ಕಳಪೆ ಮಟ್ಟದ ಕಾಮಗಾರಿ, ಲೂಟಿ ಹೊಡೆದಿದ್ದೇ ಹಾಲಿ ಸಂಸದ ಭಗವಂತ ಖೂಬಾ ಅವರ 10 ವರ್ಷದ ಸಾಧನೆ. ಈ ಬಾರಿಯ ಚುನಾವಣೆಯಲ್ಲಿ ಜನತೆ ಬಾಯ್ ಬಾಯ್ ಖೂಬಾ, ಬಾಯ್ ಬಾಯ್ ಬಿಜೆಪಿ ಎಂದು ಮನೆ ದಾರಿ ತೋರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.
ಶನಿವಾರ ಹುಮನಾಬಾದ್ ಮತ ಕ್ಷೇತ್ರದ ರಾಜೇಶ್ವರ, ದುಬುಲಗುಂಡಿ ಹಾಗೂ ಹಳ್ಳಿ ಖೇಡ್ (ಬಿ) ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ ಈಶ್ವರ ಖಂಡ್ರೆ ಪರ ನಡೆಸಿದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, “ಕ್ಷೇತ್ರದೆಲ್ಲೆಡೆ ಕಾಂಗ್ರೆಸ್ ಪರ ಅಲೆ ಜೋರಾಗಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುವುದು ನಿಶ್ಚಿತ. ಬೀದರ್‌ನ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಮತ ಚಲಾಯಿಸಿ” ಎಂದು ಮನವಿ ಮಾಡಿದರು.
“ಬಿಜೆಪಿ ಸರ್ಕಾರ 2022ರೊಳಗೆ ಸರ್ವರಿಗೂ ಮನೆ ನೀಡುವ ಸುಳ್ಳು ಭರವಸೆ ನೀಡಿತ್ತು. ಆದರೆ, ಕಾಂಗ್ರೆಸ್ ಕಾಲದಲ್ಲಿ ಮಂಜೂರು ಮಾಡಿದ್ದ ಬಡವರ ಮನೆಗಳ ಕಂತಿನ ಹಣವನ್ನು ಕೂಡ ಹಿಂದಿನ ಬಿಜೆಪಿ ಸರ್ಕಾರ ತಡೆ ಹಿಡಿದು, ಸೂರಿಲ್ಲದವರ ಕಣ್ಣೀರು ಹಾಕಿಸಿದರು” ಎಂದು ಕಿಡಿಕಾರಿದರು.
ಸಚಿವ ರಹೀಂ ಖಾನ್ ಮಾತನಾಡಿ, “ಸಂಸದರು ಜನರ ಸಂಕಷ್ಟಗಳಲ್ಲಿ ಭಾಗಿಯಾಗಿ ಸಮಸ್ಯೆಗಳಿಗೆ ಸ್ಪಂದಿಸಬೇಕು. ಆದರೆ ಎರಡು ಅವಧಿಗೆ ಗೆದ್ದು ಕೇಂದ್ರದಲ್ಲಿ ಮಂತ್ರಿಯೂ ಆಗಿರುವ ಭಗವಂತ ಖೂಬಾ ಅವರು ಜನರಿಗೆ ಮುಖವೂ ತೋರಿಸಲಿಲ್ಲ. ಕೈಗಾರಿಕೆ ನಿರ್ಮಾಣ ಸೇರಿದಂತೆ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕೆಲಸಗಳು ಮಾಡಿಲ್ಲ” ಎಂದರು.
“ನಾವು ಜೋಳಿಗೆ ಹಿಡಿದು ಬಂದಿದ್ದೇವೆ, ನಿಮ್ಮ ಪ್ರೀತಿ, ವಿಶ್ವಾಸ ಜೊತೆಗೆ ಮತ ಹಾಕಿ, ರಾಜ್ಯ ಸರ್ಕಾರದಿಂದ ಅನುಷ್ಠಾನಗೊಂಡ ಪಂಚ ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಆಸರೆಯಾಗಿವೆ. ಕೇಂದ್ರದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಕುಟುಂಬದ ಸದಸ್ಯರಿಗೂ ಕಡ್ಡಾಯ ಮತ ಹಕ್ಕು ಚಲಾಯಿಸುವಂತೆ ತಿಳಿಸಬೇಕು” ಎಂದು ಕೋರಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಳ್ಳುಗಾರರನ್ನು ಸೋಲಿಸುವ ಸಮಯ ಬಂದಿದೆ; ಮತದಾರರೇ ಮುಂದಾಗಬೇಕಿದೆ
ಸಭೆಯಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್, ಎಂಎಲ್‌ಸಿ ಅರವಿಂದ ಕುಮಾರ್ ಅರಳಿ, ಮುಖಂಡರಾದ ನಸೀಮ್ ಉದ್ದೀನ್ ಪಟೇಲ್, ಭಾರತ್ ಬಾಯ್ ಶರೀಕರ್, ವೀರಣ್ಣ ಪಾಟೀಲ್, ಅಭಿಷೇಕ್ ಪಾಟೀಲ್, ಕೇಶಪ್ಪ ಬಿರಾದರ್ ಮತ್ತಿತರರು ಉಪಸ್ಥಿತರಿದ್ದರು.