ಉತ್ತರಾಖಂಡದ ಉತ್ತರಕಾಶಿ ಮತ್ತು ತೆಹ್ರಿ ಗರ್ವಾಲ್ ಜಿಲ್ಲೆಗಳಲ್ಲಿ ಮುಸ್ಲಿಮರ ವಿರುದ್ಧದ ಪ್ರತಿಭಟನೆಗಳು, ಹಿಂಸಾಚಾರಗಳು ಹೆಚ್ಚುತ್ತಿವೆ. ಹಿಂದುತ್ವವಾದಿ ಸಂಘಟನೆಗಳು ಮಹಾಪಂಚಾಯತ್ ನಡೆಸಲು ಮುಂದಾಗಿವೆ. ಈ ಸಂಘಟನೆಗಳು ನಡೆಸುವ ‘ಕೋಮುವಾದಿ’ ಮಹಾಪಂಚಾಯತ್‌ಗಳಿಗೆ ಅವಕಾಶ ನೀಡಬಾರದು ಎಂದು ಅಲ್ಲಿನ ರಾಜ್ಯ ಸರ್ಕಾರವನ್ನು ನಿವೃತ್ತ ಅಧಿಕಾರಿಗಳ ‘ಕಾನ್ಸ್ಟಿಸ್ಟ್ಯೂಷನ್ ಕಂಡಕ್ಟ್ ಗ್ರೂಪ್ (ಸಿಸಿಜಿ – ಸಾಂವಿಧಾನಿಕ ನಡವಳಿಕೆ ಗುಂಪು) ಒತ್ತಾಯಿಸಿದೆ. ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಎಸ್.ಎಸ್ ಸಂಧು ಮತ್ತು ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಅವರಿಗೆ ಪತ್ರ ಬರೆದಿದೆ.
“ಉತ್ತರಾಖಂಡ ಉತ್ತರಕಾಶಿ ಮತ್ತು ತೆಹ್ರಿ ಗರ್ವಾಲ್ ಜಿಲ್ಲೆಗಳಲ್ಲಿ ಮುಸ್ಲಿಂ ವಿರೋಧಿ ದ್ವೇಷ ಭಾಷಣಗಳು ಹೆಚ್ಚುತ್ತಿವೆ. ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ಘಟನೆಗಳು ನಡೆಯುತ್ತಿವೆ. ಅಲ್ಲಿನ ಪರಿಸ್ಥಿತಿಯ ಬಗ್ಗೆ ಆಂತಕ ಹೆಚ್ಚಾಗಿದೆ” ಎಂದು 52 ನಿವೃತ್ತ ಅಧಿಕಾರಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಜೂನ್ 15 ರಂದು ಪುರೋಲಾ ಪಟ್ಟಣದಲ್ಲಿ ಹಿಂದುತ್ವವಾದಿಗಳು ‘ಮಹಾಪಂಚಾಯತ್’ ನಡೆಸಲಿದ್ದಾರೆ. ಜೂನ್ 20 ರಂದು ತೆಹ್ರಿಯಲ್ಲಿ ರ್‍ಯಾಲಿ ಮತ್ತು ಚಕ್ಕಾಜಾಮ್ ನಡೆಸಿದ್ದಾರೆ. ಈ ವೇಳೆ, ಮುಸ್ಲಿಮರನ್ನು ಜಿಲ್ಲೆಗಳಿಂದ ಹೊರಹಾಕುವಂತೆ ಪ್ರಚೋದನಾಕಾರಿ ಕರೆಗಳನ್ನು ಹಿಂದುತ್ವವಾದಿಗಳು ನೀಡಲು ಉದ್ದೇಶಿದ್ದಾರೆ” ಎಂದು ನಿವೃತ್ತ ಅಧಿಕಾರಿಗಳು ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.
ಇಂತಹ ‘ಕ್ರಿಮಿನಲ್, ಕೋಮುವಾದಿ ಅಥವಾ ಬೆದರಿಸುವ ಕಾರ್ಯಕ್ರಮಗಳನ್ನು’ ನಡೆಸಲು ಅನುಮತಿಸಬಾರದು. ಸಂವಿಧಾನ, ಕಾನೂನು ಮತ್ತು ಸುಪ್ರೀಂ ಕೋರ್ಟ್‌ನ ಬಹು ನಿರ್ದೇಶನಗಳ ಪ್ರಕಾರ, ದ್ವೇಷ ಭಾಷಣ ಮತ್ತು ಗುಂಪು ಹಿಂಸಾಚಾರಗಳ ವಿರುದ್ಧ ಪೋಲಿಸ್ ಮತ್ತು ಆಡಳಿತಾಂಗ ಕ್ರಮ ಕೈಗೊಳ್ಳಬೇಕು” ಎಂದು ಸಿಸಿಜಿ ಒತ್ತಾಯಿಸಿದೆ.
ಈ ಸುದ್ದಿ ಓದಿದ್ದೀರಾ?: ನನ್ನಂತಹ ಬಿಜೆಪಿ ಮುಖಂಡನಿಗೇ ರಕ್ಷಣೆ ಇಲ್ಲ, ಮತ್ತಾರು ಸುರಕ್ಷಿತರು: ಬಿಜೆಪಿಯ ಮುಸ್ಲಿಂ ನಾಯಕ
“ಈ ಎರಡೂ ಜಿಲ್ಲೆಗಳ 12ಕ್ಕೂ ಹೆಚ್ಚು ಪಟ್ಟಣಗಳಲ್ಲಿ ಹಿಂದುತ್ವವಾದಿ ಕೋಮು ಸಂಘಟನೆಗಳು ಬಂದ್‌ಗೆ ಕರೆ ಕೊಟ್ಟಿವೆ. ಮುಸ್ಲಿಮರ ವಿರುದ್ಧ ರ್‍ಯಾಲಿಗಳು ನಡೆಯಲಿವೆ. ಇವು ಮುಸ್ಲಿಮರ ವಿರುದ್ಧ ದ್ವೇಷದ ಭಾಷಣವನ್ನು ಸೂಚಿಸುತ್ತದೆ. ಈಗಾಗಲೇ, ಮೇ 28 ರಂದು 42 ಮುಸ್ಲಿಂ ಕುಟುಂಬಗಳು ಪುರೋಲಾ ಪಟ್ಟಣವನ್ನು ತೊರೆದಿವೆ. ಅಂಗಡಿಗಳು ಭಾಗಶಃ ಮುಚ್ಚಿವೆ. ಇಂತಹ ಸಮಯದಲ್ಲಿ ಕೋಮು ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು” ಎಂದು ಆಗ್ರಹಿಸಿದೆ.
ಪುರೋಲ್‌ನಲ್ಲಿ ಇಬ್ಬರು ಯುವಕರು (ಒಬ್ಬ ಹಿಂದು, ಮತ್ತೊಬ್ಬ ಮುಸ್ಲಿಂ) ಬಾಲಕಿಯೊಬ್ಬಳನ್ನು ಅಪಹರಿಸಲು ಯತ್ನಿಸಿದ್ದರು. ಆ ಘಟನೆಯನ್ನು ಹಿಂದುತ್ವವಾದಿಗಳು ಲವ್ ಜಿಹಾದ್ ಎಂದು ಬಿಂಬಿಸಿದರು. ಮೇ 26ರಂದು ಪುರೋಲ್‌ನಲ್ಲಿ ಹಿಂಸಾಚಾರ ಆರಂಭವಾಯಿತು. ಅಂದಿನಿಂದ ಹಲವಾರು ಮುಸ್ಲಿಂ ಕುಟುಂಬಗಳು ಪಟ್ಟಣವನ್ನು ತೊರೆಯುತ್ತಿವೆ. ಅಲ್ಲಿ ಹಿಂದುತ್ವವಾದಿಗಳ ಕೋಮುವಾದಿ ಹಿಂಸಾಚಾರ ಉದ್ವಿಗ್ನಗೊಂಡಿದೆ. ಮುಸ್ಲಿಂ ವ್ಯಾಪಾರಿಗಳು ಜೂನ್ 15 ರೊಳಗೆ ಅಂಗಡಿಗಳನ್ನು ಖಾಲಿ ಮಾಡಬೇಕೆಂಬ ಬೆದರಿಕೆಯ ಪೋಸ್ಟರ್‍ಗಳಲ್ಲಿ ಅಲ್ಲಿಲ್ಲ ಕಾಣಿಸಿಕೊಂಡಿವೆ.