2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೋಲಾರದಲ್ಲಿ ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಸಂಸದ ಸ್ಥಾನದಿಂದಲೂ ಅನರ್ಹಗೊಂಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಗುಜರಾತ್ ಹೈಕೋರ್ಟ್ ನೀಡಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದಲ್ಲಿ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಪಿಎಸ್ ನರಸಿಂಹ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಗುಜರಾತ್ ಹೈಕೋರ್ಟ್ ನೀಡಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದಲ್ಲಿ ತಡೆ ನೀಡಿದೆ.
“ಅರ್ಜಿದಾರರ ಹೇಳಿಕೆಗಳು ಉತ್ತಮ ಅಭಿರುಚಿಯಲ್ಲಿಲ್ಲ ಎಂಬುದರಲ್ಲಿ ಸಂದೇಹವಿಲ್ಲ. ಅರ್ಜಿದಾರರು ಭಾಷಣ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು ಎಂದು ಎಂದು ಪೀಠವು ಹೇಳಿದೆ.
“ಅನರ್ಹತೆಯ ತೀರ್ಪುಗಳು ವ್ಯಕ್ತಿಯ ಹಕ್ಕಿನ ಮೇಲೆ ಮಾತ್ರವಲ್ಲದೆ ಮತದಾರರ ಮೇಲೂ ಪರಿಣಾಮ ಬೀರುತ್ತವೆ” ಎಂದು ನ್ಯಾಯಾಲಯ ತಿಳಿಸಿದೆ.
ತಮ್ಮ “ಮೋದಿ ಉಪನಾಮ” ಹೇಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದ ಗುಜರಾತ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
“ಎಲ್ಲ ಕಳ್ಳರು ಮೋದಿ ಹೆಸರಿನ ಸಾಮಾನ್ಯ ಉಪನಾಮವನ್ನು ಏಕೆ ಹೊಂದಿದ್ದಾರೆ? ಎಂದು ಏಪ್ರಿಲ್ 13, 2019 ರಂದು ಕರ್ನಾಟಕದ ಕೋಲಾರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾಡಿದ ಭಾಷಣದ ವೇಳೆ ಪ್ರಸ್ತಾಪಿಸಿದ್ದರು.
ಈ ಹೇಳಿಕೆಯ ವಿರುದ್ಧ ಬಿಜೆಪಿ ನಾಯಕ ಪೂರ್ಣೇಶ್ ಮೋದಿ ರಾಹುಲ್ ಗಾಂಧಿಯವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.