ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್, ವಸಿಷ್ಠ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಬ್ಯಾಂಕ್‌ಗಳಲ್ಲಿ ನಡೆದ ಅವ್ಯವಹಾರ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಅನುಮೋದನೆ ನೀಡಿದ್ದಾರೆ.
ಈ ಬ್ಯಾಂಕ್‌ಗಳಿಂದ ಠೇವಣಿದಾರರಿಗೆ ಆಗಿರುವ ನಷ್ಟ ಮತ್ತು ವಂಚನೆಯ ವಿರುದ್ಧ ಪ್ರತಿಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಅವರು ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ಮಾಡಿ, ಸೂಕ್ತ ತನಿಖೆ ನಡೆಸಿ ಬ್ಯಾಂಕಿನ ಗ್ರಾಹಕರಿಗೆ ಮತ್ತು ಠೇವಣಿದಾರರಿಗೆ ನ್ಯಾಯ ಒದಗಿಸಲು ಆಗ್ರಹಿಸಿದ್ದರು.
ಮೂರೂ ಬ್ಯಾಂಕ್‌ಗಳ ಠೇವಣಿದಾರರು ನಡೆಸಿದ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕರಾಗಿ ಬೆಂಬಲ ಕೂಡ ಸೂಚಿಸಿದ್ದರು. ಈಗ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಠೇವಣಿ ಹಣ ಕಳೆದುಕೊಂಡವರ ಹತಾಶೆ, ಸಂಕಟವನ್ನು ಕಣ್ಣಾರೆ ಕಂಡಿದ್ದೇನೆ. ಈ ಕಾರಣಕ್ಕಾಗಿ ಸೂಕ್ತ ತನಿಖೆ ನಡೆದು, ಎಲ್ಲ ಸಂತ್ರಸ್ತರಿಗೂ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.
ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್, ವಸಿಷ್ಠ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಬ್ಯಾಂಕ್‌ಗಳ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಅನುಮೋದನೆ ನೀಡಲಾಗಿದೆ.
ಸಾವಿರಾರು ಮಂದಿ ಠೇವಣಿದಾರರು ತಮ್ಮ ನಿವೃತ್ತಿ ಜೀವನಕ್ಕೆ ಆಧಾರವಾಗಲೆಂದು, ಮಕ್ಕಳ ಮದುವೆ, ಸ್ವಂತ ಮನೆ ಖರೀದಿ ಮುಂತಾದ ಕನಸುಗಳನ್ನು ಇಟ್ಟುಕೊಂಡು ತಮ್ಮ ಜೀವಮಾನದ…
— CM of Karnataka (@CMofKarnataka) December 2, 2023
ಏನಿದು ಪ್ರಕರಣ?
ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಜನರಿಂದ ಠೇವಣಿ ಪಡೆದು ವಂಚಿಸಿದ ಆರೋಪ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮೇಲಿದೆ. ಹೆಚ್ಚಿನ ಬಡ್ಡಿ ಆಸೆಗೆ ಸಾವಿರಾರು ಗ್ರಾಹಕರು ಈ ಸಂಸ್ಥೆಯಲ್ಲಿ ನೂರಾರು ಕೋಟಿ ರೂ. ಠೇವಣಿ ಇಟ್ಟಿದ್ದರು. ಸಾಲಗಾರರು, ಸಂಸ್ಥೆಯ ಆಡಳಿತ ಮಂಡಳಿ ಮತ್ತು ಉದ್ಯೋಗಿಗಳೊಂದಿಗೆ ಶಾಮೀಲಾಗಿ ನಕಲಿ ಠೇವಣಿ ಹಾಗೂ ನಿಶ್ಚಿತ ಠೇವಣಿಗಳ ಆಧಾರದಲ್ಲಿ ಭಾರೀ ಮೊತ್ತದ ಸಾಲ ಪಡೆದು ಮರು ಪಾವತಿಸದೆ ವಂಚಿಸಿದ್ದರು.
ಸಂಸ್ಥೆಯಿಂದ ವಂಚನೆಗೆ ಒಳಗಾದವರಲ್ಲಿ ಹಿರಿಯ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹಿರಿಯ ನಾಗರಿಕರು ತಮ್ಮ ಉಳಿತಾಯ ಹಾಗೂ ನಿವೃತ್ತಿ ವೇತನದ ಹಣವನ್ನು ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತದಲ್ಲಿ ಠೇವಣಿ ಇಟ್ಟಿದ್ದರು. ಆದರೆ, ಸಂಸ್ಥೆಯ ಆಡಳಿತ ಮಂಡಳಿಯು ಸಾಲಗಾರರಿಂದ ಸೂಕ್ತ ಶ್ಯೂರಿಟಿ ಪಡೆಯದೆ ಸಾಲ ನೀಡಿತ್ತು. ಜತೆಗೆ ನಕಲಿ ಖಾತೆಗಳನ್ನು ಸೃಷ್ಟಿಸಿ ಸಾಲ ಮಂಜೂರು ಮಾಡಿತ್ತು.
ಈ ಪ್ರಕರಣದಲ್ಲಿ ಸಂಸ್ಥೆಯ ಅಧ್ಯಕ್ಷ ಸೇರಿದಂತೆ 4 ಮಂದಿಯನ್ನು ಬಂಧಿಸಿದ್ದರು. ಅದಕ್ಕೂ ಮೊದಲು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಬಡ್ಡಿ ಠೇವಣಿದಾರರ ರಕ್ಷಣಾ ಕಾಯಿದೆ-2004 ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಸಂಸ್ಥೆ ಹಾಗೂ ಇತರರ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದರು.
ಬಳಿಕ ಇ.ಡಿ. ಅಧಿಕಾರಿಗಳು 2020ರಲ್ಲಿ ಪಿಎಂಎಲ್‌ಎ ಅಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿ, ಬ್ಯಾಂಕ್‌ಗೆ ಸೇರಿದ 114.19 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ, ಜತೆಗೆ ಸಂಸ್ಥೆಯ ಖಾತೆಯಲ್ಲಿದ್ದ 3.15 ಕೋಟಿ ರೂ. ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದ್ದರು.