ಏಳು ಕೋಟಿ ಕನ್ನಡಿಗರಿಗೆ ಆಗಿರುವ ಅನ್ಯಾಯವನ್ನು ಸಮರ್ಥಿಸಿಕೊಳ್ಳಲು ಹೋದ ನರೇಂದ್ರ ಮೋದಿ ಸರ್ಕಾರ ಇತ್ತೀಚಿಗೆ ತಪರಾಕಿ ಹಾಕಿಸಿಕೊಂಡು ನಮ್ಮ ಪಾಲಿನ ಒಂದಿಷ್ಟು ಅನುದಾನವನ್ನು ನೀಡಿತ್ತು. ನಮ್ಮ ತೆರಿಗೆಯಿಂದ ನಮ್ಮ ಪಾಲನ್ನು ಕೊಡಿ. ನಾವು ಎರಡನೇ ದರ್ಜೆಯ ಪ್ರಜೆಗಳಲ್ಲ, ನಾವೂ ಕೂಡ ಸಮಾನ ಪ್ರಜೆಗಳು ಎಂದು ಜನತೆ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯದ ಮೇಲೆ ಅನ್ಯಾಯ ಮಾಡುತ್ತಿದೆ. ಕರ್ನಾಟಕದ ಜನರು ನಾಲ್ಕು ಲಕ್ಷ ಕೋಟಿ ರೂಪಾಯಿ ತೆರಿಗೆ ಕಟ್ಟುತ್ತಿದ್ದು, ದೇಶದಲ್ಲೇ ತೆರಿಗೆ ನೀಡಿಕೆಯಲ್ಲಿ ರಾಜ್ಯವು ಎರಡನೇ ಸ್ಥಾನದಲ್ಲಿದೆ. ಆದರೆ ಕೇಂದ್ರ ನೀಡುತ್ತಿರುವುದು ಕೇವಲ 50 ಸಾವಿರ ಕೋಟಿ ರೂಪಾಯಿಗಳಿಗಿಂತಲೂ ಕಡಿಮೆ. ಇದರಲ್ಲಿ 37,000 ಕೋಟಿ ರೂ. ತೆರಿಗೆ ಪಾಲು ಪಡೆದರೆ, ಕೇಂದ್ರ ಪ್ರಾಯೋಜಿತ ಯೋಜನೆಗೆ 13,000 ಕೋಟಿ ರೂ. ನೀಡಲಾಗುತ್ತಿದೆ.
ಕರ್ನಾಟಕ ತನ್ನ ಸ್ವಂತ ತೆರಿಗೆ ಸಂಗ್ರಹದಲ್ಲಿ ಉತ್ತಮ ಪ್ರದರ್ಶನವನ್ನು ಸಾಧಿಸಿದ್ದರೂ, ರಾಜ್ಯದಲ್ಲಿ ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸಲು ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನಕ್ಕೇರಲು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕಳೆದ ಹತ್ತು ವರ್ಷಗಳಿಂದ ಸರಿಯಾದ ಪಾಲನ್ನು ನೀಡದೆ ರಾಜ್ಯಕ್ಕೆ ಅನ್ಯಾಯವೆಸಗುತ್ತಲೇ ಬರುತ್ತಿದೆ.
ರೂ. 4 ಲಕ್ಷ 30 ಸಾವಿರ ಕೋಟಿ ತೆರಿಗೆ ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಆದರೆ ಮೋದಿ ಸರ್ಕಾರ ನೀಡುತ್ತಿರುವುದು 73 ಸಾವಿರ ಕೋಟಿ ರೂ. ಮಾತ್ರ. ಶೇಕಡವಾರಿನಲ್ಲಿ ರೂ.100 ತೆರಿಗೆ ಕೊಟ್ಟರೆ ನಮಗೆ ರೂ.12 ಗಳು ಮಾತ್ರ ನೀಡಲಾಗುತ್ತಿದೆ.
ಹಿಂದಿನ ಹಣಕಾಸು ಆಯೋಗದ ಶಿಫಾರಸ್ಸುಗಳಿಂದಾಗಿ ಕರ್ನಾಟಕ ಭಾರೀ ನಷ್ಟವನ್ನು ಅನುಭವಿಸಬೇಕಾಗಿ ಬಂದಿದೆ. 14ನೇ ಹಣಕಾಸು ಆಯೋಗದಲ್ಲಿ ಶೇ. 4.7 ಹಾಗೂ 15 ನೇ ಹಣಕಾಸು ಆಯೋಗದಲ್ಲಿ ಶೇ. 3.64 ರಷ್ಟು ರಾಜ್ಯಕ್ಕೆ ನಿಗದಿಯಾಗಿ ಶೇ 1.07 ರಷ್ಟು ಕಡಿಮೆಯಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ 2ನೇ ರಾಜ್ಯವಾಗಿರುವ ಕರ್ನಾಟಕಕ್ಕೆ ಅತಿ ಹೆಚ್ಚು ಅನ್ಯಾಯವಾಗಿದೆ.
2019-2020ರಲ್ಲಿ 36,675 ಕೋಟಿ ರೂಪಾಯಿ ತೆರಿಗೆ ಬಂದಿದೆ. 2020-21ರಲ್ಲಿ 31,180 ಕೋಟಿಗೆ ತೆರಿಗೆ ಕುಸಿದಿದೆ. ಈ ಕುಸಿತವಾಗಿರುವ 6,465 ಕೋಟಿ ರೂಪಾಯಿಯನ್ನು ಸರಿದೂಗಿಸಬೇಕೆಂದು ಹಣಕಾಸು ಆಯೋಗ ಹೇಳಿದೆ. ಆದರೆ ಕೇಂದ್ರ ಇದಕ್ಕೂ ಮೀನಾಮೇಷ ಎಣಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವೇಗೌಡರ ಧೃತರಾಷ್ಟ್ರ ಸಿಂಡ್ರೋಮ್ ಮತ್ತು ಮೋದಿ ವಾಷಿಂಗ್ ಮಷೀನ್
ಈಗಿನ ವ್ಯವಸ್ಥೆ ಆದಾಯದ ದೂರ ವ್ಯಾಪ್ತಿಯನ್ನು ಪರಿಗಣಿಸುತ್ತಿದ್ದು, ಈ ಪ್ರಕಾರ ಕರ್ನಾಟಕವು ಅತಿ ಹೆಚ್ಚು ತಲಾ ಆದಾಯವಿರುವ ರಾಜ್ಯ. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಕ್ಕೆ ತನ್ನ ಕೊಡುಗೆಗೆ ತಕ್ಕ ಪ್ರತಿಫಲ ದೊರಯದಿರುವುದು ನಿಜಕ್ಕೂ ವಿಪರ್ಯಾಸ.
ಅತ್ಯುತ್ತಮ ವಿತ್ತೀಯ ಕಾರ್ಯಕ್ಷಮತೆ ಹೊಂದಿರುವ ರಾಜ್ಯ ಎಂದು ದಾಖಲೆ ಹೊಂದಿರುವ ಕರ್ನಾಟಕಕ್ಕೆ ಅದರ ದಕ್ಷತೆಗಾಗಿ ಯಾವುದೇ ಪ್ರೋತ್ಸಾಹಕಗಳು ದೊರೆಯುತ್ತಿಲ್ಲ. ಕರ್ನಾಟಕದ ಭಾರೀ ವಿತ್ತೀಯ ಕಾರ್ಯಕ್ಷಮತೆ ಅತ್ಯುತ್ತಮವಾಗಿದ್ದು ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಘೋಷಿಸಿದ ಮೊದಲ ರಾಜ್ಯವೆಂಬ ಹೆಗ್ಗಳಿಕೆ ಪಡೆದಿದೆ.
ದಕ್ಷಿಣದ ಉಳಿದ ರಾಜ್ಯಗಳಿಗೂ ಅನ್ಯಾಯ
ಅದೇ ರೀತಿ ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಿಗೂ ಮೋದಿ ನೇತೃತ್ವದ ಕೇಂದ್ರದ ತಾತ್ಸಾರ ನಿಂತಿಲ್ಲ. ಒಂದು ರೂ. ತೆರಿಗೆ ಪಾವತಿಸುತ್ತಿರುವ ತಮಿಳುನಾಡಿಗೆ ಕೇವಲ 29 ಪೈಸೆ ನೀಡುತ್ತಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಸರ್ಕಾರಗಳು ಕೂಡ ನಿರ್ಲಕ್ಷ್ಯಕ್ಕೊಳಗಾಗಿವೆ. ತಮ್ಮ ಪಾಲಿನ ಹಣ ಪಡೆಯಲು ಮೋದಿ ಸರ್ಕಾರವನ್ನು ಬೇಡುವ ಸ್ಥಿತಿ ಬಂದಿದೆ. ಕೇರಳ ಕೂಡ ಕರ್ನಾಟಕದಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ತನ್ನ ಪಾಲಿನ ಕೊಂಚ ಪಾಲು ಪಡೆದುಕೊಂಡಿತ್ತು. ಕೇಂದ್ರ ಸರ್ಕಾರ ಆಗಲೂ ಛೀಮಾರಿ ಹಾಕಿಸಿಕೊಂಡಿತ್ತು.
ತೆರಿಗೆಯಿಂದ ಸಂಗ್ರಹವಾದ ಹಣವನ್ನು ಕರ್ನಾಟಕ ಮತ್ತು ಇತರ ದಕ್ಷಿಣದ ರಾಜ್ಯಗಳಿಗೆ ಹಂಚಿಕೆ ಮಾಡುವಲ್ಲಿ ಕೇಂದ್ರ ಸರ್ಕಾರವು ನ್ಯಾಯಯುತವಾಗಿಲ್ಲ ಎಂಬ ಆರೋಪವಿದೆ. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಕಡಿಮೆ ಹಣ ನೀಡುತ್ತಿದೆ ಎಂದು ನೀವು ಭಾವಿಸುತ್ತೀರಾ? ಎಂದು ಅಂತಿಮವಾಗಿ ಕರ್ನಾಟಕದ ಜನರನ್ನು ಈದಿನ. ಕಾಂ ರಾಜ್ಯದ ಉದ್ದಗಲಕ್ಕೂ ಪ್ರಶ್ನೆ ಕೇಳಿತ್ತು.
ಪ್ರಶ್ನೆಗೆ ಉತ್ತರಿಸಿದ ಉತ್ತರ ಕರ್ನಾಟಕದವರಲ್ಲಿ ಹೆಚ್ಚು ಮಂದಿ, ಅಂದರೆ ಶೇ. 39.79 ಜನರು ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ಶೇ. 33.81 ಮಂದಿ ಗೊತ್ತಿಲ್ಲ ಎಂದು ಹೇಳಿದ್ದರೂ ಇವರು ಕೇಂದ್ರದ ಬಗ್ಗೆ ಬೇಸರ ತೋರಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಶೇ. 26.04 ಜನರು ಕೇಂದ್ರದಿಂದ ಅನುದಾನ ಬಂದಿದೆ ಎಂದು ಉತ್ತರ ನೀಡಿದ್ದಾರೆ.
ಈ ಪ್ರಶ್ನೆಗೆ ಉತ್ತರಿಸಿದವರಲ್ಲಿ ಹೆಚ್ಚಿನ ಸಂಖ್ಯೆಯ ಪುರುಷರು ಅನ್ಯಾಯವಾಗಿದೆ ಎಂದಿದ್ದಾರೆ. ಶೇ. 44 ರಷ್ಟು ಪುರುಷರು ಕೇಂದ್ರವು ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಹೇಳಿದ್ದರೆ, ಶೇ. 35 ರಷ್ಟು ಪುರಷರು ಗೊತ್ತಿಲ್ಲ ಎಂದಿದ್ದಾರೆ. ಶೇ 21 ಪುರುಷರು ಅನ್ಯಾಯವಾಗಿಲ್ಲ ಎಂದಿದ್ದು, ಇವರು ಕೇಂದ್ರದ ಪರ ಇದ್ದಾರೆ.
ಮಹಿಳೆಯರಲ್ಲಿ ಶೇ. 38 ರಷ್ಟು ರಾಜ್ಯಕ್ಕೆ ಕೇಂದ್ರ ಅನ್ಯಾಯ ಮಾಡಿದೆ ಎಂದಿದ್ದರೆ, ಶೇ. 35 ರಷ್ಟು ಮಂದಿ ಗೊತ್ತಿಲ್ಲ ಎಂದಿದ್ದಾರೆ. ಶೇ. 27 ಮಹಿಳೆಯರು ಅನ್ಯಾಯ ಆಗಿಲ್ಲ ಎಂದು ಹೇಳಿದ್ದಾರೆ.
ಪ್ರಶ್ನೆಗೆ ಉತ್ತರಿಸಿದ ಉದ್ಯೋಗಿಗಳಲ್ಲಿ ತಿಂಗಳಿಗೆ 10 ಸಾವಿರಕ್ಕೂ ಕಡಿಮೆ ಆದಾಯ ಗಳಿಸುತ್ತಿರುವ ವ್ಯಾಪಾರಿಗಳು, ಸರಿಸುಮಾರು 25 ಸಾವಿರ ರೂ. ಮತ್ತು ಅದಕ್ಕೂ ಸ್ವಲ್ಪ ಅಧಿಕ ಆದಾಯಗಳಿಸುತ್ತಿರುವ ವ್ಯಾಪಾರಿಗಳು ಹಾಗೂ ನಿರುದ್ಯೋಗಗಳು ಕರ್ನಾಟಕಕ್ಕೆ ಕೇಂದ್ರವು ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡಿದೆ ಎಂದು ಹೇಳಿದ್ದಾರೆ.
50 ಸಾವಿರ ರೂ. ಮತ್ತು 1 ಲಕ್ಷ ರೂ.ಗಿಂತ ಹೆಚ್ಚು ಆದಾಯ ಗಳಿಸುತ್ತಿರುವ ವ್ಯಾಪಾರಿಗಳು/ಸ್ವಉದ್ಯೋಗಿಗಳು ಹಾಗೂ 1 ಲಕ್ಷ ರೂ.ಗಳಿಗೆ ಅಧಿಕ ತಿಂಗಳ ಸಂಬಳ ಪಡೆಯುತ್ತಿರುವ ಉದ್ಯೋಗಿಗಳು ಕೇಂದ್ರದಿಂದ ರಾಜ್ಯಕ್ಕೆ ಅಷ್ಟು ಹೆಚ್ಚು ಅನ್ಯಾಯವಾಗಿಲ್ಲ ಎಂದು ತಿಳಿಸಿದ್ದಾರೆ.
ಉತ್ತರ ನೀಡಿದವರಲ್ಲಿ ಸ್ನಾತಕೋತ್ತರ ಪದವಿ ಪಡೆದವರು, ಅಂದರೆ, ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದಿರುವವರು ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಹೇಳಿದ್ದಾರೆ. ವೈದ್ಯಕೀಯ, ಇಂಜಿನಿಯರಿಂಗ್, ಕಾನೂನು ರೀತಿಯ ವೃತ್ತಿಪರ ಶಿಕ್ಷಣ ಪಡೆದವರಲ್ಲಿ ಹೆಚ್ಚಿನವರು ಅನ್ಯಾಯ ಆಗಿಲ್ಲ ಎಂದು ತಿಳಿಸಿದ್ದಾರೆ.
ಕೇಂದ್ರವನ್ನು ಸಮರ್ಥಿಸಿಕೊಂಡಿರುವವರಲ್ಲಿ ಹೆಚ್ಚಿನವರು ಹೆಚ್ಚಿನ ಆದಾಯ, ವೃತ್ತಿಪರ ಶಿಕ್ಷಣ ಪಡೆದಿರುವವರು ಎಂಬುದು ಗಮನಿಸಬೇಕಾದ ಸಂಗತಿ. ಶ್ರೀಮಂತಿಕೆ ಜೀವನ ನಡೆಸುತ್ತಿರುವವರಿಗೆ ದೇಶದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿಯಿಲ್ಲ ಎಂಬುದು ಕಂಡುಬಂದಿದೆ.