ತೆಲಂಗಾಣದ ಜಹೀರಾಬಾದ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ವಿಕಸಿತ ತೆಲಂಗಾಣ ಮತ್ತು ವಿಕಸಿತ ಭಾರತ’ದ ಕುರಿತು ತಮ್ಮ ದೃಷ್ಟಿಕೋನ ಏನೆಂಬುದನ್ನು ಹಂಚಿಕೊಂಡರು. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮತ್ತು ಎಲ್ಲ ನಾಗರಿಕರ ಸುರಕ್ಷತೆ ಹಾಗೂ ಭದ್ರತೆಯೇ ನಮ್ಮ ಸರ್ಕಾರ ಬದ್ಧತೆಯಾಗಿದೆ ಎಂದು ಪುನರುಚ್ಚರಿಸಿದರು.
“ಕಳೆದ 10 ವರ್ಷಗಳಲ್ಲಿ, ಸ್ಥಿರ ಮತ್ತು ನಿರ್ಣಾಯಕ ಎನ್‌ಡಿಎ ಸರ್ಕಾರವು ದೇಶವನ್ನು ಎಷ್ಟು ಮುಂದೆ ಕೊಂಡೊಯ್ಯಬಹುದು ಎಂಬುದನ್ನು ದೇಶ ನೋಡಿದೆ. ಜಗತ್ತು ಪ್ರಗತಿ ಹೊಂದುತ್ತಿದ್ದ ಸಮಯವಿತ್ತು. ಆದರೆ ಕಾಂಗ್ರೆಸ್ ಭಾರತವನ್ನು ಭ್ರಷ್ಟಾಚಾರದ ಕೆಸರಿನಲ್ಲಿ ಸಿಲುಕಿಸಿತು. ಜಗತ್ತು ಆರ್ಥಿಕ ಪ್ರಗತಿ ಸಾಧಿಸುತ್ತಿತ್ತು. ಆದರೆ ಭಾರತವು ಪಾಲಿಸಿ ಪ್ಯಾರಾಲಿಸಿಸ್‌ಗೆ ಬಲಿಯಾಯಿತು. ಆ ಅವಧಿಯಿಂದ ಎನ್‌ಡಿಎ ಬಹಳ ಕಷ್ಟಪಟ್ಟು ಭಾರತವನ್ನು ಹೊರತಂದಿದೆ. ಆದರೆ, ಕಾಂಗ್ರೆಸ್ ದೇಶವನ್ನು ಮತ್ತೆ ಹಿಂದಕ್ಕೆ ಕೊಂಡೊಯ್ಯಲು ಬಯಸಿದೆ” ಎಂದು ಕಾಂಗ್ರೆಸ್ ವಿರುದ್ಧ ಸುಳ್ಳು ಭಾಷಣ ಮಾಡಿದರು.
‘ವಿಕಸಿತ ರಾಜ್ಯಗಳು ವಿಕಸಿತ ಭಾರತ’ ಎನ್ನುವ ಮೋದಿ ತಮ್ಮ ಹತ್ತು ವರ್ಷದ ಆಡಳಿತದಲ್ಲಿ ಬೆರಳೆಣಿಕೆಯಷ್ಟು ಕುಟುಂಬಗಳಿಗೂ ಮನೆ ನಿರ್ಮಾಣ ಮಾಡಿಕೊಟ್ಟಿಲ್ಲ. ವಿಕಸಿತ ಭಾರತ(ಬಡತನ ನಿರ್ಮೂಲನೆ)ವೆಂದು ಕೇವಲ ಘೋಷಣೆಗಳನ್ನು ಕೂಗುವ ಮೋದಿ, ಯೋಜನೆಯನ್ನೂ ಸರಿಯಾಗಿ ಕಾರ್ಯರೂಪಕ್ಕೆ ತಂದಿಲ್ಲ. ಎಷ್ಟೋ ಕುಟುಂಬಗಳು ಇಂದಿಗೂ ವಾಸಕ್ಕೆ ಮನೆಗಳಿಲ್ಲದೆ ಬೀದಿಗಳಲ್ಲಿದ್ದಾರೆ. ಒಂದೊತ್ತಿನ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಉದ್ಯೋಗಗಳಿಲ್ಲದೆ ನಿರುದ್ಯೋಗಿ ಯುವಜನರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅಕ್ರಮದ ದಾರಿಗಳನ್ನು ಹಿಡಿಯುತ್ತಿದ್ದಾರೆ. ಮೋದಿಯ ವಿಕಸಿತ ಭಾರತ ನಿಜವೇ ಆಗಿದ್ದಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿರುವುದಾದರೂ ಏಕೆ?
ದೇಶವನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯುವ ನಮ್ಮ ಪ್ರಧಾನಿ ವಾಸ್ತವವಾಗಿ, ಅವರೇ ತಮ್ಮ ಪಕ್ಷದ ಹೆಸರಿನಲ್ಲಿ ಚುನಾವಣಾ ಬಾಂಡ್‌ಗಳನ್ನು ಮಾಡಿಟ್ಟುಕೊಳ್ಳುತ್ತಾರೆ. ಪ್ರತಿ ಪಕ್ಷಗಳ ನಾಯಕರನ್ನು ಜೈಲಿಗೆ ಕಳುಹಿಸುತ್ತಾರೆ. ಯಾರೂ ಪ್ರಶ್ನಿಸದಂತೆ ಇಂಟರ್ನೆಟ್ ಬಂದ್ ಮಾಡಿಸುತ್ತಾರೆ. ಪೌಷ್ಠಿಕತೆಯ ಸೂಚ್ಯಂಕದಲ್ಲಿ ಭಾರತದ ಸ್ಥಾನ ಎಲ್ಲಿದೆ ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ಇವರನ್ನು ಪ್ರೆಶ್ನಿಸುವವರನ್ನು ಸೀದಾ ಜೈಲಿಗೆ ಕಳುಹಿಸುವ ಮೋದೀಜಿ ದೇಶವನ್ನು ಯಾವುದರತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ. ದೆಹಲಿ ಮುಖ್ಯಮಂತ್ರಿಯನ್ನು ಜೈಲಿಗೆ ಅಟ್ಟಿದ ಬಳಿಕ ಭಾರತದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುತ್ತಿರುವುದನ್ನು ಖಂಡಿಸಿದ ಅಮೇರಿಕ ಕೂಡಾ ಪ್ರಧಾನಿಗೆ ಎಚ್ಚರಿಕೆ ನೀಡಿದೆ.
ಭ್ರಷ್ಟಾಚಾರದ ಬೇಟೆಯಾಡುತ್ತೇನೆ, ಕಪ್ಪುಹಣ ಮರಳಿ ತರುತ್ತೇನೆ ಎಂದು ಪಣ ತೊಟ್ಟಿದ್ದ ಮೋದಿ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಅದಕ್ಕೆ ಬಿಜೆಪಿಯೇ ಕಾರಣ ಎಂದು ರಾಜ್ಯದ ಶೇ.34ಕ್ಕೂ ಹೆಚ್ಚು ಮತದಾರರು ಅಭಿಪ್ರಾಯಪಟ್ಟಿದ್ದಾರೆ. ರೈತರು, ಕೃಷಿ ಕೂಲಿಗಳು, ದೊಡ್ಡ ವ್ಯಾಪಾರಸ್ಥರು, ಪದವೀಧರರು, ಸ್ನಾತಕೋತ್ತರ ಪದವೀಧರರು, ನಿರುದ್ಯೋಗಿಗಳು, ಶಾಲೆ ಬಿಟ್ಟವರು, ಮಹಿಳೆಯರು, ಪುರುಷರು ಹಾಗೂ ಭಿನ್ನ ವಯೋಮಾನದವರೆಲ್ಲರ ಪ್ರಕಾರವೂ ಬಿಜೆಪಿಯೇ ಅತಿ ಹೆಚ್ಚು ಭ್ರಷ್ಟ ಪಕ್ಷವಾಗಿ ಹೊರಹೊಮ್ಮಿದೆ.
ಕೇವಲ ಹತ್ತು ವರ್ಷಗಳ ಮೋದಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿರುವುದು ಜಗಜ್ಜಾಹೀರಾದ ಬಳಿಕ ಬಿಜೆಪಿಯ ಚುನಾವಣಾ ಅಜೆಂಡಾವು ಆಯಾ ರಾಜ್ಯಗಳ ಪರಿಸ್ಥಿತಿಗೆ ತಕ್ಕಂತೆ ವಿಪಕ್ಷಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತ ಮೋದಿ ಮತಬೇಟೆ ನಡೆಸುತ್ತಿದ್ದಾರೆ.
ಎರಡನೇ ಸುಳ್ಳು 15:29 “ತೆಲುಗು ಚಲನಚಿತ್ರೋದ್ಯಮವು ಆರ್‌ಆರ್‌ಆರ್‌ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಭಾರತಕ್ಕೆ ನೀಡಿದೆ. ಆದರೆ, ಇಂದು ತೆಲಂಗಾಣ ಕಾಂಗ್ರೆಸ್, ರಾಜ್ಯದ ಜನರ ಮೇಲೆ ಆರ್‌ಆರ್ ತೆರಿಗೆ(ರಾಹುಲ್ ಗಾಂಧಿ ಮತ್ತು ರೇವಂತ್ ರೆಡ್ಡಿ) ಹೊರೆ ಹಾಕಿದೆ. ಆರ್‌ಆರ್‌ಆರ್ ಚಿತ್ರವು ವಿಶ್ವಾದ್ಯಂತ ಭಾರತದ ಹೆಸರನ್ನು ಮುಂಚೂಣಿಗೆ ತಂದಿದೆ. ಆದರೆ ಈ ಆರ್‌ಆರ್ ತೆರಿಗೆ ಭಾರತಕ್ಕೆ ಅವಮಾನ ತರುತ್ತಿದೆ. ತೆಲಂಗಾಣದಲ್ಲಿ ಈ ಆರ್‌ಆರ್ ತೆರಿಗೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ತೆಲಂಗಾಣದ ಕೈಗಾರಿಕೋದ್ಯಮಿಗಳು ಮತ್ತು ಗುತ್ತಿಗೆದಾರರು ಆರ್‌ಆರ್ ತೆರಿಗೆಯ ನಿರ್ದಿಷ್ಟ ಶೇಕಡಾವಾರು ಪಾವತಿಸಬೇಕಾಗಿದೆ ಎಂದು ಆರೋಪಿಸಲಾಗಿದೆ” ಎಂದು ಮತ್ತಷ್ಟು ಸುಳ್ಳುಗಳನ್ನು ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.
“ಇಲ್ಲಿನ ಒಟ್ಟು ಸಂಗ್ರಹದ ಗಮನಾರ್ಹ ಭಾಗವು ಆರ್‌ಆರ್ ತೆರಿಗೆಯಾಗಿ ದೆಹಲಿಗೆ ಹೋಗುತ್ತದೆ. ಈ ಆರ್‌ಆರ್ ತೆರಿಗೆಯಿಂದ ನೀವೆಲ್ಲರೂ ತೊಂದರೆಗೀಡಾಗಿದ್ದೀರೆಂಬುದು ನನಗೆ ತಿಳಿದಿದೆ. ನಾನು ಹೆಚ್ಚಿನ ವಿವರಗಳನ್ನು ಪರಿಶೀಲಿಸುವ ಅಗತ್ಯವಿಲ್ಲ. ಈ ‘ಆರ್’ ಯಾರು ಮತ್ತು ಈ ಆರ್-ತೆರಿಗೆ ದೆಹಲಿಯಲ್ಲಿ ಎಲ್ಲಿ ಕೊನೆಗೊಳ್ಳುತ್ತದೆ ಎಂದು ಸಾರ್ವಜನಿಕರು ಈಗ ಪ್ರಶ್ನಿಸುತ್ತಿದ್ದಾರೆ” ಎಂದು ಬಂಡಲ್ ಬಿಡುತ್ತಿದ್ದಾರೆ.
ಎನ್‌ಡಿಎ ಸರ್ಕಾರದ ಮೊದಲ ಅವಧಿಯಲ್ಲಿ ದಿ.ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಪರಿಚಯಿಸಿದ ಜಿಎಸ್‌ಟಿ ಆಡಳಿತವನ್ನು ಕಾಂಗ್ರೆಸ್ ಸರ್ಕಾರ ವಿರೋಧಿಸಿತ್ತು. ಭಾರತದ ಬಡಜನರ ಮೇಲೆ ಜಿಎಸ್‌ಟಿ ಹೊರೆಯಾಗುತ್ತದೆ. ಅವುಗಳ ಅನುಷ್ಠಾನದ ರೀತಿಯಿಂದ ದೇಶದ “ಆರ್ಥಿಕತೆಯನ್ನು ಧ್ವಂಸಗೊಳಿಸಿದೆ” ಎಂದು ಕಾಂಗ್ರೆಸ್ ಈ ಮೊದಲೇ ಹೇಳಿತ್ತು.
ಕಳೆದ ಹಣಕಾಸು ವರ್ಷ 2023ರ ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹವು ದಾಖಲೆಯ ಗರಿಷ್ಠ 1.87 ಲಕ್ಷ ಕೋಟಿ ರೂ.ಗೆ ತಲುಪಿದೆ ಮತ್ತು 2024ರ ಮಾರ್ಚ್‌ನಲ್ಲಿ 1.78 ಲಕ್ಷ ಕೋಟಿ ರೂ.ಗಳೊಂದಿಗೆ ಎರಡನೇ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ. ಹಾಗಾದರೆ ಇದನ್ನು ಏನೆಂದು ಹೇಳಬೇಕು ಮೋದಿಯವರೇ. ಈ ಹಣವೆಲ್ಲ ಎಲ್ಲಿ ಹೋಗಿ ತಲುಪುತ್ತದೆ. ಜಿಎಸ್‌ಟಿ ಹೆಸರಿನಲ್ಲಿ ಬಡವರು ತಿನ್ನುವ ಅನ್ನದಿಂದಲೂ ಸುಲಿಗೆ ಮಾಡುತ್ತಿದ್ದೀರಿ, ಮಕ್ಕಳ ನೋಟ್ ಬುಕ್ ಪೆನ್‌ಗಳಿಂದಲೂ ಸುಲಿಗೆ ಮಾಡುತ್ತಿದ್ದೀರಿ. ಬಡವರಿಂದ ಕಿತ್ತುಕೊಳ್ಳುವುದೇ ವಿಕಸಿತ ಭಾರತವೇ?, ಉದ್ಯಮಿಗಳು ದಿನದಿಂದ ದಿನಕ್ಕೆ ಬಿಲಿಯನ್‌ಗಳಾಗುತ್ತಿರುವುದೇ ವಿಕಸಿತ ಭಾರತವೇ?.
ಮೂರನೇ ಸುಳ್ಳು 19:24-24:32 “ನಿಮ್ಮನ್ನು ಲೂಟಿ ಮಾಡಲು ಕಾಂಗ್ರೆಸ್ ʼಪಿತ್ರಾರ್ಜಿತ ತೆರಿಗೆʼ ಎಂಬ ಹೊಸ ಮಾರ್ಗವನ್ನು ಕಂಡುಕೊಂಡಿದೆ. ಅವರ ಆಡಳಿತದಲ್ಲಿ, ನಿಮ್ಮ ಜೀವಮಾನದ ಗಳಿಕೆಯ ಶೇ.55ರಷ್ಟು ಆಸ್ತಿ ನಿಮ್ಮ ಮಕ್ಕಳಿಗೆ ಹೋಗುವುದಿಲ್ಲ. ಬದಲಿಗೆ ಕಾಂಗ್ರೆಸ್ ಮತ ಬ್ಯಾಂಕ್ ಬೆಂಬಲಿಗರಿಗೆ ಹೋಗುತ್ತದೆ. ಅವರ ಅಪಾಯಕಾರಿ ಉದ್ದೇಶಗಳ ಬಗ್ಗೆ ಜಾಗರೂಕರಾಗಿರಿ. ಬಿಆರ್‌ಎಸ್ ತೆಲಂಗಾಣವನ್ನು ಲೂಟಿ ಮಾಡಿದೆ. ಈಗ ಕಾಂಗ್ರೆಸ್ ಅನುಸರಿಸುತ್ತಿದೆ. ಅವರು ಒಮ್ಮೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದ ಕಾಲೇಶ್ವರಂ ಹಗರಣದ ಕಡತಗಳನ್ನು ಅಡಗಿಸುತ್ತಿದ್ದಾರೆ” ಎಂದು ವಿರೋಧ ಪಕ್ಷಗಳ ವಿರುದ್ಧ ಸುಖಾಸುಮ್ಮನೆ ಸುಳ್ಳುಗಳನ್ನು ಸಾರುತ್ತಲೇ ಇದ್ದಾರೆ.
ಕಾಂಗ್ರೆಸ್ ಮತ್ತು ಬಿಆರ್‌ಎಸ್ ಭ್ರಷ್ಟಾಚಾರದ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ದೆಹಲಿ ಮದ್ಯ ಹಗರಣದಲ್ಲಿ ಇದು ಸ್ಪಷ್ಟವಾಗಿದೆ. ಅಲ್ಲಿ ಬಿಆರ್‌ಎಸ್ ಸದಸ್ಯರು ಕಾಂಗ್ರೆಸ್‌ನೊಂದಿಗೆ ಮೈತ್ರಿ ಹೊಂದಿರುವ ಪಕ್ಷದೊಂದಿಗೆ ಭಾಗಿಯಾಗಿದ್ದಾರೆ. ಈ ಹಗರಣದ ವಿರುದ್ಧ ಕ್ರಮ ಕೈಗೊಂಡಾಗ, ಈ ಭ್ರಷ್ಟಾಚಾರ ದಂಧೆಯ ಸದಸ್ಯರು ಪರಸ್ಪರ ಬೆಂಬಲಕ್ಕೆ ಬಂದರು” ಎಂದು ಪ್ರಧಾನಿ ಮೋದಿ ಹೇಳಿದರು.
2014ರಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಆಡಳಿತ ನಡೆಸುತ್ತೇವೆ ಎಂಬ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ 10 ವರ್ಷಗಳಲ್ಲಿ ರೈತರ, ಕಾರ್ಮಿಕರ ಅಭಿವೃದ್ಧಿಗೆ ಯೋಜನೆ ಘೋಷಿಸದೇ ಕಾರ್ಪೊರೇಟ್, ಬಹುರಾಷ್ಟ್ರೀಯ ಕಂಪನಿಗಳ ಪರ ಕೆಲಸ ಮಾಡಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣಾ ಬಾಂಡ್ ಮೂಲಕ ಭಾರೀ ಭ್ರಷ್ಟಾಚಾರ ನಡೆಸಿದ್ದು, ಶೇ 60ರಷ್ಟು ಬಾಂಡ್‌ಗಳನ್ನು ಬಿಜೆಪಿಯೇ ಖರೀದಿಸಿದೆ. ಕೇಂದ್ರ ಸರ್ಕಾರ ಬಹುತೇಕ ಉದ್ಯಮಿಗಳನ್ನು ಬೆದರಿಸಿ ಹಣ ವಸೂಲಿ ಮಾಡಿದೆ. ವಿರೋಧ ಪಕ್ಷದ ಅನೇಕರಿಗೆ ಐ.ಟಿ, ಇ.ಡಿ, ಸಿಬಿಐಯ ಭಯ ಹುಟ್ಟಿಸಿ ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. 10 ವರ್ಷಗಳಲ್ಲಿ ಅನೇಕ ರೈತರು, ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚುನಾವಣೆಗೂ ಮುಂಚೆ ನೀಡಿದ ಭರವಸೆ ಈಡೇರಿಸದೇ ಗೃಹ ಸಚಿವ ಅಮಿತ್ ಶಾ ಜುಮ್ಲಾ ಎಂದು ಹೇಳಿ ಮೋಸ ಮಾಡುತ್ತಿದ್ದಾರೆ.
ತನ್ನ ಚುನಾವಣಾ ಬಾಂಡ್ ಮೇಲಿದ್ದ ಗಮನವನ್ನು ಬೇರೆಡೆಗೆ ತಿರುಗಿಸಲು, ಮೋದಿ ಸರ್ಕಾರವು 2024ರ ಮಾರ್ಚ್ 21ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿತು. ಚುನಾವಣಾ ಆಯೋಗವು ಬಿಜೆಪಿಯನ್ನು 41 ಕಂಪನಿಗಳಿಗೆ ಲಿಂಕ್ ಮಾಡುವ ಡೇಟಾವನ್ನು ಬಿಡುಗಡೆ ಮಾಡಿದ ದಿನ(ಸಿಬಿಐ, ಇಡಿ ಅಥವಾ ಆದಾಯ ತೆರಿಗೆಯ ತನಿಖೆಯನ್ನು ಎದುರಿಸುತ್ತಿದೆ) ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ 2471 ಕೋಟಿ ರೂ.ಗಳನ್ನು ನೀಡಿದ್ದು, ಅದರಲ್ಲಿ 1,698 ಕೋಟಿ ರೂ.ಗಳನ್ನು ಆ ಸಂಸ್ಥೆಗಳ ದಾಳಿಯ ನಂತರ ಬಿಜೆಪಿಗೆ ದೇಣಿಗೆಯಾಗಿ ನೀಡಲಾಗಿದೆ. ಕೇವಲ ಹತ್ತು ವರ್ಷದಲ್ಲೇ ಇಷ್ಟು ಭ್ರಷ್ಟಾಚಾರ ನಡೆಸಿರುವ ಮೋದಿಯವರಿಗೆ ವಿಪಕ್ಷಗಳ ಕುರಿತು ಮಾತನಾಡುವ ಯಾವ ನೈತಿಕತೆ ಇದೆ.
ಮಂದಿ ಸುಳ್ಳು 3| 32:37-33:27 “ಕಾಂಗ್ರೆಸ್ ಆಡಳಿತದಲ್ಲಿ, ಮಹಿಳೆಯರ ಹಕ್ಕುಗಳು ಮಾತ್ರವಲ್ಲ, ಅವರ ಸುರಕ್ಷತೆಯೂ ಅಪಾಯದಲ್ಲಿದೆ. ಮಹಿಳೆಯರ ಸುರಕ್ಷತೆ ಮತ್ತು ವೋಟ್ ಬ್ಯಾಂಕ್ ನಡುವೆ ಆಯ್ಕೆ ಮಾಡುವಾಗ, ಕಾಂಗ್ರೆಸ್ ವೋಟ್ ಬ್ಯಾಂಕ್‌ಗೆ ಆದ್ಯತೆ ನೀಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿ ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಯರ ಸುರಕ್ಷತೆ ಮತ್ತು ಗೌರವಕ್ಕೆ ಆದ್ಯತೆ ನೀಡುತ್ತದೆ” ಎಂದು ಹಸಿ ಸುಳ್ಳುಗಳನ್ನು ಹೇಳಿದರು.
ಮಹಿಳೆಯರ ಸಬಲೀಕರಣ ಎಂದೇಳುವ ಮೋದಿ, ಮಣಿಪುರದಲ್ಲಿ ಕುಕಿ ಬುಡಕಟ್ಟು ಸಮುದಾಯದ ಮೂವರು ಮಹಿಳೆಯರನ್ನು ಬೆತ್ತಲುಗೊಳಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಮತ್ತು ಒಬ್ಬ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕೃತ್ಯಕ್ಕೆ ಮೌನ ಮುರಿಯಲಿಲ್ಲ, ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನವನ್ನೂ ಹೇಳಲಿಲ್ಲ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದವರ ಬದುಕು ಬೀದಿಗೆ ಬಂದಾಗಲೇ, ಮಹಾನ್ ದೇಶಾಭಿಮಾನಿ ಕ್ರೀಡಾಲೋಕದಲ್ಲಿ ತಮ್ಮದೇ ಸಾಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆ, ಗೌರವ ಹೆಚ್ಚಿಸಿದವರಿಗಾದ ಅನ್ಯಾಯದ ವಿರುದ್ಧ ಮಹಿಳಾ ಕುಸ್ತಿಪಟುಗಳ ಪರವಾಗಿ ಇದೇ ಪ್ರಧಾನಿ ಒಂದೇ ಒಂದು ಮಾತನ್ನೂ ಆಡಲಿಲ್ಲ. ಇದೇ ವೇಳೆ ಅತ್ಯಾಚಾರಿಗಳನ್ನು ಬೆಂಬಲಿಸಿ ತಮ್ಮೊಟ್ಟಿಗೆ ಇಟ್ಟುಕೊಂಡು ಸಂಸತ್ ಭವನದಲ್ಲಿ ಧಾರ್ಮಿಕ ಆಚರಣೆಯಲ್ಲಿ ಮುಳುಗಿದ್ದರು.
ಹೈದರಾಬಾದ್‌ನ ಜಲ್ಪಲ್ಲಿಯಲ್ಲಿ ಮಾರ್ಚ್ 30ರಂದು 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದು ಹತ್ಯೆ ಮಾಡಿ ಕೈಗಾರಿಕಾ ಪ್ರದೇಶದಲ್ಲಿ ಬಿಸಾಕಿ ಹೋಗಿದ್ದರು. 7ನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕಿಯ ಕುಟುಂಬ ಕರ್ನಾಟಕದಿಂದ ವಲಸೆ ಬಂದಿತ್ತು. ಇಂತಹ ಪುಟ್ಟ ಮಕ್ಕಳ ಮೇಲೂ ಅತ್ಯಾಚಾರ ತಡೆಗಟ್ಟಲಾಗದ ಮೋದಿಗೆ ಮಹಿಳೆಯರ ಸುರಕ್ಷತೆಯ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ.
ಕರ್ನಾಟಕದ ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದ್ದರೂ ಕೂಡಾ ಮತಬ್ಯಾಂಕ್‌ಗಾಗಿ ಕರ್ನಾಟಕಕ್ಕೆ ಬಂದಿದ್ದ ಮೋದಿ ಆ ಕುರಿತು ಒಂದು ಮಾತಾಡುವುದಿರಲಿ, ತುಟಿಗಳನ್ನೂ ಬಿಚ್ಚಲಿಲ್ಲ. ಇಂತಹ ಜನಪ್ರತಿನಿಧಿ ಮಹಿಳೆಯರನ್ನು ಹೇಗೆ ರಕ್ಷಿಸಲು ಸಾಧ್ಯವಾದೀತು?
2022ರಲ್ಲಿ ಭಾರತದಲ್ಲಿ 31,516 ಅತ್ಯಾಚಾರ ಪ್ರಕರಣಗಳು ಮತ್ತು 4,45,256 ದೌರ್ಜನ್ಯ ಪ್ರಕರಣಗಳು ನಡೆದಿವೆ. ಅಂದರೆ, ದಿನಕ್ಕೆ ಸರಾಸರಿ 86 ಅತ್ಯಾಚಾರ ಮತ್ತು ಪ್ರತಿ ಗಂಟೆಗೆ ಸರಾಸರಿ 49 ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆದಿವೆ. ಇದು ದೂರು ದಾಖಲಾದ ಅಥವಾ ಮಾಧ್ಯಮಗಳಲ್ಲಿ ವರದಿಯಾದ ಪ್ರಕರಣಗಳು. ಇನ್ನು, ಬೆಳಕಿಗೆ ಬಾರದೇ ಇರುವ ಸಾವಿರಾರು ಪ್ರಕರಣಗಳು ಈ ದೇಶದಲ್ಲಿ ನಡೆದಿವೆ.
ಮೋದಿ ಸುಳ್ಳು 4(34:20-38:32) “ಇಂದು, ಅಯೋಧ್ಯೆಯ ಭವ್ಯವಾದ ರಾಮ ಮಂದಿರವು ಬಲವಾದ, ನಿರ್ಣಾಯಕ ಮತ್ತು ದೇಶಭಕ್ತ ಸರ್ಕಾರದ ಶಕ್ತಿಗೆ ಸಾಕ್ಷಿಯಾಗಿದೆ. ಈ ಐತಿಹಾಸಿಕ ಕ್ಷಣವನ್ನು 500 ವರ್ಷಗಳಿಂದ ಕಾಯಲಾಗುತ್ತಿತ್ತು. ನಿಮ್ಮ ಒಂದು ಮತವು ಇತಿಹಾಸವನ್ನು ಸೃಷ್ಟಿಸಬಹುದು ಎಂಬುದಕ್ಕೆ ರಾಮಮಂದಿರದ ಘಟನೆ ಪುರಾವೆಯಾಗಿದೆ. ಕಾಂಗ್ರೆಸ್‌ಗೆ ಅವರ ವೋಟ್ ಬ್ಯಾಂಕ್ ಅತ್ಯುನ್ನತವಾಗಿದೆ. ಅವರ ಮತ ಬ್ಯಾಂಕ್ ಮುಖ್ಯವೋ ಹೊರತು ಹಿಂದೂಗಳ ನಂಬಿಕೆ ಅವರಿಗೆ ಮುಖ್ಯವಲ್ಲ. ಅದಕ್ಕಾಗಿಯೇ ತೆಲಂಗಾಣದಲ್ಲಿ ನಮ್ಮ ಹಬ್ಬಗಳನ್ನು ನಿಷೇಧಿಸುವ ಪ್ರಯತ್ನಗಳು ನಡೆಯುತ್ತಿವೆ. ವೋಟ್ ಬ್ಯಾಂಕ್ ಓಲೈಸಲು ತೆಲಂಗಾಣದಲ್ಲಿ ರಾಮನವಮಿ ಮೆರವಣಿಗೆಗಳನ್ನೂ ಕೂಡಾ ನಿಷೇಧಿಸಿದ್ದರು” ಎಂದು ಪ್ರಧಾನಿ ಮೋದಿ ಕೋಮುದ್ವೇಷ ಉಂಟುಮಾಡುವ ಭಾಷಣದ ಮೂಲಕ ಸುಳ್ಳುಗಳನ್ನು ಹರಡುತ್ತಿದ್ದಾರೆ.
ರಂಜ಼ಾನ್ ಹಾಗೂ ರಾಮನವಮಿ ಹಬ್ಬಗಳು ಒಂದೇ ಸಮಯದಲ್ಲಿ ಬಂದಿದ್ದರಿಂದ ಗಲಬೆಗಳು ನಡೆಯಬಾರದೆಂಬ ಕಾರಣಕ್ಕೆ ತೆಲಂಗಾಣದಲ್ಲಿ ರಾಮನವಮಿ ಮೆರವಣಿಗೆ ನಿಷೇಧಿಸಲಾಗಿತ್ತು. ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ರೆಜಿನಗರ ಪ್ರದೇಶದಲ್ಲಿ ರಾಮನವಮಿ ವೇಳೆ ಕಲ್ಲು ತೂರಾಟ ನಡೆದಿತ್ತು. ಹಿಂಸಾಚಾರದ ಆತಂಕ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ ʼಲೋಕಸಭೆ ಚುನಾವಣೆಯನ್ನು “ಧ್ರುವೀಕರಣಗೊಳಿಸಲು ಬಿಜೆಪಿ ಅಶಾಂತಿಯನ್ನು ಹುಟ್ಟುಹಾಕುತ್ತಿದೆ” ಎಂದು ಆರೋಪಿಸಿದ್ದರು. ಹಗಾಗಿ ತೆಲಂಗಾಣದಲ್ಲಿಯೂ ಇಂತಹ ಘಟನೆಗಳು ನಡೆಯಬಾರದೆಂದು ಮುನ್ನೆಚ್ಚರಿಕೆಯಿಂದ ತೆಲಂಗಾಣ ಮುಖ್ಯಮಂತ್ರಿ ರಾಮನವಮಿ ಸಂಭ್ರಮಕ್ಕೆ ನಿಷೇಧವಿತ್ತು. ಈ ಕುರಿತು ರಾಜ್ಯದ ಜನರ ಹಿತವನ್ನು ಚಿಂತಿಸದ ಮೋದಿ ಮತ ಬ್ಯಾಂಕ್ ಎಂದು ಆರೋಪಿಸಿ ಜನರ ನಡುವೆ ಕೋಮುದ್ವೇಷ ಬಿತ್ತುತ್ತಿದ್ದಾರೆ. ರಾಮ ಮಂದಿರ ಉದ್ಘಾಟನೆ ಕುರಿತು ಹೇಳುತ್ತಾ ತಮ್ಮ ಬೆರಳನ್ನು ತೋರಿಸುವ ಮೂಲಕ ಮೋದಿ ಪ್ತ ಮತಬೇಟೆ ನಡೆಸುತ್ತಿದ್ದಾರೆ
ಮೋದಿ ಸುಳ್ಳು 5(39:54-40:34)”ತೆಲಂಗಾಣದಲ್ಲಿ, ಲಿಂಗಾಯತ ಮತ್ತು ಮರಾಠಾ ಸಮುದಾಯದ ಜನರು 26 ಜಾತಿಗಳನ್ನು ಹೊಂದಿದ್ದಾರೆ. ಅವರು ಬಿಸಿಗೆ ಸೇರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಲಿಂಗಾಯತ, ಮರಾಠಾ ಮತ್ತು 26 ಜಾತಿಗಳನ್ನು ಬಿಸಿ ಪಟ್ಟಿಗೆ ಸೇರಿಸಲು ಕಾಂಗ್ರೆಸ್ ಬಯಸುವುದಿಲ್ಲ. ಆದರೆ ಅವರು ರಾತ್ರೋರಾತ್ರಿ ಮುಸ್ಲಿಮರನ್ನು ಬಿಸಿ ಪಟ್ಟಿಯಲ್ಲಿ ಸೇರಿಸಿದ್ದಾರೆ” ಎಂದು ಪ್ರಧಾನಿ ಹೇಳಿದರು.
“ತೆಲಂಗಾಣವು ಅವಿಭಜಿತ ಆಂಧ್ರಪ್ರದೇಶದ ಭಾಗವಾಗಿದ್ದಾಗ, ಆಂಧ್ರಪ್ರದೇಶವು 2004 ಮತ್ತು 2009ರಲ್ಲಿ ಕಾಂಗ್ರೆಸ್‌ಗೆ ದಾಖಲೆ ಸಂಖ್ಯೆಯ ಸ್ಥಾನಗಳನ್ನು ನೀಡಿತು. ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಬಗ್ಗೆ ಚಿಂತಿಸುವ ಬದಲು, ಕಾಂಗ್ರೆಸ್ ಅವರ ಮೀಸಲಾತಿಯನ್ನು ಕಸಿದುಕೊಳ್ಳಲು ಪ್ರಾರಂಭಿಸಿತು. ಅವರು ಆಂಧ್ರಪ್ರದೇಶವನ್ನು ತುಷ್ಟೀಕರಣದ ಪ್ರಯೋಗಶಾಲೆಯನ್ನಾಗಿ ಮಾಡಿದರು. ಹಿಂದುಳಿದ ವರ್ಗಗಳ ಮೀಸಲಾತಿ ಹಕ್ಕುಗಳನ್ನು ತೆಗೆದುಹಾಕಿದರು ಮತ್ತು ಅವುಗಳನ್ನು ಮುಸ್ಲಿಮರಿಗೆ ನೀಡಿದರು. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವ ಈ ಅಸಂವಿಧಾನಿಕ ಕಾಯ್ದೆ ಬಾಬಾ ಸಾಹೇಬ್ ಅವರ ಭಾವನೆಗಳಿಗೆ ವಿರುದ್ಧವಾಗಿದೆ.
ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ, ಅವಕಾಶ ವಂಚಿತರಾದವರಿಗೆ ಮೀಸಲಾತಿ ಕೊಡಬೇಕೆಂದು ಸಂವಿಧಾನ ಹೇಳಿದೆ. ನರೇಂದ್ರ ಮೋದಿಯವರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಂವಿಧಾನ ತಿದ್ದುಪಡಿ ಮಾಡಿ ಅವರಿಗೂ 10% ಮೀಸಲಾತಿ ನೀಡಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚನೆ ಮಾಡಿರುವ ಮೂಲ ಸಂವಿಧಾನದಲ್ಲಿ ಅದು ಇಲ್ಲ. ಆದರೂ ಸಂವಿಧಾನ ತಿದ್ದುಪಡಿ ಮಾಡಿ ಮೀಸಲಾತಿ ನೀಡಿದೆ.
ಇದನ್ನೂ ಓದಿದ್ದೀರಾ? ಮೋದಿ ಸುಳ್ಳುಗಳು ಭಾಗ-4 | ಮೋದಿ ಆಡಳಿತದಲ್ಲಿ ನಿಜವಾಗಿಯೂ ಸಾಮಾಜಿಕ ನ್ಯಾಯ ಸಿಕ್ಕಿದೆಯೇ?
ಹಿಂದುಳಿದ ವರ್ಗಗಳ ಮೀಸಲಾತಿ(ಒಬಿಸಿ) ಪಟ್ಟಿಗೆ ಮುಸ್ಲಿಮರ ಸೇರ್ಪಡೆಯು ಮಂಡಲ್ ವರದಿಯನ್ನು ಆಧರಿಸಿ 30 ವರ್ಷಗಳ ಹಿಂದೆಯೇ ಆಗಿದೆ. ಇದನ್ನು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ಕೂಡ ಒಪ್ಪಿಕೊಂಡಿದೆ. ಈ ಸತ್ಯ ಮರೆಮಾಚಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪತ್ರಿಕೆಗಳಲ್ಲಿ ಬಿಜೆಪಿ ಸುಳ್ಳು ಜಾಹೀರಾತು ನೀಡುವ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ.
ಮುಸಲ್ಮಾನರಿಗೆ ಕಳೆದ 30 ವರ್ಷದಿಂದ ಮೀಸಲಾತಿ ಜಾರಿಯಲ್ಲಿದೆ. ನಂತರ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಲಿಂಗಾಯತರು, ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಲು ಮುಸಲ್ಮಾನರಿಗಿದ್ದ ಮೀಸಲಾತಿಯನ್ನು ತೆಗೆದು ಹಾಕಿದರು. ಮುಸಲ್ಮಾನರಿಗೆ ನೀಡಿದ ಮೀಸಲಾತಿ ಧರ್ಮಾಧಾರಿತ ಅಲ್ಲ, ಸಂವಿಧಾನದ ಆರ್ಟಿಕಲ್ 15 ಹಾಗೂ 16 ನಂತೆ ನೀಡಲಾಗಿದೆ. ಬಸವರಾಜ ಬೊಮ್ಮಾಯಿಯವರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ, ಮುಸಲ್ಮಾನರಿಗೆ ನೀಡುವ ಮೀಸಲಾತಿಯನ್ನು ಮುಂದುವರೆಸುವುದಾಗಿ ಮುಚ್ಚಳಿಕೆಯನ್ನು ಕೂಡ ಬರೆದುಕೊಟ್ಟರು. ನರೇಂದ್ರ ಮೋದಿಯವರ ಹೇಳಿಕೆ ಹಾಗೂ ಬಿಜೆಪಿ ಪರ ಇರುವ ಜಾಹೀರಾತು ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ.
ತಮ್ಮ ಸುಳ್ಳಿನ ಸುರಿಮಳೆಗಳನ್ನು ಸುರಿದ ಬಳಿಕ ಮೋದಿಯವರು, “ಮುಂಬರುವ ಚುನಾವಣೆಯಲ್ಲಿ ತಮಗೆ ಭರ್ಜರಿ ಗೆಲುವು ಸಾಧಿಸುವಂತೆ ನೋಡಿಕೊಳ್ಳಬೇಕು. ದೇಶದ ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಕನಸುಗಳನ್ನು ಈಡೇರಿಸಲು ಹಗಲು ರಾತ್ರಿ ದಣಿವರಿಯದೆ ಕೆಲಸ ಮಾಡುತ್ತೇನೆ” ಎಂದು ಸುಳ್ಳು ಭರವಸೆಗಳನ್ನು ನೀಡಿದರು.
ಭ್ರಷ್ಟಾಚಾರ, ಮಹಿಳೆಯರ ಅತ್ಯಾಚಾರ, ದಲಿತರ ಮೇಲಿನ ದೌರ್ಜನ್ಯಗಳು, ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಬಿಜೆಪಿ ಆಡಳಿತದಲ್ಲಿ ಇಂದೆಂದೂ ಕಂಡು ಕೇಳರಿಯದಷ್ಟು ನಡೆದಿವೆ. ಆದರೂ ಕೂಡಾ ಲಜ್ಜೆಗೆಟ್ಟ ಮೋದಿ ಇದಾವುದಕ್ಕೂ ಉತ್ತರಿಸದೆ, ಸಮಸ್ಯೆಗಳನ್ನು ಪರಿಹರಿಸಲು ತಾಕತ್ ಇಲ್ಲದಿದ್ದರೂ ವಿಪಕ್ಷಗಳ ವಿರುದ್ಧ ಮಾತನಾಡಿಕೊಂಡೇ ಮತಭೇಟೆ ನಡೆಸುತ್ತಿದ್ದಾರೆ. ಆದರೆ, ಹತ್ತು ವರ್ಷಗಳ ಅವಧಿಯ ನಿಮ್ಮ ಸಾಧನೆ ಎಲ್ಲಿ ಸ್ವಾಮಿ, ನಿಮ್ಮ ಅಭಿವೃದ್ಧಿಗಳೆಲ್ಲಿ, ನಿಮ್ಮ ಪ್ರಣಾಳಿಕೆ ಯೋಜನೆಗಳೆಲ್ಲಿ, ಎಷ್ಟು ಭರವಸೆಗಳನ್ನು ಈಡೇರಿಸಿದ್ದೀರಾ?. ವಿಕಸಿತ ಭಾರತ ಎಲ್ಲಿಯವೆರೆಗೆ ಸಾಗಿದೆ. ನಿಮ್ಮ ಸಾಧನೆಗಳ ಮೇಲೆ ಮತ ಕೇಳಬೇಕಲ್ಲವೇ?. ವಿಪಕ್ಷಗಳ ಬಗ್ಗೆ ಮಾತನಾಡಿ, ಮತ ಕೇಳುವುದಲ್ಲವೇ? ನಿಜವಾದ ಮತಬ್ಯಾಂಕ್