ಕೇಂದ್ರ ಸರ್ಕಾರ ಇತ್ತೀಚಿಗೆ ಲೋಕಸಭೆಯಲ್ಲಿ ಐಪಿಸಿ, ಸಿಆರ್‌ಪಿಸಿ ಹಾಗೂ ಎವಿಡೆನ್ಸ್ ಕಾಯ್ದೆಗಳನ್ನು ಬದಲಿಸಿ ಹಿಂದಿ ಹೆಸರುಗಳಾಗಿ ಮರು ನಾಮಕರಣ ಮಾಡಿರುವುದಕ್ಕೆ ಮದ್ರಾಸ್ ಬಾರ್ ಅಸೋಸಿಯೇಷನ್ ಆಕ್ಷೇಪ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅಸೋಸಿಯೇಷನ್, ಕೇಂದ್ರ ಸರ್ಕಾರವು ಐಪಿಸಿ 1860, ಸಿಆರ್‌ಪಿಸಿ 1973 ಹಾಗೂ 1872ರ ಎವಿಡೆನ್ಸ್ ಕಾಯ್ದೆಗಳ ಬದಲಿಯಾಗಿ ಹಿಂದಿ ಹೆಸರುಗಳಾದ ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮಸೂದೆ 2023 ಮತ್ತು ಭಾರತೀಯ ಸಾಕ್ಷ್ಯ ಮಸೂದೆ 2023 ಎಂದು ಮರು ನಾಮಕರಣ ಮಾಡಿರುವುದು ಭಾರತ ಸಂವಿಧಾನದ ವಿರೋಧಿಯಾಗಿದೆ.
ಕೇಂದ್ರ ಸರ್ಕಾರದ ಮರುನಾಮಕರಣಗಳ ನಡೆಯನ್ನು ಮದ್ರಾಸ್ ಬಾರ್ ಅಸೋಸಿಯೇಷನ್ ಸರ್ವಾನುಮತ ನಿರ್ಧಾರದಿಂದ ಆಕ್ಷೇಪಣೆ ಹಾಗೂ ಕಳವಳ ವ್ಯಕ್ತಪಡಿಸುತ್ತದೆ. ಮಸೂದೆಗಳನ್ನು ಹಿಂದಿಯಲ್ಲಿ ಹೆಸರಿಸುವುದು ಸಂವಿಧಾನದ ನಿಬಂಧನೆಗಳಿಗೆ ವಿರುದ್ಧವಾಗಿದೆ. ಬದಲಿಯಾಗಿರುವ ಹೆಸರುಗಳನ್ನು ಮರುಪರಿಶೀಲನೆಯೊಂದಿಗೆ ಹಳೆಯ ಹೆಸರುಗಳನ್ನು ಉಳಿಸಿಕೊಳ್ಳುವಂತೆ ಕೇಂದ್ರ ಕಾನೂನು ಸಚಿವರಿಗೆ ಸಲಹೆಗಳು ಹಾಗೂ ಅಭಿಪ್ರಾಯಗಳನ್ನು ಶೀಘ್ರದಲ್ಲೇ ಕಳುಹಿಸಲಾಗುವುದು ಎಂದು ಅಸೋಸಿಯೇಷನ್ ಅಧ್ಯಕ್ಷರಾದ ವಿ ಆರ್ ಕಮಲನಾಥನ್ ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 1860ರ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಪುರಾವೆ ಕಾಯ್ದೆಗಳನ್ನು ಬದಲಿಸುವ ಮಸೂದೆಗಳನ್ನು ಅವರು ಆಗಸ್ಟ್ 11 ರಂದು ಲೋಕಸಭೆಯಲ್ಲಿ ಮಂಡಿಸಿದ್ದರು.
ಈ ಸುದ್ದಿ ಓದಿದ್ದೀರಾ? ಕಾವೇರಿ ನದಿ ವಿವಾದ : ವಾಸ್ತವ ಸ್ಥಿತಿ ಕುರಿತು ವರದಿಗೆ ಸೂಚಿಸಿ ಸೆ 1ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ
ಅಲ್ಲದೆ ದೇಶದ್ರೋಹ ಕಾನೂನನ್ನು ರದ್ದುಪಡಿಸಲಾಗುವುದು ಎಂದು ಗೃಹ ಸಚಿವರು ತಿಳಿಸಿದ್ದರು. ಪ್ರಸ್ತಾವಿತ ಕಾನೂನಿನಲ್ಲಿ ‘ದೇಶದ್ರೋಹ’ ಎಂಬ ಪದ ಇಲ್ಲ. ಅದನ್ನು ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯ ತಂದೊಡ್ಡುವ ಕೃತ್ಯಗಳಿಗಾಗಿ ಸೆಕ್ಷನ್ 150 ಅನ್ನು ದೇಶದ್ರೋಹದ ಕಾನೂನಿನ ಬದಲಿಗೆ ಜಾರಿಗೆ ತರಲಾಗುತ್ತಿದೆ ಎಂದಿದ್ದರು.
ಕೇಂದ್ರ ಸರ್ಕಾರವು ಐಪಿಸಿ, ಸಿಆರ್‌ಪಿಸಿ ಮತ್ತು ಇಂಡಿಯನ್ ಎವಿಡೆನ್ಸ್ ಕಾಯ್ದೆ 1872 ಅನ್ನು ಪರಿಷ್ಕರಿಸಲು ಸಲಹೆಗಳನ್ನು ನೀಡಲು ಕ್ರಿಮಿನಲ್ ಕಾನೂನು ಸುಧಾರಣಾ ಸಮಿತಿಯನ್ನು ರಚಿಸಿತ್ತು. ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ ರಣಬೀರ್ ಸಿಂಗ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.
ಹಿಂದಿ ಹೇರಿಕೆಗೆ ದಿಕ್ಕಾರವಿರಲಿ.