ದೂರು ದಾಖಲಿಸಲು ತೆರಳಿದ್ದ ದಲಿತ ಮಹಿಳೆಯ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್ ಇನ್ಸ್ಪೆಕ್ಟರ್ನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತ ಮಹಿಳೆ ಕೆಲವು ಪುರುಷರು ಕಿರುಕುಳ ನೀಡುತ್ತಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ನೀಡಲು ಸ್ಥಳೀಯ ಝಂಘೈ ಪೊಲೀಸ್ ಠಾಣೆಗೆ ಹೋಗಿದ್ದರು.
ದಲಿತ ಸಮುದಾಯದ ಮಹಿಳೆಯನ್ನು ಸೆಪ್ಟೆಂಬರ್ 21 ರಂದು ಸಂಜೆ ಸಬ್ ಇನ್ಸ್ಪೆಕ್ಟರ್ ಪಾಂಡೆ ಪೊಲೀಸ್ ಔಟ್ಪೋಸ್ಟ್ಗೆ ಕರೆದಿದ್ದಾರೆ. ಆರೋಪಿಗಳನ್ನು ಬಂಧಿಸಲು ಹೋಗುವ ನೆಪದಲ್ಲಿ ಆಕೆಯನ್ನು ಕಾರಿನಲ್ಲಿ ಕರೆದೊಯ್ದು ಮಾದಕ ದ್ರವ್ಯ ಬೆರೆಸಿದ ತಂಪು ಪಾನೀಯವನ್ನು ನೀಡಿ ಆಕೆ ಪ್ರಜ್ಞೆ ತಪ್ಪಿದ್ದಾಗ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅತ್ಯಾಚಾರಕ್ಕೊಳಗಾಗಿ ಸಹಾಯಕ್ಕೆ ಅಂಗಲಾಚುವ 12ರ ಬಾಲಕಿ: ಮಧ್ಯಪ್ರದೇಶದಲ್ಲಿ ಸಿಸಿಟಿವಿಯಲ್ಲಿ ಸೆರೆಯಾದ ಅಮಾನುಷ ದೃಶ್ಯ
ಹಿರಿಯ ಪೊಲೀಸ್ ಅಧಿಕಾರಿ ಸುಧೀರ್ ಕುಮಾರ್ ಮಾತನಾಡಿ, ಸಂತ್ರಸ್ತೆ ತನ್ನ ಸಾಕ್ಷ್ಯದಲ್ಲಿ ಝಂಘೈ ಪೊಲೀಸ್ ಹೊರಠಾಣೆ ಉಸ್ತುವಾರಿ ಸುಧೀರ್ ಕುಮಾರ್ ಪಾಂಡೆ ಸೆಪ್ಟೆಂಬರ್ 21 ರಂದು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ ಸರಾಯಿ ಮಾಮ್ರೇಜ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿರುವ ಪಾಂಡೆ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಮತ್ತು ಎಸ್ಸಿ/ಎಸ್ಟಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕುಮಾರ್ ಹೇಳಿದರು. ಸದ್ಯ ಪಾಂಡೆ ತಲೆಮರೆಸಿಕೊಂಡಿದ್ದಾನೆ.
ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಕಮಿಷನರ್ ರಮಿತ್ ಶರ್ಮಾ ಅವರು ಹಂಡಿಯಾ ಎಸಿಪಿ ಸುಧೀರ್ ಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ.