- ಬಿಜೆಪಿ ಸರಕಾರ ಇದ್ದಾಗ ವಿದ್ಯುತ್ ಸರಬರಾಜು, ಪೂರೈಕೆಯಲ್ಲಿ ಸಮಸ್ಯೆ ಇರಲಿಲ್ಲ
- ಈ ರಾಜ್ಯದ ಉದ್ಯಮಿಗಳಿಗೆ ರಾಜ್ಯ ಸರ್ಕಾರ ಅವಕಾಶಗಳನ್ನು ಕೊಡಬೇಕು
ರಾಜ್ಯದಲ್ಲಿ ವಿದ್ಯುತ್ ದರ ತೀವ್ರ ಹೆಚ್ಚಳದ ವಿರುದ್ಧ ಉದ್ಯಮಿಗಳ (ಕಾಸಿಯಾ) ಹೋರಾಟಕ್ಕೆ ಬಿಜೆಪಿಯ ನೈತಿಕ ಬೆಂಬಲ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ತಿಳಿಸಿದರು.
ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ವಿದ್ಯುತ್ ಬಿಲ್‌ನಲ್ಲಿ ವಂಚನೆ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯದ ಕೈಗಾರಿಕಾ ವಾಣಿಜ್ಯ ಮಂಡಳಿ ‘ಕಾಸಿಯಾ’ ಹೋರಾಟ, ಬಂದ್‌ಗೆ ಕರೆ ಕೊಟ್ಟಿದೆ. ಕಳೆದ 15- 20 ದಿನಗಳಿಂದ ರಾಜ್ಯದ ಜನರ ಬಾಯಲ್ಲಿ ವಿದ್ಯುತ್ ಬಿಲ್ ಕುರಿತು ಚರ್ಚೆಗಳು ನಡೆಯುತ್ತಿವೆ. ಸಾಮಾನ್ಯ ಜನರಿಗೂ 2 ಸಾವಿರದ ಬದಲು 6ರಿಂದ 8 ಸಾವಿರದ ಬಿಲ್ ಬರುತ್ತಿದೆ. 20 ಸಾವಿರ ಬಿಲ್ ಬರುವ ಉದ್ಯಮಿಗೆ 1 ಲಕ್ಷದ ಬಿಲ್ ಬಂದಿದೆ. ಕೆಲವೆಡೆ 7ರಿಂದ 8 ಲಕ್ಷದ ಬಿಲ್ ವಿಧಿಸಿದ್ದಾರೆ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
“ಕಾಂಗ್ರೆಸ್ ಸರಕಾರವು ತನ್ನ ಹಠಮಾರಿ ಧೋರಣೆಯನ್ನು ಕೈಬಿಡಬೇಕು. ಈ ರಾಜ್ಯದ ಉದ್ಯಮಿಗಳಿಗೆ ಅವಕಾಶಗಳನ್ನು ಕೊಡಬೇಕು. ಅವರ ಸಮಸ್ಯೆಗಳನ್ನು ಆಲಿಸಿ ನ್ಯಾಯ ಕೊಡಬೇಕು” ಎಂದು ಕಟೀಲ್ ಆಗ್ರಹಿಸಿದರು.
“ಕಳೆದ ಒಂದು ತಿಂಗಳಿನಿಂದ ಜನಸಾಮಾನ್ಯರು ಸೇರಿದಂತೆ ಎಲ್ಲ ವರ್ಗದವರ ಮೇಲೆ ಬೇರೆ ಬೇರೆ ರೀತಿಯ ಆಘಾತವನ್ನು ರಾಜ್ಯ ಸರಕಾರ ಮಾಡಿದೆ. ಹಾಲಿನ ಬೆಂಬಲ ಬೆಲೆಯನ್ನು 1.50 ರೂ. ಕಡಿಮೆ ಮಾಡಿದ್ದಾರೆ. ಕರೆಂಟ್ ಬಿಲ್ ಹೆಚ್ಚಾಗಿದೆ. ಹೀಗಾಗಿ ರೈತರಿಗೂ, ಜನಸಾಮಾನ್ಯರಿಗೂ ಆಘಾತ ಉಂಟಾಗಿದೆ” ಎಂದು ನಳಿನ್ ಕುಮಾರ್ ವಿವರಿಸಿದರು.
“ಬಿಜೆಪಿ ಸರಕಾರ ಇದ್ದಾಗ ಎಸ್ಸಿ, ಎಸ್ಟಿ ಸಮುದಾಯಕ್ಕೆ 75 ಯೂನಿಟ್ ಉಚಿತ ವಿದ್ಯುತ್ ಕೊಡಲಾಗಿತ್ತು. ಆದರೆ, ದರ ಏರಿಸಿರಲಿಲ್ಲ; ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇದ್ದಾಗ ವಿದ್ಯುತ್ ಸರಬರಾಜಿನ ಸಮಸ್ಯೆ ಇರಲಿಲ್ಲ. ಈಗ ವಿದ್ಯುತ್ ಪೂರೈಕೆಯೂ ಸರಿಯಾಗಿಲ್ಲ. ಒಂದೆಡೆ ಮಳೆ ಇಲ್ಲ. ಇನ್ನೊಂದೆಡೆ ಗದ್ದೆ, ತೋಟಕ್ಕೆ ನೀರು ಹಾಯಿಸಲು ಕರೆಂಟಿಲ್ಲ ಎಂಬ ಸ್ಥಿತಿ ಬಂದಿದೆ” ಎಂದು ಕಟೀಲ್ ಟೀಕಿಸಿದರು.
“ನಾವು ಅನುಷ್ಠಾನಕ್ಕೆ ತಂದ ಮತಾಂತರ ನಿಷೇಧ ಕಾಯ್ದೆ, ಗೋಹತ್ಯಾ ನಿಷೇಧ ಕಾಯ್ದೆ ಹಿಂದಕ್ಕೆ ಪಡೆಯುವ ಕಾಂಗ್ರೆಸ್ ಸರಕಾರಕ್ಕೆ ವಿದ್ಯುತ್ ದರ ಏರಿಕೆ ಹಿಂದಕ್ಕೆ ಪಡೆಯಲಾಗುವುದಿಲ್ಲವೇ? ಪಠ್ಯದಲ್ಲಿ ಪಾಠ ಬದಲಾವಣೆ ಮಾಡುವ ಸಿದ್ರಾಮಣ್ಣನ ಸರಕಾರಕ್ಕೆ ಇದನ್ನು ಮಾಡಲಾಗುವುದಿಲ್ಲವೇ?” ಎಂದು ಕೇಳಿದರು.
ಈ ಸುದ್ದಿ ಓದಿದ್ದೀರಾ? :ಅನ್ನಭಾಗ್ಯ: ರಾಜ್ಯದಲ್ಲೇ ಬೇಡಿಕೆ ಪೂರೈಕೆಯಷ್ಟು ಅಕ್ಕಿ ಇದ್ದರೆ ಇಲ್ಲೇ ಖರೀದಿ: ಸಿಎಂ ಸಿದ್ದರಾಮಯ್ಯ
“ಅಕ್ಕಿ ವಿಚಾರದಲ್ಲೂ ಸಿದ್ರಾಮಣ್ಣ, ಡಿ ಕೆ ಶಿವಕುಮಾರ್ 10 ಕೆಜಿ ಕೊಡುವುದಾಗಿ ಸುಳ್ಳು ಹೇಳಿದ್ದಾರೆ. ಅದರಲ್ಲಿ 5 ಕೆಜಿ ಕೇಂದ್ರದ್ದು ಎಂದು ಜನರಿಗೂ ಗೊತ್ತಾಗಲಿ. ಕಾಂಗ್ರೆಸ್ಸಿಗರು ಪ್ರತಿಭಟನೆ ಜೋರಾಗಿ ಮಾಡಿದರೆ ವಿಷಯ ಜನರಿಗೂ ತಿಳಿಯುತ್ತದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದರು.
“ಹಿಂದೆ ಸಿದ್ರಾಮಣ್ಣನ ಸರಕಾರ ಇದ್ದಾಗ ಕೇಂದ್ರದಿಂದ ಅಕ್ಕಿ ಪಡೆದು ಅದನ್ನು ತಮ್ಮ ಫೋಟೊ ಹಾಕಿ ಜನರಿಗೆ ನೀಡುತ್ತಿದ್ದರು. ಕೋವಿಡ್ ಅವಧಿಯಲ್ಲಿ ನಾವು ಅಕ್ಕಿ ನೀಡಿದ್ದೇವೆ. ಸಿದ್ರಾಮಣ್ಣ ಮತ್ತು ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ 10 ಕೆಜಿ ಅಕ್ಕಿ ಕೊಡುತ್ತದೆ ಎಂದಿದ್ದರು. ಅದನ್ನು ಮೊದಲು ಕೊಡಲಿ” ಎಂದು ನಳಿನ್ ಕುಮಾರ್ ಸವಾಲೆಸೆದರು. ಈ ಸರಕಾರ ಡಿಸೆಂಬರ್‌ನಲ್ಲಿ ಬಿದ್ದು ಹೋಗಲಿದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷರು ಭವಿಷ್ಯ ನುಡಿದರು.
ಕಾಂಗ್ರೆಸ್ಸಿನ ಸರಕಾರದ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಸಹಕಾರ ಇದೆ. ಆದರೆ ಜನವಿರೋಧಿ ನಿರ್ಧಾರಗಳ ವಿರುದ್ಧ ಹೋರಾಟ ಮುಂದುವರೆಯಲಿದೆ ಎಂದ ಅವರು, 22ರಿಂದ ಪಕ್ಷದ ನಾಯಕರ ಜಿಲ್ಲಾ ಪ್ರವಾಸ ಆರಂಭವಾಗಲಿದೆ ಎಂದು ತಿಳಿಸಿದರು.