ಮೋದಿ ಸುಳ್ಳುಗಳು: ಭಾಗ-6 | ಕಾಂಗ್ರೆಸ್‌ನ 10 ವರ್ಷದ ಖರ್ಚನ್ನು ಮೋದಿ ಒಂದೇ ವರ್ಷದಲ್ಲಿ ಮಾಡಿದ್ದು ಯಾರ ಪ್ರಗತಿಗೆ?

Date:

Advertisements

ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಬನಸ್ಕಾಂತದ ದೀಸಾ ನಗರದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ದೂರದೃಷ್ಟಿ ಮತ್ತು ಜನರ ಸೇವೆ ಮಾಡುವ ಬದ್ಧತೆಯ ಕೊರತೆಯಿದೆ. ಕಾಂಗ್ರೆಸ್ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ಬದಲು ವೈಯಕ್ತಿಕ ದಾಳಿಗಳನ್ನು ಆಶ್ರಯಿಸಿತು. ಇಂದಿಗೂ ಕಾಂಗ್ರೆಸ್‌ಗೆ ಸಮಸ್ಯೆಗಳಿಲ್ಲ. ಜನರಿಗಾಗಿ ಕೆಲಸ ಮಾಡುವ ಉತ್ಸಾಹವಿಲ್ಲ. 2014ರಲ್ಲಿ ಕಾಂಗ್ರೆಸ್‌ನ ಸಮಸ್ಯೆಗಳು ಯಾವುವೆಂದು ನಿಮಗೆ ನೆನಪಿದೆಯೇ? ಚಾಯ್ ವಾಲಾ ಏನು ಮಾಡುತ್ತಾನೆ? ಎಂದು ಟೀಕಿಸಿದರು ಆದರೆ ದೇಶವು ಅವರಿಗೆ ಉತ್ತರಕೊಟ್ಟಿತು. ಒಂದು ಕಾಲದಲ್ಲಿ 400 ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದವರು ಈಗ 40ಕ್ಕೆ ಇಳಿದಿದ್ದಾರೆ” ಎಂದು ಪ್ರಧಾನಿ ಹೇಳಿದರು.

2014ರ ಚುನಾವಣೆ ಗೆಲ್ಲಲು ಮೋದಿ ಪ್ರಣಾಳಿಕೆಯಲ್ಲಿ‌ ಕೆಲವು ಅಂಶಗಳನ್ನು ಅಳವಡಿಸಿ ಸುಳ್ಳು ಭರವಸೆಗಳನ್ನು ನೀಡಿದರು. ಹಾಗಾಗಿ ಮೋದಿಯಿಂದ ಸಂಪೂರ್ಣ ಭ್ರಷ್ಟಾಚಾರ ನಿರ್ಮೂಲನೆ ಆಗಬಹುದೇನೋ ಎಂದು ತಿಳಿದು ಬಿಜೆಪಿಗೆ ಮತನೀಡಿ ಅಧಿಕಾರದ ಗದ್ದುಗೆಗೆ ಕೂರಿಸಿದ್ದರು. ಮೋದಿ ಪ್ರಣಾಳಿಕೆಯಲ್ಲಿ ಅಂತಹದ್ದೇನಿತ್ತೆಂದು ನೋಡುವುದಾದರೆ,

  1. ವಿದೇಶಗಳಲ್ಲಿರುವ ಅದರಲ್ಲೂ ಸ್ವಿಸ್ ಬ್ಯಾಂಕ್​ಗಳಲ್ಲಿರುವ ಭಾರತೀಯರ ಕಪ್ಪು ಹಣವನ್ನು ದೇಶಕ್ಕೆ ವಾಪಸ್ ತರುವುದು.
  2. ಆಧುನಿಕ ತಂತ್ರಜ್ಞಾನದ ನೆರವಿನಿಂದ ರೈತರಿಗೋಸ್ಕರ ಇಡೀ ದೇಶಕ್ಕೆ ಒಂದು ಸಮಗ್ರ ರಾಷ್ಟ್ರೀಯ ಕೃಷಿ ಮಾರುಕಟ್ಟೆ ರಚಿಸುವುದು; ಬೆಲೆ ಸ್ಥಿರತೆಯ ಫಂಡ್ ಸ್ಥಾಪಿಸುವುದು.
  3. ಇ-ಆಡಳಿತದ ಮೂಲಕ ಭ್ರಷ್ಟಾಚಾರವನ್ನು ನಿಯಂತ್ರಿಸುವುದು; ಹಾಗೆಯೇ ಇ-ಆಡಳಿತದಿಂದ ಗ್ರಾಮೀಣ ಭಾಗದಲ್ಲಿ ಐಟಿ ಉದ್ಯೋಗಗಳನ್ನು ಸೃಷ್ಟಿಸುವುದು.
  4. ವಿವಿಧ ನೀತಿ ಪರಿಷ್ಕರಣೆ, ಬ್ಯಾಂಕಿಂಗ್ ಕ್ಷೇತ್ರಗಳ ಸುಧಾರಣೆ ಹೀಗೆ ವಿವಿಧ ಕ್ರಮಗಳ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸುವುದು.
  5. ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಒಂದು ಸಮಗ್ರ ಆರೋಗ್ಯ ನೀತಿ ಜಾರಿಗೆ ತರುವುದು; ಸರಕಾರಿ ಆಸ್ಪತ್ರೆಗಳ ಆಧುನೀಕರಣ, ಪ್ರತಿಯೊಂದು ರಾಜ್ಯದಲ್ಲೂ ಎಐಐಎಂಎಸ್​ನಂತಹ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪಿಸುವುದು; ಯೋಗ ಮತ್ತು ಆಯುರ್ವೇದ ಮೂಲದ ಔಷಧಿಗಳ ಬಳಕೆಗೆ ಒತ್ತು ಕೊಡುವುದು.
  6. ತೆರಿಗೆ ಪದ್ಧತಿಯಲ್ಲಿ ಸುಧಾರಣೆ ತರುವುದು; ಸರಳ ತೆರಿಗೆಯ ವ್ಯವಸ್ಥೆ ರೂಪಿಸುವುದು; ಎಲ್ಲಾ ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಎಸ್​ಟಿ ಜಾರಿಗೆ ತರುವುದು.
  7. ಕೃಷಿ, ಕೈಗಾರಿಕೆ, ಮಧ್ಯಮ-ಸಣ್ಣ ಉದ್ಯಮ ಮತ್ತು ಸೇವಾ ಕ್ಷೇತ್ರಗಳಲ್ಲಿ ಕಾರ್ಯಕ್ಷಮತೆ ಹೆಚ್ಚಿಸುವುದು ಹಾಗೂ ಹೊಸ ಉದ್ಯೋಗ ಸೃಷ್ಟಿಸುವುದು.
  8. ಸರಕು ಸಾಗಣೆ ಮತ್ತು ಕೈಗಾರಿಕೆ ಕಾರಿಡಾರ್​ಗಳ ನಿರ್ಮಾಣಕ್ಕೆ ಒತ್ತು ಕೊಡುವುದು; ಹೊಸ ಹೆದ್ದಾರಿ ಮತ್ತು ರೈಲ್ವೆ ಮಾರ್ಗಗಳ ಮೂಲಕ ಈಶಾನ್ಯ ಪ್ರದೇಶಗಳು ಹಾಗೂ ಜಮ್ಮು ಕಾಶ್ಮೀರ ರಾಜ್ಯವನ್ನು ಭಾರತದ ಇತರೆ ಪ್ರದೇಶಗಳಿಗೆ ಸುಲಭ ಸಂಪರ್ಕ ಸಾಧ್ಯವಾಗಿಸುವುದು; ಈ ಮೂಲಕ ಈ ಪ್ರದೇಶಗಳ ಅಭಿವೃದ್ಧಿ ಸಾಧಿಸುವುದು.
  9. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಬಾಂಧವ್ಯ ವೃದ್ಧಿಸುವುದು; ರಾಜ್ಯಗಳ ನಿರ್ಧಾರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವುದು; ಟೀಮ್ ಇಂಡಿಯಾವೆಂದರೆ ಪ್ರಧಾನಿ ಜೊತೆ ದೆಹಲಿಯಲ್ಲಿರುವ ತಂಡವಷ್ಟೇ ಅಲ್ಲ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಇತರ ಅಂಗಗಳನ್ನೂ ಒಳಗೊಳ್ಳುವುದು ಎಂದು ಸುಳ್ಳು ಭರವಸೆಗಳನ್ನು ನೀಡಿದ್ದು, ಮತದಾರರ ದಿಕ್ಕು ತಪ್ಪಿಸಿದ್ದರು.

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಆಡಳಿತ ಸರ್ವಾಧಿಕಾರದತ್ತ ವಾಲುತ್ತಿರುವುದನ್ನು ಕಂಡ ಭಾರತೀಯರು ಈ ಬಾರಿ ಬದಲಾವಣೆ ತರುವರಾ ಎಂಬುದನ್ನು ಕಾದು ನೋಡಬೇಕಿದೆ.

Advertisements

“ಮೀಸಲಾತಿಯನ್ನು ಕೊನೆಗೊಳಿಸಲು ಬಿಜೆಪಿ 400 ಸ್ಥಾನಗಳನ್ನು ಗೆಲ್ಲಲು ಬೇಡಿಕೆ ಇಟ್ಟಿದೆ ಎಂದು ಕಾಂಗ್ರೆಸ್ ಹೇಳುತ್ತದೆ. ಆದರೆ, ಧರ್ಮದ ಆಧಾರದ ಮೇಲೆ, ಎಸ್ಟಿ, ಎಸ್ಸಿ, ಒಬಿಸಿ ಮತ್ತು ಹಿಂದುಳಿದ ವರ್ಗಗಳಿಗೆ ನೀಡಲಾಗುವ ಮೀಸಲಾತಿಯನ್ನು ಕಡಿಮೆ ಮಾಡುವ ಮೂಲಕ ಮುಸ್ಲಿಮರಿಗೆ ಮೀಸಲಾತಿ ನೀಡಲು ಕಾಂಗ್ರೆಸ್ ಬಯಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಈ ಪ್ರಯೋಗವನ್ನು ಮಾಡಿದೆ” ಎಂದು ಹಸಿ ಸುಳ್ಳುಗಳನ್ನು ಹೇಳಿದ್ದಾರೆ.

“ರಾತ್ರೋರಾತ್ರಿ ಕರ್ನಾಟಕವು ಎಲ್ಲ ಮುಸ್ಲಿಮರನ್ನು ಒಬಿಸಿ ಎಂದು ಘೋಷಿಸಿ, ಅವರಿಗೆ ಶೇ.5ರಷ್ಟು ಮೀಸಲಾತಿ ನೀಡಿತು. ಇದನ್ನು ದೇಶಾದ್ಯಂತ ಮಾಡಲು ಬಯಸುತ್ತಿದ್ದಾರೆ. ಬಿಜೆಪಿ ಇರುವವರೆಗೂ ಎಸ್‌ಸಿ/ಎಸ್‌ಟಿ, ಒಬಿಸಿ ಮತ್ತು ಸಾಮಾನ್ಯ ವರ್ಗದ ಜನರಿಗೆ ನೀಡಿರುವ ಮೀಸಲಾತಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರವು ಎಸ್‌ಸಿ/ಎಸ್‌ಟಿ, ಒಬಿಸಿ ಸಮುದಾಯಗಳ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ” ಎಂದು ದ್ವೇಷ ಭಾಷಣಗಳನ್ನು ಮಾಡುತ್ತಿದ್ದಾರೆ.

ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ, ಅವಕಾಶ ವಂಚಿತರಾದವರಿಗೆ ಮೀಸಲಾತಿ ಕೊಡಬೇಕೆಂದು ಸಂವಿಧಾನವೇ ಹೇಳಿದೆ. ನರೇಂದ್ರ ಮೋದಿಯವರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಂವಿಧಾನ ತಿದ್ದುಪಡಿ ಮಾಡಿ ಅವರಿಗೂ 10% ಮೀಸಲಾತಿ ನೀಡಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚನೆ ಮಾಡಿರುವ ಮೂಲ ಸಂವಿಧಾನದಲ್ಲಿ ಅದು ಇಲ್ಲ. ಆದರೂ ಸಂವಿಧಾನ ತಿದ್ದುಪಡಿ ಮಾಡಿ ಮೀಸಲಾತಿ ನೀಡಿದೆ.

ಹಿಂದುಳಿದ ವರ್ಗಗಳ ಮೀಸಲಾತಿ(ಒಬಿಸಿ) ಪಟ್ಟಿಗೆ ಮುಸ್ಲಿಮರ ಸೇರ್ಪಡೆಯು ಮಂಡಲ್ ವರದಿಯನ್ನು ಆಧರಿಸಿ 30 ವರ್ಷಗಳ ಹಿಂದೆಯೇ ಆಗಿದೆ. ಇದನ್ನು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ಕೂಡ ಒಪ್ಪಿಕೊಂಡಿದೆ. ಈ ಸತ್ಯ ಮರೆಮಾಚಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸುಳ್ಳು ಪ್ರಚಾರ ಮಾಡುವ ಮೂಲಕ ನರೇಂದ್ರ ಮಂದಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ.

ಮುಸಲ್ಮಾನರಿಗೆ ಕಳೆದ 30 ವರ್ಷದಿಂದ ಮೀಸಲಾತಿ ಜಾರಿಯಲ್ಲಿದೆ. ನಂತರ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಲಿಂಗಾಯತರು, ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಲು ಮುಸಲ್ಮಾನರಿಗಿದ್ದ ಮೀಸಲಾತಿಯನ್ನು ತೆಗೆದು ಹಾಕಿದರು. ಮುಸಲ್ಮಾನರಿಗೆ ನೀಡಿದ ಮೀಸಲಾತಿ ಧರ್ಮಾಧಾರಿತ ಅಲ್ಲ, ಸಂವಿಧಾನದ ಆರ್ಟಿಕಲ್ 15 ಹಾಗೂ 16 ನಂತೆ ನೀಡಲಾಗಿದೆ. ಬಸವರಾಜ ಬೊಮ್ಮಾಯಿಯವರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ, ಮುಸಲ್ಮಾನರಿಗೆ ನೀಡುವ ಮೀಸಲಾತಿಯನ್ನು ಮುಂದುವರೆಸುವುದಾಗಿ ಮುಚ್ಚಳಿಕೆಯನ್ನು ಕೂಡ ಬರೆದುಕೊಟ್ಟರು. ನರೇಂದ್ರ ಮೋದಿಯವರ ಹೇಳಿಕೆ ಹಾಗೂ ಬಿಜೆಪಿ ಪರ ಇರುವ ಜಾಹೀರಾತು ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ.

“60 ವರ್ಷಗಳ ಕಾಲ ದೇಶವನ್ನು ಆಳಿದ ಪಕ್ಷವು ನಕಲಿ ಕಾರ್ಖಾನೆಯಾಗಿ ಮಾರ್ಪಟ್ಟಿದೆ. ಅವರು ʼಮೊಹಬ್ಬತ್ ಕಿ ದುಕಾನ್ʼ ಎಂದು ಕರೆಯುವುದು ವಾಸ್ತವವಾಗಿ ನಕಲಿ ಕಾರ್ಖಾನೆಯಾಗಿದೆ. ಕಾಂಗ್ರೆಸ್ ವೀಡಿಯೊಗಳು ನಕಲಿ, ಕಾಂಗ್ರೆಸ್ ಮಾತುಗಳು ನಕಲಿ, ಕಾಂಗ್ರೆಸ್ ಭರವಸೆಗಳು ನಕಲಿ, ಕಾಂಗ್ರೆಸ್ ಘೋಷಣೆಗಳು ನಕಲಿ, ಕಾಂಗ್ರೆಸ್ ಉದ್ದೇಶಗಳು ನಕಲಿ” ಇಂತಹ ಮೋಸದ ಅಭ್ಯಾಸಗಳ ವಿರುದ್ಧ ಬಿಜೆಪಿ ದೃಢವಾಗಿ ನಿಲ್ಲುತ್ತದೆ. ಪ್ರಾಮಾಣಿಕತೆ ಮತ್ತು ಸಮಗ್ರತೆಯೊಂದಿಗೆ ರಾಷ್ಟ್ರದ ಸೇವೆಗೆ ಬದ್ಧವಾಗಿದೆ” ಎಂದು ಹೇಳಿದರು.

60 ವರ್ಷಗಳಿಂದಲೂ ಜನರು ನಿರ್ಭೀತಿಯಿಂದ ಬದುಕುತ್ತಿದ್ದರು. ಅವರ ಜೀವನ ನಡೆಸಲು ಯಾವುದೇ ಖರ್ಚು ವೆಚ್ಚಗಳು ದುಬಾರಿಯಾಗಿರಲಿಲ್ಲ. ಎಲ್ಲ ವರ್ಗ, ಸಮುದಾಯಗಳು ಸಾಮರಸ್ಯದಿಂದ ಬದುಕುತಿದ್ದರು. ಯಾವುದೇ ಧರ್ಮೀಯ ದ್ವೇಷಗಳಿರಲಿಲ್ಲ. ನಾವೆಲ್ಲರೂ ಭಾರತೀಯರೆಂದು ನೆಮ್ಮದಿಯಿಂದ ಬದುಕುತ್ತಿದ್ದರು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಭಾರದ ಕೋಮು ಗಲಬೆಗೆ ವಿಶ್ವಾದ್ಯಂತ ಕುಖ್ಯಾತಿ ಗಳಿಸಿದೆ. ಮತ ಬ್ಯಾಂಕ್‌ಗಾಗಿ ದಲಿತ, ಆದಿವಾಸಿಗಳ ಬಗ್ಗೆ ಮಾತನಾಡುವ, ದಲಿತರ, ಆದಿವಾಸಿಗಳ ರಕ್ಷಣೆ ಮಾಡುತ್ತೇವೆನ್ನುವ ಮೋದಿ ಯಾವತ್ತು ದಲಿತರ ಪರ ನಿಂತಿದ್ದಾರೆ, ಎಷ್ಟು ದಲಿತ ದೌರ್ಜನ್ಯಗಳನ್ನು ತಡೆದಿದ್ದಾರೆ. ತಳ ಸಮುದಾಯಗಳ ಕುರಿತು ಮಾತನಾಡುವ ಯಾವುದೇ ನೈತಿಕತೆ ಮೋದಿಗಿಲ್ಲ.

ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದೆ. ಕರ್ನಾಟಕದಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಮೂರು ಮಂದಿ ಮುಖ್ಯಮಂತ್ರಿಗಳಾದರು. ಆದರೆ, ಕಾಂಗ್ರೆಸ್‌ ಸರ್ಕಾರವನ್ನು ಸಿದ್ದರಾಮಯ್ಯ ಒಬ್ಬರೇ 5 ವರ್ಷಗಳ ಕಾಲ ಆಳಿದರು. ಬಿಜೆಪಿಯ ಬಂಡತನವನ್ನು ಕಂಡ ಕನ್ನಡಿಗರು ಮತ್ತೊಮ್ಮೆ ಭಾರೀ ಬಹುಮತಗಳೊಂದಿಗೆ ಕಾಂಗ್ರೆಸ್‌ ಸರ್ಕಾರವನ್ನು ತಂದಿದ್ದಾರೆ. ಕಾಂಗ್ರೆಸ್‌ ಬಡವರ ಪರವಿದ್ದು, 5 ಗ್ಯಾರಂಟಿಯ ಭರವಸೆಗಳನ್ನು ಈಡೇರಿಸಿದೆ.

ಕಾಂಗ್ರೆಸ್‌ ಗ್ಯಾರಂಟಿಗಳಿಂದ ದೇಶ ದಿವಾಳಿಯಾಗುತ್ತದೆ ಎಂದ ಮೋದಿಯಿಂದ ಸಾಮಾಜಿಕ ನ್ಯಾಯ ಸಿಗಲು ಸಾಧ್ಯವೇ? ವಿಕಸಿತ ಭಾರತವಾಗಲು ಸಾಧ್ಯವೇ? ಮಹಿಳಾ ಸಬಲೀಕರಣ ಸಾಧ್ಯವೇ?

“ಇಂಡಿ ಮೈತ್ರಿಕೂಟವು ಮೊದಲ ಹಂತದಲ್ಲಿ ಜರ್ಜರಿತವಾಗಿತ್ತು. ಎರಡನೇ ಹಂತದಲ್ಲಿ ಮುರಿದುಬಿದ್ದಿತು. ಬಳಿಕ ಇವರು ಲವ್‌ ಶಾಪ್‌ ನಡೆಸಲು ಹೊರಟರು. ಆದರೆ ಅಂಗಡಿಯು ನಕಲಿ ವಿಡಿಯೋಗಳನ್ನು ತಯಾರಿಸಲು ಪ್ರಾರಂಭಿಸಿತು. ಈ ಜನರು ದೇಶವನ್ನು ಅನೇಕ ವರ್ಷಗಳ ಕಾಲ ಆಳಿದರು. ಅವರು ಅನೇಕ ಪ್ರಧಾನ ಮಂತ್ರಿಗಳನ್ನು ಹೊಂದಿದ್ದರು. ಆದರೂ ಇಂದು ಅವರಿಗೆ ಜನರ ಮುಂದೆ ಹೋಗಲು ಧೈರ್ಯವಿಲ್ಲ. ಅದಕ್ಕಾಗಿಯೇ ಅವರು ಈಗ ನಕಲಿ ವೀಡಿಯೊಗಳನ್ನು ಮಾಡುತ್ತಿದ್ದಾರೆ.

ಇದೀಗ ಅವರ ಸುಳ್ಳುಗಳೂ ಕೆಲಸ ಮಾಡದ ಸ್ಥಿತಿಗೆ ತಲುಪಿವೆ. ಹೀಗಾಗಿ ಕೃತಕ ಬುದ್ಧಿಮತ್ತೆ ಬಳಸಿ, ನನ್ನ ಮುಖಕ್ಕೆ ಬೇರೆ ಯಾವುದೋ ಧ್ವನಿ ಸೇರಿಸಿ ನಕಲಿ ವಿಡಿಯೊಗಳನ್ನು ತಯಾರು ಮಾಡುತ್ತಿದ್ದಾರೆ. ಅದನ್ನು ‘ಲವ್‌ ಶಾಪ್‌ನಲ್ಲಿಟ್ಟು ಮಾರಾಟ ಮಾಡುತ್ತಿದ್ದಾರೆ. ಇಂಥ ಅಂಗಡಿಯ ಬಾಗಿಲು ಮುಚ್ಚಬೇಕು” ಎಂದರು.

ಸೋಲಿನ ಭಯದಲ್ಲಿರುವ ಮೋದಿ ವಿಪಕ್ಷಗಳ ವಿರುದ್ಧ ಸುಳ್ಳುಗಳ ಸುರಿಮಳೆ ಸುರಿಸುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ʼಹಿಂದುತ್ವʼ ಕೆಲಸ ಮಾಡುವುದಿಲ್ಲವೆಂದು ತಿಳಿದ ಮೋದಿ ದ್ವೇಷ ಭಾಷಣ ಮಾಡಲು ಆರಂಭಿಸಿದ್ದಾರೆ. ಮತದಾರರಲ್ಲಿ ವಿಪಕ್ಷಗಳ ಮೇಲೆ ದ್ವೇಷ ಉಂಟಾಗುವಂತೆ ವಿಷಬೀಜಗಳನ್ನು ಬಿತ್ತುತ್ತಿದ್ದಾರೆ. ಕಳೆದ 10 ವರ್ಷಗಳ ಮೋದಿ ಆಡಳಿತದಲ್ಲಿಯೇ ವಾಟ್ಸಪ್‌ ಯುನಿವರ್ಸಿಟಿ ಆರಂಭವಾಗಿದ್ದು, ವಿಪಕ್ಷಗಳ ವಿರುದ್ಧ ಅಪಪ್ರಚಾರಗಳನ್ನು ಹರಡಿದರು. ಇದೀಗ ಮೋದಿ ಬುಡಕ್ಕೆ ಬಂದಾಗ ತನ್ನ ತಪ್ಪುಗಳನ್ನು ಮರೆಮಾಚಲು ʼಲವ್‌ ಶಾಪ್‌ ಕಾರ್ಖಾನೆʼಯಂತಹ ಅಂಗಡಿಗಳನ್ನು ಮುಚ್ಚಬೇಕು ಎಂದೆಲ್ಲ ಲೇವಡಿ ಮಾಡುತ್ತಿದ್ದಾರೆ.

“ಕಾಂಗ್ರೆಸ್ 10 ವರ್ಷಗಳಲ್ಲಿ ಖರ್ಚು ಮಾಡಿದ್ದನ್ನು ಇಂದು ನಾವು 1 ವರ್ಷದಲ್ಲಿ ಖರ್ಚು ಮಾಡುತ್ತಿದ್ದೇವೆ. 80 ಕೋಟಿ ದೇಶವಾಸಿಗಳ ತಟ್ಟೆಗಳು ತುಂಬಿವೆ. ಅವರ ಒಲೆ ಉರಿಯುತ್ತಲೇ ಇರುತ್ತದೆ. ಇಂದು, 800 ಮಿಲಿಯನ್ ಜನರು ಉಚಿತ ಆಹಾರವನ್ನು ಪಡೆಯುತ್ತಿದ್ದಾರೆ. ಅದರಲ್ಲಿ ನೀವು ಕೂಡಾ ಅದರ ಅರ್ಹತೆಯನ್ನು ಪಡೆಯುತ್ತೀದ್ದೀರಿ” ಎಂದು ಸುಳ್ಳು ಭಾಷಣಗಳನ್ನು ಮಾಡಿದರು.

ಹತ್ತು ವರ್ಷದ ಖರ್ಚನ್ನು ಮೋದಿ ಒಂದೇ ವರ್ಷದಲ್ಲಿ ಖರ್ಚು ಮಾಡಿದ್ದರಿಂದಲೇ ದೇಶದಲ್ಲಿ ನೂರಾರು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ದೇಶವನ್ನು ದಿವಾಳಿ ಮಾಡಿದ್ದಾರೆ. 2014ರಲ್ಲಿ ಕೇವಲ ರೂ.55 ಲಕ್ಷ ಕೋಟಿಯಷ್ಟು ಇದ್ದ ಭಾರತದ ಸಾಲ ಈ ಹಣಕಾಸಿನ ವರ್ಷದಲ್ಲಿ ರೂ.183.67 ಲಕ್ಷ ಕೋಟಿಗೆ ತಲುಪಿದೆ. ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ಅವರು ಮಾಡಿರುವ ಸಾಲ ರೂ.123 ಲಕ್ಷ ಕೋಟಿ. ಅಂದರೆ ಪ್ರತಿಯೊಬ್ಬ ಭಾರತೀಯನ ತಲೆ ಮೇಲೆ 92 ಸಾವಿರ ರೂಪಾಯಿಗಳ ಸಾಲದ ಹೊರೆ ಇದೆ. “ಸಬ್ ಕಾ ಸಾಥ್ ಸಬ್ ಕಾ ವಿಕಾಸ್”‌ ಎನ್ನುತ್ತಲೇ “ಸಬ್ ಕೋ ಸಾಲ”” ನೀಡಿದ್ದಾರೆ.

lad

ಮೋದಿ ಒಂದೇ ವರ್ಷದಲ್ಲಿ ಖರ್ಚು ಮಾಡಿರುವ ಹಣದಿಂದ ಬಡವರ ಉದ್ಧಾರವಾಗಿದೆಯೇ?, ಉದ್ಯೋಗಗಳು ಸೃಷ್ಟಿಯಾಗಿವೆಯೇ?, ಸರ್ಕಾರಿ ಶಾಲೆ ಕಾಲೇಜುಗಳು ಮೇಲ್ದರ್ಜೆಗೇರಿವೆಯೇ?, ಸಣ್ಣಪುಟ್ಟ ವ್ಯಾಪಾರಸ್ಥರು ಸುಧಾರಿಸಿಕೊಂಡಿದ್ದಾರೆಯೇ? ಇಲ್ಲ. ಬದಲಾಗಿ ಉದ್ಯಮಿಗಳು ಒಂದೇ ವರ್ಷದಲ್ಲಿ ನಂಬರ್‌ ಒನ್‌ ಶ್ರೀಮಂತರಾಗಿದ್ದಾರೆ. ಯಾವುದೇ ಬಡವರ ಪರ ಯೋಜನೆಗಳಿಗೆ ವೆಚ್ಚವಾಗಿಲ್ಲ. ಬಡವರು ಬಡವರಾಗಿಯೇ ಇದ್ದಾರೆ. ಶ್ರೀಮಂತರು ಮುಂದುವರೆಯುತ್ತಲೇ ಇದ್ದಾರೆ.

ಉಚಿತವಾಗಿ ಆಹಾರ ದೊರೆಯುತ್ತಿದೆ ಎನ್ನುವ ಮೋದಿ ಕರ್ನಾಟಕ ರಾಜ್ಯಕ್ಕೆ ಎಲ್ಲದರಲ್ಲಿಯೂ ಬಹುದೊಡ್ಡ ಅನ್ಯಾಯ ಎಸಗಿದ್ದಾರೆ. ರಾಜ್ಯಕ್ಕೆ ಕೇಂದ್ರದಿಂದ ಕೊಡಬೇಕಿದ್ದ ಅಕ್ಕಿಯನ್ನು ಕೊಡದೆ, ಅಕ್ಕಿ ಇಲ್ಲವೆಂದು ಸುಳ್ಳು ಹೇಳಿದರು. ಚುನಾವಣೆ ಹತ್ತಿರವಾಗುತ್ತಿದ್ದಂತೆ ʼಮೋದಿ ಗ್ಯಾರಂಟಿ ಭಾರತ್‌ ರೈಸ್‌ʼ ಎಂದು ಕಡಿಮೆ ಬೆಲೆಯಲ್ಲಿ ನೀಡಿದರು. ಅದೂ ಕೂಡ ಅರ್ಹರಿಗೆ ದೊರೆಯಲಿಲ್ಲ. ನಿಜವಾಗಿಯೂ ಬಡಕುಟುಂಬಗಳಿಗೆ ತಲುಪಲಿಲ್ಲ. ಅವರದೇ ಪಕ್ಷದ ಕಾರ್ಯಕರ್ತರು, ನಾಯಕರು ಮತ್ತು ಊರಿನ ಹೃದಯಭಾಗದಲ್ಲಿರುವ ಅಕ್ಕಪಕ್ಕದ ಮನೆಗಳಿಗೆ ತಲುಪಿವೆಯೇ ಹೊರತು ಬಡವರ ಮನೆ ಬಾಗಿಲಿಗೆ ತಲುಪಿಲ್ಲ. 80 ಕೋಟಿ ದೇಶವಾಸಿಗಳ ತಟ್ಟೆಗಳು ತುಂಬಿವೆ ಎಂದು ಹೇಳಲು ಮೋದಿ ಮನಸ್ಸಾದರೂ ಹೇಗೆ ಬರುತ್ತದೆ. ಇವೆಲ್ಲ ಮತಬ್ಯಾಂಕ್‌ ಗಿಮಿಕ್‌ ಅಲ್ಲವೇ?

bharath rice

ಕೇಂದ್ರದ ಬಿಜೆಪಿ ಆಡಳಿತದಲ್ಲಿ ಸರ್ಕಾರದ ಸಾಲ ಮಾತ್ರ ಹೆಚ್ಚಾಗುತ್ತಿಲ್ಲ. ಬದಲಿಗೆ ಅವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ವೈಯಕ್ತಿಕ ಸಾಲ ಕೂಡಾ ಹೆಚ್ಚಾಗುತ್ತಿದ್ದರೆ, ನಿರುದ್ಯೋಗದಿಂದಾಗಿ ಕುಟುಂಬದ ಆದಾಯ ಕುಸಿಯತ್ತಿದೆ. ಹಾಗಿದ್ದರೆ ನರೇಂದ್ರ ಮೋದಿ ಸರ್ಕಾರದ ಸಾಲದ ಹಣ ಎಲ್ಲಿ ಸೋರಿಹೋಗುತ್ತಿದೆ. ಕಾಂಗ್ರೆಸ್‌ ಹತ್ತು ವರ್ಷದಲ್ಲಿ ಖರ್ಚು ಮಾಡುವ ಹಣವನ್ನು ಮೋದಿ ಒಂದೇ ವರ್ಷದಲ್ಲಿ ಖರ್ಚು ಮಾಡಿ ಯಾರನ್ನು ಉದ್ಧಾರ ಮಾಡಿದ್ದಾರೆ.

ಲಸಿಕೆ ತಯಾರಿಕಾ ಕಂಪನಿಗಳಿಂದ ರಾಜಕೀಯ ದೇಣಿಗೆ ಪಡೆಯಲು ಬಿಜೆಪಿ ಜನರ ಜೀವವನ್ನೇ ಅಡವಿಟ್ಟಿತು. ಸುಮಾರು 80 ಕೋಟಿ ಭಾರತೀಯರಿಗೆ ಕೋವಿಶಿಲ್ಡ್ ಲಸಿಕೆ ನೀಡಲಾಗಿದೆ. ಪ್ರತಿಯೊಬ್ಬರಿಗೆ 2 ಡೋಸ್‌ ನೀಡಲಾಗಿದೆ. ಲಸಿಕೆಯಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ತಯಾರಕ ಕಂಪನಿ ಹೇಳಿದೆ. ಲಸಿಕೆಯ ಅಡ್ಡಪರಿಣಾಮದಿಂದಾಗಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರ ಹಾಗೂ ಲಸಿಕೆಯ ದುಷ್ಪರಿಣಾಮಗಳ ಬಗ್ಗೆ ಭಯ ವ್ಯಕ್ತಪಡಿಸಿದವರ ಅನುಮಾನಗಳು ಮತ್ತು ಭಯಗಳು ಈಗ ನಿಜವಾಗಿರುವುದು ಸಾಬೀತಾಗಿದೆ. ಲಸಿಕಾ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ದೇಣಿಗೆ ಪಡೆದ ಮೋದಿ ಜನರ ಜೀವದ ಜತೆ ಚೆಲ್ಲಾಟವಾಡಿದ್ದಾರೆ. ಹೀಗಿರುವಾಗ ಮೋದಿಯವರು ದೇಶಕ್ಕೆ ಯಾವುದಕ್ಕಾಗಿ ಹಣ ಖರ್ಚು ಮಾಡಿದ್ದಾರೆ?

“ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ದೇಶದ ಮಹಿಳಾ ಶಕ್ತಿ ದೊಡ್ಡ ಪಾತ್ರ ವಹಿಸುತ್ತದೆ. ಹಳ್ಳಿಯ ತಮ್ಮ ಸಹೋದರಿಯರನ್ನು ಸಬಲೀಕರಣಗೊಳಿಸುವಲ್ಲಿ ನಿರತರಾಗಿದ್ದೇವೆ. ಕಳೆದ 10 ವರ್ಷಗಳಲ್ಲಿ, ನಮ್ಮ ಪ್ರಯತ್ನಗಳಿಂದಾಗಿ, ಒಂದು ಕೋಟಿ ಸಹೋದರಿಯರು ಮಿಲಿಯನೇರ್ ದೀದಿಗಳಾಗಿದ್ದಾರೆ. ಈಗ ನಾನು 3 ಕೋಟಿ ಸಹೋದರಿಯರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡುತ್ತೇನೆ” ಎಂದು ಮೋದಿ ಅಪ್ಪಟ ಸುಳ್ಳು ಭರವಸೆ ನೀಡಿದ್ದಾರೆ.

ಇದನ್ನೂ ಓದಿದ್ದೀರಾ? ಮೋದಿ ಸುಳ್ಳುಗಳು: ಭಾಗ-5 | ಮೋದಿ ಹೇಳುವಂತೆ ‘ಒಬಿಸಿ ಮೀಸಲಾತಿ’ ಮುಸಲ್ಮಾನರ ಪಾಲಾಗಿದೆಯೇ?

ಬೆಲೆ ಏರಿಕೆ, ನಿರುದ್ಯೋಗಗಳಿಂದಾಗಿ ತತ್ತರಿಸಿ ಹೋಗಿರುವ ಜನತೆ ದೇಶದಲ್ಲಿ ಬದಲಾವಣೆ ಬಯಸುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಗ್ಯಾರಂಟಿಗಳನ್ನು ಜರಿದ ಮೋದಿ, ರಾಜ್ಯ ದಿವಾಳಿಯಾಗುತ್ತದೆಂದು ಹೇಳಿದರು. ಹೀಗಿರುವಾಗ ಮೋದಿಯವರಿಂದ ಮಹಿಳಾ ಸಬಲೀಕರಣ ಸಾಧ್ಯವೇ? ಕೋಟ್ಯಂತರ ಮಹಿಳೆಯರನ್ನು ಮಿಲಿಯನೇರ್‌ಗಳಾಗಿ ಮಾಡಲು ಸಾಧ್ಯವೇ?

ರಾಜ್ಯದ ಜನತೆ ಕಾಂಗ್ರೆಸ್ ಗ್ಯಾರಂಟಿ ಮತ್ತು ಇತರ ಜನ ಕಲ್ಯಾಣ ಯೋಜನೆಗಳಿಂದಾಗಿ‌ ಸ್ವಲ್ಪ ಮಟ್ಟಿಗಾದರೂ ಉಸಿರಾಡುವಂತಾಗಿದೆ. ಗ್ಯಾರಂಟಿ ಯೋಜನೆಗಳು ರಾಜ್ಯದ ಒಂದೂವರೆ ಕೋಟಿ ಕುಟುಂಬಗಳನ್ನು ನೇರವಾಗಿ ತಲುಪಿದೆ. 1.22 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಕಾಂಗ್ರೆಸ್‌ ಗ್ಯಾರಂಟಿ ಸೇರಿದಂತೆ ಮತ್ತಿತರ ಕಲ್ಯಾಣ ಯೋಜನೆಗಳಿಂದಾಗಿ ಪ್ರತಿ ಕುಟುಂಬದ ಮಾಸಿಕ ಆದಾಯ ಏಳರಿಂದ ಹತ್ತು ಸಾವಿರ ರೂಪಾಯಿಗಳಷ್ಟು ಹೆಚ್ಚಾಗಿದೆ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X