ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ಆಕ್ಷೇಪಾರ್ಹ ಲೇಖನಗಳನ್ನು ಪ್ರಕಟಿಸಿದ್ದ ವೆಬ್‌ಸೈಟ್‌ಗಳು ಮತ್ತು ಟ್ವಿಟರ್ ಬಳಕೆದಾರನ ಮೇಲೆ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ʼಇಂಡಿಕ್ ಟೇಲ್ಸ್ʼ ಮತ್ತು ʼಹಿಂದೂ ಪೋಸ್ಟ್ʼ ಎಂಬ ಎರಡು ವೆಬ್‌ಸೈಟ್‌ಗಳು ಮತ್ತು ಓರ್ವ ಟ್ವಿಟರ್ ಬಳಕೆದಾರ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ವಿವಾದಾತ್ಮಕ ಲೇಖನವನ್ನು ಪ್ರಕಟಿಸಿದ್ದನ್ನು ಪ್ರಶ್ನಿಸಿ ಮತ್ತು ಕ್ರಮಕ್ಕೆ ಆಗ್ರಹಿಸಿ ಅಜಿತ್ ಪವಾರ್ ನೇತೃತ್ವದಲ್ಲಿ ಎನ್‌ಸಿಪಿ ಕಾರ್ಯಕರ್ತರು ಮುಂಬೈ ನಗರ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಅವರ ಕಚೇರಿಯ ಎದುರು ಗುರುವಾರ ಪ್ರತಿಭಟನೆ ನಡೆಸಿದ್ದರು. ಹಲವು ಸಂಘಟನೆಗಳು ಕೂಡ ಲೇಖನಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದವು.
ಇದಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಎರಡೂ ವೆಬ್‌ಸೈಟ್‌ಗಳ ಮೇಲೆ ಕ್ರಮಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಈ ಹಿನ್ನೆಲೆ ಆಜಾದ್ ಮೈದಾನ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 500, 500 (2)ರ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.
ಸಾವಿತ್ರಿಬಾಯಿ ಫುಲೆ ಕುರಿತು ಪ್ರಕಟವಾದ ವಿವಾದಾತ್ಮಕ ಲೇಖನಗಳ ತುಣುಕು
ʼಇಂಡಿಕ್ ಟೇಲ್ಸ್ʼ ವೆಬ್‌ಸೈಟ್, “ಸಾವಿತ್ರಿ ಬಯಿ ಫುಲೆಗಿಂತ ಮೊದಲಿಗಿದ್ದ ಹಿಂದೂ ಶಿಕ್ಷಕಿಯರು ಏಕೆ ಜನಪ್ರಿಯತೆಗೆ ಬರಲಿರಲ್ಲ?” ಎಂಬ ಶೀರ್ಷಿಕೆಯಡಿ ಕಳೆದ ಜನವರಿ 4ರಂದು ಲೇಖನ ಪ್ರಕಟಿಸಿತ್ತು. “ಸಾವಿತ್ರಿಬಾಯಿ ಫುಲೆ ಅವರ ಶಿಕ್ಷಣಕ್ಕೆ ಬ್ರಿಟಿಷ್ ಮಿಷನರಿಗಳು ಹಣಕಾಸಿನ ನೆರವು ನೀಡಿದ್ದರು” ಆರೋಪಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಕುಸ್ತಿ ಪಟುಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಬಿಜೆಪಿ ಸಂಸದೆ
ಇನ್ನು ʼಹಿಂದು ಪೋಸ್ಟ್ʼ ತನ್ನ ವೆಬ್‌ಸೈಟ್‌ನಲ್ಲಿ, “ಸಾವಿತ್ರಿಬಾಯಿ ಫುಲೆ ನಿಜಕ್ಕೂ ಭಾರತದ ಮೊದಲ ಮಹಿಳಾ ಶಿಕ್ಷಕಿಯೇ?” ಎಂಬ ಶೀರ್ಷಿಕೆಯಡಿ ವಿವಾದಾತ್ಮಕ ಲೇಖನವನ್ನು ಪ್ರಕಟಿಸಿತ್ತು. “ಸಾವಿತ್ರಿಬಾಯಿ ಫುಲೆ ಹುಟ್ಟುವುದಕ್ಕೆ 21 ವರ್ಷಗಳ ಮೊದಲೇ ಸಂಸ್ಕೃತ, ಗಣಿತ ಮತ್ತು ಆಯುರ್ವೇದಲ್ಲಿ ಪಾಂಡಿತ್ಯ ಹೊಂದಿದ್ದ ಹೋಟಿ ವಿದ್ಯಾಲಂಕಾರ್ ಎಂಬ ಬಂಗಾಳಿ ಹಿಂದೂ ಮಹಿಳೆ ವಾರಣಾಸಿಯಲ್ಲಿ ಶಾಲೆಯನ್ನು ಆರಂಭಿಸಿದ್ದರು” ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿತ್ತು. ಅಷ್ಟು ಮಾತ್ರವಲ್ಲ, “ಸಾವಿತ್ರಿಬಾಯಿ ಫುಲೆ ಬ್ರಿಟಿಷರನ್ನು ಮತ್ತು ಕ್ರೈಸ್ತವನ್ನು ವಿಜೃಂಭಿಸಿ ಕವಿತೆಗಳನ್ನು ರಚಿಸುತ್ತಿದ್ದರು” ಎಂದೂ ಉಲ್ಲೇಖಿಸಲಾಗಿತ್ತು.
ಎಫ್‌ಐಆರ್ ದಾಖಲಾಗುತ್ತಲೇ ʼಇಂಡಿಕ್ ಟೇಲ್ಸ್ʼ ವೆಬ್‌ಸೈಟ್‌ನ ಮುಖಪುಟದಲ್ಲಿ ಕ್ಷಮೆಯಾಚನೆಯ ಬಹಿರಂಗ ಪತ್ರ ಪ್ರತ್ಯಕ್ಷವಾಗಿದೆ. “ವಿವಾದಿತ ಲೇಖನ ನಮ್ಮದಲ್ಲ, ʼಭಾರದ್ವಾಜ್ ಸ್ಪೀಕ್ಸ್ʼ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದ ಲೇಖನವನ್ನು ನಾವು ಮರು ಪ್ರಕಟಿಸಿದ್ದೇವೆ. ಸದ್ಯ ವಿವಾದಿತ ಲೇಖನವನ್ನು ವೆಬ್‌ಸೈಟ್‌ನಿಂದ ತೆಗೆದು ಹಾಕಿದ್ದೇವೆ. ನಮ್ಮಿಂದ ಯಾರಿಗಾದರೂ ನೋವಾಗಿದ್ದೆ ಕ್ಷಮೆ ಇರಲಿ” ಎಂದು ಬರೆಯಲಾಗಿದೆ.

ಇನ್ನು ʼಇಂಡಿಕ್ ಟೇಲ್ಸ್ʼ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿರುವ ʼಭಾರದ್ವಾಜ್ ಸ್ಪೀಕ್ಸ್ʼ ಹೆಸರಿನ ಟ್ವಿಟರ್ ಖಾತೆ ಅದಾಗಲೇ ನಿಷ್ಕ್ರೀಯಗೊಂಡಿದೆ.
