- ಆರ್‌ಟಿಐ ಮೂಲಕ ಪ್ರಶ್ನೆ ಕೇಳಿದ್ದ ಪುಣೆ ಮೂಲದ ಪ್ರಫುಲ್ ಪಿ ಸರ್ದಾ
- ನೆಟ್‌ಫ್ಲಿಕ್ಸ್‌ಗಾಗಿ ಶೂಟಿಂಗ್ ಮಾಡುತ್ತಿದ್ದದ್ದು ಸರ್ಕಾರಿ ಕೆಲಸವೇ ಎಂದು ಕೇಳಿದ ನೆಟ್ಟಿಗರು
ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಎಷ್ಟು ದಿನ ರಜೆ ತೆಗೆದುಕೊಂಡಿದ್ದಾರೆ ಎಂದು ಪ್ರಶ್ನಿಸಿ ಆರ್‌ಟಿಐ ಮೂಲಕ ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಪ್ರಧಾನಿ ಕಚೇರಿ, 2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಯಾವುದೇ ರಜೆ ತೆಗೆದುಕೊಂಡಿಲ್ಲ ಎಂದು ಉತ್ತರಿಸಿದೆ.
ಪುಣೆ ಮೂಲದ ಪ್ರಫುಲ್ ಪಿ ಸರ್ದಾ ಎಂಬವರು, ಆರ್‌ಟಿಐ ಮೂಲಕ ಕೇಳಿದ್ದ ಪ್ರಶ್ನೆಗಳಿಗೆ ಪ್ರಧಾನಿ ಕಾರ್ಯಾಲಯ ಉತ್ತರಿಸಿದ್ದು, “ಪ್ರಧಾನಿ ಮೋದಿಯವರು 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಯಾವುದೇ ರಜೆ ತೆಗೆದುಕೊಂಡಿಲ್ಲ. ಅಲ್ಲದೇ, ಕಳೆದ 9 ವರ್ಷಗಳಲ್ಲಿ ದೇಶ -ವಿದೇಶಗಳಲ್ಲಿ 3000ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ” ಎಂದು ಮಾಹಿತಿ ನೀಡಿದೆ.
ಕಳೆದ ಜುಲೈ 31, 2023ರಂದು ಈ ಉತ್ತರವನ್ನು ನೀಡಿದ್ದು, ಇದಕ್ಕೂ ಮುನ್ನ 2016ರಲ್ಲೂ ಪ್ರಧಾನಿ ಮೋದಿಗೆ ಸಂಬಂಧಿಸಿದಂತೆ ಆರ್‌ಟಿಐ ಮೂಲಕ ಪ್ರಧಾನಿ ಕಚೇರಿಯಿಂದ ಉತ್ತರ ಕೇಳಲಾಗಿತ್ತು. ಆಗಲೂ ಇದುವರೆಗೂ ರಜೆ ತೆಗೆದುಕೊಂಡಿಲ್ಲ ಎಂಬ ಉತ್ತರವೇ ಬಂದಿತ್ತು.
ಈ ಆರ್‌ಟಿಐ ಪ್ರಶ್ನೆ ಹಾಗೂ ಅದರ ಉತ್ತರದ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಲವು ಬಿಜೆಪಿ ನಾಯಕರು ಇದನ್ನು ಟ್ವೀಟ್ ಮಾಡಿ ‘ನಮ್ಮ ಪ್ರಧಾನಿ, ನಮ್ಮ ಹೆಮ್ಮೆ’ ಎಂದು ಬರೆದುಕೊಂಡಿದ್ದಾರೆ.
ಆದರೆ ಈ ನಡುವೆ ಪ್ರಧಾನಿ ಕಚೇರಿ ನೀಡಿರುವ ಮಾಹಿತಿಯನ್ನು ಪ್ರಶ್ನಿಸಿರುವ ಹಲವು ನೆಟ್ಟಿಗರು, ಇದರಲ್ಲಿ ಬಿಜೆಪಿ ಪಕ್ಷದ ಕಾರ್ಯಕ್ರಮ ಎಷ್ಟು ಎಂದು ತಿಳಿಸಿದೆಯೇ ಎಂದು ಅಣಕವಾಡಿದ್ದಾರೆ.
ಅಲ್ಲದೇ, 2019ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾದ ‘ಮ್ಯಾನ್ Vs ವೈಲ್ಡ್’ ವೆಬ್ ಸೀರೀಸ್‌ಗಾಗಿ ಬೀಯರ್ ಗ್ರಿಲ್ಸ್ ಜೊತೆಗೆ ಶೂಟಿಂಗ್ ನಡೆಸಿದ್ದಾರಲ್ಲವೇ. ಅದೇನು ಸರ್ಕಾರಿ ಕೆಲಸವೇ? ಎಂದು ಹಲವರು ವಿಡಿಯೋ ಹಂಚಿಕೊಂಡು ಪ್ರಶ್ನಿಸಿದ್ದಾರೆ.
ಸುಳ್ಳಿಗೂ ಒಂದು ಮಿತಿಬೇಡವೇ? ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದೆಲ್ಲವೂ ಸರ್ಕಾರಿ ಕೆಲಸವೇ? ಇವೆಲ್ಲವೂ ರಜೆಯ ವ್ಯಾಪ್ತಿಗೆ ಬರುವುದಿಲ್ಲವೇ? ಎಂದು ಹಲವರು ಪ್ರಶ್ನಿಸಿದ್ದಾರೆ.