಮತ್ತು ಎಂಎನ್‌ಎಫ್ ಗೆದ್ದರೆ ಝೋರಾಂಥಾಂಗ ಎನ್ನುವಂತೆ ಇದುವರೆಗೆ ನಡೆದುಕೊಂಡು ಬಂದಿದೆ.
ಈ ಬಾರಿಯೂ ಎಂಎನ್‌ಎಫ್ ಅನ್ನು ಗೆಲ್ಲಿಸಿ ಮತ್ತೆ ಮುಖ್ಯಮಂತ್ರಿ ಆಗಬೇಕು ಎನ್ನುವುದು ಝೋರಾಂಥಾಂಗ ಅವರ ಆಸೆ. ಚುನಾವಣೆಯಲ್ಲಿ ಎಂಎನ್‌ಎಫ್ ಗೆದ್ದರೆ, ಝೋರಾಂಥಾಂಗ ಮತ್ತೆ ಮುಖ್ಯಮಂತ್ರಿ ಆಗುವುದು ನಿಶ್ಚಿತ. ಹಾಗೇನಾದರೂ ಆದರೆ, ರಾಜ್ಯದ ಮುಖ್ಯಮಂತ್ರಿಯಾಗಿ ಅತೀ ದೀರ್ಘ ಕಾಲ ಆಡಳಿತ ನಡೆಸಿದ ಮಿಜೋ ವ್ಯಕ್ತಿ ಎನ್ನುವ ಗೌರವಕ್ಕೆ ಅವರು ಪಾತ್ರರಾಗುತ್ತಾರೆ. ಎಂಎನ್‌ಎಫ್ ಚುನಾವಣೆಯಲ್ಲಿ ಸೋತರೆ, 80ರ ಗಡಿಯಲ್ಲಿರುವ ಝೋರಾಂಥಾಂಗ ವಯಸ್ಸಿನ ಕಾರಣವೊಡ್ಡಿ ರಾಜಕೀಯ ನಿವೃತ್ತಿ ಪಡೆಯುವ ಸಾಧ್ಯತೆ ಇದೆ.
ಈ ಬಾರಿ ಮಿಜೋರಾಂ ವಿಧಾನಸಭೆಯಲ್ಲಿ ಹೊಸ ಪಕ್ಷವೊಂದು ಅಡಿಯಿಟ್ಟಿದೆ. ಅದೇ ಝೋರಂ ಪೀಪಲ್ಸ್ ಮೂವ್‌ಮೆಂಟ್ (ಝೆಡ್‌ಪಿಎಂ). 2017ರಲ್ಲಿ ಮೂರು ಪಕ್ಷಗಳ ಮೈತ್ರಿಯಾಗಿ ಝೆಡ್‌ಪಿಎಂ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಎಂಎನ್‌ಎಫ್‌ಗೆ ಹೊರತಾದ ಸರ್ಕಾರವನ್ನು ರಚಿಸುವ ಗುರಿಯೊಂದಿಗೆ ಹುಟ್ಟಿಕೊಂಡಿತು. ಕಳೆದ ಚುಣಾವಣೆಯಲ್ಲಿ ಈ ಮೈತ್ರಿಕೂಟವು ಎಂಟು ಸ್ಥಾನಗಳನ್ನು ಗೆದಿದ್ದರೂ ಆಗಿನ್ನೂ ಅವರ ಕೂಟಕ್ಕೆ ರಾಜ್ಯ ಪಕ್ಷದ ಸ್ಥಾನಮಾನ ಸಿಕ್ಕಿರಲಿಲ್ಲ. ಹಾಗಾಗಿ ಅವರೆಲ್ಲ ಪಕ್ಷೇತರ ಶಾಸಕರಾಗಿ ಗುರುತಿಸಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ: ರಾಜಸ್ಥಾನ ಚುನಾವಣೆ | ಬಿಜೆಪಿಗೆ ಬಿಜೆಪಿಯೇ ಶತ್ರು; ಕಾಂಗ್ರೆಸ್‌ಗೂ ಅಂತಃಕಲಹದ ಅಂಕುಶ
ಈ ಬಾರಿಯ ಚುನಾವಣೆ ಎಂಎನ್‌ಎಫ್ ಮತ್ತು ಝೆಡ್‌ಪಿಎಂ ನಡುವಿನ ಸ್ಪರ್ಧೆ ಎಂದು ವಿಶ್ಲೇಷಿಸಲಾಗುತ್ತಿದೆ. ರಾಜ್ಯದ ಎರಡನೇ ಅತಿ ಮುಖ್ಯ ನಗರವಾದ ಲುಂಗ್ಲೇಯಿಯ ಮುನಿಸಿಪಲ್ ಕೌನ್ಸಿಲ್ ಚುನಾವಣೆಯಲ್ಲಿ ಝೆಡ್‌ಪಿಎಂ ಶೇ.49 ಸ್ಥಾನಗಳನ್ನು ಗೆಲ್ಲುವ ಮೂಲಕ ವಿಧಾನಸಭಾ ಚುನಾವಣೆಯಲ್ಲೂ ಅಚ್ಚರಿಯ ಫಲಿತಾಂಶದ ಮುನ್ಸೂಚನೆ ನೀಡಿದೆ. ಕಾಂಗ್ರೆಸ್‌ನ ಲಾಲ್‌ಥಾನ್‌ಹಾವ್ಲಾ ಮತ್ತು ಎಂಎನ್‌ಎಫ್‌ನ ಝೋರಾಂಥಾಂಗ ಅವರಿಗಿಂತ ಝೆಡ್‌ಪಿಎಂ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ಡುಹೋಮಾ ಹೊಸ ಮುಖವಾಗಿ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ. ಜೊತೆಗೆ ತಾವು ಅಧಿಕಾರಕ್ಕೆ ಬಂದರೆ, ನಿರಾಶ್ರಿತರಿಗೆ ರಕ್ಷಣೆ ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ. ಆದರೆ, ಬಿಜೆಪಿಯ ಮಾಜಿ ಮಿತ್ರಪಕ್ಷವಾದ ಝೋರಂ ನ್ಯಾಷನಲಿಸ್ಟ್ ಪಕ್ಷದ ಜೊತೆ ಝೆಡ್‌ಪಿಎಂ ಅಲ್ಪಕಾಲದ ಹೊಂದಾಣಿಕೆಯಲ್ಲಿತ್ತು. ಅದರಿಂದ ಕ್ರಿಶ್ಚಿಯನ್ನರೇ ಬಹುಸಂಖ್ಯಾತರಾದ ರಾಜ್ಯದಲ್ಲಿ ಝೆಡ್‌ಪಿಎಂಗೆ ಹಿನ್ನಡೆಯಾದರೂ ಆಗಬಹುದು ಎನ್ನಲಾಗುತ್ತಿದೆ.
ಕಾಂಗ್ರೆಸ್ ಕೂಡ ಮಿಜೋರಾಂ ಮೇಲೆ ವಿಶೇಷ ಗಮನವಿಟ್ಟು ಕೆಲಸ ಮಾಡುತ್ತಿದೆ. ರಾಹುಲ್ ಗಾಂಧಿ ಚುನಾವಣೆಯ ಹಿನ್ನೆಲೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡಿದ್ದಾರೆ. ಮಿಜೋರಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮಾಸಿಕ 2,000 ರೂಪಾಯಿ ವೃದ್ಧಾಪ್ಯ ವೇತನ, 750 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಹಾಗೂ ಉದ್ಯಮಿಗಳಿಗೆ ಬೆಂಬಲ ನೀಡುವುದಾಗಿ ರಾಹುಲ್ ಗಾಂಧಿ ಘೋಷಿಸಿದ್ದಾರೆ. ಜೊತೆಗೆ ಪ್ರಚಾರದಲ್ಲೂ ಕಾಂಗ್ರೆಸ್ ಮುಂದಿದೆ. ಮುಖ್ಯಮಂತ್ರಿ ಝೋರಾಂಥಾಂಗ ಇತ್ತೀಚೆಗೆ ಮಿಜೋರಾಂ ದೇಶದಲ್ಲಿಯೇ ಕಡಿಮೆ ಸಾಲ ಮಾಡಿರುವ ಎರಡನೇ ರಾಜ್ಯ ಎಂದಿದ್ದರು. ಅದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್, ಮಿಜೋರಾಂ ದೇಶದಲ್ಲಿಯೇ ಸಾಲದಲ್ಲಿ ಅಗ್ರಸ್ಥಾನದಲ್ಲಿದ್ದರೂ ಅದನ್ನು ಮುಚ್ಚಿಟ್ಟು ಮುಖ್ಯಮಂತ್ರಿ ಸುಳ್ಳು ಹೇಳುತ್ತಿದ್ದಾರೆ ಎಂದಿತ್ತು. ಆದರೂ ಮಿಜೋರಾಂನಲ್ಲಿ ಈ ಬಾರಿ ಕಾಂಗ್ರೆಸ್ ಗದ್ದುಗೆ ಹಿಡಿಯುವುದು ಅನುಮಾನ ಎನ್ನಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ: ಛತ್ತೀಸಗಢ ಚುನಾವಣೆ: ಮೇಲ್ಜಾತಿಗಳ ಪಕ್ಷವಾಗಿಯೇ ಉಳಿದ ಬಿಜೆಪಿ; ಕಾಂಗ್ರೆಸ್‌ಗೆ ಮತ್ತೊಮ್ಮೆ ಬಹುಮತ ಸಾಧ್ಯತೆ
ಇವೆಲ್ಲದರ ನಡುವೆ ಬಿಜೆಪಿ ಇತರ ರಾಜ್ಯಗಳಲ್ಲಿ ಅನುಸರಿಸಿದ ಕಾರ್ಯತಂತ್ರವನ್ನೇ ಇಲ್ಲೂ ಅನುಸರಿಸುತ್ತಿದೆ. ಇತರ ಪಕ್ಷಗಳ ಶಾಸಕರು ಮತ್ತು ನಾಯಕರನ್ನು ಪಕ್ಷಕ್ಕೆ ಸೆಳೆಯುವ ಕೆಲಸವನ್ನು ಮಾಡುತ್ತಿದೆ. ಕಳೆದ ಚುನಾವಣೆಯ ಮೊದಲು, ಲಾಲ್‌ಥಾನ್‌ಹಾವ್ಲಾ ಸರ್ಕಾರದ ಮಾಜಿ ಸಚಿವ ಬುಧಾ ಧನ್ ಚಕ್ಮಾ ಅವರನ್ನು ಕಾಂಗ್ರೆಸ್‌ನಿಂದ ಸೆಳೆಯುವಲ್ಲಿ ಅದು ಯಶಸ್ವಿಯಾಗಿತ್ತು. 2018ರಲ್ಲಿ ಮಿಜೋರಾಂ ವಿಧಾನಸಭೆಯಲ್ಲಿ ಬಿಜೆಪಿ ತನ್ನ ಖಾತೆ ತೆರೆಯಲು ಬುಧಾ ಧನ್ ಚಕ್ಮಾ ಕಾರಣರಾಗಿದ್ದರು. ಈ ಬಾರಿ ಅದು ತನ್ನ ಮಿತ್ರಪಕ್ಷವಾದ ಎಂಎನ್‌ಎಫ್‌ನಿಂದ ಇಬ್ಬರು ಶಾಸಕರನ್ನು ಸೆಳೆದುಕೊಂಡಿದೆ. ಹಾಲಿ ಸ್ಪೀಕರ್ ಎಲ್ ಸೈಲೋ ಅವರಿಗೆ ಎಂಎನ್‌ಎಫ್ ಚಾಲ್ಫಿಲ್ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿತ್ತು. ತಕ್ಷಣವೇ ಅಕ್ಟೋಬರ್ 11ರಂದು ಅವರು ಬಿಜೆಪಿ ಸೇರಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಮತ್ತೊಬ್ಬ ಎಂಎನ್‌ಎಫ್ ನಾಯಕ ಕೆ ಬೀಚುವಾ ಕೂಡ ಬಿಜೆಪಿ ಸೇರಿದ್ದಾರೆ. ಈ ಬಾರಿ ಮಿಜೋರಾಂನಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತದೆ. ಅಂಥ ಸಂದರ್ಭದಲ್ಲಿ ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಬೆರಳೆಣಿಕೆಯಷ್ಟು ಶಾಸಕರಿದ್ದರೂ ರಾಜ್ಯಪಾಲರ ಸಹಕಾರದೊಂದಿಗೆ ಅಧಿಕಾರ ಹಿಡಿದಂತೆ ಮಿಜೋರಾಂನಲ್ಲೂ ಮಾಡಬಹುದು ಎನ್ನುವುದು ಬಿಜೆಪಿಯ ಕಾರ್ಯತಂತ್ರವಾಗಿದೆ.
ಮಿಜೋರಾಂ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನೂ ಕಣಕ್ಕಿಳಿಸುವುದಾಗಿ ಆಮ್ ಆದ್ಮಿ ಪಕ್ಷ ಘೋಷಿಸಿದೆ. ತಮ್ಮ ಪಕ್ಷವನ್ನು ರಾಷ್ಟ್ರೀಯ ಪಕ್ಷ ಎಂದು ಘೋಷಣೆಯಾದ ನಂತರ ಆಪ್ ಹಲವು ರಾಜ್ಯಗಳ ಚುನಾವಣೆಗಳಲ್ಲಿ ತಮ್ಮ ಉಮೇದುವಾರರನ್ನು ನಿಲ್ಲಿಸುತ್ತಿದೆ.