ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಹಿಂದಿನ ಮಾಧ್ಯಮ ಸಲಹೆಗಾರರ ನಿವಾಸ ಸೇರಿದಂತೆ, ಜಮ್ಮು ಹಾಗೂ ರಾಜಸ್ಥಾನ ರಾಜ್ಯಗಳ 12 ಕಡೆ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದೆ.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಪ್ರಶ್ನೆಗೊಳಪಡಿಸಿದ ಕೆಲವು ದಿನಗಳ ನಂತರ ಅವರ ಸಹಚರನ ಮೇಲೆ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದೆ.
ಸಿಬಿಐ ಅಧಿಕಾರಿಗಳ ಪ್ರಕಾರ, ನವದೆಹಲಿಯ ಹತ್ತು ಹಾಗೂ ರಾಜಸ್ಥಾನದ ಎರಡು ಕಡೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಅನಿಲ್ ಅಂಬಾನಿ ಮಾಲಿಕತ್ವದ ರಿಲಯನ್ಸ್ ಜನರಲ್ ಇನ್ಷೂರೆನ್ಸ್ ಕಂಪನಿ ಒಳಗೊಂಡಿರುವ ವಿಮಾ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತ ಪ್ರಕರಣ ಇದಾಗಿದೆ. ಈ ವಿಚಾರದಲ್ಲಿ ನನಗೆ ಲಂಚ ನೀಡುವ ಆಮಿಷ ಒಡ್ಡಲಾಗಿತ್ತು ಎಂದು ಸತ್ಯಪಾಲ್ ಮಲಿಕ್ ಆಪಾದಿಸಿದ ನಂತರ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಲೇಡಿ ಸಿಂಘಂ ಖ್ಯಾತಿಯ ಪೊಲೀಸ್ ಅಧಿಕಾರಿ ಅಪಘಾತದಲ್ಲಿ ಸಾವು
ಕಳೆದ ತಿಂಗಳು ಸತ್ಯಪಾಲ್ ಮಲಿಕ್ ಅವರನ್ನು ಅವರ ನಿವಾಸದಲ್ಲಿ ಸುಮಾರು ಐದು ಗಂಟೆಗಳ ಕಾಲ ಸಿಬಿಐ ವಿಚಾರಣೆಗೊಳಪಡಿಸಿತ್ತು. ಕಳೆದ ಏಳು ತಿಂಗಳ ಅವಧಿಯಲ್ಲಿ ಹಲವಾರು ರಾಜ್ಯಗಳ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದ ಸತ್ಯಪಾಲ್ ಮಲಿಕ್ ಅವರನ್ನು ಎರಡನೆಯ ಬಾರಿಗೆ ವಿಚಾರಣೆಗೊಳಪಡಿಸಲಾಗಿತ್ತು. ಆದರೆ, ಪ್ರಕರಣದಲ್ಲಿ ಸತ್ಯಪಾಲ್ ಮಲಿಕ್ ಆರೋಪಿ ಅಲ್ಲ, ಅವರ ಪಾತ್ರದ ಕುರಿತು ಈವರೆಗೆ ತನಿಖೆ ನಡೆದಿಲ್ಲ ಎಂದು ಸಿಬಿಐ ಸ್ಪಷ್ಟಪಡಿಸಿತ್ತು.
ಸತ್ಯಪಾಲ್ ಮಲಿಕ್ ಅವರು ಬಿಹಾರ, ಜಮ್ಮು ಮತ್ತು ಕಾಶ್ಮೀರ, ಗೋವಾ ಹಾಗೂ ಮೇಘಾಲಯದಲ್ಲಿ ತಮ್ಮ ರಾಜ್ಯಪಾಲರ ಜವಾಬ್ದಾರಿಯನ್ನು ಪೂರ್ಣಗೊಳಿಸಿದ ನಂತರ ಕಳೆದ ಅಕ್ಟೋಬರ್‌ನಲ್ಲಿ ಅವರ ಹೇಳಿಕೆಯನ್ನು ಸಿಬಿಐ ದಾಖಲಿಸಿಕೊಂಡಿತ್ತು.