ಇಡೀ ದೇಶದಲ್ಲಿ ಆರ್ಥಿಕ ವರ್ಷ ಪ್ರಾರಂಭವಾದಾಗ ಟೋಲ್ ದರ ಹೆಚ್ಚಳ ಮಾಡುವುದು ಸಹಜ ಪ್ರಕ್ರಿಯೆ. ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್-ವೇಗೆ ಏಪ್ರಿಲ್‌ನಲ್ಲಿ ಟೋಲ್ ಹೆಚ್ಚಳ ಆಗಬೇಕಿತ್ತು. ಆಗ ಆಗಿರಲಿಲ್ಲ ಈಗ ಶೇ.22ರಷ್ಟು ಏರಿಕೆ ಆಗಿದೆ ಎಂದು ಸಂಸದ ಪ್ರತಾಪ್ ಸಿಂಹ ಟೋಲ್ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು, “ಟೋಲ್‌ಗಳಲ್ಲಿ ಫಾಸ್ಟ್ ಟ್ಯಾಗ್ ವರ್ಕ್ ಆಗುತ್ತಿದ್ದು, ಯಾವ ಸಮಸ್ಯೆ ಇಲ್ಲ. ಸಿಸ್ಟಮ್ ಸಮಸ್ಯೆ ಟೋಲ್ ಸಂಗ್ರಹದ ಆರಂಭದಲ್ಲಿತ್ತು. ಈಗ ಆ ಸಮಸ್ಯೆ ಇಲ್ಲ. ಫಾಸ್ಟ್ ಟ್ಯಾಗ್ ಇರದಿದ್ದರೆ ಡಬಲ್ ಚಾರ್ಜ್ ಕಟ್ಟುವುದು ಕಡ್ಡಾಯ” ಎಂದರು.
ವಿದ್ಯುತ್ ಬಿಲ್ ಏರಿಕೆ; ಕಾಂಗ್ರೆಸ್‌ಗೆ ತಿರುಗೇಟು
ವಿದ್ಯುತ್ ಬಿಲ್ ಏರಿಕೆ ಮಾಡಿದ್ದು ಬಿಜೆಪಿ ಸರ್ಕಾರ ಎಂಬ ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ ಸಂಸದ, ರಾಜ್ಯದ ಜನರ ದಾರಿ ತಪ್ಪಿಸಬೇಡಿ. ಕೆಇಆರ್ಸಿ ದರ ಏರಿಕೆಗೆ ಶಿಫಾರಸ್ಸು ಮಾಡಿದೆ. ಅದನ್ನು ತಡೆಯುವ ಅಥವಾ ತಿರಸ್ಕರಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆ. ಕಳೆದ ಸರ್ಕಾರ ಮಾಡಿದ್ದ ಗುತ್ತಿಗೆದಾರ ಹಣ ಬಿಡುಗಡೆ ಆದೇಶಕ್ಕೆ ತಡೆ ಹಾಕುತ್ತೀರಿ. ಆದರೆ ವಿದ್ಯುತ್ ಬಿಲ್ ಆದೇಶಕ್ಕೆ ಯಾಕೆ ತಡೆ ಹಾಕಲ್ಲ ಎಂದು ಪ್ರಶ್ನಿಸಿದ್ದಾರೆ.
ಎಲ್ಲಿಂದ ನಿಮಗೆ ಕಮಾಯಿ ಆಗುತ್ತೆ? ಎಲ್ಲಿಂದ ನಿಮಗೆ ವ್ಯಾಪಾರ ಆಗುತ್ತೆ? ಆ ವಿಚಾರದ ಬಗ್ಗೆ ಮಾತ್ರ ನಿಮ್ಮ ಆಸಕ್ತಿನಾ? ಕಾಂಗ್ರೆಸ್ನವರು ಲೂಟಿ ಮಾಡಲು ಬಂದಿದ್ದಾರೆ. ತಮ್ಮ ಜನವಿರೋಧಿ ಮುಖ ಮರೆ ಮಾಚಲು ಬಿಜೆಪಿ ಮೇಲೆ ಆರೋಪ ಮಾಡಬೇಡಿ. ಈ ಸರ್ಕಾರ ಒಂದಷ್ಟು ಜನರ ಸುಲಿಗೆ, ಲೂಟಿ ಮಾಡಲು ಬಂದಿದೆ. ಹಾಗಾದರೆ, ಹಿಂದಿನ ಸರ್ಕಾರ ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿತ್ತು ಅದನ್ನು ಮುಂದುವರಿಸುವ ಮಾತಾಡಿ ಎಂದು ಪ್ರತಾಪ್ ಸಿಂಹ ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ನಾನು ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಯಲ್ಲ; ಮಾಜಿ ಸಿಎಂ ಬೊಮ್ಮಾಯಿ ಸ್ಪಷ್ಟನೆ
‘ಹಿರಿಯ ನಾಯಕರು ಅಡ್ಜಸ್ಟ್ ಮೆಂಟ್ನಲ್ಲಿ ಇದ್ದೀರಾ‘
ಅರ್ಕಾವತಿ ಹಗರಣ, ಡಿ ನೋಟಿಫಿಕೇಶನ್, ಕೆಂಪಣ್ಣ ಆಯೋಗದ ವರದಿ ತನಿಖೆಯನ್ನು ನಮ್ಮ ಸರ್ಕಾರ ತನಿಖೆ ಮಾಡಲಿಲ್ಲ. ನೀವು ವಿರೋಧ ಪಕ್ಷದಲ್ಲಿದ್ದಾಗ ನಮ್ಮವರು ನಿಮ್ಮನ್ನ ಈ ವಿಚಾರ ಮುಂದಿಟ್ಟುಕೊಂಡು ಹೆದರಿಸುವುದು, ನೀವು ಅಧಿಕಾರಕ್ಕೆ ಬಂದಾಕ್ಷಣ ನಮ್ಮವರನ್ನು ಹೆದರಿಸ್ತೀರಾ? ಅಂದ್ರೆ ನೀವೆಲ್ಲಾ ಹಿರಿಯ ನಾಯಕರು ಅಡ್ಜಸ್ಟ್ ಮೆಂಟ್ನಲ್ಲಿ ಇದ್ದೀರಾ ಎಂದು ಗಂಭೀರ ಆರೋಪ ಮಾಡಿದರು.
40% ಸರ್ಕಾರ ಎಂದು ಹೇಳಿದನ್ನು ಸಾಬೀತು ಮಾಡಿ. ಬಿಟ್ ಕಾಯಿನ್ ನ ಸಾವಿರಾರು ಕೋಟಿ ರೂ. ಹಗರಣ, ಪಿಎಸ್ಐ ಹಗರಣದಲ್ಲಿ ಯಾರ್‍ಯಾರು ಭಾಗಿಯಾಗಿದ್ದಾರೆಂದು ಸಾಬೀತು ಮಾಡಿ. ಬಿಜೆಪಿಯವರು ಭಾಗಿಯಾಗಿದ್ದರೂ ಹಿಡಿದು ತಂದು ಶಿಕ್ಷೆ ಕೊಡಿ. ನಾನು ಅವತ್ತೇ ಹೇಳಿದ್ದೇನೆ ತನಿಖೆ ಮಾಡಿ ಶಿಕ್ಷೆ ಕೊಡಿಸಿದ್ರೆ, ನಿಮ್ಮ ಕಾಲಿಗೆ ಬಿದ್ದು ಪಾದ ಪೂಜೆ ಮಾಡುತ್ತೇನೆ. ಈಗಲೂ ಅದೇ ಮಾತನ್ನು ಹೇಳುತ್ತಿದ್ದೇನೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದರು.