ಜಾರ್ಖಂಡ್‌ನ ದುಮ್ಕಾದಲ್ಲಿ ಇಂದು ನಡೆದ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಡಕಟ್ಟು ಅಭಿವೃದ್ಧಿಯನ್ನು ಮುನ್ನಡೆಸುವುದಾಗಿ ಪ್ರತಿಜ್ಞೆ ಮಾಡಿದರು. ಜತೆಗೆ ʼವಿಕಸಿತ ಜಾರ್ಖಂಡ್ʼ ಆಗಿ ಪರಿವರ್ತಿಸುವುದಾಗಿ ಹೇಳುತ್ತಾ ತಮ್ಮ ಸುಳ್ಳು ಭಾಷಣಗಳನ್ನು ಆರಂಭಿಸಿದರು.
“ವಿಕಸಿತ ಭಾರತದ ಬದ್ಧತೆಯ ದೃಷ್ಟಿಕೋನವನ್ನು ಯಾವುದೇ ವಿರೋಧ ಶಕ್ತಿಗಳು ಹಳಿ ತಪ್ಪಿಸದಂತೆ ತಡೆಯುತ್ತೇವೆ. ಇಡೀ ದೇಶವು ಕಾಂಗ್ರೆಸ್‌ನ ದುರಾಡಳಿತದಿಂದ ಬೇಸತ್ತಿದ್ದಾಗ 2014ರಲ್ಲಿ ನೀವು ಮೋದಿಯವರನ್ನು ಆಶೀರ್ವದಿಸಿದ್ದೀರಿ. ದೈನಂದಿನ ಹಗರಣಗಳು ನೆನಪಿದೆಯೇ? ಬಡವರ ಹೆಸರಿನಲ್ಲಿ ಕಾಂಗ್ರೆಸ್ ಹಣ ಲೂಟಿ ಮಾಡಿದೆ. ಮೋದಿ ಬಂದು ಅದೆಲ್ಲವನ್ನೂ ನಿಲ್ಲಿಸಿದರು. ಇಂದು, ಸಾರ್ವಜನಿಕ ಹಣವನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಬಳಸಲಾಗುತ್ತದೆ. ಹಿಂದಿನ ಸರ್ಕಾರಗಳಿಂದ ನಿರ್ಲಕ್ಷಿಸಲ್ಪಟ್ಟ ನಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಮೋದಿ ಉನ್ನತೀಕರಿಸಿದರು. ನಾವು ಅವರ ಜೀವನವನ್ನು ಬದಲಾಯಿಸಿದ್ದು, ಅವರ ಸಮಸ್ಯೆಗಳನ್ನು ಪರಿಹರಿಸಿದ್ದೇವೆ” ಎಂದು ತಮ್ಮ ಸುಳ್ಳಿನ ಸುರಿಮಳೆಗೈದರು.(15:10-16:47)
ಕಳೆದ ಚುನಾವಣೆಯಲ್ಲಿ ʼವಿಕಸಿತ ಭಾರತ್ʼ ಎಂದು ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಮೋದಿ ಯಾವತ್ತಿಗೂ ಬಡವರ ಪರ ಕೆಲಸಗಳನ್ನಾಗಲಿ, ಬಡವರ ಪರ ಯೋಜನೆಗಳನ್ನಾಗಲೀ ಮಾಡಲೇ ಇಲ್ಲ. ವಿಕಸಿತ ಭಾರತ(ಬಡತನ ನಿರ್ಮೂಲನೆ)ವೆಂದು ಕೇವಲ ಘೋಷಣೆಗಳನ್ನು ಕೂಗುವ ಮೋದಿ, ಯೋಜನೆಯನ್ನೂ ಸರಿಯಾಗಿ ಕಾರ್ಯರೂಪಕ್ಕೆ ತಂದಿಲ್ಲ. ಎಷ್ಟೋ ಕುಟುಂಬಗಳು ಇಂದಿಗೂ ವಾಸಕ್ಕೆ ಮನೆಗಳಿಲ್ಲದೆ ಬೀದಿಗಳಲ್ಲಿದ್ದಾರೆ. ಒಂದೊತ್ತಿನ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಉದ್ಯೋಗಗಳಿಲ್ಲದೆ ನಿರುದ್ಯೋಗಿ ಯುವಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅಕ್ರಮದ ದಾರಿಗಳನ್ನು ಹಿಡಿಯುತ್ತಿದ್ದಾರೆ. ಮೋದಿಯ ವಿಕಸಿತ ಭಾರತ ನಿಜವೇ ಆಗಿದ್ದಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿರುವುದಾದರೂ ಏಕೆ?
ಈವರೆಗೆ 17 ಲಕ್ಷ ಮಂದಿ ಜಾರ್ಖಂಡಿಗಳನ್ನು ಒಕ್ಕಲೆಬ್ಬಿಸಲಾಗಿದೆ. ಇವರ ಪೈಕಿ ಶೇ.85ರಷ್ಟು ಮಂದಿ ಆದಿವಾಸಿಗಳು. ಮರುವಸತಿಯ ಅದೖಷ್ಟ ದಕ್ಕಿದ್ದು ಕೇವಲ ಶೇ.25ರಷ್ಟು ಮಂದಿಗೆ ಮಾತ್ರ. ಸ್ಥಳೀಯ ನಿವಾಸಿಗಳು ಅವರದ್ದೇ ಸ್ಥಳದಲ್ಲಿ ನಿರ್ಗತಿಕರಾಗಿದ್ದಾರೆ. ಇದು ನಮ್ಮ ಪ್ರಧಾನಿಯ ವಿಕಸಿತ ಭಾರತ.
“ಕಳೆದ 10 ವರ್ಷಗಳಲ್ಲಿ ನಾವು ಸಾಧಿಸಿದ ಕೆಲಸವನ್ನು ಮುಂದಿನ 5 ವರ್ಷಗಳಲ್ಲಿ ಮತ್ತಷ್ಟು ತೆಗೆದುಕೊಳ್ಳಬೇಕು. ಈವರೆಗೆ 4 ಕೋಟಿ ಮಂದಿ ಬಡ ಮಹಿಳೆಯರಿಗೆ ಉಚಿತ ಸಿಲಿಂಡರ್ ಅಡುಗೆ ಅನಿಲ ನೀಡಿದ್ದೇವೆ. ನಾವು 3 ಕೋಟಿ ತಾಯಂದಿರು ಮತ್ತು ಸಹೋದರಿಯರನ್ನು ‘ಲಖ್‌ಪತಿ ದೀದಿ’ಗಳನ್ನಾಗಿ ಮಾಡುತ್ತೇವೆ. ನಾವು ಸರ್ಕಾರ ರಚಿಸಿದ ನಂತರ, ಇನ್ನೂ 3 ಕೋಟಿ ಬಡವರಿಗೆ ಹೊಸ ಮತ್ತು ಶಾಶ್ವತ ಮನೆಗಳನ್ನು ಒದಗಿಸುತ್ತೇವೆ. ನಿಮ್ಮ ವಿದ್ಯುತ್ ಬಿಲ್‌ಗಳನ್ನು ತೊಡೆದುಹಾಕಲು, ನಿಮ್ಮ ಮನೆಗಳ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು ನಾನು ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯನ್ನು ಪ್ರಾರಂಭಿಸಿದ್ದೇನೆ” ಎಂದು ಹೇಳಿದ್ದಾರೆ ಮೋದೀಜಿ.(16:48-22:16)
ಒಂದು ಸಿಲಿಂಡರ್ ಅಡುಗೆ ಅನಿಲವನ್ನು ಉಚಿತವಾಗಿ ನೀಡಿ, ತಿಂಗಳಿಗೆ ಐದು ಕೆ.ಜಿ ಉಚಿತ ಪಡಿತರ ನೀಡಿ ಬಳಿಕ ಏಕಾಏಕಿ ಅಡುಗೆ ಅನಿಲದ ಬೆಲೆಯನ್ನು ಏರಿಸಿದರು. ಬಳಿಕ ಒಪ್ಪತ್ತಿನ ಊಟಕ್ಕೂ ಪರದಾಡುವ ಬಡಕುಟುಂಬಗಳು ಯಥಾಸ್ಥಿತಿಗೆ ಬಂದು ಸಿಲಿಂಡರ್ ಅನ್ನು ಬದಿಗೆ ಸರಿಸಿ ಮತ್ತದೇ ಸೌದೆ ಒಲೆಯಲ್ಲಿ ಅಡುಗೆ ಮಾಡುವಂತಹ ಪರಿಸ್ಥಿತಿ ದೇಶಾದ್ಯಂತ ನಿರ್ಮಾಣವಾಗಿದೆ. ಬಡ ಮಹಿಳೆಯರು ಸಿಲಿಂಡರ್ ತುಂಬಿಸಿಕೊಳ್ಳುವುದಕ್ಕಾಗಿಯೇ ನಡೆಸಿದ ಹೆಣಗಾಟ ಸಾಕಾಗಿ ಸಿಂಡರ್ ಅನ್ನು ಬದಿಗೊತ್ತಿದ್ದಾರೆ. ಹೀಗಿರುವಾಗ ನಮ್ಮ ಪ್ರಧಾನಿ ಯಾರನ್ನು ‘ಲಖ್‌ಪತಿ ದೀದಿ’ಗಳನ್ನಾಗಿ ಮಾಡುತ್ತಿದ್ದಾರೆ? ನೀವೇ ಯೋಚಿಸಿ.
“ಜೆಎಂಎಂ ಮತ್ತು ಕಾಂಗ್ರೆಸ್ ಜಾರ್ಖಂಡ್ ಅನ್ನು ಎಲ್ಲ ಕಡೆಯಿಂದಲೂ ಲೂಟಿ ಮಾಡುತ್ತಿವೆ. ನಿಮ್ಮ ಸುತ್ತಲೂ ನೋಡಿ. ಸುಂದರವಾದ ಪರ್ವತಗಳು, ಆದರೆ ಜಾರ್ಖಂಡ್ ಈಗ ಕರೆನ್ಸಿ ನೋಟುಗಳ ಪರ್ವತಗಳಿಗೆ ಕುಖ್ಯಾತವಾಗಿದೆ. ಕೋಟ್ಯಂತರ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಈ ಹಣ ಎಲ್ಲಿಂದ ಬರುತ್ತಿದೆ? ಮದ್ಯ ಹಗರಣಗಳು, ಟೆಂಡರ್ ಹಗರಣಗಳು ಮತ್ತು ಬೃಹತ್ ಗಣಿಗಾರಿಕೆ ಹಗರಣಗಳು ಜೆಎಂಎಂ-ಕಾಂಗ್ರೆಸ್ ಆಡಳಿತದಲ್ಲಿ ಇದು ನಿರಂತರ” ಎಂದು ತಾವು ಸಭ್ಯರಂತೆ ವಿರೋಧಿ ಪಕ್ಷಗಳನ್ನು ಅಣಕಿಸಿದ್ದಾರೆ.(23:30-25:50)
ಗಣಿಗಾರಿಕೆಯಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸಿದ್ದರಿಂದ ಇಂದು ಬಹುತೇಕರು ನಿರ್ವಸತಿಗಳಾಗಿದ್ದಾರೆ. ಕೋಟಿ ಕೋಟಿ ಆದಿವಾಸಿಗಳನ್ನು ಶೋಷಣೆಯಿಂದ ಬಿಡುಗಡೆ ಮಾಡುವ ಮನಸ್ಸು ಭಾರತ ಸರ್ಕಾರಕ್ಕೆ ಇಲ್ಲ ಎಂಬುದು ವರ್ಷಗಳ ಹಿಂದೆ ವಿಕಿಲೀಕ್ಸ್ ದಾಖಲೆಗಳಿಂದ ಹೊರಬಿದ್ದಿದ್ದ ಅಂಶ.
ಆದಿವಾಸಿಗಳನ್ನು ಅಡವಿಗಳಿಂದ ಒಕ್ಕಲೆಬ್ಬಿಸಿ ಅಲ್ಲಿನ ಭೂಗರ್ಭದಡಿ ಅಡಗಿರುವ ಖನಿಜ ಸಂಪನ್ಮೂಲಗಳನ್ನು ಕಾರ್ಪೊರೇಟುಗಳಿಗೆ ಬಿಡಿಸಿಕೊಡುವುದು ಸರ್ಕಾರದ ಗುಪ್ತ ಕಾರ್ಯಸೂಚಿ. ಅದು ಈಗ ಗೌಪ್ಯವಾಗಿ ಉಳಿದಿಲ್ಲ. ಆದರೂ ಕೂಡಾ ನಮ್ಮ ಪ್ರಧಾನಿ ಬುಡಕಟ್ಟು ಹಿತಾಸಕ್ತಿಗಳನ್ನು ಇಂಡಿಯಾ ಮೈತ್ರಿ ಕೂಟ ನಿರ್ಲಕ್ಷಿಸುತ್ತಿದೆ ಎಂದು ವಿರೋಧ ಪಕ್ಷವನ್ನು ದೂರುತ್ತ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ.
“ಇಂಡಿ ಮೈತ್ರಿಕೂಟ ತೀವ್ರ ಕೋಮುವಾದಿ ರಾಜಕೀಯ ಮತ್ತು ತುಷ್ಟೀಕರಣದಲ್ಲಿ ತೊಡಗಿದೆ, ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರನ್ನು ರಕ್ಷಿಸುವಂತಹ ಕೆಲಸಗಳನ್ನು ಅನುಸರಿಸುತ್ತಿದೆ. ಇವುಗಳನ್ನು ಯಾರಾದರೂ ವಿರೋಧಿಸಿದರೆ ʼಹಿಂದೂಗಳು ಮತ್ತು ಮುಸ್ಲಿಮರನ್ನು ಬಿಜೆಪಿ ವಿಭಜಿಸುತ್ತಿದೆʼ ಎಂದು ಆರೋಪಿಸಿದ್ದಾರೆ. ಮತ್ತೆ ತಮ್ಮ ಅದೇ ಭಾಷಣದಲ್ಲಿ ಮೋದಿಯವರು, “ಇಂಡಿ ಮೈತ್ರಿಕೂಟವು ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ಮೀಸಲಾತಿ ನೀಡಲು ಬಯಸಿದೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯನ್ನು ಲೂಟಿ ಮಾಡಲು ನಾನು ಬಿಡುವುದಿಲ್ಲ” ಎಂದು ಹೇಳುವ ಮೂಲಕ ಮತ್ತೊಮ್ಮೆ ಸುಳ್ಳು ಹಬ್ಬಿಸಿದ್ದಾರೆ.(31:27-37:25)
“ವಿನಮ್ರ ಹಿನ್ನೆಲೆಯಿಂದ ಬಂದ ಮೋದಿ, ದೀರ್ಘಕಾಲದಿಂದ ಕಡೆಗಣಿಸಲ್ಪಟ್ಟಿದ್ದ ದಲಿತ ಮತ್ತು ವಂಚಿತ ಬುಡಕಟ್ಟು ಪ್ರದೇಶಗಳ ಅಗತ್ಯಗಳನ್ನು ಅರ್ಥಮಾಡಿಕೊಂಡಿದ್ದಾರೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ರಚಿಸುವ ಮೂಲಕ, ನಾವು ಹೆಚ್ಚು ಅಗತ್ಯವಿರುವ ಅಭಿವೃದ್ಧಿಯನ್ನು ಪ್ರಾರಂಭಿಸಿದ್ದೇವೆ. ಬುಡಕಟ್ಟು ಪ್ರದೇಶಗಳು ಹೆಚ್ಚಿನ ಪ್ರಯೋಜನವನ್ನು ಪಡೆದಿವೆ. ಹಾಗೂ ಇಂದು ನಮ್ಮ ಜಾರ್ಖಂಡ್, ವಿಶೇಷವಾಗಿ ಸಂತಾಲ್ ಪರಗಣ, ಅಭೂತಪೂರ್ವ ಪ್ರಗತಿ ಮತ್ತು ಬೆಳವಣಿಗೆಯ ಹೊಸ ಆಯಾಮಗಳಿಗೆ ಸಾಕ್ಷಿಯಾಗಿದೆ” ಎಂದು ಹಳಿಯಿಲ್ಲದೆ ರೈಲು ಬೋಗಿಗಳನ್ನು ಬಿಟ್ಟಿದ್ದಾರೆ ಮೋದಿಜಿ.(40:28-41:14)
ಇದನ್ನೂ ಓದಿದ್ದೀರಾ? ಲೋಕಸಭಾ ಚುನಾವಣೆ | ಭವಿಷ್ಯ ನುಡಿದ ‘ಫಲೋಡಿ ಸಟ್ಟಾ ಬಜಾರ್’; ಸರ್ಕಾರ ರಚಿಸುವುದೇ ‘ಇಂಡಿಯಾ’ ಒಕ್ಕೂಟ?
ಈವರೆಗೆ ದಲಿತರ, ಆದಿವಾಸಿಗಳ ಕುರಿತು ಗಮನ ಹರಿಸದ ಮೋದಿ, ಇದೀಗ ಮತಬ್ಯಾಂಕ್‌ಗಾಗಿ ಎಸ್‌ಟಿ ಕ್ಷೇತ್ರವಾಗಿರುವ ದುಮ್ಕಾ ಮತ್ತು ಬಹುತೇಕ ಆದಿವಾಸಿಗಳಿರುವ ಜಾರ್ಖಂಡ್‌ನಲ್ಲಿ ವೋಟ್‌ಬ್ಯಾಂಕ್ ರಾಜಕೀಯದ ಭಾಷಣಗಳನ್ನು ಮಾಡುತ್ತಿದ್ದಾರೆ. ಹತ್ತು ವರ್ಷಗಳ ಕಾಲ ಅವರಿಗಾಗಿ ಏನೂ ಮಾಡದ ಮೋದಿ, ಇದೀಗ ಮುಂದಿನ ಐದು ವರ್ಷಗಳಲ್ಲಿನ ಅಭಿವೃದ್ಧಿಯ ಕುರಿತು ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ.
ಬುಡಕಟ್ಟು ಸಮುದಾಯದ ಮಹಿಳೆಯನ್ನು ಉನ್ನತ ಸ್ಥಾನದ ಹುದ್ದೆಗೇರಿದ್ದೇವೆಂದು ತನ್ನ ಬೆನ್ನು ತಾವೇ ತೊಟ್ಟಿಕೊಳ್ಳುವ ಮೋದಿಜಿ, ಬುಡಕಟ್ಟು ಸಮುದಾಯದ ಕಾರಣದಿಂದ ಮತ್ತು ಮಹಿಳೆ ಎಂಬ ಕಾರಣದಿಂದ ಅವರನ್ನು ಸರ್ಕಾರಿ ಕಚೇರಿಗಳ ಉದ್ಘಾಟನೆಗಾಗಲಿ, ರಾಮ ಮಂದಿರದ ಉದ್ಘಾಟನೆಗಾಗಲಿ ಒಳಗೆ ಬಿಟ್ಟುಕೊಟ್ಟಿರಲಿಲ್ಲ. ಮೋದಿಯೊಬ್ಬರೇ ತನ್ನ ಮನೆಯ ಗೃಹಪ್ರವೇಶವೆಂಬಂತೆ ವರ್ತಿಸಿದ್ದನ್ನು ನಾವೆಲ್ಲಾ ನೋಡಿದ್ದೇವೆ.