ಮನುಷ್ಯನಿಗೆ ಜ್ಞಾನ ಇಲ್ಲದೇ ಹೋದರೆ ಸ್ವಾಭಿಮಾನ ಬರಲ್ಲ. ಗುಲಾಮಗಿರಿ ಮನಸ್ಥಿತಿ ಅವರಲ್ಲಿ ಇರುತ್ತದೆ. ʼನಮಸ್ಕಾರ ಬುದ್ಧಿ.. ಏನ್ಲಾ ಹೆಂಗಿದಿ..ʼ ಎನ್ನುವುದು ಗುಲಾಮಗಿರಿ ಮನಸ್ಥಿತಿ ನಡವಳಿಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಎಂ.ಜಿ.ರಸ್ತೆಯ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಸೋಮವಾರ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಏರ್ಪಡಿಸಿದ್ದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ಜಗತ್ತಿನಾದ್ಯಂತ ಇಂದು ವಿಶ್ವ ಬಾಲ ಕಾರ್ಮಿಕರ ಪದ್ಧತಿ ವಿರೋಧಿ ದಿನ ಆಚರಿಸಲಾಗುತ್ತಿದೆ. ಸಮಾಜದಲ್ಲಿ ಜಾಗೃತಿ ಮೂಡಿಸುವುದು ಈ ದಿನದ ವಿಶೇಷ. ನಾನು ಮಕ್ಕಳಿಗೆ ಶುಭಾಶಯ ಕೋರುತ್ತೇನೆ. ಯಾರು ಶಿಕ್ಷಣದಿಂದ ವಂಚಿತರಾಗಬಾರದು. ಕಡ್ಡಾಯ ಶಿಕ್ಷಣ ಕೊಡುತ್ತೇವೆ ಎಂದು ನಾವು ಕಾನೂನು ಪ್ರಕಾರ ಒಪ್ಪಿಕೊಂಡಿದ್ದೇವೆ. ಶಿಕ್ಷಣದ ಹಕ್ಕು ಪ್ರತಿಯೊಬ್ಬ ಬಾಲಕರಿಗೂ ಸಿಗಬೇಕು”ಎಂದರು.
“ಬಾಲಕರನ್ನು ದುಡಿಸಿಕೊಳ್ಳುವುದು ಕಾನೂನು ವಿರೋಧಿ ನಡೆ. ಶಿಕ್ಷಾರ್ಹ ಅಪರಾಧ ಕೂಡ. ಆದರೂ ಹೋಟೆಲ್, ಶಾಪ್ ಬಟ್ಟೆ ಕೈಗಾರಿಕೆಗಳಲ್ಲಿ ಬಾಲ ಕಾರ್ಗಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆ. ಇಂತಹ ಪ್ರಕರಣಗಳು ಬೆಳಕಿಗೆ ಬಂದರೆ ಅವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು” ಎಂದರು ಸೂಚಿಸಿದರು.
“ಸಮಾಜದಲ್ಲಿ ಆರ್ಥಿಕ ಅಸಮಾನತೆ ಉಂಟಾಗಲು ಶಿಕ್ಷಣ ಪಡಿಯದೇ ಇರುವುದು ಮೂಲ ಕಾರಣ. ಇದಕ್ಕೆ ಜಾತಿ ವ್ಯವಸ್ಥೆ ಕೂಡ ಮತ್ತೊಂದು ಕಾರಣವಾಗಿದೆ. ಶೂದ್ರರು ಶತಶತಮಾನಗಳಿಂದ ಅವಕಾಶಗಳಿಂದ ವಂಚಿತರಾಗಿದ್ದಾರೆ. ಇದರಲ್ಲಿ ಬಹುಸಂಖ್ಯಾತ ವರ್ಗದ ಮಹಿಳೆಯರು ಕೂಡ ಸೇರಿದ್ದಾರೆ” ಎಂದರು.