- ಸುಗ್ರೀವಾಜ್ಞೆ ಬಗ್ಗೆ ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲಿ ಎಂದಿದ್ದ ಅರವಿಂದ್ ಕೇಜ್ರಿವಾಲ್
- ನಿತೀಶ್ ನೇತೃತ್ವದಲ್ಲಿ ಜೂನ್ 24 ರಂದು ಆಯೋಜನೆಯಾಗಿರುವ ಪ್ರತಿಪಕ್ಷಗಳ ಸಭೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ (ಜೂನ್ 23) ಪ್ರತಿಪಕ್ಷಗಳು ಕರೆದಿರುವ ಸಭೆಗೆ ಗೈರು ಹಾಜರಾಗುವ ಸಂಬಂಧ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದಾರೆ.
ದೆಹಲಿ ಆಡಳಿತ ಸೇವೆಗಳನ್ನು ಮರುರೂಪಿಸಲು ಉದ್ದೇಶಿಸಿರುವ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ವಿರೋಧಿಸಿ ಆಮ್ ಆದ್ಮಿ ಪಕ್ಷ (ಎಎಪಿ) ಆರಂಭಿಸಿರುವ ಅಭಿಯಾನಕ್ಕೆ ಕಾಂಗ್ರೆಸ್ ಬೆಂಬಲ ನೀಡದಿದ್ದರೆ ತಮ್ಮ ಪಕ್ಷ ಪ್ರತಿಪಕ್ಷಗಳ ಸಭೆಗೆ ಗೈರು ಹಾಜರಾಗುವುದು ಎಂದು ಕೇಜ್ರಿವಾಲ್ ಕಾಂಗ್ರೆಸ್‌ಗೆ ಹೇಳಿದ್ದಾರೆ ಎಂದು ಮಾಧ್ಯಮಗಳು ಗುರುವಾರ (ಜೂನ್ 22) ವರದಿ ಮಾಡಿವೆ.
2024ರ ಲೋಕಸಭೆ ಚುನಾವಣೆಗೆ ಒಗ್ಗೂಡುವ ಹಾಗೂ ಕಾರ್ಯತಂತ್ರ ರೂಪಿಸುವ ಒಡೆದ ಪ್ರತಿಪಕ್ಷಗಳ ಪ್ರಯತ್ನಗಳನ್ನು ಅರವಿಂದ್ ಕೇಜ್ರಿವಾಲ್ ಅವರ ಈ ನಡೆಯು ಹಳಿತಪ್ಪಿಸುವ ಅಪಾಯ ಉಂಟು ಮಾಡಲಿದೆ ಎಂದು ಹೇಳಲಾಗಿದೆ.
“ದೆಹಲಿ ಸುಗ್ರೀವಾಜ್ಞೆ ವಿರೋಧಿಸುವ ವಿಚಾರದಲ್ಲಿ ಕಾಂಗ್ರೆಸ್ ನಮ್ಮನ್ನು ಬೆಂಬಲಿಸಬೇಕು. ಅದು ಹಾಗೆ ಮಾಡದಿದ್ದಲ್ಲಿ ಪ್ರತಿಪಕ್ಷಗಳ ಸಭೆಯನ್ನು ನಾವು ಬಹಿಷ್ಕರಿಸುತ್ತೇವೆ. ಮುಂದಿನ ಪ್ರತಿಪಕ್ಷಗಳ ಸಭೆಯಿಂದಲೂ ನಾವು ದೂರ ಉಳಿಯುತ್ತೇವೆ” ಎಂದು ಎಎಪಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಶುಕ್ರವಾರ ನಡೆಯುವ ಪ್ರತಿಪಕ್ಷಗಳ ಸಭೆಯಲ್ಲಿ ಕೇಂದ್ರದ ಸುಗ್ರೀವಾಜ್ಞೆ ಕುರಿತು ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಲಿದೆ ಎಂದು ಅರವಿಂದ್ ಕೇಜ್ರಿವಾಲ್ ಮಂಗಳವಾರ ಭರವಸೆ ವ್ಯಕ್ತಪಡಿಸಿದ್ದರು.
ದೆಹಲಿ ಆಡಳಿತ ಸೇವೆಯ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುವ ಸುಗ್ರೀವಾಜ್ಞೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ತಿಂಗಳು ಪರಿಚಯಿಸಿದೆ.
ಈ ಸುದ್ದಿ ಓದಿದ್ದೀರಾ? ವೈವಾಹಿಕ ವಿವಾದದಲ್ಲಿ ನ್ಯಾಯಾಲಯದ ನಡೆಯಿಂದ ಅಸಮಾಧಾನ; ನ್ಯಾಯಾಧೀಶರ ಕಾರಿಗೆ ವ್ಯಕ್ತಿಯಿಂದ ಹಾನಿ
ಕೇಂದ್ರದ ನಡೆ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧವಾಗಿದೆ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದರು. ದೆಹಲಿಯಲ್ಲಿ ಪೊಲೀಸ್, ಸಾರ್ವಜನಿಕ ಆಡಳಿತ ಮತ್ತು ಭೂಮಿ ಸೇರಿದಂತೆ ಇತರ ಸೇವೆಗಳ ನಿಯಂತ್ರಣ ಚುನಾಯಿತ ಸರ್ಕಾರಕ್ಕೆ ಸೇರಿದೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಶುಕ್ರವಾರ ಪ್ರತಿಪಕ್ಷಗಳ ಪ್ರಮುಖ ನಾಯಕರ ಸಭೆ ನಡೆಯಲಿದೆ. ಸಭೆಗೆ ಹಾಜರಾಗುವುದಿಲ್ಲ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಈಗಾಗಲೇ ಹೇಳಿದ್ದಾರೆ.