ಬಿಹಾರದ ಎರಡನೇ ಹಂತದ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ನಾಯಕರು ಖಿನ್ನತೆಗೆ ಒಳಗಾಗಿದ್ದಾರೆ ಎಂದು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಶನಿವಾರ ಹೇಳಿದ್ದಾರೆ. ಈ ಹೇಳಿಕೆಯು ಬಿಜೆಪಿ ಮತ್ತು ಆರ್‌ಜೆಡಿ ನಡುವೆ ನಡೆಯುತ್ತಿರುವ ವಾಕ್ಸಮರವನ್ನು ಇನ್ನಷ್ಟು ತೀವ್ರಗೊಳಿಸಿದೆ.
ಶುಕ್ರವಾರ ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಎರಡು ಚುನಾವಣಾ ಪ್ರಚಾರ ರ್‍ಯಾಲಿಗಳನ್ನು ತರಾಟೆಗೆ ತೆಗೆದುಕೊಂಡು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತೇಜಸ್ವಿ, “ರೈತರು, ಯುವಕರು, ಮಹಿಳೆಯರು, ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಇತರೆ ಉದ್ಯೋಗಿಗಳಿಗೆ ಉದ್ಯೋಗ ಪಡೆಯುವುದು ಈಗ ಕಷ್ಟವಿದೆ ಎಂದು ತಿಳಿದುಬಂದಿದೆ. ಮೋದಿ ಅಧಿಕಾರದಲ್ಲಿದ್ದರೆ ನಿರುದ್ಯೋಗ ಸಮಸ್ಯೆ ಬಗೆಹರಿಯುವುದಿಲ್ಲ ಎಂದೂ ತಿಳಿದಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಬಿಜೆಪಿಯ ‘400 ಪಾರ್’ ಸಿನಿಮಾ ಮತದಾನದ ಮೊದಲ ದಿನವೇ ಫ್ಲಾಪ್: ತೇಜಸ್ವಿ ಯಾದವ್ ವ್ಯಂಗ್ಯ
ಮೋದಿ ಮತ್ತೆ ಪ್ರಧಾನಿಯಾದವರೆ ಅವರು ವಿವಿಧ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಮತ್ತು ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವುದಿಲ್ಲ. ಶಾಲೆಗಳು ಮತ್ತು ಆಸ್ಪತ್ರೆಗಳ ಸೇವೆ ಜನರಿಗೆ ಲಭ್ಯವಾಗುತ್ತಿದೆಯೇ ಎಂಬ ವಿಷಯಗಳ ಬಗ್ಗೆ ಚರ್ಚಿಸಲು ಸಹ ಕಷ್ಟವಾಗುತ್ತದೆ. ಮೋದಿ ಅಧಿಕಾರದಲ್ಲಿ ಉಳಿಯುವವರೆಗೆ ರೈತರ ಆದಾಯವು ದ್ವಿಗುಣಗೊಳ್ಳುವುದಿಲ್ಲ” ಎಂದು ಹೇಳಿದರು.
ಪ್ರಧಾನಿ ಮೋದಿ ಅಧಿಕಾರವಧಿಯಲ್ಲಿ ಬಿಹಾರ ಬಿಜೆಪಿ ಸಂಸದರು ಯಾವುದೇ ಸಾಧನೆಯನ್ನು ಮಾಡಿಲ್ಲ ಎಂದು ದೂರಿದ ಬಿಹಾದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ, “ಕಳೆದ 10 ವರ್ಷಗಳಲ್ಲಿ ಬಿಹಾರದ 39 ಎನ್‌ಡಿಎ ಲೋಕಸಭಾ ಸದಸ್ಯರು ಮಾಡಿದ ಕೆಲಸಗಳ ಬಗ್ಗೆ ಮತ್ತು ತಮ್ಮ ಸರ್ಕಾರ ಮಾಡಿದ ಸಾಧನೆಗಳ ಬಗ್ಗೆ ಪ್ರಧಾನಿ ಮೋದಿ ಚರ್ಚಿಸಲ್ಲ. ಏನಾದರೂ ಚರ್ಚಿಸಲು ಹೇಗೆ ಸಾಧ್ಯ?. ಅವರು ಸಾಧನೆಯೇ ಮಾಡಿಲ್ಲ” ಎಂದರು.
“ಮೋದಿ ಅವರು ಜನರನ್ನು ತುಂಬಾ ದಾರಿ ತಪ್ಪಿಸಿದ್ದಾರೆ. ಈಗ ಮೋದಿ ಅವರು ಅನೇಕ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಹಾಗಿರುವಾ ಪ್ರಧಾನಿ ಬಗ್ಗೆ ಮಾತನಾಡಲು ಏನೂ ಉಳಿದಿಲ್ಲ. ಒಟ್ಟಿನಲ್ಲಿ ಪ್ರಧಾನಿ ಸಮಸ್ಯೆಗಳಿಂದ ದೂರ ಓಡುತ್ತಿರುವುದು ಖಚಿತ” ಎಂದು ಪ್ರಧಾನಿಯನ್ನು ತೇಜಸ್ವಿ ಯಾದವ್ ಟೀಕಿಸಿದರು.