ಬಿಹಾರದ ಚಂಪಾರಣ್‌ನಲ್ಲಿ ಉತ್ಸಾಹಭರಿತ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಹತ್ತು ವರ್ಷಗಳಿಂದ ಭಾರತ ಕೈಗೊಂಡ ಪರಿವರ್ತನಾತ್ಮಕ ಪ್ರಯಾಣ ಮತ್ತು ಈ ವೇಗವನ್ನು ಮುಂದುವರಿಸುವ ತುರ್ತು ಅಗತ್ಯವಿದೆ” ಎಂದು ಮೋದಿಜಿ ಭಾಷಣ ಮಾಡಿದ್ದಾರೆ.
“ಮೊದಲ ಹಂತದಲ್ಲಿ, ಇಂಡಿ ಮೈತ್ರಿಕೂಟ ಈಗಾಗಲೇ ದುರ್ಬಲಗೊಂಡಿದೆ. ನಂತರದ ಹಂತಗಳಲ್ಲಿ, ಇಂಡಿ ಮೈತ್ರಿಯನ್ನು ಹತ್ತಿಕ್ಕಲಾಯಿತು. ಈಗ ಇಂಡಿ ಮೈತ್ರಿ ಸಂಪೂರ್ಣವಾಗಿ ಸೋತಿದೆ. ತಮ್ಮನ್ನು ತಾವು ಜನರ ಯಜಮಾನರೆಂದು ಭಾವಿಸಿದವರು ಅವರು. ಹಾಗಾಗಿ ಸಾರ್ವಜನಿಕರು ಅವರಿಗೆ ತಕ್ಕ ಸೋಲನ್ನು ನೀಡಿದ್ದಾರೆ. ಜಗತ್ತು ಅವರನ್ನು ಆಶ್ಚರ್ಯದಿಂದ ನೋಡಲಿದೆ” ಎಂದು ಮೋದಿ ಭಾಷಣಗಳಲ್ಲಿ ಹೇಳಿದ್ದಾರೆ.(11:58-13:10)
ಮತ ಎಣಿಕೆ ಜೂನ್ 4ರಂದು ನಡೆಯಲಿದೆ ಎಂದು ಮೋದಿಯವರೇ ಹೇಳುತ್ತಾರೆ. ಆದರೂ ಕೂಡಾ ಪದೇ ಪದೆ ʼಇಂಡಿ ಮೈತ್ರಿʼ ದುರ್ಬಲಗೊಂಡಿದೆ. ಮೂರು ಹಂತಗಳ ಮತದಾನದಲ್ಲಿಯೂ ಸೋಲು ಕಂಡಿದೆಯೆಂದು ಹೇಳುತ್ತಾರೆ. ಮತ ಎಣಿಕೆಗೂ ಮುನ್ನವೇ ಇಂಡಿಯಾ ಒಕ್ಕೂಟ ದುರ್ಬಲಗೊಂಡಿದೆ ಎಂಬುದು ನಮ್ಮ ಪ್ರಧಾನಿಗೆ ಹೇಗೆ ತಿಳಿದಿದೆ.
“ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ನಡೆದ ಮೇ 7ರಂದು ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಮತಗಟ್ಟೆಅಧಿಕಾರಿಗಳು ಮತ್ತು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಘಟನೆಯ ಸಮಯದಲ್ಲಿ ಬಸ್‌ನಲ್ಲಿ ಆರು ಮತಗಟ್ಟೆಗಳ ಅಷ್ಟೂ ಇವಿಎಂಗಳು ಇದ್ದವು. ಅವುಗಳಲ್ಲಿ ನಾಲ್ಕು ಇವಿಎಂಗಳು ಹಾನಿಗೊಳಗಾಗಿವೆ ಮತ್ತು ಎರಡು ಸುರಕ್ಷಿತವಾಗಿವೆ. ಪರಿಣಾಮ ನಾಲ್ಕು ಇವಿಎಂಗಳಲ್ಲಿ ಕಂಟ್ರೋಲ್ ಯೂನಿಟ್ ಅಥವಾ ಬ್ಯಾಲೆಟ್ ಯೂನಿಟ್ ಬೆಂಕಿಯಲ್ಲಿ ಹಾನಿಯಾಗಿದೆ” ಎಂದು ಬೇತುಲ್ ಜಿಲ್ಲಾಧಿಕಾರಿ ಹೇಳಿದ್ದಾರೆ.
ಒಂದೆಡೆ ನಮ್ಮ ಪ್ರಧಾನಿ ಮತ ಎಣಿಕೆಗೂ ಮನ್ನವೇ ಫಲಿತಾಂಶ ಹೇಳುತ್ತಿದ್ದಾರೆ. ಇನ್ನೊಂದೆಡೆ ಇವಿಎಂಗಳಿಗೆ ಬೆಂಕಿ ತಗುಲಿ ಹಾನಿಯಾಗುತ್ತಿವೆ. ಉತ್ತರ ಪ್ರದೇಶದ ಫರೂಕಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಾಲಕನೋರ್ವ ಬಿಜೆಪಿಗೆ 8 ಬಾರಿ ಮತ ಹಾಕುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪಾರ ಗಮನ ಸೆಳೆಯುತ್ತಿರುವ ವಿಡಿಯೋವನ್ನು ಸಮಾಜವಾದಿ ಪಕ್ಷದ(ಎಸ್‌ಪಿ) ನಾಯಕ ಅಖಿಲೇಶ್ ಯಾದವ್ ‘ಎಕ್ಸ್’ ನಲ್ಲಿ ಹಂಚಿಕೊಂಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದರು.
ಅಂತೆಯೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ವಿಡಿಯೋ ಹಂಚಿಕೊಂಡಿದ್ದು, “ಇಂಡಿಯಾ ಕೂಟ ಅಧಿಕಾರಕ್ಕೆ ಬಂದ ನಂತರ ಸಂವಿಧಾನ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಚುನಾವಣೆಯಲ್ಲಿ ಸೋಲುವುದನ್ನು ಮನಗಂಡು ಬಿಜೆಪಿಯು ಅಧಿಕಾರಿಗಳನ್ನು ಹೆದರಿಸುವ ಮೂಲಕ ಫಲಿತಾಂಶವನ್ನು ಹೈಜಾಕ್ ಮಾಡಲು ಹೊರಟಿದೆ” ಎಂದು ಆರೋಪಿಸಿದ್ದರು.
ಹಾಗಾದರೆ, ಪ್ರಸ್ತುತದಲ್ಲಿ ನಡೆಯುತ್ತಿರುವ ಘಟನೆಗಳಿಗೂ ನಮ್ಮ ಪ್ರಧಾನಿ ಹೇಳುತ್ತಿರುವ ಫಲಿತಾಂಶಕ್ಕೂ ಒಂದಕ್ಕೊಂದು ಸಂಬಂಧ ಇರಬಹುದಾ? ಚುನಾವಣಾ ಆಯೋಗದ ಕಣ್ಣಿಗೂ ಮಣ್ಣೆರಚಿ ಬಿಜೆಪಿ ಕುತಂತ್ರ ನಡೆಸುತ್ತಿದೆಯಾ?.
“21ನೇ ಶತಮಾನದ ಭಾರತವು ಇಂಡಿ ಮೈತ್ರಿಯ ಪಾಪಗಳೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ. ಆದ್ದರಿಂದ, ಪ್ರತಿ ಚುನಾವಣೆಯಲ್ಲೂ ಜನರು ಕಾಂಗ್ರೆಸ್ ಮತ್ತು ಆರ್‌ಜೆಡಿಯಂತಹ ಪಕ್ಷಗಳಿಗೆ ತೀವ್ರ ಹೊಡೆತ ನೀಡುತ್ತಿದ್ದಾರೆ. ಚಂಪಾರಣ್ಯದಲ್ಲಿ ಪೂಜ್ಯ ಬಾಪೂ ಸತ್ಯಾಗ್ರಹ ಮತ್ತು ಸ್ವಚ್ಛಾಗ್ರಹವನ್ನು ಅಭ್ಯಾಸ ಮಾಡಿದ್ದರು. ಸ್ವಾತಂತ್ರ್ಯದ ನಂತರ, ಕಾಂಗ್ರೆಸ್ ಇದರಿಂದ ಪ್ರೇರಿತರಾಗಿ ಸ್ವಚ್ಛತೆಗೆ ಆಂದೋಲನ ಪ್ರಾರಂಭಿಸಬೇಕಾಗಿತ್ತು. ಆದರೆ ಅವರು ತಮ್ಮ ಎಲ್ಲ ಗಮನವನ್ನು ಒಂದು ಕುಟುಂಬವನ್ನು ಉತ್ತೇಜಿಸುವತ್ತ ಕೇಂದ್ರೀಕರಿಸಿದರು” ಎಂದು ನಮ್ಮ ಪ್ರಧಾನಿ ಮೋದೀಜಿ ಹಸಿ ಸುಳ್ಳಿನ ಆರೋಪ ಮಾಡುತ್ತಿದ್ದಾರೆ.(13:20-17:28)
ಚುನಾವಣೆ ಆರಂಭದಿಂದಲೂ ಮತಗಟ್ಟೆಗಳಲ್ಲಿ ಯಾವ ಪಕ್ಷಗಳಿಂದ ಅನ್ಯಾಯದ, ಪಾಪದ ಕೃತ್ಯಗಳು ನಡೆಯುತ್ತಿವೆಯೆಂದು ಜಗಜ್ಜಾಹೀರಾಗುತ್ತಿವೆ. ಆದರೂ ನಮ್ಮ ಪ್ರಧಾನಿ ಲಜ್ಜೆಗೆಟ್ಟವರಂತೆ ಜಾಣ ಕರುಡು ಪ್ರದರ್ಶಿಸುತ್ತಿದ್ದಾರೆ. ಎಲ್ಲೆಡೆ ಹೇಳಿದ್ದನ್ನೇ ಹೇಳಿಕೊಂಡು ಪ್ರತಿಪಕ್ಷಗಳ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.
ಕಾಂಗ್ರೆಸ್‌ನವರು ಒಂದು ಕುಟುಂಬವನ್ನು ಉತ್ತೇಜಿಸುತ್ತಾರೆಂದು ದೂರುವ ನಮ್ಮ ಪ್ರಧಾನಿ, ಇಡೀ ದೇಶದ ಜನತೆ, ಮತದಾರರು, ದೇಶದ ಬೆನ್ನೆಲುಬು ಎನ್ನುವ ರೈತ-ಕಾರ್ಮಿಕರನ್ನು ಹೊರತುಪಡಿಸಿ ಕೇವಲ ಉದ್ಯಮಿಗಳ ಬೆನ್ನಿಗೆ ನಿಂತಿದ್ದಾದರೂ ಏಕೆ?
“ಬಿಹಾರವು ದಶಕಗಳ ವಲಸೆಗೆ ಸಾಕ್ಷಿಯಾಗಿದೆ, ಆದರೆ ಎನ್‌ಡಿಎ ಸರ್ಕಾರದ ಪ್ರಯತ್ನಗಳಿಂದಾಗಿ, ವಲಸೆ ನಿಂತಿದೆ. ಬಿಹಾರದ ಯುವಕರು ಇಲ್ಲಿಯೇ ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದಾರೆ. ಚಂಪಾರಣ್‌ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಕೃಷಿಗಾಗಿ ಒಂದು ಸಂಶೋಧನಾ ಕೇಂದ್ರ. ಸರ್ದಾರ್ ಪಟೇಲ್ ಸಹಕಾರಿ ತರಬೇತಿ ಸಂಸ್ಥೆ. ಸಿಲಿಂಡರ್ ಘಟಕ. ಇಫ್ಕೊ ಮಾರುಕಟ್ಟೆಗಳು. ಒಂದು ದೊಡ್ಡ ಡೈರಿ ಘಟಕ. ಸೇತುವೆಗಳು, ಹೆದ್ದಾರಿಗಳು, ರೈಲ್ವೆ ನಿಲ್ದಾಣಗಳ ಆಧುನೀಕರಣ. ಇವೆಲ್ಲವೂ ಉದ್ಯೋಗ ಮತ್ತು ಅಭಿವೃದ್ಧಿ ಅವಕಾಶಗಳನ್ನು ಸೃಷ್ಟಿಸಿವೆ” ಎಂದು ಬಂಡಲ್ ಬಿಡುತ್ತಿದ್ದಾರೆ ಮೋದಿ.(38:10-39:17)
ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಆಪರೇಟಿವ್ ಲಿಮಿಟೆಡ್, IFFCO ಎಂದೂ ಕರೆಯಲ್ಪಡುತ್ತದೆ. ಇದು ರಸಗೊಬ್ಬರ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿರುವ ಬಹು-ರಾಜ್ಯ ಸಹಕಾರಿ ಸಂಘವಾಗಿದೆ. IFFCOದ ಪ್ರಧಾನ ಕಚೇರಿ ನವದೆಹಲಿಯಲ್ಲಿದ್ದು, ಇದು 1967ರಲ್ಲಿ 57 ಮಂದಿ ಸದಸ್ಯ ಸಹಕಾರಿಗಳೊಂದಿಗೆ ಪ್ರಾರಂಭವಾಗಿದೆ. ಇಂದು GDP ತಲಾವಾರು ವಹಿವಾಟಿನ ಮೂಲಕ ವಿಶ್ವದ ಅತಿದೊಡ್ಡ ಸಹಕಾರಿಯಾಗಿದೆ. ಆದರೆ, ನಮ್ಮ ಪ್ರಧಾನಿ ಹತ್ತು ವರ್ಷಗಳಲ್ಲಿ ನಾನೆ ಎಲ್ಲ ಮಾಡಿದ್ದೇನೆಂದು ಹೇಳಿಕೊಳ್ಳುತ್ತಿದ್ದಾರೆ.
“ಸತ್ಯವೆಂದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಇಲ್ಲದಿದ್ದರೆ, ನೆಹರೂ ಜಿ ಎಸ್‌ಸಿ/ಎಸ್‌ಟಿ ಮೀಸಲಾತಿಗೆ ಅವಕಾಶ ನೀಡುತ್ತಿರಲಿಲ್ಲ. ನೆಹರೂ ಅವರಿಂದ ಹಿಡಿದು ರಾಜೀವ್ ಗಾಂಧಿಯವರವರೆಗೆ ಈ ಕುಟುಂಬದ ಎಲ್ಲ ಪ್ರಧಾನ ಮಂತ್ರಿಗಳು ಒಬಿಸಿ ಮೀಸಲಾತಿಯನ್ನು ವಿರೋಧಿಸಿದ್ದರು. ಕಾಂಗ್ರೆಸ್ ಬಡವರು-ಎಸ್‌ಸಿ/ಎಸ್‌ಟಿ/ಒಬಿಸಿ, ಮಹಿಳೆಯರು ಸೇರಿದಂತೆ ಎಲ್ಲರಿಗೂ ದ್ರೋಹ ಬಗೆದಿದೆ” ಎಂದು ಪ್ರಧಾನಿ ಮೋದಿ ಸುಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆ.(39:34-40:10)
ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭೂ ಸುಧಾರಣೆ ಕಾಯಿದೆ ಜಾರಿಗೆ ತಂದ ಬಳಿಕ ಉಳುವವನೇ ಹೊಲದ ಒಡೆಯ ಎಂದಾಯಿತು. ಯಾರ್ಯಾರು ಭೂಮಿ ಒಡೆಯರು ಆಗಬಹುದು ಎಂಬುದನ್ನು ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಗುತ್ತಿಗೆ ಆಧಾರದ ಮೇಲೆ ಭೂಮಿ ಉಳುಮೆ ಮಾಡುತ್ತಿದ್ದವರಿಗೆ ಇದರಿಂದ ಅನುಕೂಲವಾಗಿತ್ತು. ಈ ಬೆಳವಣಿಗೆ ಕೇಂದ್ರದಲ್ಲಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವ ಕಾಲದಲ್ಲಿಯೇ ನಡೆದಿತ್ತು. ಕರ್ನಾಟಕದಲ್ಲಿ ಪರಿಪೂರ್ಣವಾಗಿ ಜಾರಿಯಾಯಿತು.
ಆದರೆ, 2020ರ ಜೂನ್‌ನಲ್ಲಿ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಅಂದಿನ ಕರ್ನಾಟಕದ ಬಿಜೆಪಿ ಸರ್ಕಾರ ʼಉಳ್ಳವರೇ ಭೂಮಿ ಒಡೆಯರುʼ ಎಂಬ ಕಾನೂನು ಜಾರಿಗೆ ತರಲು ಮುಂದಾಗಿದೆ ಎಂದು ಸಿದ್ದರಾಮಯ್ಯ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾಗ ಆಕ್ರೋಶ ವ್ಯಕ್ತಪಡಿಸಿದ್ದರು.
“ಕರ್ನಾಟಕ ಭೂ ಸುಧಾರಣೆ ಕಾಯಿದೆಗೆ ಬಿಜೆಪಿ ಸರ್ಕಾರ ತಿದ್ದುಪಡಿ ತರಲು ಮುಂದಾಗಿದೆ. ಕಾಯಿದೆಯಲ್ಲಿನ ಕೆಲ ಅಂಶಗಳನ್ನು ಬದಲಾವಣೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.
ಇಂದಿರಾಗಾಂಧಿ ಮತ್ತು ದೇವರಾಜ ಅರಸು ಅವರ ಸರ್ಕಾರ ಉಳುವವನೇ ಭೂಮಿ ಒಡೆಯ ಎಂದು ಮಾಡಿದರೆ ಈಗಿನ ಬಿಜೆಪಿ ಸರ್ಕಾರ ಉಳ್ಳವರೇ ಭೂಮಿ ಒಡೆಯ ಎಂದು ಮಾಡಲು ಮುಂದಾಗಿದೆ” ಎಂದು ಆರೋಪಿಸಿದ್ದರು.
“ಭೂ ಸುಧಾರಣೆ ಕಾಯಿದೆಯ 79ಎಬಿಸಿ ಮತ್ತು 80 ಹಾಗೂ ಸೆಕ್ಷನ್ 63 ಮುಖ್ಯ ತಿದ್ದುಪಡಿಗಳನ್ನು ಪೂರ್ವಾನ್ವಯ ಆಗುವಂತೆ ರದ್ದು ಮಾಡುವುದು ಹಾಗೂ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ವಜಾ ಮಾಡುವುದು ಸರ್ಕಾರದ ಉದ್ದೇಶ. ಕಾನೂನಿನಲ್ಲಿ ನ್ಯೂನತೆ ಇದ್ದರೆ ಮಾತ್ರ ಕಾಲ ಕಾಲಕ್ಕೆ ಬದಲಾವಣೆ ಮಾಡಬೇಕು. ಬದಲಾಗಿ ಕಾರ್ಪೊರೇಟ್ ಕಂಪನಿಗಳಿಗೆ, ಶ್ರೀಮಂತರಿಗೆ, ಬಂಡವಾಳ ಶಾಹಿಗಳಿಗೆ ಕೃಷಿ ಭೂಮಿ ಧಾರೆ ಎರೆಯಲು ಸರ್ಕಾರ ಮುಂದಾಗಿದೆ” ಎಂದಿದ್ದರು.
“ಉಳುವವರಿಗೆ ಭೂಮಿ ಸಿಗಬೇಕು. ಒಬ್ಬರಿಗೆ ಉದ್ಯೋಗ ದೊರಕಬೇಕು ಎಂಬ ಕಾರಣಕ್ಕೆ ಈ ಹಿಂದೆ ಭೂ ಸುಧಾರಣೆ ಕಾಯಿದೆ ಜಾರಿಗೆ ತರಲಾಗಿತ್ತು. ಆದರೆ, ಈಗ ಕಾಯಿದೆ ತಿದ್ದುಪಡಿ ಮಾಡುವುದರಿಂದ ಭೂ ಮಾಫಿಯಾ ಆರಂಭವಾಗುತ್ತದೆ. ರಿಯಲ್ ಎಸ್ಟೇಟ್ ದಂಧೆಗೆ ಅವಕಾಶವಾಗುತ್ತದೆ. ಶ್ರೀಮಂತರು ಭೂಮಿ ಖರೀದಿ ಮಾಡಿ ಲ್ಯಾಂಡ್ ಬ್ಯಾಂಕ್ ಮಾಡಿಕೊಳ್ಳುತ್ತಾರೆ. ಇದರಿಂದ ಸಣ್ಣ ಹಿಡುವಳಿದಾರರಿಗೆ ತೊಂದರೆಯಾಗಿ ಭೂಮಿ ಕಳೆದುಕೊಂಡು ಅವರು ಕೃಷಿ ಕೂಲಿ ಕಾರ್ಮಿಕರಾಗುತ್ತಾರೆ. ಹೀಗಾಗಿ ಸಂಪುಟದ ನಿರ್ಣಯವನ್ನು ತೀವ್ರವಾಗಿ ವಿರೋಧಿಸುತ್ತೇವೆ” ಎಂದು ಸಿದ್ದರಾಮಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದನ್ನೂ ಓದಿದ್ದೀರಾ? ಮೋದಿ ಸುಳ್ಳುಗಳು | ಪ್ರಗತಿಪರ ನೀತಿಗಳು ಮತ್ತು ದೃಢ ಆಡಳಿತ ನೀಡಿದ್ದಾರಾ ಮೋದಿ?
ಕಾಂಗ್ರೆಸ್ ಮಹಿಳೆಯರಿಗೆ ಉಚಿತವಾಗಿ ನೀಡಿರುವ ಶಕ್ತಿ ಯೋಜನೆಗಳ ಕುರಿತು ನಮ್ಮ ಪ್ರಧಾನಿ ಒಂದೆಡೆ ಪದೇ ಪದೆ ಟೀಕಿಸುತ್ತಲೇ ಇರುತ್ತಾರೆ. ಕಾಂಗ್ರೆಸ್ ಗ್ಯಾರಂಟಿಗಳಿಂದ ದೇಶ ದಿವಾಳಿಯಾಗುತ್ತದೆ ಎನ್ನುತ್ತಾರೆ. ಇನ್ನೊಂದೆಡೆ ಕಾಂಗ್ರೆಸ್ ಸರ್ಕಾರ ಎಸ್‌ಸಿ/ಎಸ್‌ಟಿ, ಒಬಿಸಿಗಳಿಗೆ, ಎಲ್ಲ ವರ್ಗದ ಮಹಿಳೆಯರಿಗೆ ಮೋಸ ಮಾಡಿದೆ ಎಂದು ದೂರುತ್ತಾರೆ. ಈಗ ಶಕ್ತಿ ಯೋಜನೆಯಿಂದ ನಮ್ಮ ಮೆಟ್ರೋ ನಷ್ಟದಲ್ಲಿದೆ ಎನ್ನುತ್ತಿದ್ದಾರೆ.
ಆದರೆ, ವಾಸ್ತವವಾಗಿ ಕಳೆದ ವರ್ಷ ಅಂದರೆ 2023ರ ಮೇ ತಿಂಗಳಲ್ಲಿ 1.74 ಕೋಟಿಯಿದ್ದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಈ ವರ್ಷದ ಫೆಬ್ರವರಿ ಅಂತ್ಯಕ್ಕೆ 2.04 ಕೋಟಿಗೆ ಏರಿಕೆಯಾಗಿದೆ. ಜನವರಿಯಲ್ಲಿ ಈ ಸಂಖ್ಯೆ 2.10 ಕೋಟಿಗೆ ತಲುಪಿತ್ತು. ಕಳೆದ ತಿಂಗಳು (ಏ.15) ಒಂದೇ ದಿನ ಮೆಟ್ರೋದಲ್ಲಿ 7,92,000 ಮಂದಿ ಪ್ರಯಾಣ ಮಾಡಿದ್ದಾರೆ. ಇದು ನಮ್ಮ ಮೆಟ್ರೋದಲ್ಲಿಒಂದೇ ದಿನ ಅತಿ ಹೆಚ್ಚು ಪ್ರಯಾಣಿಕರು ಸಂಚಾರ ಮಾಡಿದ ದಾಖಲೆಯಾಗಿದೆ. ಆದರೆ ಮೇಲಿನ ಅಂಶಗಳನ್ನು ಗಮನಿಸಿದರೆ, ಪ್ರಧಾನಿ ಮಾತಿನಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ಅಂಧಭಕ್ತರನ್ನು ಹೊರತುಪಡಿಸಿ ಎಲ್ಲರಿಗೂ ತಿಳಿಯುತ್ತದೆ.
ಕಾಂಗ್ರೆಸ್ ನಿಂದ
ಎಸ್ ಸಿ – ಎಸ್ ಟಿ – ಒಬಿಸಿ ಮಾತ್ರವಲ್ಲ , ದೇಶದ ಎಲ್ಲ ವರ್ಗದ ಜನರಿಗೆ ಮೋದಿ ಆಡಳಿತದಿಂದ ಅನ್ಯಾಯವಾಗಿದೆ.