ಈಗಾಗಲೇ, ದಕ್ಷಿಣ ರಾಜ್ಯಗಳಲ್ಲಿ ರಾಷ್ಟ್ರೀಯ ಕಾಂಗ್ರೆಸ್ ನಾಯಕರು – ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ – ಸ್ಪರ್ಧಿಸಿದ್ದಾರೆ ಮತ್ತು ಗೆದ್ದಿದ್ದಾರೆ. ಆದರೆ, ಮೋದಿಗೆ ಈ ಸ್ಪರ್ಧೆ ಸಾಧ್ಯವೇ?
ಕಳೆದ ವಾರ, ತಮಿಳುನಾಡಿನ ತಿರುಚಿರಪ್ಪಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು. ಅವರ ಭೇಟಿಯ ಬಳಿಕ ಮೋದಿ ಅವರು ಲೋಕಸಭಾ ಚುನಾವಣಗೆ ದಕ್ಷಿಣ ರಾಜ್ಯಗಳ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ದಿಸಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಅದರಲ್ಲು ಅವರು ತಮಿಳುನಾಡಿನಲ್ಲಿ ಸ್ಪರ್ಧಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬ ಮಾತುಗಳೂ ಕೇಳಿಬಂದಿವೆ.
“ತಮಿಳುನಾಡಿನಲ್ಲಿ ಮೋದಿ ಸ್ಪರ್ಧಿಸಿದರೆ, ಅವರು ಗೆಲ್ಲುವ ಭರವಸೆ ಇದೆ. ತಮಿಳುನಾಡಿನ ಜನರು ಭಾವುಕತೆಗೆ ಸ್ಪಂದಿಸುತ್ತಾರೆ. ಪ್ರಧಾನಮಂತ್ರಿ ತಮ್ಮ ರಾಜ್ಯವನ್ನು ತಮ್ಮ ರಾಜಕೀಯ ನೆಲೆಯಾಗಿ ಮಾಡಿಕೊಳ್ಳಲು ಬರುತ್ತಾರೆ ಎಂಬುದಕ್ಕೆ ಜನರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ” ಎಂದು ತಮಿಳುನಾಡಿದ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.
“ಮೋದಿ ತಮಿಳುನಾಡಿನಿಂದ ಸ್ಪರ್ಧಿಸಿದರೆ ತುಂಬಾ ಒಳ್ಳೆಯದು. ಭಾರತದಲ್ಲಿ ಇಂದು ಒಬ್ಬನೇ ನಾಯಕ ನರೇಂದ್ರ ಮೋದಿ ಎಂದು ಜನರಿಗೆ ತಿಳಿದಿದೆ. ಅವರು ತಮಿಳುನಾಡಿನಿಂದ ಸ್ಪರ್ಧಿಸುವುದಿದ್ದರೆ, ನಾವು ಸ್ವಾಗತಿಸುತ್ತೇವೆ. ಇದು ನಮಗೆ ದೊಡ್ಡ ಜಯವಾಗಲಿದೆ” ಎಂದು ತಮಿಳುನಾಡಿನ ಬಿಜೆಪಿ ಉಪಾಧ್ಯಕ್ಷ ನಾರಾಯಣನ್ ತಿರುಪತಿ ಹೇಳಿದ್ದಾರೆ.
“ಆದರೆ, ಅವರ ಸ್ಪರ್ಧೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಮಾಧ್ಯಮಗಳ ಊಹಾಪೋಹಗಳು ಮಾತ್ರ ಹರಿದಾಡುತ್ತಿವೆ” ಎಂದು ಅವರು ಹೇಳಿದ್ದಾರೆ.
ಮೋದಿಗೆ ತಮಿಳುನಾಡು ಏಕೆ?
39 ಸಂಸತ್ ಸ್ಥಾನಗಳನ್ನು ಹೊಂದಿರುವ ತಮಿಳುನಾಡು, ಪಾರ್ಲಿಮೆಂಟ್ ಸದಸ್ಯರಲ್ಲಿ ದೇಶದ ನಾಲ್ಕನೇ ದೊಡ್ಡ ರಾಜ್ಯವಾಗಿದೆ. ಮೊದಲ ಸ್ಥಾನಗಳಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ಇವೆ. ಆದರೆ, ತಮಿಳುನಾಡು ಬಿಜೆಪಿಗೆ ಅತೀ ದುರ್ಬಲ ರಾಜ್ಯವಾಗಿದೆ. ಅಲ್ಲಿ, ಬಿಜೆಪಿ ತನ್ನ ನೆಲೆ ಕಂಡುಕೊಳ್ಳಲು ತಿಣುಕಾಡುತ್ತಿದೆ.
ಕಳೆದ 20 ವರ್ಷಗಳಲ್ಲಿ, ಬಿಜೆಪಿ ತಮಿಳುನಾಡಿನಲ್ಲಿ ಕೇವಲ ಒಂದು ಲೋಕಸಭಾ ಸ್ಥಾನವನ್ನು ಮಾತ್ರ ಗೆದ್ದಿದೆ. ಅದು, 2014ರ ಲೋಕಸಭಾ ಚುನಾವಣೆಯಲ್ಲಿ ಕನ್ಯಾಕುಮಾರಿಯಲ್ಲಿ ಗೆದ್ದಿತ್ತು. ಕಳೆದ ಚುನಾವಣೆಯಲ್ಲಿ (2019) ಆ ಸ್ಥಾನವನ್ನೂ ಕಳೆದುಕೊಂಡು, ಈಗ ಶೂನ್ಯ ಸಾಧನೆಯಲ್ಲಿದೆ. ಅದನ್ನು ಮರಳಿ ಪಡೆಯುವುದು ಬಿಜೆಪಿಗೆ ಸುಲಭವಾಗಿಲ್ಲ.
ಅಲ್ಲದೆ, ಇಂಡಿಯಾ ಮೈತ್ರಿಕೂಟ ಕೂಡ ಪ್ರಬಲವಾಗಿದೆ. 2019ರಲ್ಲಿ ಡಿಎಂಕೆ-ಕಾಂಗ್ರೆಸ್-ಎಡ ಪಕ್ಷಗಳ ಮೈತ್ರಿಯು 39 ಸ್ಥಾನಗಳ ಪೈಕಿ 38 ಸ್ಥಾನಗಳನ್ನು ಗೆದ್ದಿತ್ತು. ಮತ್ತೊಂದು ಪ್ರಬಲ ಪಕ್ಷ, ಬಿಜೆಪಿಯ ಮಿತ್ರ ಪಕ್ಷ ಎಐಎಡಿಎಂಕೆ ಕೇವಲ 1 ಸ್ಥಾನವನ್ನು ಗೆದ್ದಿತ್ತು. ತಮ್ಮ ವಿರೋಧಿ ಮೈತ್ರಿ ಪಡೆಯ ಸ್ಥಾನಗಳನ್ನು ಈ ಬಾರಿ ಕಡಿಮೆ ಮಾಡಬೇಕು. ತನ್ನ ಖಾತೆಯನ್ನು ಮತ್ತೊಮ್ಮೆ ತೆರೆಯಬೇಕೆಂಬ ಉತ್ಸಾಹದಲ್ಲಿ ಬಿಜೆಪಿ ಇದೆ.
ಶೂನ್ಯ ಸಾಧನೆಯ ನಡುವೆಯೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಆಶಾವಾದಿಯಾಗಿದ್ದಾರೆ. “ಬಿಜೆಪಿ ತಮಿಳುನಾಡಿನಲ್ಲಿ ಬಲವಾದ ಉಪಸ್ಥಿತಿಯನ್ನು ಹೊಂದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅನೇಕರಿಗೆ ಆಶ್ಚರ್ಯವಾಗುವಂತೆ ಸಾಧನೆ ಮಾಡುತ್ತೇವೆ” ಎಂದು ಅವರು ಹೇಳುತ್ತಾರೆ.
ಇಂತಹ ಸನ್ನಿವೇಶದಲ್ಲಿ ಮೋದಿ ಅವರು ತಮಿಳುನಾಡಿನಿಂದ ಸ್ಪರ್ಧಿಸಿದರೆ, ತಮಿಳುನಾಡು ಮಾತ್ರವಲ್ಲದೆ, ನೆರೆಯ ರಾಜ್ಯಗಳಲ್ಲಿಯೂ ಬಿಜೆಪಿ ಕಾರ್ಯಕರ್ತರಲ್ಲಿ ಸ್ಥೈರ್ಯ ಹೆಚ್ಚುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಕಾರ್ಯರೂಪಕ್ಕೆ ಬರುತ್ತದೆಯೋ, ಇಲ್ಲವೋ ಎಂಬುದನ್ನು ಲೆಕ್ಕಿಸದ ಸ್ಥಳೀಯ ನಾಯಕರು, ಮೋದಿ ರಾಜ್ಯಕ್ಕೆ ಬರುವುದು ಒಳ್ಳೆಯದು ಎನ್ನುತ್ತಿದ್ದಾರೆ.
ಮೂರು ಕ್ಷೇತ್ರಗಳ ಸುತ್ತ ಚರ್ಚೆ
ಮೋದಿ ಅವರು ತಮಿಳುನಾಡಿಗೆ ಬಂದರೆ, ಕೊಯಮತ್ತೂರು, ರಾಮನಾಥಪುರಂ ಅಥವಾ ಕನ್ಯಾಕುಮಾರಿ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಬಹುದು. ಅದೂ, ಉತ್ತರ ಪ್ರದೇಶದ ವಾರಣಾಸಿ ಅಥವಾ ಅಯೋಧ್ಯೆಯ ಜೊತೆಗೆ ಇಲ್ಲೂ ಸ್ಪರ್ಧಿಸುತ್ತಾರೆ ಎಂಬ ಚರ್ಚೆಗಳಿವೆ.
ಮೋದಿ ಅವರು ಪ್ರಸ್ತುತ ವಾರಣಾಸಿಯ ಸಂಸದರಾಗಿದ್ದಾರೆ. ಆದರೆ, ಇದೇ ಜನವರಿ 22ರಂದು ರಾಮಮಂದಿರ ಉದ್ಘಾಟನೆಯಾಗಲಿದ್ದು, ಅದರ ಲಾಭವನ್ನು ಪಡೆಯಲು ಅವರು ಮುಂದಿನ ಚುನಾವಣೆಗೆ ಅಯೋಧ್ಯೆಯಿಂದ ಸ್ಪರ್ಧಿಸುವ ಸಾಧ್ಯತೆಗಳೂ ಇವೆ ಎಂಬ ಮಾತುಗಳು ಹರಿದಾಡುತ್ತಿವೆ.
ತಮಿಳುನಾಡಿನಲ್ಲಿ ಕೊಯಮತ್ತೂರು, ರಾಮನಾಥಪುರಂ ಮತ್ತು ಕನ್ಯಾಕುಮಾರಿ ಮಾತ್ರ ಬಿಜೆಪಿಗೆ ಒಂದಷ್ಟು ನೆಲೆ ಇರುವ ಕ್ಷೇತ್ರಗಳು. 2014ರಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳದೆಯೂ ಕನ್ಯಾಕುಮಾರಿಯಲ್ಲಿ ಬಿಜೆಪಿ ಗೆದ್ದಿತ್ತು.
ರಾಮನಾಥಪುರಂ ಕ್ಷೇತ್ರದಲ್ಲಿ ಪ್ರಸ್ತುತ ಭಾರತೀಯ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್)ನ ನವಾಜ್ ಕನಿ ಸಂಸದರಾಗಿದ್ದಾರೆ. ಈ ಕ್ಷೇತ್ರವು ಗಮನಾರ್ಹ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಅಲ್ಲದೆ, ದೇವಾಲಯದ ಪಟ್ಟಣವಾದ ರಾಮೇಶ್ವರಂ ಕೂಡ ಇದೇ ಕ್ಷೇತ್ರದಲ್ಲಿದೆ. 2019ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಎರಡನೇ ಸ್ಥಾನ ಪಡೆದುಕೊಂಡಿತ್ತು. ಮುಂದಿನ ಚುನಾವಣೆಯಲ್ಲಿ ಪಕ್ಷವು ಮತ ದೃವೀಕರಿಸಲು ಯತ್ನಿಸಬಹುದು ಎಂಬ ಮಾತುಗಳಿವೆ.
ಮಾತ್ರವಲ್ಲದೆ, ರಾಮೇಶ್ವರಂ ಹಿಂದುಗಳ ಪ್ರಮುಖ ಯಾತ್ರಾ ತಾಣಗಳಲ್ಲಿ ಒಂದು ದೇಶದ 12 ಜ್ಯೋತಿರ್ಲಿಂಗಗಳಲ್ಲಿ (ಶಿವನ ಪ್ರಮುಖ ದೇವಾಲಯಗಳು) ರಾಮೇಶ್ವರವೂ ಕೂಡ ಒಂದಾಗಿದೆ. ಇದರ ಜೊತೆಗೆ, ಲಂಕೆಯಲ್ಲಿ ರಾವಣನನ್ನು ಸೋಲಿಸಿದ ರಾಮ, ರಾಮೇಶ್ವರಕ್ಕೆ ಬಂದು ಶಿವನಿಗೆ ಪ್ರಾರ್ಥನೆ ಸಲ್ಲಿಸಿದ್ದ ಎಂಬ ಪುರಾಣವೂ ಇದೆ. ಹೀಗಾಗಿ, ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ರಾಮಮಂದಿರದ ಜೊತೆಗೆ ರಾಮೇಶ್ವರವನ್ನೂ ಬಿಜೆಪಿಗರು ತಳುಕು ಹಾಕಿಕೊಂಡು ಪ್ರಚಾರ ಪಡೆಯಬಹುದು ಎಂದು ಹೇಳಲಾಗುತ್ತಿದೆ.
ಇನ್ನು, ಕೊಯಮತ್ತೂರಿನಲ್ಲಿ ಬಿಜೆಪಿ ಐತಿಹಾಸಿಕವಾಗಿ ಒಂದಷ್ಟು ನೆಲೆಯನ್ನು ಹೊಂದಿದೆ. ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಇದು ಶೇ.30 ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದೆ. ಅಲ್ಲದೆ, 1990ರ ದಶಕದಲ್ಲಿ ಕೋಮು ಧ್ರುವೀಕರಣದ ಇತಿಹಾಸವೂ ಕೊಯಮತ್ತೂರು ಹೊಂದಿದೆ. ಕೊಯಮತ್ತೂರಿನಲ್ಲಿ 1998ರಲ್ಲಿ ನಡೆದ ಸ್ಪೋಟಗಳು ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ಗುರಿಯಾಗಿದ್ದವು ಎಂದು ಆರೋಪಿಸಲಾಗಿದೆ. ಆಗ ಮೋದಿ ಅವರು ಅಡ್ವಾಣಿ ಜೊತೆಗಿದ್ದ ಬಿಜೆಪಿ ಕಾರ್ಯಕರ್ತರಾಗಿದ್ದರು.
“ತಮಿಳುನಾಡಿನಲ್ಲಿ ಬಿಜೆಪಿಗೆ ಒಂದೆರಡು ಕ್ಷೇತ್ರಗಳಿವೆ. ಅವರು ರಾಮನಾಥಪುರಂ, ಕೊಯಮತ್ತೂರು ಮತ್ತು ಕನ್ಯಾಕುಮರಿಯಲ್ಲಿ ಒಂದಷ್ಟು ಮತದಾರರನ್ನು ಹೊಂದಿದ್ದಾರೆ. ಮೋದಿ ಅವರು ರಾಮನಾಥಪುರಂನಿಂದ ಸ್ಪರ್ಧಿಸಿದರೆ, ಅವರು ಸುತ್ತಮುತ್ತಲಿನ ಪ್ರದೇಶಗಳ ಮೇಲೂ ಪರಿಣಾಮ ಬೀರಬಹುದು” ಎಂದು ಹಿರಿಯ ಪತ್ರಕರ್ತ ಸುಮತ್ ರಾಮನ್ ಹೇಳುತ್ತಾರೆ.
ಬಿಜೆಪಿಗೆ ಇರುವ ಸವಾಲುಗಳೇನು?
ಈಗಾಗಲೇ, ದಕ್ಷಿಣ ರಾಜ್ಯಗಳಲ್ಲಿ ರಾಷ್ಟ್ರೀಯ ಕಾಂಗ್ರೆಸ್ ನಾಯಕರು- ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ– ಸ್ಪರ್ಧಿಸಿದ್ದಾರೆ ಮತ್ತು ಗೆದ್ದಿದ್ದಾರೆ. ಅವರು ದಕ್ಷಿಣದಲ್ಲಿ ಸ್ಪರ್ಧಿಸುವಾಗ, ಅವರ ಪಕ್ಷ ಉತ್ತಮ ನೆಲೆ ಮತ್ತು ಮತದಾರರನ್ನು ಹೊಂದಿತ್ತು. ಆದರೆ, ಮೋದಿ ಸ್ಪರ್ಧಿಸಲು ಮೊದಲಿಗೆ ನೆಲೆಯದ್ದೇ ಸವಾಲಾಗಿದೆ. ಬಿಜೆಪಿಯ ಮತ ಪಾಲು ಒಂದು ಅಂಕೆಯಲ್ಲಿದೆ. ಇದು ಪಕ್ಷಕ್ಕೆ ಸಮಸ್ಯೆಯನ್ನುಂಟುಮಾಡುತ್ತದೆ.
“ತಮಿಳುನಾಡು ವಿಭಿನ್ನವಾಗಿದೆ ಮತ್ತು ಬಿಜೆಪಿಗೆ ಇಲ್ಲಿ ಅತಿಕ್ರಮಣ ಮಾಡಲು ಬಹಳ ಕಷ್ಟವಾಗುತ್ತದೆ. ರಾಮೇಶ್ವರಂ ರಾಮನಾಥಪುರಂ ಕ್ಷೇತ್ರದಲ್ಲಿರುವ ಕಾರಣ ಪ್ರಧಾನಮಂತ್ರಿ ರಾಮನಾಥಪುರಂನಿಂದ ಸ್ಪರ್ಧಿಸಬೇಕೆಂದು ಬಿಜೆಪಿ ಬಯಸಿದೆ. ಆದರೆ, ಅಲ್ಲಿಯೂ ದೊಡ್ಡ ಸವಾಲೇ ಇದೆ” ಎಂದು ಹಿರಿಯ ಪತ್ರಕರ್ತೆ ಕವಿತಾ ಮುರಳಿಧರನ್ ಹೇಳುತ್ತಾರೆ.
“ತಮಿಳುನಾಡು ಇನ್ನೂ ಬಿಜೆಪಿಗೆ ಮತ ನೀಡಲು ಹಿಂಜರಿಯುತ್ತಿದೆ. ಆದರೆ, ಪಕ್ಷವು ಸಣ್ಣ ದೇವಾಲಯಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಮೂಲಕ ರಾಜ್ಯವನ್ನು ಪ್ರಭಾವಿಸಲು ಯತ್ನಿಸುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳು ಇತ್ಯಾದಿಗಳನ್ನು ಆಯೋಜಿಸುವ ಮೂಲಕ ಆರ್‌ಎಸ್‌ಎಸ್ ಇಲ್ಲಿ ಬಹಳ ಶ್ರಮಿಸುತ್ತಿದೆ” ಎಂದು ಅವರು ಹೇಳಿದ್ದಾರೆ.
ಕವಿತಾ ಪ್ರಕಾರ, ಬಿಜೆಪಿಯೊಂದಿಗೆ ಕೆಲ ವಿವಾದಗಳು ನಡೆದಿವೆ– ನೀಟ್, ರಾಜ್ಯಪಾಲ ಮತ್ತು ಸರ್ಕಾರದ ಜಗಳ ಹಾಗೂ ಫೆಡರಲಿಸಂನ ಸಮಸ್ಯೆಗಳು -ಇವುಗಳು ಬಿಜೆಪಿಯನ್ನು ರಾಜ್ಯದಿಂದ ಹೊರಗಿಡುವ ಸಾಧ್ಯತೆಯಿದೆ. ಜೊತೆಗೆ, ತಮಿಳುನಾಡಿನ ದ್ರಾವಿಡ ರಾಜಕೀಯ ನೆಲೆಯು ಬಿಜೆಪಿಯನ್ನು ಹೊರದೂಡಲು ಮತ್ತೊಂದು ಅಂಶವಾಗಿದೆ.
ಕೆ ಅಣ್ಣಾಮಲೈ ಅವರ ನೇತೃತ್ವದಲ್ಲಿ ಪಕ್ಷವು ದ್ರಾವಿಡ ರಾಜಕೀಯಕ್ಕೆ ಸೈದ್ಧಾಂತಿಕ ಪ್ರತಿರೋಧವಾಗಿ ತನ್ನನ್ನು ತಾನು ಇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅಂತೆಯೇ, ಅದು ಎಐಎಡಿಎಂಕೆ ಜೊತೆಗೂ ಅಂತರ ಕಾಯ್ದುಕೊಳ್ಳುತ್ತಿದೆ. ದ್ರಾವಿಡ ರಾಜಕೀಯವನ್ನು ಭೇದಿಸಲು ಜಾತಿ ದ್ವೇಷ ಮತ್ತು ಭ್ರಷ್ಟಾಚಾರವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ. ಈ ಅಂಶಗಳನ್ನು ಬಳಸುತ್ತಿರುವ ಏಕೈಕ ಪಕ್ಷ ಬಿಜೆಪಿಯಾಗಿದೆ ಎಂದು ಕೆಲ ರಾಜಕೀಯ ತಜ್ಞರು ಹೇಳುತ್ತಾರೆ.
ಮೋದಿ ಅವರು ತಮಿಳುನಾಡಿನಿಂದ ಸ್ಪರ್ಧಿಸಿದರೆ, ಅವರು ಎದುರಿಸುವ ಮತ್ತೊಂದು ಸವಾಲು ಆಡಳಿತಾರೂಢ ಡಿಎಂಕೆ. ಮೋದಿ ವಿರುದ್ಧ ಡಿಎಂಕೆ ತನ್ನ ಪ್ರಬಲ ನಾಯಕ ಅಥವಾ ರಾಜ್ಯ ಸಚಿವರನ್ನು ಸ್ಪರ್ಧೆಗೆ ಇಳಿಸಬಹುದು.
ಮೋದಿಗೆ ಈ ಸ್ಪರ್ಧೆ ಎಷ್ಟು ಸಾಧ್ಯ?
ಹೊಸ ಸಂಸತ್ ಭವನದಲ್ಲಿ ತಮಿಳುನಾಡು ಮೂಲದ ಸೆಂಗೋಲ್‌ಅನ್ನು ಪ್ರತಿಷ್ಠಾಪಿಸಲು ಒತ್ತು ನೀಡಿದ್ದರಿಂದ ಹಿಡಿದು ಮೋದಿ ಅವರು ಪದೇ-ಪದೇ ತಮಿಳುನಾಡಿಗೆ ಭೇಟಿ ನೀಡುತ್ತಲೇ ಇದ್ದಾರೆ. ಡಿಎಂಕೆ ಜೊತೆ ಹೆಚ್ಚುತ್ತಿರುವ ಸೈದ್ಧಾಂತಿಕ ಹೋರಾಟಗಳ ಮೂಲಕ ಬಿಜೆಪಿ ನೆಲೆ ಪಡೆಯಲು ಯತ್ನಿಸುತ್ತಿದೆ. ಆದರೆ, ಅದು ಸಾಧ್ಯವಾಗದಿದ್ದರೆ, ಮೋದಿ ಗೆಲ್ಲಬಹುದು ಎಂಬ ಖಚಿತತೆ ಸಿಗದಿದ್ದರೆ, ಮೋದಿ ಅವರು ತಮಿಳುನಾಡಿನತ್ತ ಮುಖ ಮಾಡದೇ ಇರಬಹುದು.
ತಮಿಳುನಾಡಿನಲ್ಲಿ ಬಿಜೆಪಿ ಅತಿಕ್ರಮಿಸಲು ಪಕ್ಷಕ್ಕೆ ಮೈತ್ರಿ ಪಕ್ಷದ ಸಹಾಯ ಬೇಕಾಗುತ್ತದೆ. ಆದರೆ, ಈಗ ಬಿಜೆಪಿ ಜೊತೆಗಿನ ಸಂಬಂಧವನ್ನು ಎಐಎಡಿಎಂಕೆ ಕಡಿದುಕೊಂಡಿದೆ. ಹೀಗಾಗಿ, ಮಿತ್ರ ಪಕ್ಷದ ನೆರವು ಕೂಡ ದೊರೆಯುವುದು ದೂರದ ಮಾತಾಗಿದೆ.
ಎಐಎಡಿಎಂಕೆ ಪಾತ್ರ
“ಎಐಎಡಿಎಂಕೆ ಇಲ್ಲದೆ, ಬಿಜೆಪಿ ಸ್ವತಂತ್ರವಾಗಿ ಹೋರಾಡಲು ಸಾಧ್ಯವಿಲ್ಲ. ಅದು ಬಿಜೆಪಿಗೆ ದೊಡ್ಡ ಸವಾಲು. ಎಐಎಡಿಎಂಕೆ-ಬಿಜೆಪಿ ಮೈತ್ರಿಯನ್ನು ಮುರಿಯುವುದು ಕೆಟ್ಟ ಆಲೋಚನೆಯಾಗಿತ್ತು. ಈಗ, ಒಪಿಎಸ್ ರೀತಿಯ ಕೆಲವು ಸಣ್ಣ ಪಕ್ಷಗಳನ್ನು ಬಿಜೆಪಿ ಒಳಗೊಂಡಿದೆ. ಆದರೆ, ಮೋದಿಯ ಸ್ಪರ್ಧೆಯಂತೆ ಅವರು ದೊಡ್ಡ ಸಾಹಸಕ್ಕೆ ಮುಂದಾಗದ ಹೊರತು ಬಿಜೆಪಿ ತಮಿಳುನಾಡಿನಲ್ಲಿ ಏನನ್ನೂ ಗೆಲ್ಲಲು ಸಾಧ್ಯವಾಗದು” ಎಂದು ಪತ್ರಕರ್ತ ಸುಮಂತ್ ರಾಮನ್ ಹೇಳುತ್ತಾರೆ.
“ಚುನಾವಣೆಗಳನ್ನು ಘೋಷಿಸಲು ಹೆಚ್ಚಿನ ಸಮಯವಿದೆ. ಹಾಗಿದ್ದರೂ, ತಮಿಳುನಾಡಿನ ಬಿಜೆಪಿ ಚುನಾವಣೆಗಳನ್ನು ಎದುರಿಸಲು ಸಿದ್ಧವಾಗಿದೆ. ಬೂತ್ ಸಮಿತಿಗಳ ರಚನೆ ಬಹುತೇಕ ಮುಗಿದಿದೆ. ನಮ್ಮ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರನ್ನು ಮತ್ತಷ್ಟು ಹುರಿದುಂಬಿಸಲು ಕೇಂದ್ರ ಸರ್ಕಾರದ ಉತ್ತಮ ಯೋಜನೆಗಳಿಂದ ಪ್ರೇರೇಪಿಸಲಾಗುತ್ತದೆ” ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.
ಮೂಲ: ದಿ ಕ್ವಿಂಟ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ