ಅಧಿಕಾರ ಬಳಸಿ ಭಾರತೀಯರನ್ನು ವಿಭಜಿಸುವವರು ನಿಜವಾದ ರಾಷ್ಟ್ರವಿರೋಧಿಗಳು: ಸೋನಿಯಾ ಗಾಂಧಿ

Date:

ಜಾತಿವಾದ ರಾಷ್ಟ್ರವಿರೋಧಿ, ಸಹೋದರಭಾವವಿಲ್ಲದೆ ಸಮಾನತೆ ಮತ್ತು ಸ್ವಾತಂತ್ರ್ಯ ಬಣ್ಣದ ಮಾತುಗಳಷ್ಟೇ ಎಂಬ ಅಂಬೇಡ್ಕರ್ ಮಾತುಗಳನ್ನು ಸೋನಿಯಾ ಗಾಂಧಿ ತಮ್ಮ ಲೇಖನದಲ್ಲಿ ಪುನರುಚ್ಛರಿಸಿದ್ದಾರೆ

ಬಿಆರ್ ಅಂಬೇಡ್ಕರ್ ಜನ್ಮದಿನೋತ್ಸವದಂದು ಕೇಂದ್ರ ಸರ್ಕಾರವನ್ನು ರಾಷ್ಟ್ರವಿರೋಧಿ ಎಂದು ಜರೆದಿರುವ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅಧಿಕಾರದಲ್ಲಿರುವ ಆಡಳಿತ ವ್ಯವಸ್ಥೆ ಇಂದು ಸಂವಿಧಾನದ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಬುಡಮೇಲು ಮಾಡುತ್ತಿದೆ ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರ ನಡೆಸುತ್ತಿರುವ ವ್ಯವಸ್ಥಿತ ದಾಳಿಯಿಂದ ಸಂವಿಧಾನವನ್ನು ರಕ್ಷಿಸಿಕೊಳ್ಳಲು ಜನರು ತಕ್ಷಣವೇ ಕಾರ್ಯಸನ್ನದ್ಧರಾಗಬೇಕು ಎಂದು ಅವರು ಕರೆ ನೀಡಿದ್ದಾರೆ.

ಭಾರತದ ಸಂವಿಧಾನದ ಕರ್ತೃ ಬಿ ಆರ್ ಅಂಬೇಡ್ಕರ್ ಅವರ 132ನೇ ಜನ್ಮದಿನೋತ್ಸವದಂದು ‘ದಿ ಟೆಲಿಗ್ರಾಫ್’ ದಿನಪತ್ರಿಕೆಗೆ ಬರೆದ ಲೇಖನದಲ್ಲಿ ಅವರು, “ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಭಾರತವನ್ನು ಧರ್ಮ, ಭಾಷೆ, ಜಾತಿ ಹಾಗೂ ಲಿಂಗ ಆಧಾರದಲ್ಲಿ ವಿಭಜಿಸುತ್ತಿರುವವರೇ ಇಂದಿನ ನಿಜವಾದ ರಾಷ್ಟ್ರವಿರೋಧಿಗಳು” ಎಂದು ಹೇಳಿದ್ದಾರೆ.

“ನಾವು ಬಾಬಾ ಸಾಹೇಬರ ಜೀವನಗಾಥೆಯ ಸಂಭ್ರಮಾಚರಿಸುತ್ತಿರುವ ಸಂದರ್ಭದಲ್ಲಿ ಸಂವಿಧಾನದ ಯಶಸ್ಸಿಗೆ, ಅದು ಮುಂದಿಟ್ಟಿರುವ ಕರ್ತವ್ಯಗಳನ್ನು ಜನರು ಪಾಲಿಸುವ ಅಗತ್ಯವಿದೆ ಎಂದು ಅಂಬೇಡ್ಕರ್ ನೀಡಿದ ಎಚ್ಚರಿಕೆಯನ್ನು ನೆನಪಿಟ್ಟುಕೊಳ್ಳಬೇಕು” ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

“ಇಂದು ಕೇಂದ್ರದಲ್ಲಿರುವ ಆಡಳಿತ, ಸಂವಿಧಾನದ ತಳಹದಿಗಳಾಗಿರುವ ಸ್ವಾತಂತ್ರ್ಯ, ಸಮಾನತೆ, ಸಹೋದರಭಾವ ಮತ್ತು ನ್ಯಾಯವನ್ನು ದುರ್ಬಲಗೊಳಿಸುತ್ತಿದ್ದಾರೆ. ಕಾನೂನು ಬಳಸಿ ಜನರಿಗೆ ರಕ್ಷಣೆ ನೀಡುವ ಬದಲಾಗಿ ಜನರಿಗೆ ಕಿರುಕುಳ ನೀಡಲು ಅದನ್ನು ದುರುಪಯೋಗ ಮಾಡಲಾಗುತ್ತಿದೆ. ಸ್ನೇಹಿತರ ಕಡೆಗೆ ಸ್ವಜನ ಪಕ್ಷಪಾತದ ಮೂಲಕ ಸಮಾನತೆಯ ಹಕ್ಕನ್ನು ಜನರಿಂದ ಕಸಿದುಕೊಳ್ಳಲಾಗುತ್ತಿದೆ ಮತ್ತು ಭಾರತೀಯರು ವ್ಯಾಪಕವಾಗಿ ಆರ್ಥಿಕನಷ್ಟವನ್ನು ಅನುಭವಿಸುತ್ತಿದ್ದಾರೆ. ದ್ವೇಷದ ಪರಿಸರವನ್ನು ಉದ್ದೇಶಪೂರ್ವಕವಾಗಿ ಹರಡಿ ಭಾರತೀಯರನ್ನು ಪರಸ್ಪರರ ವಿರುದ್ಧ ಧ್ರುವೀಕರಿಸುವ ಮೂಲಕ ಸಹೋದರ ಭಾವವನ್ನು ತೊಡೆದು ಹಾಕಲಾಗಿದೆ. ನಿರಂತರ ಪ್ರಚಾರಗಳ ಮೂಲಕ ನ್ಯಾಯಾಂಗದ ಮೇಲೂ ಒತ್ತಡ ಹೇರಲಾಗುತ್ತಿದೆ” ಎಂದು ಅವರು ಖಂಡಿಸಿದ್ದಾರೆ.

“ಎಲ್ಲ ಭಾರತೀಯರು ತಮ್ಮ ರಾಜಕೀಯ ಒಲವನ್ನು ಬದಿಗಿಟ್ಟು, ರಾಜಕೀಯ ಪಕ್ಷಗಳು, ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳು, ಸಮುದಾಯಗಳು ಮತ್ತು ವ್ಯಕ್ತಿಗಳು ಇಂತಹ ನಿರ್ಣಾಯಕ ಸಂದರ್ಭದಲ್ಲಿ ಜೊತೆಗೂಡಿ ನಿಲ್ಲಬೇಕು. ಅಂಬೇಡ್ಕರ್ ಅವರ ಜೀವನ ಹೋರಾಟವೇ ನಮಗೆ ಪಾಠವಾಗಿ ಮಾರ್ಗದರ್ಶನ ನೀಡಬೇಕು” ಎಂದು ಸೋನಿಯಾ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಪ್ರತಿಪಕ್ಷಗಳ ದಮನದಿಂದ ಭಾರತದ ಸಮಸ್ಯೆಗಳು ಪರಿಹಾರವಾಗದು: ಸೋನಿಯಾ ಗಾಂಧಿ

“ನಮ್ಮ ಮೊದಲ ಪಾಠ, ತೀವ್ರವಾದ ಚರ್ಚೆ ಮತ್ತು ಒಪ್ಪಿಕೊಳ್ಳದಿರುವುದು. ಆದರೆ ಅಂತಿಮವಾಗಿ ರಾಷ್ಟ್ರಹಿತದಲ್ಲಿ ಜೊತೆಗೂಡಬೇಕು. ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲೂ ಮಹಾತ್ಮಾ ಗಾಂಧಿ, ಜವಾಹರಲಾಲ್‌ ನೆಹರು, ಅಂಬೇಡ್ಕರ್, ಸರ್ದಾರ್ ಪಟೇಲ್ ಹಾಗೂ ಇನ್ನೂ ಅನೇಕರ ನಡುವೆ ಗಂಭೀರ ಭಿನ್ನಾಭಿಪ್ರಾಯಗಳಿದ್ದವು. ಆದರೆ ಅವರು ಸಹಜವಾಗಿ ರಾಷ್ಟ್ರಹಿತದಲ್ಲಿ ಚರ್ಚಿಸಿ ಮುಂದುವರಿದಿದ್ದಾರೆ. ಅಂತಿಮವಾಗಿ ಎಲ್ಲಾ ಪ್ರಮುಖ ಪುರುಷರು ಮತ್ತು ಮಹಿಳೆಯರು ಜೊತೆಗೂಡಿ ಹೋರಾಟದಲ್ಲಿ ಭಾಗವಹಿಸಿ, ವಿಭಿನ್ನ ಕಾಲದ ಏರಿಳಿತಗಳನ್ನು ಸಹಿಸಿಕೊಂಡು ಸಮಾನ ಪಯಣದಲ್ಲಿ ಸ್ವಾತಂತ್ರ್ಯ ನಮ್ಮ ರಾಷ್ಟ್ರವನ್ನು ರೂಪಿಸಿದ್ದೇವೆ. ಚರ್ಚೆಯಿಂದ ನಮ್ಮ ಭವಿಷ್ಯದ ಕುರಿತ ಪ್ರಶ್ನೆಗಳಿಗೆ ಅನೇಕ ದೃಷ್ಟಿಕೋನಗಳು ಸಿಗಬಹುದು” ಎಂದು ಸೂಚ್ಯವಾಗಿ ಪ್ರಾದೇಶಿಕ ಪಕ್ಷಗಳು ತಮ್ಮ ನಿಲುವನ್ನು ಬದಲಿಸಿ ಕಾಂಗ್ರೆಸ್ ಜೊತೆಗೂಡುವಂತೆ ಸೂಚಿಸಿದ್ದಾರೆ.

ಸಹೋದರಭಾವದ ಅಗತ್ಯವನ್ನು ಒತ್ತಿಹೇಳಿದ ಅವರು, “ಬಾಬಾಸಾಹೇಬ್ ಅವರು ಭಾರತೀಯರಲ್ಲಿ ಸಹೋದರಭಾವ ಆಳವಾಗಿ ಬೇರೂರಬೇಕಾದ ಅಗತ್ಯವಿದೆ ಎಂದು ನಂಬಿದ್ದರು. ಸಹೋದರ ಭಾವವಿಲ್ಲದೆ ಸ್ವಾತಂತ್ರ್ಯ ಮತ್ತು ಸಮಾನತೆ ಬಣ್ಣದ ಮಾತುಗಳಾಗುತ್ತವೆ ಎಂದು ಅಂಬೇಡ್ಕರ್ ಹೇಳಿದ್ದರು. ಅವರು ಜಾತಿ ವ್ಯವಸ್ಥೆ ಹೇಗೆ ಸಹೋದರಭಾವವನ್ನು ಬುಡಸಮೇತ ಕೀಳುತ್ತದೆ ಎಂದು ವಿವರಿಸಿ, ಜಾತಿವಾದ ರಾಷ್ಟ್ರವಿರೋಧಿ ಎಂದು ಹೇಳಿದ್ದರು. ಆದರೆ ಇಂದು ಆಡಳಿತದಲ್ಲಿರುವವರು ‘ಸಹೋದರಭಾವ’ ಎನ್ನುವ ಪದದ ಮೇಲೇ ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ಸೋನಿಯಾ ಗಾಂಧಿ ಟೀಕಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟರ್ಕಿ ಸಂಸತ್‌ನ ಬಳಿ ಆತ್ಮಹತ್ಯಾ ಬಾಂಬ್ ದಾಳಿ: ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಗಾಯ

ಟರ್ಕಿ ದೇಶದ ಸಂಸತ್‌ 'ಅಂಕಾರ' ಬಳಿ ಇಂದು ಬೆಳಗ್ಗೆ ಆತ್ಮಹತ್ಯಾ ಬಾಂಬ್...

ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಬದುಕಿ, ಸಾಯಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಹಿರಿಯರ ಬದುಕಿನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದೇ ನಾವು ಹಿರಿಯರಿಗೆ ನೀಡುವ ಗೌರವ: ಸಿಎಂ 'ಎಷ್ಟು...

ಆರು ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ಪತನ; ರಾಜಕೀಯ ಸಮರ ಸೃಷ್ಟಿಸಿದ ಎಚ್‌ಡಿಕೆ ಹೇಳಿಕೆ

ಇನ್ನು ಆರು ತಿಂಗಳಲ್ಲಿ ಕರ್ನಾಟಕ ಸರ್ಕಾರ ಪತನವಾಗಲಿದೆ ಎಂಬ ಜೆಡಿಎಸ್ ನಾಯಕ...

ಇಂದಿನಿಂದ ಭಾರತದಲ್ಲಿನ ಅಫ್ಘಾನಿಸ್ತಾನ ರಾಯಭಾರ ಕಚೇರಿ ಕಾರ್ಯಾಚರಣೆ ಸ್ಥಗಿತ

ಭಾರತ ಸರ್ಕಾರವು ಸರಿಯಾದ ಬೆಂಬಲ ನೀಡುತ್ತಿಲ್ಲ ಎಂದು ಆರೋಪಿಸಿದ ರಾಯಭಾರ ಕಚೇರಿ 'ಸಾಕಷ್ಟು...