ಹಿರಿಯ ಪತ್ರಕರ್ತ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಬಿಜೆಪಿ ಸರ್ಕಾರ ರಾಜ್ಯದಲ್ಲಿ ನಡೆಸಿದ ದುರಾಡಳಿತ ವಿವರ ಬಿಚ್ಚಿಟ್ಟಿದ್ದಾರೆ.
ಪುಲ್ವಾಮಾ ದಾಳಿಗೆ ಕಾರಣವಾದ ದೋಷಗಳ ಬಗ್ಗೆ ಬಾಯಿ ಮುಚ್ಚಿಕೊಂಡಿರುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದರು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹಿರಿಯ ಪತ್ರಕರ್ತ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
‘ದಿ ವೈರ್’ ವೆಬ್‌ತಾಣದಲ್ಲಿ ಪ್ರಕಟವಾಗಿರುವ ಈ ಸಂದರ್ಶನದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಚಿಂತೆಯೇ ಇಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಭ್ರಷ್ಟಾಚಾರವಾಗುತ್ತಿದ್ದರೂ ಕಣ್ಣು ಮುಚ್ಚಿದ್ದರು” ಎಂದು ಮಲಿಕ್ ಹೇಳಿದ್ದಾರೆ.
ಮೋದಿ ಸರ್ಕಾರದಲ್ಲಿ ರಾಜಕೀಯ ಭೂಕಂಪಗಳನ್ನು ಸೃಷ್ಟಿಸಬಹುದಾದ ಸಂದರ್ಶನದಲ್ಲಿ ಸತ್ಯಪಾಲ್ ಮಲಿಕ್ ಅವರು ಅವಿಭಜಿತ ಮತ್ತು ಕೇಂದ್ರಾಡಳಿತಕ್ಕೆ ಇಳಿಸುವ ಮೊದಲಿನ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತದ ಎಳೆ ಎಳೆಯನ್ನೂ ಬಿಚ್ಚಿಟ್ಟಿದ್ದಾರೆ.
ಪುಲ್ವಾಮ ದಾಳಿಯಲ್ಲಿ ದೊಡ್ಡ ಪ್ರಮಾಣದ ಗುಪ್ತಚರ ವೈಫಲ್ಯ ಉಂಟಾಗಿರುವುದನ್ನೂ ಅಲಕ್ಷಿಸಲಾಗಿದೆ. ಸಂಪೂರ್ಣ ದಾಳಿಗೆ ಪಾಕಿಸ್ತಾನವನ್ನು ದೂಷಿಸುವ ಮೂಲಕ ಚುನಾವಣೆ ಲಾಭ ಪಡೆಯಲು ಸರ್ಕಾರ ಮತ್ತು ಬಿಜೆಪಿ ಯೋಜಿಸಿತ್ತು ಎನ್ನುವುದನ್ನೂ ಸತ್ಯಪಾಲ್ ಮಲಿಕ್ ತಿಳಿಸಿದ್ದಾರೆ.
ಸಿಆರ್‌ಪಿಎಫ್ ತನ್ನ ಸೈನಿಕರ ಸಾಗಾಟಕ್ಕೆ ವಿಮಾನ ಸೌಲಭ್ಯವನ್ನು ಕೇಳಿತ್ತು. ಆದರೆ ಕೇಂದ್ರ ಗೃಹಸಚಿವಾಲಯ ನಿರಾಕರಿಸಿತ್ತು. ಅಲ್ಲದೆ ಸೈನಿಕರು ಸಾಗುವ ಹಾದಿಯ ಸೂಕ್ತ ಪರಿಶೀಲನೆಯೂ ಆಗಿರಲಿಲ್ಲ ಎನ್ನುವ ಸತ್ಯವನ್ನು ಮಲಿಕ್ ಬಹಿರಂಗಪಡಿಸಿದ್ದಾರೆ.
“ಪ್ರಧಾನಿಗೇನೂ ಭ್ರಷ್ಟಾಚಾರದ ಬಗ್ಗೆ ಹೆಚ್ಚು ದ್ವೇಷವಿಲ್ಲ ಎಂದು ನನ್ನ ಅನುಭವದಿಂದ ಹೇಳಬಲ್ಲೆ” ಎಂದು ಮಲಿಕ್ ಹೇಳಿದ್ದಾರೆ.
2019 ಫೆಬ್ರವರಿಯ ಪುಲ್ವಾಮ ಭಯೋತ್ಪಾದಕ ದಾಳಿ ಮತ್ತು ಅದೇ ಆಗಸ್ಟ್‌ನಲ್ಲಿ 370ನೇ ವಿಧಿಯನ್ನು ರದ್ದು ಮಾಡಿದ ಸಂದರ್ಭದಲ್ಲಿ ಮಲಿಕ್ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದರು.
“ಪ್ರಧಾನಿಗೆ ಕಾಶ್ಮೀರದ ಬಗ್ಗೆ ಹೆಚ್ಚು ವಿವರಗಳೇ ಗೊತ್ತಿಲ್ಲ ಮತ್ತು ಬಹಳ ಅಜ್ಞಾನವಿತ್ತು. ಕೇಂದ್ರ ಗೃಹಸಚಿವಾಲಯ ರಾಜ್ಯದಲ್ಲಿ ಎಸಗಿದ ದೋಷಗಳ ಪರಿಣಾಮವಾಗಿ 2019 ಫೆಬ್ರವರಿಯಲ್ಲಿ ಪುಲ್ವಾಮದಲ್ಲಿ ಸೈನಿಕರ ಮೇಲೆ ಘೋರ ಭಯೋತ್ಪಾದಕ ದಾಳಿಯಾಗಿರುವ ಬಗ್ಗೆ ಮೌನವಾಗಿರಬೇಕು ಎಂದು ನನಗೆ ಸೂಚಿಸಿದ್ದರು” ಎಂದು ಮಲಿಕ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಅಧಿಕಾರ ಬಳಸಿ ಭಾರತೀಯರನ್ನು ವಿಭಜಿಸುವವರು ನಿಜವಾದ ರಾಷ್ಟ್ರವಿರೋಧಿಗಳು: ಸೋನಿಯಾ ಗಾಂಧಿ
“ಪುಲ್ವಾಮದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಬೆಂಗಾವಲು ಪಡೆಯ (ಸಿಆರ್‌ಪಿಎಫ್) ಮೇಲೆ ನಡೆದ ದಾಳಿ ಭಾರತೀಯ ವ್ಯವಸ್ಥೆಯ, ಮುಖ್ಯವಾಗಿ ಸಿಆರ್‌ಪಿಎಫ್ ಮತ್ತು ಗೃಹಸಚಿವಾಲಯದ ಅಸಾಮರ್ಥ್ಯ ಮತ್ತು ಅಲಕ್ಷ್ಯದ ಪರಿಣಾಮ” ಎಂದು ಅವರು ತಿಳಿಸಿದ್ದಾರೆ.
ಆ ಸಂದರ್ಭದಲ್ಲಿ ಕೇಂದ್ರ ಬಿಜೆಪಿ ಸರ್ಕಾರದಲ್ಲಿ ರಾಜ್‌ನಾಥ್ ಸಿಂಗ್ ಗೃಹಸಚಿವರಾಗಿದ್ದರು.
ಮುಖ್ಯವಾಗಿ, ಈ ಎಲ್ಲಾ ಲೋಪ ದೋಷಗಳ ಬಗ್ಗೆ ಮಲಿಕ್ ನೇರವಾಗಿ ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದರು. ಪುಲ್ವಾಮ ದಾಳಿಯ ತಕ್ಷಣವೇ ಕಾರ್ಬೆಟ್ ಪಾರ್ಕ್‌ನಿಂದ ಮೋದಿಗೆ ಕರೆ ಮಾಡಿದ ಮಲಿಕ್ ವಿವರ ಬಿಚ್ಚಿಟ್ಟಿದ್ದರು. ಆದರೆ ಪ್ರಧಾನಿ ಈ ಬಗ್ಗೆ ಯಾರಿಗೂ ಹೇಳದೆ ಮೌನವಾಗಿರುವಂತೆ ಸೂಚಿಸಿದ್ದರು.
ಪ್ರತ್ಯೇಕವಾಗಿ ಎನ್‌ಎಸ್‌ಎ (ರಾಷ್ಟ್ರೀಯ ಭದ್ರತಾ ಸಲಹೆಗಾರ) ಅಜಿತ್ ದೋವಲ್ ಅವರಿಗೆ ವಿವರ ತಿಳಿಸಿದರೂ, ಮೌನವಾಗಿರುವಂತೆ ಮತ್ತು ಆ ಬಗ್ಗೆ ಮಾತನಾಡದಂತೆ ಸೂಚನೆ ಸಿಕ್ಕಿತ್ತು ಎಂದು ಮಾಜಿ ರಾಜ್ಯಪಾಲ ಬಹಿರಂಗಪಡಿಸಿದ್ದಾರೆ.