- ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಆಯೋಗ ರಚನೆ ಪ್ರಸ್ತಾವನೆ ಅಂಗೀಕರಿಸಿದ್ದ ಮಹಾರಾಷ್ಟ್ರ
- ಥಳಿತದಿಂದ ಗಂಭೀರ ಗಾಯಗೊಂಡ ಅಫಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವು
ಮಹಾರಾಷ್ಟ್ರ ನಾಸಿಕ್ ಜಿಲ್ಲೆಯಲ್ಲಿ ಗೋಮಾಂಸ ಕಳ್ಳಸಾಗಣೆ ಆರೋಪದಲ್ಲಿ ಗೋರಕ್ಷಕರ ಗುಂಪೊಂದು ಮುಸ್ಲಿಂ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿದೆ ಎಂದು ಅಧಿಕಾರಿಗಳು ಸೋಮವಾರ (ಜೂನ್ 26) ಹೇಳಿದ್ದಾರೆ.
32 ವರ್ಷದ ಅಫಾನ್ ಅನ್ಸಾರಿ ಹತ್ಯೆಯಾದ ವ್ಯಕ್ತಿ. ಮುಂಬೈನ ಕುರ್ಲಾ ನಿವಾಸಿಯಾದ ಈತ ತನ್ನ ಸಹಾಯಕ ನಾಸಿರ್ ಶೇಖ್ ಎಂಬ ವ್ಯಕ್ತಿಯೊಂದಿಗೆ ಕಾರೊಂದರಲ್ಲಿ ಪ್ರಾಣಿಯ ಮಾಂಸವನ್ನು ಸಾಗಿಸುತ್ತಿದ್ದರು. ಈ ವೇಳೆ ಗೋರಕ್ಷಕರು ಅಡ್ಡಗಟ್ಟಿ ಇವರನ್ನು ಥಳಿಸಿದ್ದರು.
“ಸ್ಥಳಕ್ಕೆ ಧಾವಿಸಿದಾಗ ಕಾರು ಹಾನಿಗೊಂಡಿತ್ತು. ಗೋ ರಕ್ಷಕರ ಥಳಿತದಿಂದ ಗಂಭೀರವಾಗಿ ಗಾಯಗೊಂಡ ಅಫಾನ್ ಮತ್ತು ನಾಸಿರ್ನನ್ನು ಮಹಾರಾಷ್ಟ್ರ ಆಸ್ಪತ್ರೆಯೊಂದಕ್ಕೆ ರವಾನಿಸಲಾಯಿತಾದರೂ ಚಿಕಿತ್ಸೆ ವೇಳೆ ಅಫಾನ್ ಮೃತಪಟ್ಟಿದ್ದಾರೆ” ಎಂದು ಸಬ್ ಇನ್ಸ್ಪೆಕ್ಟರ್ ಸುನೀಲ್ ಭಾಮ್ರೆ ಹೇಳಿದ್ದಾರೆ.
ಗಾಯಗೊಂಡ ವ್ಯಕ್ತಿಯ ದೂರಿನ ಮೇರೆಗೆ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಇದುವರೆಗೆ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಮಹಾರಾಷ್ಟ್ರ ಘಟನೆಯಲ್ಲಿ ಮುಸ್ಲಿಂ ವ್ಯಕ್ತಿಯು ಗೋಮಾಂಸ ಸಾಗಿಸುತ್ತಿದ್ದರೋ ಇಲ್ಲವೋ ಎಂಬುದು ಪ್ರಯೋಗಾಲಯದ ವರದಿ ನಂತರ ತಿಳಿಯಲಿದೆ. ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಹೇಳಿಕೆ ಪಡೆಯಲಾಗುವುದು ಎಂದು ಪೊಲೀಸರು ಹೇಳಿದರು.
ಘಟನೆಯ ಸಂಪೂರ್ಣ ತನಿಖೆ ನಡೆಸಲಾಗುವುದು. ಪ್ರಕರಣದಲ್ಲಿ ತಪ್ಪು ತಿಳಿವಳಿಕೆಯಾಗಿದ್ದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪಶ್ಚಿಮ ಬಂಗಾಳ | ಎರಡು ಗೂಡ್ಸ್ ರೈಲುಗಳ ನಡುವೆ ಡಿಕ್ಕಿ; ಹಳಿ ತಪ್ಪಿದ ಬೋಗಿಗಳು
ಗೋಹತ್ಯೆ ನಿಷೇಧ ಕಾಯ್ದೆಯ ಸಿಂಧುತ್ವವನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದ ಎಂಟು ವರ್ಷಗಳ ನಂತರ ಕಳೆದ ಮಾರ್ಚ್ನಲ್ಲಿ ಮಹಾರಾಷ್ಟ್ರ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೊಳಿಸಲು ಆಯೋಗವೊಂದನ್ನು ರಚಿಸುವ ಪ್ರಸ್ತಾವನೆಯನ್ನು ಅಂಗೀಕರಿಸಿತ್ತು.
ಗೋಹತ್ಯೆ ನಿಷೇಧ ಕಾನೂನು ಜಾರಿಗೆ ನಿಗದಿಪಡಿಸಿರುವ ಪ್ರಾಧಿಕಾರವು ಹಸು, ಎತ್ತು ಅಥವಾ ಗೂಳಿ ರಫ್ತಿಗೆ ಬಳಸುವ ಯಾವುದೇ ವಾಹನವನ್ನು ತಡೆಯುವ ಮತ್ತು ಶೋಧಿಸುವ ಅಧಿಕಾರ ಹೊಂದಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿತ್ತು.