ಟೋಪಿ ಧರಿಸಿದ್ದ ಮುಸ್ಲಿಂ ಸಮುದಾಯದ ಯುವಕನೊಬ್ಬನಿಗೆ ಇತರ ಸಮುದಾಯದ ವಿದ್ಯಾರ್ಥಿಗಳ ಗುಂಪು ಥಳಿಸಿದ ಘಟನೆ ಉತ್ತರ ಪ್ರದೇಶ ಮೀರತ್‌ನ ಎನ್ಎಎಸ್ ಕಾಲೇಜಿನ ಆವರಣದಲ್ಲಿ ಸೆ.26ರಂದು ನಡೆದಿದೆ.
ಎನ್ಎಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಹೋದರಿಯ ಶುಲ್ಕ ಪಾವತಿಸಲು ಆಗಮಿಸಿದ್ದ ಸಾಹಿಲ್ ಎಂಬಾತನಿಗೆ ಕಾಲೇಜಿನ ಆವರಣದಲ್ಲಿ ಓಡಾಡುತ್ತಿದ್ದ ಇತರೆ ಸಮುದಾಯದ ಒಂದು ಗುಂಪು ವಿದ್ಯಾರ್ಥಿಗಳು ಟೋಪಿ ಧರಿಸಿರುವುದನ್ನು ಆಕ್ಷೇಪಿಸಿ ಅದನ್ನು ತೆಗೆಯುವಂತೆ ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆಸುತ್ತಿರುವುದನ್ನು ಆಕ್ಷೇಪಿಸಿ ಸಹೋದರನ ಸಹಾಯಕ್ಕೆ ಬಂದ ವಿದ್ಯಾರ್ಥಿನಿಯ ಮೇಲೆ ಕೂಡ ಗುಂಪಿನಲ್ಲಿದ್ದ ವಿದ್ಯಾರ್ಥಿಗಳು ಥಳಿಸಲು ಮುಂದಾಗಿದ್ದಾರೆ. ಕ್ಯಾಂಪಸ್ಸಿನಲ್ಲಿ ಓಡಾಡುತ್ತಿದ್ದ ಇತರ ವಿದ್ಯಾರ್ಥಿಗಳು ಹೆಚ್ಚಿನ ಅನಾಹುತವಾಗದಂತೆ ಗಲಾಟೆಯನ್ನು ತಡೆದಿದ್ದಾರೆ.
ಘಟನೆಯ ಸಂಪೂರ್ಣ ದೃಶ್ಯ ಕಾಲೇಜಿನಲ್ಲಿ ಅಳವಡಿಸಿರುವ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆ ನಡೆಸಿರುವ ಬಗ್ಗೆ ಸಾಹಿಲ್ ಪೊಲೀಸರಿಗೆ ದೂರು ನೀಡಿದ್ದು, ಸ್ಥಳೀಯ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? 2023 ರಲ್ಲಿ 255 ಇಸ್ಲಾಂ ವಿರೋಧಿ ದ್ವೇಷ ಭಾಷಣ: ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಶೇ.80ಕ್ಕೂ ಹೆಚ್ಚು
ಸಿಸಿ ಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮೋಹಿತ್ ದಾಗರ್, ವಿಶಾಲ್ ದಾಗರ್, ಅತುಲ್ ಠಾಕೂರ್, ಸಾಗರ್ ಮತ್ತು 10 ಅಪರಿಚಿತ ಯುವಕರ ವಿರುದ್ಧ ಸಾಹಿಲ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ವಿದ್ಯಾರ್ಥಿಗಳನ್ನು ಬಂಧಿಸಲಾಗುವುದು ಎಂದು ಠಾಣಾಧಿಕಾರಿ ಪ್ರಭಾರಿ ಸಮರ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎನ್ಎಎಸ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಮನೋಜ್ ಅಗರ್ವಾಲ್ ಮುಸ್ಲಿಂ ಸಮುದಾಯದ ಯುವಕನ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗುವುದು ಎಂದು ಹೇಳಿದ್ದಾರೆ.