5 ಸುತ್ತು ಗುಂಡು ಹಾರಿಸಿದ ಮಾಸ್ಕ್‌ಧಾರಿ ಯುವಕರು
ಆರೋಪಿಗಳಿಗಾಗಿ ಬಲೆ ಬೀಸಿದ ದೆಹಲಿ ಪೋಲಿಸರು
ದೆಹಲಿಯ ಸಾಕೇತ್ ಕೋರ್ಟ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಗುಂಡಿನ ದಾಳಿ ನಡೆದು ಒಂದು ವಾರ ಕೂಡ ಕಳೆದಿಲ್ಲ. ಅದಾಗಲೇ ರಾಷ್ಟ್ರ ರಾಜಧಾನಿಯ ಮೊತ್ತೊಮ್ಮೆ ಬಂದೂಕು ಸದ್ದು ಮಾಡಿದೆ. ದೆಹಲಿಯ ಸಿದ್ಧಾರ್ಥ್ ನಗರದ ಅಪಾರ್ಟ್‌ಮೆಂಟ್‌ವೊಂದಕ್ಕೆ ನುಗ್ಗಿ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಭಾನುವಾರ ಸಂಜೆ 6:50ರ ಸುಮಾರಿಗೆ ಇಬ್ಬರು ಮಾಸ್ಕ್‌ಧಾರಿ ಯುವಕರು ಸಿದ್ಧಾರ್ಥ್ ನಗರದಲ್ಲಿರುವ ಅಪಾರ್ಟ್‌ಮೆಂಟ್‌ಗೆ ನುಗ್ಗಿದ್ದಾರೆ. ನಂತರ ಮೊದಲನೇ ಮಹಡಿಯಲ್ಲಿನ ಮನೆ ಬಾಗಿಲು ತಟ್ಟಿದ್ದಾರೆ. ಯಾರೂ ಬಾಗಿಲು ತೆಗೆಯದಿದ್ದಾಗ ಬಂದೂಕು ತೆಗೆದು ಬಾಗಿಲನ್ನು ಗುರಿಯಾಗಿಸಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ.
ಮೊದಲನೇ ಮಹಡಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಕಳೆಗಿಳಿದ ದುಷ್ಕರ್ಮಿಗಳು ತಳ ಅಂತಸ್ತಿನ ಮನೆಯ ಕಿಡಕಿಗೆ ಮೂರು ಸುತ್ತು ಗುಂಡು ಹಾರಿಸಿ, ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಇಬ್ಬರೂ ಯುವಕರ ಕೃತ್ಯ ಅಪಾರ್ಟ್‌ಮೆಂಟ್‌ನ ʼಸಿಸಿಟಿವಿʼ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಯ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಈ ದಾಳಿಯ ಹಿಂದಿನ ಉದ್ದೇಶವೇನು ಎಂಬುದು ಈವರೆಗೆ ಬಹಿರಂಗವಾಗಿಲ್ಲ.