ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಾಳೆ (ಜೂನ್ 23) ನಡೆಯಲಿರುವ ವಿಪಕ್ಷಗಳ ಒಗ್ಗಟ್ಟಿನ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಯಾವತಿ, “ವಿಪಕ್ಷಗಳು 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ವಿವಿಧ ವಿಷಯಗಳನ್ನು ಜೊತೆಯಾಗಿ ಎತ್ತುತ್ತಿವೆ. ಆದರೆ ಪಾಟ್ನಾದಲ್ಲಿ ನಿತೀಶ್ ಕುಮಾರ್ ಆಯೋಜಿಸಿರುವ ಸಭೆಯು ಕೈಗಳನ್ನು ಜೋಡಿಸಿದಂತೆಯೇ ಹೊರತು ಹೃದಯಗಳನ್ನಲ್ಲ” ಎಂದು ತಿಳಿಸಿದ್ದಾರೆ.
“ಹಣದುಬ್ಬರ, ಬಡತನ, ನಿರುದ್ಯೋಗ, ಹಿಂದುಳಿಯುವಿಕೆ, ಅನಕ್ಷರತೆ, ಜನಾಂಗೀಯ ದ್ವೇಷ, ಧಾರ್ಮಿಕ ಹಿಂಸಾಚಾರ ಇತ್ಯಾದಿಗಳಿಂದ ನರಳುತ್ತಿರುವ ದೇಶದಲ್ಲಿ ಬಹುಜನರ ಪರಿಸ್ಥಿತಿ ಗಮನಿಸಿದಾಗ ಬಿಜೆಪಿಯಂತಹ ಪಕ್ಷಗಳು ಬಾಬಾ ಸಾಹೇಬ್ ಅಂಬೇಡ್ಕರ್ ರಚಿತ ಸಂವಿಧಾನದ ಆಶಯದಂತೆ ಮಾನವೀಯ ಸಮಾನತೆಯ ಸಂವಿಧಾನವನ್ನು ಜಾರಿಗೊಳಿಸಲು ಸಮರ್ಥವಾಗಿಲ್ಲ ಎಂಬುದು ಬಹುಜನರ ಇತ್ತೀಚಿನ ಪರಿಸ್ಥಿತಿಯಿಂದ ಸ್ಪಷ್ಟವಾಗಿದೆ” ಎಂದು ಮಾಯಾವತಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರ ರಾಷ್ಟ್ರದ ಆತ್ಮಸಾಕ್ಷಿಗಾದ ಆಳವಾದ ಗಾಯ: ಶಾಂತಿಗೆ ಮನವಿ ಮಾಡಿದ ಸೋನಿಯಾ ಗಾಂಧಿ
“ಇಂತಹ ಯಾವುದೇ ಸಭೆಯನ್ನು ಆಯೋಜಿಸುವ ಮೊದಲು ಈ ಪಕ್ಷಗಳು, ಜನರು ಅವುಗಳ ಮೇಲಿಟ್ಟಿರುವ ವಿಶ್ವಾಸವನ್ನು ಸಮರ್ಥಿಸಲು ತಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸುವುದು ಒಳ್ಳೆಯದು. ಎಷ್ಟು ಸಮಯ ‘ಬಾಯಲ್ಲಿ ರಾಮ, ಬಗಲಲ್ಲಿ ಚಾಕು’ ಇಟ್ಟಿಕೊಂಡಿರುವ ಕೆಲಸ ನಡೆಯುತ್ತದೆ” ಎಂದು ಮಾಯಾವತಿ ಅವರು ಪ್ರತಿಪಕ್ಷಗಳನ್ನು ಪ್ರಶ್ನಿಸಿದ್ದಾರೆ.
“ಗರಿಷ್ಠ ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಹಾಗೂ ಯಾವುದೇ ಪಕ್ಷ ಅಥವಾ ಮೈತ್ರಿಯ ವಿಜಯಕ್ಕೆ ಪ್ರಮುಖ ಕೊಡುಗೆ ನೀಡುವ ರಾಜ್ಯವಾದ ಉತ್ತರ ಪ್ರದೇಶದ ನಾಯಕರಿಗೆ ಹೆಚ್ಚಿನ ಮಹತ್ವ ನೀಡದೇ ಇರುವ ಕುರಿತು ತಮಗೆ ಅಸಮಾಧಾನವಿದೆ” ಎಂದು ಮಾಯಾವತಿ ತಿಳಿಸಿದ್ದಾರೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ವಿರೋಧಿ ಪಕ್ಷಗಳನ್ನು ಒಗ್ಗೂಡಿಸುವ ಮತ್ತು ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಚಾರದ ಭಾಗವಾಗಿ ಈ ಸಭೆಯನ್ನು ಆಯೋಜಿಸಿದ್ದಾರೆ.
ಬಿಎಸ್‌ಪಿ ಮತ್ತು ಇತರ ಎರಡು ಪಕ್ಷಗಳಾದ ನವೀನ್ ಪಟ್ನಾಯಕ್ ಅವರ ಬಿಜೆಡಿ ಮತ್ತು ಕೆ ಚಂದ್ರಶೇಖರ್ ರಾವ್ ಅವರ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)ಗೆ ಆಹ್ವಾನ ನೀಡಲಾಗಿಲ್ಲ ಎಂದು ಬಿಹಾರದ ನಾಯಕರು ಹೇಳಿದ್ದಾರೆ.
ಈ ಪಕ್ಷಗಳು ಸಾಂಪ್ರದಾಯಿಕವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡರಿಂದಲೂ ಸಮಾನ ದೂರವನ್ನು ಹೊಂದಿವೆ. ಆದರೂ ಅವು ಬಿಜೆಪಿ ನೀತಿಗಳಿಗೆ ಪರೋಕ್ಷ ಬೆಂಬಲ ನೀಡುತ್ತವೆ ಎಂದು ತಿಳಿಸಲಾಗಿದೆ. ನಿತೀಶ್ ಕುಮಾರ್ ಅವರು ವಿವಿಧ ನಾಯಕರನ್ನು ವೈಯಕ್ತಿಕವಾಗಿ ಆಹ್ವಾನಿಸಿದ್ದು, ಮಾಯಾವತಿ ಅವರನ್ನು ಕರೆದಿಲ್ಲ ಎಂದು ಮೂಲಗಳು ತಿಳಿಸಿವೆ.