ಕೇಂದ್ರದ ತನಿಖಾ ಸಂಸ್ಥೆಗಳು ಮೋದಿ ಸರ್ಕಾರದ ಕೈಗೊಂಬೆಗಳಾಗಿವೆ. ಇ.ಡಿ, ಸಿಬಿಐ, ಐ.ಟಿ – ತನಿಖಾ ಸಂಸ್ಥೆಗಳು ಮೋದಿ, ಅಮಿತ್ ಶಾ ಅಣತಿಯಲ್ಲಿ ಕೆಲಸ ಮಾಡುತ್ತಿವೆ ಎಂಬ ಆರೋಪ ಇವತ್ತು ನಿನ್ನೆಯದಲ್ಲ. ಇತ್ತೀಚೆಗೆ, ಸ್ವತಃ ಸುಪ್ರೀಂ ಕೋರ್ಟ್ ಸಿಬಿಐಅನ್ನು ಪಂಜರದ ಗಿಳಿ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ, ಇ.ಡಿ ತನಿಖೆಯ ದುರುದ್ದೇಶ ಬಟಾಬಯಲಾಗಿದೆ. ಮುಡಾ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಇ,ಡಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಮುಡಾ ಪ್ರಕರಣದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ಇಡಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾವರ್ತಿ ಮತ್ತು ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ವಿರುದ್ಧ ಪ್ರಕರಣ ದಾಖಿಸಿತ್ತು. ಇಬ್ಬರಿಗೂ ನೋಟಿಸ್ ನೀಡಿ, ತನಿಖೆ ಆರಂಭಿಸಿತ್ತು.
ಇಡಿ ದಾಖಲಿಸಿರುವ ಇಸಿಐಆರ್ ಮತ್ತು ಸಮನ್ಸ್ ರದ್ದುಪಡಿಸಬೇಕೆಂದು ಕೋರಿ ಪಾರ್ವತಿ ಮತ್ತು ಬೈರತಿ ಸುರೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ, ಪ್ರಕರಣದಲ್ಲಿ ಯಾವುದೇ ಅಕ್ರಮ ಹಣ ವರ್ಗಾವಣೆ ನಡೆದಿಲ್ಲ ಎಂಬುದನ್ನು ಗಮನಿಸಿ ಪ್ರಕರಣವನ್ನು ರದ್ದುಪಡಿಸಿತ್ತು.
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಇಡಿ ಮತ್ತೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿರುವ ವಿಸ್ತೃತ ಪೀಠವು ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿದಿದೆ. “ಪ್ರಕರಣದಲ್ಲಿ ಯಾವುದೇ ರೀತಿಯ ಹಣ ವರ್ಗಾವಣೆ ನಡೆದಿಲ್ಲ. ಪ್ರಕರಣದಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಬೈರತಿ ಸುರೇಶ್ ಯಾವುದೇ ರೀತಿಯಲ್ಲೂ ಜವಾಬ್ದಾರರಲ್ಲ” ಎಂದು ಹೇಳಿದೆ.
“ಮುಡಾ ಪ್ರಕರಣದಲ್ಲಿ ಇತರ ಆರೋಪಿಗಳ ವಿರುದ್ಧ ಕಾನೂನಿನ ಅಡಿಯಲ್ಲಿ ಮಾಹಿತಿ ಸಂಗ್ರಹಣೆಯನ್ನು ಮುಂದುವರೆಸಬಹುದು. ಆದರೆ, ಅದನ್ನು ಪಾರ್ವತಿ ಅವರಿಗೆ ಹಂಚಿಕೆ ಮಾಡಿದ್ದ 14 ನಿವೇಶನಗಳಿಗೆ ಸಂಬಂಧಿಸಿದ ಪ್ರಕರಣಕ್ಕೆ ತಳಕು ಹಾಕಬಾರದು. ಪಾರ್ವತಿ ಅವರಿಗೆ ಸಂಬಂಧಿತ ಕಾನೂನಿನ ಅನ್ವಯ ಪರಿಹಾರದ ನಿವೇಶನಗಳನ್ನು ಮಂಜೂರು ಮಾಡಲಾಗಿದೆ. ಪ್ರಕರಣದಲ್ಲಿ ಪಾರ್ವತಿ ಅವರು ಅಪರಾಧಿಯೇ ಎಂಬುದನ್ನು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಡಿ ಪ್ರಕರಣ ದಾಖಲಿಸುವ ವೇಳೆಗೆ ಪಾರ್ವತಿ ಅವರ ಬಳಿ ನಿವೇಶನಗಳು ಇರಲಿಲ್ಲ. ಅವುಗಳನ್ನು ಮುಡಾಗೆ ಮರಳಿಸಿದ್ದು, ಹಂಚಿಕೆಯನ್ನು ರದ್ದುಪಡಿಸಲಾಗಿದೆ. ಹೀಗಾಗಿ, ಅಕ್ರಮ ಹಣ ವರ್ಗಾವಣೆ ಆಗಿಲ್ಲ. ಅವರ ವಿರುದ್ಧ ಇಡಿ ತನಿಖೆ ನಡೆಸಲು ಅವಕಾಶವೇ ಇಲ್ಲ” ಎಂದು ಹೇಳಿದೆ. ಪ್ರಕರಣವನ್ನು ರದ್ದುಗೊಳಿಸಿದೆ.
ಅಂತೆಯೇ, ಬೈರತಿ ಸುರೇಶ್ ವಿರುದ್ದದ ಪ್ರಕರಣವನ್ನೂ ಹೈಕೋರ್ಟ್ ರದ್ದುಗೊಳಿಸಿದೆ. “ಸುರೇಶ್ ಅವರಿಗೆ ಮುಡಾದಲ್ಲಿ ಏನಾಗಿದೆ ಎಂಬುದೇ ತಿಳಿದಿಲ್ಲ. 2023ರಲ್ಲಿ ಸಚಿವರಾದ ನಂತರ ಸುರೇಶ್ ಪ್ರಕರಣದ ಭೂಮಿಕೆಗೆ ಬಂದಿದ್ದಾರೆ. ಆದರೆ, ಮುಡಾ ನಿವೇಶನ ಹಂಚಿಕೆಯು 15 ವರ್ಷಗಳ ಹಿಂದೆಯೇ ನಡೆದಿದೆ. ಹೀಗಿರುವಾಗ, ಸುರೇಶ್‌ಗೆ ಸಮನ್ಸ್ ಜಾರಿ ಮಾಡಲು ಮೇಲ್ನೋಟಕ್ಕೆ ಇ.ಡಿ ಯಾವುದೇ ಪ್ರಕರಣವನ್ನು ತೋರಿಸಿಲ್ಲ. ಸಮನ್ಸ್ ಜಾರಿ ಮಾಡುವುದಕ್ಕೆ ಇ.ಡಿ ಬಳಿ ಕಾರಣಗಳೂ ಇಲ್ಲ. ಸಮನ್ಸ್ ಮತ್ತು ಪ್ರಶ್ನೋತ್ತರ ಮಾಲೆಗೆ ಅವರನ್ನು ಉತ್ತರಿಸುವಂತೆ ಸುರೇಶ್ ಅವರಿಗೆ ಸೂಚಿಸಲು ಕಾನೂನಿನಲ್ಲಿ ಅನುಮತಿ ಇಲ್ಲ. ಸುರೇಶ್ ವಿರುದ್ಧ ಇಸಿಐಆರ್ ದಾಖಲಿಸಿರುವುದು ನಿಸ್ಸಂಶಯವಾಗಿ ಕಾನೂನಿಗೆ ವಿರುದ್ಧವಾಗಿದೆ” ಎಂದು ಹೈಕೋರ್ಟ್ ಹೇಳಿದೆ.
“ಹಾಲಿ ಪ್ರಕರಣದಲ್ಲಿ ಸುರೇಶ್ ಯಾವುದೇ ರೀತಿಯಲ್ಲಿಯೂ ಸಂಬಂಧಿತರಲ್ಲ. ಹೀಗಾಗಿ, ಸಮನ್ಸ್‌ಗೆ ಅನುಮತಿಸುವುದು ಕಷ್ಟವಾಗುತ್ತದೆ. ಸುರೇಶ್ ಅವರ ಪ್ರವೇಶಕ್ಕೂ ಮುನ್ನವೇ ತನಿಖೆ, ಶೋಧ, ಜಫ್ತಿ ನಡೆದಿರುವುದರಿಂದ ಸುರೇಶ್‌ಗೆ ಏಕೆ ಸಮನ್ಸ್ ನೀಡಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ” ಎಂದು ನ್ಯಾಯಾಲಯ ಹೇಳಿದೆ. ಇ.ಡಿ ವಿರುದ್ಧ ಛಾಟಿ ಬೀಸಿದೆ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಬೈರತಿ ಸುರೇಶ್ ವಿರುದ್ಧ ಇ.ಡಿ ತನಿಖೆ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಹೈಕೋರ್ಟ್‌ನ ಏಕ ಸದಸ್ಯ ಪೀಠ ಮತ್ತು ವಿಸ್ತೃತ ಪೀಠಗಳ ತೀರ್ಪು ಮತ್ತೊಮ್ಮೆ ಇಡಿ, ಮೋದಿ, ಅಮಿತ್ ಶಾ ಮತ್ತು ಬಿಜೆಪಿಯ ರಾಜಕೀಯ ದುರುದ್ದೇಶದ ಬಣ್ಣವನ್ನು ಬಯಲು ಮಾಡಿದೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳು ಮತ್ತು ಅವುಗಳ ನಾಯಕರ ವಿರುದ್ಧ ಒಂದು ಎಳೆಯಷ್ಟು ಅವಕಾಶ ಸಿಕ್ಕರೆ ಸಾಕು, ಅವರ ವಿರುದ್ಧ ಇಡಿ, ಸಿಬಿಐ, ಐಟಿ – ತನಿಖಾ ಸಂಸ್ಥೆಗಳನ್ನು ‘ಛೂ’ಬಿಟ್ಟು ದಾಳಿ ನಡೆಸುತ್ತದೆ. ವಿರೋಧ ಪಕ್ಷಗಳ ನಾಯಕರಿಗೆ ತೊಂದರೆ ಕೊಡುತ್ತದೆ. ಜೈಲು, ಕೋರ್ಟ್, ತನಿಖೆ, ವಿಚಾರಣೆ ಅಲೆದಾಡುವಂತೆ ಮಾಡುತ್ತದೆ.
ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ಕೇಂದ್ರೀಯ ತನಿಖಾ ಸಂಸ್ಥೆಗಳ ದಾಳಿ-ದೌರ್ಜನ್ಯಕ್ಕೆ ಬಲಿಯಾಗಿ, ಹಲವಾರು ವಿರೋಧ ಪಕ್ಷಗಳು ನಾಯಕರು, ಮುಖಂಡರು ಬಿಜೆಪಿ ಎದುರು ಮಂಡಿಯೂರಿ, ಕಡೆಗೆ ಬಿಜೆಪಿಯನ್ನೇ ಸೇರಿದ್ದಾರೆ. ಇಡಿ, ಸಿಬಿಐ, ಐಟಿಗಳು ದಾಖಲಿಸಿದ ಪ್ರಕರಣ ಮತ್ತು ದಾಳಿಗೆ ಒಳಗಾದವರು ಬಿಜೆಪಿ ಸೇರಿದ ಬಳಿಕ, ಅವರ ವಿರುದ್ದದ ಪ್ರಕರಣಗಳು ಖುಲಾಸೆಯಲ್ಲಿ ಕೊನೆಯಾಗಿವೆ. ರದ್ದಾಗಿವೆ ಅಥವಾ ತನಿಖೆಗಳೇ ವಿಳಂಬದ ಹಾದಿ ಹಿಡಿದಿವೆ.
ಅಂತಹ ನಿದರ್ಶನಗಳಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ಮಧ್ಯಪ್ರದೇಶದ ಬಿಜೆಪಿ ನಾಯಕ – ಕೇಂದ್ರ ಮಂತ್ರಿ ಜ್ಯೋತಿರಾದಿತ್ಯ ಸಿಂಧಿಯಾ, ಪಶ್ಚಿಮ ಬಂಗಾಳದ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಹಲವು ನಾಯಕರು ಬಿಜೆಪಿ ಜೊತೆ ಸೇರಿ, ಬಿಜೆಪಿ ವಾಷಿಂಗ್ ಮಷೀನ್ ನಲ್ಲಿ ‘ಕ್ಲೀನ್’ ಆಗಿ, ತನಿಖೆಗಳಿಂದ ಕ್ಲೀನ್‌ಚಿಟ್ ಪಡೆದುಕೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ವಿಶ್ವದಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು: ಪ್ರಧಾನಿ ಮೋದಿಗೆ ಯುದ್ಧ ದಾಹವೇ?
ವಿಪಕ್ಷಗಳ ವಿರುದ್ಧ ನಿರಂತರ ದಾಳಿ ನಡೆಸುವ ಇಡಿ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಗುತ್ತಿಗೆದಾರರ ಸಂಘವು 40% ಕಮಿಷನ್ ಆರೋಪ ಮಾಡಿದಾಗ ಪ್ರಕರಣ ದಾಖಲಿಸಿಕೊಳ್ಳಲಿಲ್ಲ. ತನಿಖೆ ನಡೆಸಲಿಲ್ಲ. ಯಾರ ವಿರುದ್ಧವೂ ದಾಳಿಗಳನ್ನು ಮಾಡಲಿಲ್ಲ. ಅಷ್ಟೇ ಯಾಕೆ, ಹಾಲಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಯಾಗಿರುವ ಹಲಗೆವಡೇರಹಳ್ಳಿ ಡಿನೋಟಿಫಿಕೇಷನ್ ಹಗರಣದಲ್ಲಿ ಕುಮಾರಸ್ವಾಮಿ ವಿರುದ್ದದ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪ್ರಕರಣದ ತನಿಖೆ ಮುಂದುವರೆಯಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೂ, ಇಡಿ ಪ್ರಕರಣ ದಾಖಲಿಸಿಕೊಂಡಿಲ್ಲ.
ಆದರೆ, ಸರಿಯಾದ ಸಾಕ್ಷ್ಯಗಳೇ ಇಲ್ಲದ, ಮೇಲ್ನೋಟಕ್ಕೆ ಇಲ್ಲಿ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟವಾಗಿ ಕಾಣಿಸುತ್ತಿರುವ ಮುಡಾ ಪ್ರಕರಣದಲ್ಲಿ ಇ.ಡಿ ಸ್ವಯಂ ಪ್ರೇರಿತವಾಗಿ ಆಸಕ್ತಿ ತೋರುತ್ತಿದೆ. ಹೇಗಾದರೂ, ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳಿಸಬೇಕೆಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹವಣಿಸುತ್ತಿದೆ. ಅದರ ತಾಳಕ್ಕೆ ತಕ್ಕಂತೆ ಇ.ಡಿ ಕುಣಿಯುತ್ತಿದೆ. ಆದರೆ, ಇಡಿಯ ಕುಣಿತಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ.
ಇಲ್ಲಿ, ಬರೀ ಇ.ಡಿಯ ಬಣ್ಣ ಮಾತ್ರವೇ ಬಯಲಾಗಿಲ್ಲ. ಇ.ಡಿಯನ್ನು ಮುಂದೆಬಿಟ್ಟು ಆಟ ಆಡುತ್ತಿರುವ ಮೋದಿ, ಶಾ ಮತ್ತು ಬಿಜೆಪಿಯ ಬಣ್ಣವೂ ಬಯಲಾಗಿದೆ.