ಭಿನ್ನ ಸಾಮರ್ಥ್ಯದ ಬಾಲಕನೋರ್ವ ಉಯ್ಯಾಲೆಯಲ್ಲಿ ಆಟವಾಡುತ್ತಿದ್ದ ವೇಳೆ ಬೀದಿ ನಾಯಿಗಳು ದಾಳಿ ನಡೆಸಿ, ಎಳೆದೊಯ್ದ ಪರಿಣಾಮ ಬಾಲಕ ಮೃತಪಟ್ಟಿರುವ ದಾರುಣ ಘಟನೆ ಕೇರಳದ ಕಣ್ಣೂರ್ ಜಿಲ್ಲೆಯ ಮುಝಪ್ಪಿಲಂಗಾಡ್ ಎಂಬಲ್ಲಿ ನಡೆದಿದೆ.
ಮೃತ ಬಾಲಕನನ್ನು ನಿಹಾಲ್ ನೌಶಾದ್ (10) ಎಂದು ಗುರುತಿಸಲಾಗಿದೆ.
ಘಟನೆಯ ವಿವರ
ಆಟಿಸಂ ಖಾಯಿಲೆಯಿಂದ ಬಳಲುತ್ತಿದ್ದ ಬಾಲಕ ನಿಹಾಲ್, ತಾಯಿ ನೌಫೀಸಾ ಮತ್ತು ತಮ್ಮ ನಝಲ್ ಜೊತೆ ಕೆಟ್ಟಿನಗಂ ಎಂಬಲ್ಲಿ ವಾಸವಾಗಿದ್ದ. ಘಟನೆ ನಡೆದ ದಿನ ಸಂಜೆ ಪಕ್ಕದ ಮನೆಯ ಉಯ್ಯಾಲೆಯಲ್ಲಿ ಆಟವಾಡಲು ತೆರಳಿದ್ದಾನೆ. ನಿಹಾಲ್ ಮನೆಯಿಂದ ಹೊರ ಹೋಗಿರುವುದು ತಾಯಿಯ ಗಮನಕ್ಕೆ ಬಂದಿರಲಿಲ್ಲ. ನಿಹಾಲ್ ಆಟವಾಡಲು ತೆರಳಿದ್ದ ಮನೆಯಲ್ಲಿ ಯಾರೂ ವಾಸವಿರಲಿಲ್ಲ. ತನ್ನ ಮನೆಯಿಂದ ಸಂಜೆ 5ರ ವೇಳೆಗೆ ತೆರಳಿದ್ದ ಬಾಲಕ, ರಾತ್ರಿಯಾದರೂ ಪತ್ತೆಯಾಗಿರಲಿಲ್ಲ. ವಿಷಯ ತಿಳಿಯುತ್ತಿದ್ಧಂತೆಯೇ ಊರವರೆಲ್ಲಾ ಸೇರಿ ಹುಡುಕಾಟ ನಡೆಸಿದ್ದಾರೆ. ರಾತ್ರಿ 8.30ರ ವೇಳೆಗೆ ಪಕ್ಕದ ಮನೆಯ ಕಾಂಪೌಂಡ್ ಬಳಿ ನಿಹಾಲ್ ಪತ್ತೆಯಾಗಿದ್ದಾನೆ.
ಬೀದಿ ನಾಯಿಗಳ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ನಿಹಾಲ್‌ನನ್ನು ಸ್ಥಳೀಯರು ತಲಶ್ಶೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ದೇಹದ ಬಹುತೇಕ ಭಾಗಗಳನ್ನೂ ಬೀದಿ ನಾಯಿಗಳು ಕಚ್ಚಿ ಎಳೆದಾಡಿದ್ದ ಕಾರಣ, ತೀವ್ರ ರಕ್ತ ಸ್ರಾವದಿಂದ ಬಾಲಕ ಮೃತಪಟ್ಟಿದ್ದಾನೆ.
ನಿಹಾಲ್‌ಗೆ ಮಾತು ಬಾರದೇ ಇದ್ದುದರಿಂದ ಸಹಾಯಕ್ಕಾಗಿ ಯಾರನ್ನೂ ಕೂಗಲು ಸಾಧ್ಯವಾಗಿರಲಿಲ್ಲ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೃತ ನಿಹಾಲ್ ಮನೆಯಲ್ಲಿ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿದ್ದ ವೇಳೆ ನೂರಾರು ಸಂಖ್ಯೆಯಲ್ಲಿ ಸೇರಿದ್ದವರ ಕಣ್ಣಾಲಿಗಳು ತೇವವಾಗಿದ್ದವು.
ಈ ಸುದ್ದಿ ಓದಿದ್ದೀರಾ?: ಮುಂದಿನ ನಾಲ್ಕು ವಾರಗಳಲ್ಲಿ ಭಾರತದಲ್ಲಿ ಮುಂಗಾರು ದುರ್ಬಲ: ಸ್ಕೈಮೆಟ್ ವರದಿ
ಸುಮೋಟೋ ಪ್ರಕರಣ ದಾಖಲಿಸಿದ ರಾಜ್ಯ ಮಾನವ ಹಕ್ಕು ಮತ್ತು ಮಕ್ಕಳ ಹಕ್ಕುಗಳ ಆಯೋಗ
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ಮಕ್ಕಳ ಹಕ್ಕುಗಳ ಆಯೋಗವು, ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದು, ಘಟನೆಯ ಕುರಿತು 15 ದಿನಗಳಲ್ಲಿ ವಿವರವಾದ ವರದಿಯನ್ನು ಸಲ್ಲಿಸುವಂತೆ ಮುಝಪ್ಪಿಲಂಗಾಡ್ ಪಂಚಾಯತ್ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಬೀದಿ ನಾಯಿಗಳ ದಾಳಿಗೆ ಐದು ವರ್ಷದ ಬಾಲಕಿ ಬಲಿ
ಉತ್ತರ ಪ್ರದೇಶದ ಆಗ್ರಾ ಬಳಿಯ ದೌಕಿ ಪ್ರದೇಶದ ಕುಯಿ ಕುಮಾರ್‌ಗಢ ಗ್ರಾಮದ ತೋಟದಲ್ಲಿ ಆಟವಾಡುತ್ತಿದ್ದ ಕಾಂಚನ ಮತ್ತು ರಶ್ಮಿ ಎಂಬ ಬಾಲಕಿಯರಿಬ್ಬರ ಬೀದಿ ನಾಯಿಗಳ ಗುಂಪೊಂದು ಮೇಲೆ ದಾಳಿ ನಡೆಸಿದೆ. ಪರಿಣಾಮ ಐದು ವರ್ಷದ ಕಾಂಚನ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿರುವ ರಶ್ಮಿಯನ್ನು ಆಗ್ರಾದ ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.